ಅಡಿಟರ್ ಜನರಲ್ ಅವರನ್ನೇ ಸೆಟಲ್ ಮೆಂಟ್ ಮಾಡಿದ ಪಾಲಿಕೆ
ನಿಮಗೆ ಪಾಕೆಟ್ ಮನಿಯಾಗಿ ತಂದೆ 50 ರೂಪಾಯಿ ಖರ್ಚಿಗೆ ಹಣ ಕೊಟ್ಟರೆ ನೀವು ಯಾವುದ್ಯಾವುದಕ್ಕೋ ವೇಸ್ಟ್ ಮಾಡಿದರೆ ನಂತರ ತಂದೆ ಅದರ ಲೆಕ್ಕ ಕೇಳಿದಾಗ ನೀವು ಸುಳ್ಳು ಸುಳ್ಳು ಲೆಕ್ಕ ಕೊಟ್ಟರೆ ಅದನ್ನು ತಂದೆ ಕಣ್ಣು ಮುಚ್ಚಿ ನಂಬಿದರೆ ಏನಾಗುತ್ತದೆ? ನೀವು ತಂದೆಗೆ ಮೋಸ ಮಾಡಿದ್ದೀರಿ ಎಂದು ಆಗುತ್ತದೆ ಅಲ್ಲವೇ?
ಇದು ಕೂಡ ಹಾಗೇಯೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಪ್ರತಿ ವರ್ಷ ಜನರಲ್ ಆಡಿಟ್ ಆಗುತ್ತದೆ. ಬೆಂಗಳೂರಿನಿಂದ ಬಂದ ಅಡಿಟರ್ ಗಳು ಮಾಡುತ್ತಾರೆ. ಕಳೆದ ಬಾರಿ ಮೂರು ವರ್ಷದ ಅಡಿಟ್ ಒಮ್ಮೆಲ್ಲೆ ಆಗಿತ್ತು. ಆ ಅಡಿಟ್ ಆದ ಬಳಿಕ ಆಡಿಟರ್ಸ್ ಸುಮಾರು 130 ತಪ್ಪುಗಳನ್ನು ಪಟ್ಟಿ ಮಾಡಿದರು. ಅದನ್ನು ಪಾಲಿಕೆಯ ಆಯುಕ್ತರಿಗೆ ಕೊಟ್ಟು ಮೂರರಿಂದ ಏಳು ದಿನಗಳೊಳಗೆ ಅದಕ್ಕೆ ಉತ್ತರ ಕೊಡಬೇಕು ಎಂದು ಸೂಚಿಸಲಾಯಿತು. ತಮ್ಮ ತಪ್ಪುಗಳ ಪಟ್ಟಿಯನ್ನು ಕೈಯಲ್ಲಿ ಹಿಡಿದುಕೊಂಡ ಪಾಲಿಕೆಯ ಅಧಿಕಾರಿಗಳು ಮೊದಲು ನೋಡಿದ್ದು ಏನೆಂದರೆ ಯಾವುದಕ್ಕೆ ನಾವು ಸುಲಭವಾಗಿ ಉತ್ತರ ಕೊಡಬಹುದು ಮತ್ತು ಯಾವುದನ್ನು ನಾವು ಎಡ್ಜಸ್ಟ್ ಮೆಂಟ್ ಮೂಲಕ ಸೆಟಲ್ ಮಾಡಬಹುದು. ಪಾಲಿಕೆಗೆ ತಮ್ಮ ತಪ್ಪುಗಳನ್ನು ತಪ್ಪೆ ಅಲ್ಲ ಎಂದು ಸಾಧಿಸಿ ತೋರಿಸುವುದು ಕರಗತವಾಗಿದೆ. ಹಾಗೇ ಅಡಿಟರ್ ಮಾಡಿಕೊಟ್ಟ 130 ತಪ್ಪುಗಳನ್ನು ನೋಡಿದ ಪಾಲಿಕೆಯವರು ಸುಲಭ ಇದ್ದದ್ದಕ್ಕೆ ಉತ್ತರ ಕೊಟ್ಟರು. ಯಾವುದು ಕುತ್ತಿಗೆಗೆ ಬರುವಂತದ್ದು ಎಂದು ಗೊತ್ತಾಯಿತೋ ಅದಕ್ಕೆ ಉತ್ತರ ಕೊಡಲು ಹೋಗಿಲ್ಲ.
