ಪತ್ರಿಕೆಗಳಿಗೆ ರಾಶಿರಾಶಿ ಜಾಹೀರಾತು ಕೊಡುವಷ್ಟು ಅಭಿವೃದ್ಧಿ ಆಗಿದೆಯಾ ಯಡ್ಡಿಜಿ?
ಯಡಿಯೂರಪ್ಪನವರದ್ದು ನಿಜಕ್ಕೂ ಮೆಚ್ಚಬೇಕಾಗಿರುವುದು ಆ ಕಿಲ್ಲಿಂಗ್ ಸ್ಪಿರಿಟ್. 77 ನೇ ವಯಸ್ಸಿನಲ್ಲಿಯೂ ಕೊರೊನಾ ವಿರುದ್ಧ ಹೋರಾಡುತ್ತಾ ಆಡಳಿತ ಮಾಡುವುದು ಸುಲಭದ ಮಾತಲ್ಲ. ಅವರು ಕುಮಾರಸ್ವಾಮಿಯಿಂದ ಮುಖ್ಯಮಂತ್ರಿ ಸ್ಥಾನ ಕಿತ್ತುಕೊಂಡಾಗ ರಾಜ್ಯದಲ್ಲಿ ಇದ್ದದ್ದು ಭೀಕರ ಬರಗಾಲ. ಅಧಿಕಾರದಲ್ಲಿ ಕುಳಿತುಕೊಂಡ ತಕ್ಷಣ ರಾಜ್ಯ ಕಂಡರಿಯದ ನೆರೆ. ಸಂಪುಟ ವಿಸ್ತರಣೆ ಮಾಡುವುದು ಬಿಡಿ, ತಲೆ ಕೆರೆಯುವುದಕ್ಕೂ ಪ್ರಕೃತಿ ಪುರುಸೊತ್ತು ಕೊಡದೇ ಯಡ್ಡಿಜಿಯನ್ನು ಇಡೀ ರಾಜ್ಯದಲ್ಲಿ ಓಡಾಡುವಂತೆ ಮಾಡಿಬಿಟ್ಟಿತ್ತು. ರಾಜಕಾರಣಿಗಳು ಅಧಿಕಾರದಲ್ಲಿ ಇದ್ದಷ್ಟು ದಿನ ಆರೋಗ್ಯವಾಗಿಯೇ ಇರುತ್ತಾರೆ ಎನ್ನುವುದು ನಿಜವಾದ ಮಾತು. ಬಿಎಸ್ ವೈ ಅದನ್ನು ಇತ್ತೀಚೆಗೆ ಪೇಪರ್ ನವರಿಗೆ ಕೊಟ್ಟ ಸಂದರ್ಶನದಲ್ಲಿ ತಾವೇ ಹೇಳಿಕೊಂಡಿದ್ದಾರೆ. ಆದರೆ ಕಳೆದ ಕೆಲವು ವಾರಗಳಿಂದ ಯಡ್ಡಿ ಮಂಕಾಗಿರುವುದು ಮತ್ತು ನಿಸ್ತೇಜರಂತೆ ಕಾಣುತ್ತಿರುವುದು ಆಶ್ಚರ್ಯ. ಹಾಗಾದರೆ ಅವರು ಅಧಿಕಾರದಲ್ಲಿ ಇಲ್ಲವೇ, ಇದ್ದಾರೆ. ಆದರೆ ವೆಲಿಡಿಟಿ ಕಳೆದ ಬ್ಯಾಟರಿ ತರಹ ಕಾಣುತ್ತಿದ್ದಾರೆ. ಯಡ್ಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎನ್ನುವುದು ನಾವು ಹಿಂದೆ ಕೇಳುತ್ತಿದ್ದ ಮಾತು. ಆದರೆ ಯಡ್ಡಿಜಿ ಕೊನೆಯ ಬಾರಿ ಗುಡುಗಿದ್ದು ಒಂದು ವರ್ಷದ ಹಿಂದೆ. ಎಚ್ ಡಿಕೆಯವರನ್ನು ಇಳಿಸಲು. ನಂತರ ಅಧಿಕಾರ ಬಂತು. ಯಡ್ಡಿ ಗುಡುಗುವುದನ್ನು ಮರೆತುಬಿಟ್ಟರು. ಎಲ್ಲಿಯ ತನಕ ಎಂದರೆ ಈಗ ಹೊಂದಾಣಿಕೆಯ ಪಾಲಿಟಿಕ್ಸ್. ಕಾಂಗ್ರೆಸ್ ಏನೇ ಮಾಡಲಿ, ಯಡ್ಡಿಜಿ ಸಂಧಾನಕ್ಕೆ ಇಳಿದುಬಿಡುತ್ತಾರೆ. ಸಾಮಾಜಿಕ ಅಂತರ ಮರೆತು ಡಿಕೆಶಿ ಪ್ರತಿಭಟನೆ, ಅಧಿಕಾರ ಸ್ವೀಕಾರ ಮಾಡಿದಾಗಲೂ ಯಡ್ಡಿಜಿ ಕಾಂಗ್ರೆಸ್ ವಿರುದ್ಧ ಕೆಮ್ಮಲು ಕೂಡ ಹೋಗಿಲ್ಲ. ನನ್ನ ವಿರುದ್ಧ ಯಡ್ಯೂರಪ್ಪ ಏನು ಮಾಡಲು ಹೋಗುವುದಿಲ್ಲ, ನೋಡ್ತೀರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳುವ ಮಟ್ಟಿಗೆ ಯಡ್ಯೂರಪ್ಪ ಸೈಲೆಂಟ್ ಆಗಿದ್ದಾರೆ.
ಒಂದು ಕಡೆ ನೆರೆ, ಇವರ ನಿರೀಕ್ಷೆಯಷ್ಟು ಬಾರದ ಕೇಂದ್ರದ ಪರಿಹಾರ, ನಂತರ ಕೊರೋನಾದಿಂದ ಖರ್ಚಾಗುತ್ತಿರುವ ಹಣ ಮತ್ತು ಇನ್ನು ಎರಡೂವರೆ ವರ್ಷ ಏನು ಹೊಸ ಅಭಿವೃದ್ಧಿ ಯೋಜನೆಗಳು ಇಲ್ಲ ಎಂದು ಘೋಷಿಸಿದ ನಂತರವೂ ಯಡ್ಯೂರಪ್ಪ ಧಾರಾಳವಾಗಿ ಉದಾರಿಯಾಗಿರುವುದು ಪತ್ರಿಕೆಯವರ ವಿಷಯದಲ್ಲಿ. ಕಳೆದ ಒಂದು ವರ್ಷದಲ್ಲಿ ಯಡ್ಯೂರಪ್ಪ 15 ಉಪಚುನಾವಣೆಯಲ್ಲಿ ಕಳೆದು ಹೋದ್ದದ್ದು ಬಿಟ್ಟರೆ ಇಷ್ಟು ಅಭಿವೃದ್ಧಿ ಮಾಡಲು ಅವರಿಗೆ ಸಮಯ ಎಲ್ಲಿ ಇತ್ತು ಎನ್ನುವುದು ಇವತ್ತಿನ ಪ್ರಶ್ನೆ. ರಾಜ್ಯದ ಯಾವುದೇ ಪತ್ರಿಕೆ ತೆಗೆಯಿರಿ, ಮುಖಪುಟದಿಂದ ಒಳಗಿನ ಪುಟದ ತನಕ ಜಾಹೀರಾತುಗಳದ್ದೇ ಅಬ್ಬರ. ನಿಜ ಹೇಳಬೇಕೆಂದರೆ ಬಿಜೆಪಿಯ ಕಾರ್ಯಕರ್ತ ಕೂಡ ಅದನ್ನು ಮೂಸಿ ನೋಡಲು ಹೋಗಲ್ಲ. ಎಲ್ಲರೂ ಕೊರೋನಾ ತಲೆಬಿಸಿಯಲ್ಲಿ ಇರುವಾಗ ಪತ್ರಿಕೆಯಲ್ಲಿ 50% ಇವರದ್ದೇ ಅಭಿವೃದ್ಧಿ ಜಾಹೀರಾತು. ಈ ಒಂದು ವರ್ಷದಲ್ಲಿ ಅಷ್ಟು ಅಭಿವೃದ್ಧಿ ಮಾಡಲು ಎಲ್ಲಿ ಸಮಯವಿತ್ತು ಎನ್ನುವುದು ಈಗ ಉಳಿದಿರುವ ಪ್ರಶ್ನೆ. ಕೆಲವು ಇಲಾಖೆಯ ಸಚಿವರು ಆಪರೇಶನ್ ಕಮಲದಿಂದ ಇತ್ತ ಬಂದು ಚುನಾವಣೆಗೆ ಸ್ಪರ್ಧಿಸಿ ಗೆದ್ದು ಮಂತ್ರಿಯಾಗಿ ತಮ್ಮ ಕಚೇರಿಯಲ್ಲಿ ಸರಿಯಾಗಿ ಎಷ್ಟು ಫ್ಯಾನ್ ಇದೆ ಎಂದು ಲೆಕ್ಕ ಹಾಕುವಷ್ಟರಲ್ಲಿ ಕೊರೋನಾ ಬಂದಾಗಿತ್ತು. ಅದರ ನಂತರ ಅನುದಾನ ಬಿಡುಗಡೆಯಾಗಿ ಯೋಜನೆ ನಡೆದದ್ದು ಯಾವಾಗ? ಅಂತವರು ಕೂಡ ಪುಟಗಟ್ಟಲೆ ಜಾಹೀರಾತು ಕೊಟ್ಟಿದ್ದಾರೆ. ಇನ್ನು ಕೆಲವು ಸಚಿವರು ಕುಮಾರಸ್ವಾಮಿ ಸರಕಾರ ಬೀಳಿಸಿ ಹೊಸ ಸರಕಾರ ತಂದು ಅಲ್ಲಿಂದ ಬಂದ ಬೀಗರನ್ನು ಗೆಲ್ಲಿಸಿ ಅವರನ್ನು ಸಮಾಧಾನಪಡಿಸುವ ಖಾತೆ ಕೊಟ್ಟು ತಮ್ಮ ಕಚೇರಿಯ ಉದ್ದಗಲವನ್ನು