ಅಬ್ಬಕ್ಕ ಪಠ್ಯದಿಂದ ಹೊರಗೆ ಹೋದರೆ ಇತಿಹಾಸ ನಮ್ಮನ್ನು ಕ್ಷಮಿಸಲ್ಲ!!

ಟಿಪ್ಪುವಿನ ಪಠ್ಯವನ್ನು ನಮ್ಮ ರಾಜ್ಯ ಸರಕಾರ ಏಳನೇ ತರಗತಿಯ ಸಮಾಜ ವಿಜ್ಞಾನದಿಂದ ಕೈಬಿಡಲಿದೆ ಎನ್ನುವಂತಹ ಸುದ್ದಿ ಈಗಾಗಲೇ ಸಾಕಷ್ಟು ಚರ್ಚೆಯಲ್ಲಿದೆ. ಹಿಂದೂ ಸಂಘಟನೆಗಳು ಈಗಾಗಲೇ ಖುಷಿ ವ್ಯಕ್ತಪಡಿಸುತ್ತಿದ್ದರೆ, ಇಸ್ಲಾಂ ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿವೆ. ಟಿಪ್ಪು ವಿವಾದಗಳನ್ನೇ ಮೈಮೇಲೆ ಹೊತ್ತುಕೊಂಡು ಜೀವಿಸಿದ್ದ ರಾಜ ಎನ್ನುವುದರಲ್ಲಿ ಸಂಶಯವಿಲ್ಲ. ಆತನ ಬಗ್ಗೆ ಮತಾಂತರಿ, ಹಿಂದೂ ಪೀಡಕ ಎಂಬ ಅಭಿಪ್ರಾಯಗಳು ಇರುವಂತೆ ಯುದ್ಧದಲ್ಲಿ ಆಗಿನ ಕಾಲಕ್ಕೆ ಅತ್ಯಾಧುನಿಕ ತಂತ್ರವನ್ನು ಬಳಸಿ ಬ್ರಿಟಿಷರ ವಿರುದ್ಧ ಕಾದಾಡಿದ್ದ ಎಂದು ಕೂಡ ಹೇಳಲಾಗುತ್ತದೆ. ಆದರೆ ನಮ್ಮ ದುರಾದೃಷ್ಟ ಟಿಪ್ಪುವಿನ ಒಂದು ಮುಖವನ್ನು ಮಾತ್ರ ನಾವು ನಮ್ಮ ಮಕ್ಕಳಿಗೆ ಕಲಿಸಿದ್ದೇವೆ ಬಿಟ್ಟರೆ ಟಿಪ್ಪು ತನ್ನ ಧರ್ಮವನ್ನು ಬೆಳೆಸಲು ಬಹುಸಂಖ್ಯಾತರ ಮೇಲೆ ಹೇಗೆ ಆರ್ಥಿಕ, ಸಾಮಾಜಿಕ ದೌರ್ಜನ್ಯವನ್ನು ಮಾಡಿದ್ದ ಎಂದು ಹೇಳಲೇ ಇಲ್ಲ. ಆದರೆ ನಾನು ಇವತ್ತು ಟಿಪ್ಪು ಬಗ್ಗೆ ಹೇಳಲು ಹೊರಟಿಲ್ಲ. ಆ ಮನುಷ್ಯನ ಬಗ್ಗೆ ತುಂಬಾ ಗೊಂದಲ ಇರುವುದರಿಂದ ಪಠ್ಯದಿಂದ ಕೈ ಬಿಡುವುದರಿಂದ ಸಮಸ್ಯೆ ಇಲ್ಲ. ಬೇಕಾದವರು ಲೈಬ್ರರಿಯಲ್ಲಿ ಓದಿ ತಮ್ಮ ಅಭಿಪ್ರಾಯಗಳನ್ನು ಗಟ್ಟಿಗೊಳಿಸಿ. ಆದರೆ ನಾನು ಈಗ ಹೇಳಲು ಹೊರಟಿರುವುದು ರಾಣಿ ಅಬ್ಬಕ್ಕ ಚೌಟ ಎನ್ನುವ ಅಂಜಿಕೆ ಅರಿಯದ ರಾಣಿಯ ಬಗ್ಗೆ.
