ಕೋವಿಡ್ ಹೆಸರಿನಲ್ಲಿ ನೋಡಲ್ ಅಧಿಕಾರಿ-ಖಾಸಗಿ ಆಸ್ಪತ್ರೆಗಳ ಡೀಲ್ ನಡೆಯುತ್ತಿದೆಯಾ?
ಬೆಂಗಳೂರಿನ ಲೇಡಿ ಸೂಪರ್ ಕಾಪ್ ರೂಪಾ ಐಪಿಎಸ್ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಬೆಂಗಳೂರಿನ ಕೆಲವು ಆಸ್ಪತ್ರೆಗಳ ಮೇಲೆ ದಾಳಿ ಮಾಡಿದ್ದಾರೆ. ಅವರು ದಾಳಿ ಮಾಡಲು ಇದ್ದ ಕಾರಣ ಏನೆಂದರೆ ಜನರಿಂದ ಬಂದ ದೂರುಗಳು. ಕೊರೊನಾ ಚಿಕಿತ್ಸೆ ಹಿನ್ನಲೆಯಲ್ಲಿ ನಮ್ಮಿಂದ ಅನಗತ್ಯವಾಗಿ ದೊಡ್ಡ ಮೊತ್ತದ ಹಣವನ್ನು ಕೀಳುತ್ತಿದ್ದಾರೆ ಎಂದು ನಾಗರಿಕರು ನೀಡಿದ ದೂರುಗಳನ್ನು ಆಧರಿಸಿ ರೂಪಾ ಅವರು ಮಾಡಿದ ದಾಳಿಯಲ್ಲಿ ಸುಮಾರು 24 ಲಕ್ಷ ರೂಪಾಯಿಗಳನ್ನು ಆಸ್ಪತ್ರೆಯವರು ಹೆಚ್ಚುವರಿಯಾಗಿ ಸುಲಿಗೆ ಮಾಡಿದ್ದು ಅವರ ಗಮನಕ್ಕೆ ಬಂದಿದೆ. ಆಸ್ಪತ್ರೆಗಳ ಒಳರೋಗಿಗಳ ಲೆಡ್ಜರ್ ಅನ್ನು ತಡಕಾಡಿದ ರೂಪಾ ಅವರಿಗೆ ಆಸ್ಪತ್ರೆಯವರು ನಿಗದಿತ ದರಕ್ಕಿಂತ ಹೆಚ್ಚು ಹಣವನ್ನು ವಸೂಲಿ ಮಾಡಿದ್ದು ದಾಖಲೆ ಸಮೇತ ಗೊತ್ತಾಗಿದೆ. ಅವರು ಮಾಡಿದ ತನಿಖೆಯಲ್ಲಿ ಸತ್ಯ ಹೊರಬಂದಿದ್ದು ಆಸ್ಪತ್ರೆಯ ಆಡಳಿತ ಮಂಡಳಿಯವರು ತಾವು ಲೂಟಿದ ಹಣವನ್ನು ಆಯಾ ರೋಗಿಗಳ ಕುಟುಂಬದವರಿಗೆ ಹಿಂದಿರುಗಿಸಲು ಒಪ್ಪಿದ್ದಾರೆ. ಅದರ ಅರ್ಥ ಆಸ್ಪತ್ರೆಯವರು ಜನರನ್ನು ಹೇಗೆ ವಂಚಿಸಿ ತಮ್ಮ ತಿಜೋರಿ ತುಂಬುತ್ತಿದ್ದರು ಎನ್ನುವುದು ಗೊತ್ತಾಗಿದೆ. ಈಗ ನಾನು ಹೇಳುವುದು ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ಮೆರೆಯಬೇಕು. ಪೊಲೀಸ್ ಅಧಿಕಾರಿಯಾಗಿ ಐಪಿಎಸ್ ರೂಪಾ ಅವರು ಮಾದರಿ ಕೆಲಸವನ್ನು ನಿರ್ವಹಿಸಿದ್ದಾರೆ. ಈಗ ಮಾಧ್ಯಮಗಳ ಕರ್ತವ್ಯ ಏನೆಂದರೆ ಲೂಟಿದವರು ಯಾರು ಎಂದು ಸಮಾಜಕ್ಕೆ ತಿಳಿಯಪಡಿಸುವುದು. ಇಲ್ಲಿ ತಾವು ತಪ್ಪು ಮಾಡಿದ್ದನ್ನು ಆಸ್ಪತ್ರೆಯವರು ಒಪ್ಪಿಕೊಂಡ ಕಾರಣ ಇಂತಿಂತಹ ಆಸ್ಪತ್ರೆಯವರು ಹೀಗೆಗೆ ಲೂಟಿದರು ಎಂದು ಸಮಾಜಕ್ಕೆ ತಿಳಿಸಬೇಕು.