ನೋಡುವಷ್ಟರಲ್ಲಿ ಕೊರೋನಾ ಬಂದು ಬಿಟ್ಟಿತ್ತು. ಅವರು ಕೂಡ ಅಷ್ಟು ಸಾಧನೆ ಮಾಡಿದ್ದೇವೆ, ಇಷ್ಟು ಸಾಧನೆ ಮಾಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಇದರೊಂದಿಗೆ ಈ ಬಾರಿ ಕೊರೋನಾ ಮುಗಿಯುವಷ್ಟರಲ್ಲಿ ಬಹುಶ: ಯಡ್ಡಿಜಿ ಮುಂದೆ ಹೆಚ್ಚೆಂದರೆ ಎರಡು ವರ್ಷ ಉಳಿಯಬಹುದು. ಆ ಎರಡು ವರ್ಷಗಳಲ್ಲಿ ಅವರನ್ನು ಡಿಕೆಶಿ ಹೇಗೆ ಕಾಡಲಿದ್ದಾರೆ ಎಂದರೆ ರಾಜ್ಯದಲ್ಲಿ ಕಾಂಗ್ರೆಸ್ ಮುಂದಿನ ಬಾರಿ ಅಧಿಕಾರಕ್ಕೆ ಬರದೇ ಹೋದರೆ ತಮ್ಮ ರಾಜಕೀಯ ಮುಗಿದ ಹಾಗೆ ಎಂದು ಡಿಕೆಶಿಗೂ ಗೊತ್ತಿದೆ. ಹೀಗಿರುವಾಗ ಬಿಎಸ್ ವೈ ಮುಂದಿರುವುದು ಒಂದೇ ಹಾದಿ. ಒಂದೋ ಡಿಕೆಶಿಯವರನ್ನು ಯಾವುದಾದರೂ ಕೇಸಿನಲ್ಲಿ ಒಳಗೆ ಕುಳ್ಳಿರಿಸಿದರೆ ಬಿಎಸ್ ವೈ ಬಚಾವ್. ಡಿಕೆಶಿ ಹೊರಗೆ ಇದ್ದಷ್ಟು ಯಡ್ಯೂರಪ್ಪ ಅವರಿಗೆ ಡೇಂಜರ್. ಇದನ್ನೆಲ್ಲಾ ಲೆಕ್ಕ ಹಾಕಿರುವ ಯಡ್ಡಿ ಮುಂದಿನ ಒಂದು ವರ್ಷದಲ್ಲಿ ಡಿಕೆಶಿ ವಿರುದ್ಧ ಯಾವುದೇ ಪ್ರಕರಣ ನಿಲ್ಲದೇ ಕಾಂಗ್ರೆಸ್ ಆವತ್ತು ಕೃಷ್ಣ ನೇತೃತ್ವದಲ್ಲಿ ಶಂಖ ಊದಿದಂತೆ ಈ ಬಾರಿ ಡಿಕೆಶಿ ಊದಿದರೆ ಯಡ್ಯೂರಪ್ಪ ಯಾವುದಾದರೂ ರಾಜ್ಯದ ರಾಜ್ಯಪಾಲರಾಗಿ ಹೋಗುವ ತೀರ್ಮಾನಕ್ಕೆ ಬರಬಹುದು. ನಿಜವಾದ ಯುದ್ಧ ಪ್ರಾರಂಭವಾಗುವುದೇ ಮುಂದಿನ ಮಾರ್ಚ್ ಹೊತ್ತಿಗೆ. ಇದು ಯಡ್ಯೂರಪ್ಪನವರಿಗೆ ಚೆನ್ನಾಗಿ ಗೊತ್ತಿದೆ. ತಮ್ಮ ರಾಜಕೀಯ ಜೀವನದ ಕೊನೆಯ ಯುದ್ಧ ಶುರುವಾಗುವ ಮೊದಲೇ ಅವರು ಶಸ್ತ್ರ ಕೆಳಗೆ ಇಡುತ್ತಾರಾ. ಅವರಾಗಿಯೇ ಕೆಳಗೆ ಇಡಲಿ ಎಂದು ಕೇಂದ್ರದ ಬಿಜೆಪಿ ನಾಯಕರು ಕಾಯುತ್ತಿದ್ದಾರಾ.. ರಾಜ್ಯ ರಾಜಕೀಯ ಕುತೂಹಲಕಾರಿ ಘಟ್ಟಕ್ಕೆ ಬಂದು ಮುಟ್ಟಿರುವುದು ಸುಳ್ಳಲ್ಲ!
Leave A Reply