ನನಗೆ ಸಿಕ್ಕಿದ್ದ ಮಾಹಿತಿಯ ಪ್ರಕಾರ ಟಿಪ್ಪುವಿನೊಂದಿಗೆ ಅಬ್ಬಕ್ಕಳ ಪಠ್ಯವನ್ನು ನಮ್ಮ ರಾಜ್ಯ ಸರಕಾರ ಕೈಬಿಡಲಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಹಾಗೆ ಮಾಡಿದರೆ ಅದು ಶುದ್ಧ ತಪ್ಪು. ಅಬ್ಬಕ್ಕಳ ಬಗ್ಗೆ ಅರಿತಿರುವವರು ಹಾಗೆ ಮಾಡಬಾರದು. ಅಬ್ಬಕ್ಕಳ ಮೇಲೆ ಯಾವುದೇ ವಿವಾದ ಇಲ್ಲ. ಆ ಮಹಿಳೆ ಪೋರ್ಚುಗೀಸರನ್ನು ಹೇಗೆ ಹಣ್ಣುಗಾಯಿ-ನೀರುಗಾಯಿ ಮಾಡಿದ್ದಳು ಎಂದರೆ ಪೋರ್ಚುಗೀಸ್ ಆಕೆಯ ಶಕ್ತಿ ಕಂಡು ನಿಬ್ಬೆರಗಾಗಿದ್ದರು. ಆಕೆಯನ್ನು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಮಹಿಳೆ ಎಂದು ಕರೆದದ್ದೇ ಬ್ರಿಟಿಷ್ ಲೇಖಕರು. ಆಕೆ ಯುದ್ಧ ಭೂಮಿಗೆ ತೆರಳುವ ಮೊದಲು ಪ್ರತಿ ಬಾರಿ ಸೈನಿಕರನ್ನು ಉದ್ದೇಶಿಸಿ ಹೇಳುತ್ತಿದ್ದ ಮಾತು – ನನ್ನ ಮಾತೃಭೂಮಿಯನ್ನು ಉಳಿಸಲು ಯುದ್ಧ ಮಾಡಿ ವಿದೇಶಿಯರನ್ನು ಸೋಲಿಸಲೇಬೇಕಿದೆ. ಅದು ಭೂಮಿಯ ಮೇಲೇನೆ ಇರಲಿ, ಅವರು ಜಲಮಾರ್ಗದ ಮೂಲಕವೇ ಬರಲಿ. ಸಮುದ್ರ ತೀರದಲ್ಲಿಯೇ ಅವರನ್ನು ಹಿಮ್ಮೆಟ್ಟಿಸಿ ಅವರ ನಾಡಿಗೆ ಓಡಿಸಿ”. ತನ್ನ ಪುಟ್ಟ ಸೈನ್ಯದೊಂದಿಗೆ ಸೇರಿ 3000 ಪೋರ್ಚುಗೀಸ್ ತಂಡಗಳೊಂದಿಗೆ ಕಾದಾಡಿದ ಮಹಾನ್ ವೀರರಾಣಿ ಅಬ್ಬಕ್ಕ ನಮ್ಮದೇ ನೆಲದ ಹೆಣ್ಣುಮಗಳು ಎನ್ನುವುದು ನಮಗೆ ಹೆಮ್ಮೆಯ ವಿಷಯ. ಅಬ್ಬಕ್ಕಳಿಗೆ ರಾಷ್ಟ್ರಮಟ್ಟದಲ್ಲಿ ಸಿಗಬೇಕಾದ ಮಾನ್ಯತೆ ಸಿಗದೇ ಇರಬಹುದು. ಆದರೆ ಅವಳನ್ನು ನಮ್ಮ ತುಳುನಾಡು ಮರೆಯಲು ಸಾಧ್ಯವೇ ಇಲ್ಲ. ಗಂಡ ಪೋರ್ಚುಗೀಸರೊಂದಿಗೆ ಸೇರಿ ಇವಳ ವಿರುದ್ಧವೇ ಹೋರಾಡಿದ ಎಂದು ಇತಿಹಾಸ ಹೇಳುತ್ತದೆ ಎಂದರೆ ಅರ್ಥ ಮಾಡಿಕೊಳ್ಳಿ. ರಾಣಿ ಅಬ್ಬಕ್ಕಳ ದೇಶಪ್ರೇಮ ಹೇಗಿತ್ತು ಎನ್ನುವುದು ಗೊತ್ತಾಗುತ್ತದೆ.
ಅಂತಹ ವೀರ ವನಿತೆಯ ಬಗ್ಗೆ ನಮ್ಮ ಮುಂದಿನ ಪೀಳಿಗೆ ಓದಬೇಕು. ಬಹುಶ: ಬೆಂಗಳೂರಿನಲ್ಲಿ ಕುಳಿತಿರುವ ಐಎಎಸ್ ಅಧಿಕಾರಿಗಳಿಗೆ ಅಥವಾ ಪಠ್ಯ ಪುಸ್ತಕ ರಚನಾ ಮಂಡಳಿಯವರಿಗೆ ಅಬ್ಬಕ್ಕಳ ಬಗ್ಗೆ ಗೊತ್ತಿರಲಿಕ್ಕಿಲ್ಲ. ಯಾಕೆಂದರೆ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಒನಕೆ ಒಬ್ಬವ್ವ ಎನ್ನುವ ಮಹಾನ್ ವೀರ ವನಿತೆಯರಿಗೆ ಸಿಕ್ಕಿದ್ದಷ್ಟು ಪ್ರಾಶಸ್ತನಮ್ಮ ಅಬ್ಬಕ್ಕಳಿಗೆ ಸಿಗದೇ ಇರಲು ಆಕೆ ದಕ್ಷಿಣ ಕನ್ನಡ ಜಿಲ್ಲೆಯವಳು ಎನ್ನುವುದು ಕೂಡ ಇರಬಹುದು. ಆದರೆ ಹೇಗೋ ಆಕೆಯ ಬಗ್ಗೆ ಒಂದು ಪಠ್ಯ ನಮ್ಮ ಮಕ್ಕಳು ಕಲಿಯುವಂತಾದದ್ದು ನಮ್ಮ ಅದೃಷ್ಟ. ಈಗ ಏನೇನೋ ಕಾರಣ ನೀಡಿ ಅಬ್ಬಕ್ಕ ಪಠ್ಯವನ್ನು ಕೈಬಿಡಲು ಸರಕಾರ ಮುಂದಾಗಿದೆ. ನೀವು ಬೇಕಾದರೆ ಬೇರೆ ಬೇರೆ ಧರ್ಮದ ದೇವರ ಪಠ್ಯವನ್ನು ಬೇಕಾದರೆ ಕೈಬಿಡಿ. ಯಾಕೆಂದರೆ ಭಗವತ್ ಗೀತೆ, ಕುರಾನ್, ಬೈಬಲ್ ಗಳನ್ನು ಆಯಾ ಧರ್ಮದ ಮನೆಗಳಲ್ಲಿ ಮಕ್ಕಳಿಗೆ ಅವರ ಅಮ್ಮಂದಿರು ಕಲಿಸಲಿ. ಆದರೆ ಟಿಪ್ಪುವನ್ನು ಹೊರಗೆ ಇಡುವ ಗಡಿಬಿಡಿಯಲ್ಲಿ ಹಿಂದೂಗಳ ಒಬ್ಬ ರಾಣಿಯನ್ನು ಕೂಡ ಹೊರಗಿಟ್ಟು ಸಮಾನತೆ ಕಾಪಾಡಿಕೊಳ್ಳಬೇಕು ಎನ್ನುವ ಕಾರಣಕ್ಕೆ ಅಬ್ಬಕ್ಕಳನ್ನು ಮುಟ್ಟಿದರೆ ಜಾಗ್ರತೆ. ಈ ಬಗ್ಗೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು, ಸಚಿವರು, ಸಂಸದರು ಮಾತನಾಡಬೇಕು. ಅಬ್ಬಕ್ಕಳ ಬಗ್ಗೆ ಮಕ್ಕಳು ಕಲಿತಷ್ಟು ಒಳ್ಳೆಯದು. ಅವಳ ಬಗ್ಗೆ ಸಂಶೋಧನೆಗಳಾದಷ್ಟು ಒಳ್ಳೆಯದು. ಅಬ್ಬಕ್ಕ ನಮ್ಮ ಜಿಲ್ಲೆಯ ವಜ್ರ. ವಜ್ರದ ಬೆಲೆ ಗೊತ್ತಿಲ್ಲದವರಿಗೆ ಆಕೆ ಕೇವಲ ಒಬ್ಬಳು ರಾಣಿ. ಖಾದರ್ ಯಾವುದ್ಯಾವುದೋ ಕ್ಷುಲಕ ಕಾರಣಕ್ಕೆ ಸುದ್ದಿಗೋಷ್ಟಿ ಮಾಡುತ್ತಾರೆ. ಇದಕ್ಕಾಗಿ ಹೋರಾಡಲಿ. ಇನ್ನು ಕೊರೋನಾ ನಡುವೆ ಅಬ್ಬಕ್ಕಳನ್ನು ನಮ್ಮ ಜನಪ್ರತಿನಿಧಿಗಳು ಮರೆತು ಆಕೆಯ ವಿಷಯ ಹಗುರವಾಗಿ ತೆಗೆದುಕೊಂಡರೆ ಇತಿಹಾಸ ಮರೆತವರನ್ನು ಕ್ಷಮಿಸಲ್ಲ. ಯಾಕೆಂದರೆ ಅಬ್ಬಕ್ಕ ಉಳ್ಳಾಲದ ಒಂಭತ್ತು ಕೆರೆಯಲ್ಲಿ ಬೆಂಕಿಪೊಟ್ಟಣಗಳಂತಹ ಮನೆ ನಿರ್ಮಿಸಿ ಹಣ ಮಾಡಲು ಪೋರ್ಚುಗೀಸರ ವಿರುದ್ಧ ತಂತ್ರ ಹೂಡಿದವಳಲ್ಲ. ಆಕೆ ಜೀವದ ಹಂಗು ಬಿಟ್ಟು ಈ ನಾಡಿನ ಇಂಚಿಂಚು ಭೂಮಿ ಪರಕೀಯರಿಗೆ ಹೋಗಬಾರದು ಎಂದು ಕಾದಾಡಿದವಳು. ಅದು ಎಲ್ಲ ರಾಜಕೀಯ ನಾಯಕರಿಗೂ ನೆನಪಿರಲಿ. ಅಬ್ಬಕ್ಕ ಉತ್ಸವದ ಹೆಸರಿನಲ್ಲಿ ಬರುವ ಲಕ್ಷಗಟ್ಟಲೆ ಹಣವನ್ನು ನುಂಗುವವರು ಕನಿಷ್ಟ ಆ ಋಣಕ್ಕಾಗಿ ಈ ವಿಷಯಕ್ಕೆ ಹೋರಾಡಲಿ!
Leave A Reply