ಇದರಿಂದ ಆಸ್ಪತ್ರೆಯವರು ಮುಂದೆ ಲೂಟುವುದಕ್ಕೆ ಹಿಂದೆ ಮುಂದೆ ನೋಡುತ್ತಾರೆ ಮತ್ತು ಬೇರೆ ಆಸ್ಪತ್ರೆಯವರು ಹಾಗೆ ಜನರನ್ನು ಪೀಕಿಸಿ ಹಣ ವಸೂಲಿ ಮಾಡಲು ಹಿಂಜರಿಯುತ್ತಾರೆ. ಮಾಧ್ಯಮಗಳು ಆಸ್ಪತ್ರೆಗಳ ಹೆಸರು ಬಹಿರಂಗ ಮಾಡುವುದರಿಂದ ನಿಜವಾದ ದೃಷ್ಟಿಯಲ್ಲಿ ಜನರಿಗೆ ಉಪಯೋಗವಾಗುತ್ತದೆ. ಆದರೆ ಮಾಧ್ಯಮಗಳು ಇಂತಹ ವರದಿ ಮಾಡುವಾಗ ಖಾಸಗಿ ಆಸ್ಪತ್ರೆಗಳ ಮೇಲೆ ಪೊಲೀಸ್ ಅಧಿಕಾರಿ ರೂಪಾ ದಾಳಿ, ದಾಖಲೆ ಪರಿಶೀಲನೆ ಎಂದು ಮಾತ್ರ ವರದಿ ಮಾಡುತ್ತವೆ. ಅದೇ ಒಬ್ಬ ವ್ಯಕ್ತಿ ಅತ್ಯಾಚಾರ ಪ್ರಕರಣದಲ್ಲಿ, ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದರೆ ಅವನ ಹೆಸರು, ವಿಳಾಸ, ತಂದೆಯ ಹೆಸರು, ವೃತ್ತಿ, ಅವನು ನ್ಯಾಯಾಲಯಕ್ಕೆ ಬರುವುದು, ಹೊರಗೆ ಹೋಗುವುದು, ಗ್ರಾಫಿಕ್ ನಲ್ಲಿ ಅವನು ಜೈಲಿಗೆ ಒಳಗೆ ಕುಳಿತುಕೊಂಡದ್ದು ಎಲ್ಲವನ್ನು ಇಂಚಿಂಚಾಗಿ ತೋರಿಸುತ್ತಾರೆ. ಆಗ ಮಾಧ್ಯಮಗಳಿಗೆ ಇಲ್ಲದ ಅಡೆತಡೆ ಜನಸಾಮಾನ್ಯರ ಹಣವನ್ನು ಕಿತ್ತು ತಿನ್ನುವ ಆಸ್ಪತ್ರೆಗಳ ವಿಷಯಕ್ಕೆ ಬಂದಾಗ ಯಾಕೆ ಮೌನವಾಗುತ್ತವೆ ಎನ್ನುವುದು ಗೊತ್ತಾಗುವುದಿಲ್ಲ. ಒಂದು ವೇಳೆ ಆಸ್ಪತ್ರೆಯವರು ಯಾವುದಾದರೂ ವಿಐಪಿಯ ಹೆರಿಗೆ ಮಾಡಿಸಿದರೆ ಆಸ್ಪತ್ರೆಯ ಹೆಸರನ್ನು ಎತ್ತಿ, ಮುದ್ದಾಡಿ, ಅರ್ಧ ಗಂಟೆ ತೋರಿಸುವ ಮಾಧ್ಯಮಗಳು ಅದೇ ಆರೋಪಿಯ ಸ್ಥಾನದಲ್ಲಿ ನಿಲ್ಲುವ ಆಸ್ಪತ್ರೆಗಳ ಹೆಸರು ಹಾಕಲು ಯಾಕೆ ಹಿಂದೆ ಮುಂದೆ ನೋಡಬೇಕು.
ಇನ್ನೊಂದು ಭಯಾನಕ ವಿಷಯ ನಿಮಗೆ ಹೇಳಲೇಬೇಕು. ಸರಕಾರ ನೇಮಿಸುವ ನೋಡಲ್ ಅಧಿಕಾರಿಗಳು ಕೇಂದ್ರ ಸರಕಾರದ ಆದರ್ಶ ಯೋಜನೆ ಆಯುಷ್ಮಾನ್ ಭಾರತದ ಹಣವನ್ನು ಹೇಗೆ ದುರುಪಯೋಗಪಡಿಸುತ್ತಾರೆ ಎಂದು ವಿವರಿಸುತ್ತೇನೆ. ಒಬ್ಬ ವ್ಯಕ್ತಿ ತನ್ನ ತಂದೆಯನ್ನು ಮಂಗಳೂರಿನ ಪ್ರತಿಷ್ಟಿತ ಆಸ್ಪತ್ರೆಗೆ ದಾಖಲು ಮಾಡುತ್ತಾನೆ. ಆ ರೋಗಿ ಕುಡಿದು ಕುಡಿದು ಕಿಡ್ನಿ ಮತ್ತು ಹೃದಯ ಸಮಸ್ಯೆ ಇತ್ತು. ಅವರ ಮಗ ಕುವೈಟ್ ನಲ್ಲಿ ಉತ್ತಮ ಉದ್ಯೋಗದಲ್ಲಿದ್ದು ನಂತರ ಮಂಗಳೂರಿಗೆ ಬಂದು ಸೆಟಲ್ ಆಗಿದ್ದ. ವೈದ್ಯರು ರೋಗಿಯನ್ನು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗೆ ಐಸಿಯುಗೆ ಹಾಕಿರುತ್ತಾರೆ. ನಿಮಗೆ ಗೊತ್ತಿರುವಂತೆ ಖಾಸಗಿ ಆಸ್ಪತ್ರೆಯ ಐಸಿಯುಗೆ ಹೋಗಿ ಹೊರಗೆ ಬಂದರೆ ಅದರ ಬಿಲ್ ನೋಡಿಯೇ ವ್ಯಕ್ತಿಗಳು ಹೃದಯಾಘಾತದಿಂದ ತೀರಿಕೊಳ್ಳುತ್ತಾರೆ. ಹಾಗೆ ಇದರಲ್ಲಿಯೂ ಆಗಿದೆ. ಒಂದೂವರೆ ಲಕ್ಷ ಬಿಲ್ ಬಂದಿದೆ. ರೋಗಿಯ ಕುವೈಟ್ ನಲ್ಲಿದ್ದ ಮಗ ನನ್ನ ಬಳಿ ಹಣ ಇಲ್ಲ ಎಂದು ಕಣ್ಣೀರು ಸುರಿಸಿದ್ದಾನೆ. ಹೀಗೆ ಬಿಟ್ಟರೆ ಇವನಿಂದ ಹಣ ಸಿಗುವುದಿಲ್ಲ ಎಂದು ಗೊತ್ತಾದ ಆಸ್ಪತ್ರೆಯವರು ಸರಕಾರ ನೇಮಿಸಿರುವ ನೋಡಲ್ ಅಧಿಕಾರಿಯವರೊಂದಿಗೆ ಡೀಲ್ ಕುದುರಿಸಿದ್ದಾರೆ. ಆ ರೋಗಿಯನ್ನು ಕೋವಿಡ್ ಪಾಸಿಟಿವ್ ಎಂದು ವರದಿ ಸಿದ್ಧಪಡಿಸಲಾಗಿದೆ. ನೋಡಲ್ ಅಧಿಕಾರಿ ಆಯುಷ್ಮಾನ್ ಯೋಜನೆಯ ಮೂಲಕ ಆಸ್ಪತ್ರೆಗೆ ಹಣ ಸಂದಾಯವಾಗುವಂತೆ ನೋಡಿಕೊಂಡಿದ್ದಾರೆ. ಇದು ಆಯುಷ್ಮಾನ್ ಯೋಜನೆಯ ಅಪ್ಪಟ ದುರುಪಯೋಗವಲ್ಲದೆ ಮತ್ತೇನು? ಪ್ರಧಾನಿ ಮೋದಿಯವರು ಆಯುಷ್ಮಾನ್ ಯೋಜನೆ ತಂದಿರುವುದು ಯಾವುದಾದರೂ ವ್ಯಕ್ತಿ ಹಣವಿಲ್ಲದೆ ಆಸ್ಪತ್ರೆ ಸೇರಿದಾಗ ಅವನಿಗೆ ಸರಕಾರ ಸಕಾಲಿಕವಾಗಿ ನೆರವಿಗೆ ಬರಲಿ ಎನ್ನುವ ಕಾರಣಕ್ಕೆ. ಆದರೆ ಯಾವುದೋ ಕಾಯಿಲೆಗೆ ಸೇರಿ, ಹಣವುಳ್ಳವರು ಕೂಡ ಹಣವುಳಿಸುವ ಪ್ಲಾನ್ ನಿಂದ ನೋಡಲ್ ಅಧಿಕಾರಿಯೊಂದಿಗೆ ಸೇರಿ ಜನರ ತೆರಿಗೆ ಹಣವನ್ನು ಹೀಗೆ ಲೂಟಿದರೆ ಇಂತಹ ಉತ್ತಮ ಯೋಜನೆಯ ಉದ್ದೇಶ ಈಡೇರುತ್ತದೆಯಾ? ಹೀಗೆ ಮಾಡಿದ ಅಧಿಕಾರಿ ಮತ್ತು ಆ ರೋಗಿಯ ಮನೆಯವರ ಬಗ್ಗೆ ನನಗೆ ತಿಳಿದಿದೆ. ಸೂಕ್ತ ದಾಖಲೆಗಾಗಿ ಕಾಯುತ್ತಿದ್ದೇನೆ. ಸಿಕ್ಕಿದ ಕೂಡಲೇ ಬಹಿರಂಗಪಡಿಸುತ್ತೇನೆ!
Leave A Reply