ಸರಿ, ಇವರು ಉತ್ತರ ಕೊಡಲಿಕ್ಕೆ ಹೋಗಲಿಲ್ಲ ಎಂದಾಗ ಪಾಲಿಕೆಯ ಅಡಿಟರ್ ಜನರಲ್ ಏನು ಮಾಡಬೇಕು, ಇವರ ಕುತ್ತಿಗೆ ಹಿಡಿಯಬೇಕು, ತಾನೆ. ಆದರೆ ಅವರು ಕೂಡ ಏನು ಮಾಡಲಿಲ್ಲ. ನೀವು ಗೋಲ್ ಮಾಲ್ ಮಾಡಿರುವ ಅಕ್ರಮಗಳ ಲೆಕ್ಕ ಕೊಡಲಿಲ್ಲ ಎಂದ ಕೂಡಲೇ ನಾವು ಬಿಡ್ತೇವಾ ಎಂದು ಖಡಕ್ಕಾಗಿ ಕೇಳಬೇಕಿತ್ತು.
ಕುರಿಗಳನ್ನು ಕಾಯಲು ಬಿಟ್ಟಿದ್ದ ತೋಳ ದಿನಕ್ಕೊಂದರಂತೆ ಕುರಿಗಳನ್ನು ಗುಳಂ ಮಾಡುತ್ತಿದ್ದಾಗ ಕುರಿಗಳ ಮಾಲೀಕ ತೋಳದ ಹತ್ತಿರ ಬಂದು ಲೆಕ್ಕ ಕೇಳದಿದ್ರೆ ಅದರ ಅರ್ಥ ಏನು? ತೋಳಕ್ಕೆ ಕುರಿಗಳನ್ನು ತಿನ್ನಲು ಅವನೇ ಅವಕಾಶ ಕೊಟ್ಟಂತೆ ಆಗುವುದಿಲ್ಲವಾ? ಇದು ಕೂಡ ಹಾಗೆ ಆಯಿತು. ಕುರಿಗಳು ಕಡಿಮೆಯಾಗುತ್ತಿದೆ ನಿಜ, ಆದರೆ ನೀನು ತಿನ್ನುವುದಿಲ್ಲ ಎನ್ನುವ ಗ್ಯಾರಂಟಿ ಇಲ್ಲ. ನೀನೆ ತಿಂದಿರಬೇಕು ಎಂದು ಕನಿಷ್ಟ ಕೇಳಿದ್ದರೂ ತೋಳಕ್ಕೆ ನಾಚಿಕೆಯಾದರೂ ಆಗುತ್ತಿತ್ತು. ಆದರೆ ಯಾರೂ ಕೇಳಲೇ ಇಲ್ಲ. ಕುರಿಗಳು ಕಡಿಮೆ ಆಗುತ್ತಾ ಹೋಯಿತೇ ವಿನ: ಬೇರೆ ಏನೂ ಆಗಲಿಲ್ಲ. ಅಡಿಟರ್ ಜನರಲ್ ಕೇಳುತ್ತಿಲ್ಲ ಎಂದು ಗ್ಯಾರಂಟಿಯಾಗುತ್ತಿದ್ದಂತೆ ನಾನು ನಗರಾಭಿವೃದ್ಧಿ ಇಲಾಖೆಯ ಮುಖ್ಯ ಕಾರ್ಯದರ್ಶಿಯವರಿಗೆ ಮಾಹಿತಿ ಹಕ್ಕಿನಲ್ಲಿ ಪ್ರಶ್ನೆ ಕೇಳಿದೆ.
ಯಾಕೆಂದರೆ ಅದಕ್ಕೆ ಮೊದಲು ಒಂದು ವಿಷಯ ನನಗೆ ಕ್ಲಿಯರ್ ಆಗಿತ್ತು. ಪಾಲಿಕೆಯವರು ಸೇರಿ ಅಡಿಟರ್ ಜನರಲ್ ಅವರನ್ನು ತಮ್ಮದೇ ಶೈಲಿಯಲ್ಲಿ ಬಾಯಿ ತೆರೆಯದಂತೆ ಮಾಡಿದ್ದಾರೆ. ತಮ್ಮ ಆಪ್ತ ಗುತ್ತಿಗೆದಾರರನ್ನು ಕರೆಸಿಕೊಂಡು ಅವರಿಂದ ಹಣ ಒಟ್ಟು ಮಾಡಿ ಅದನ್ನು ಯಾರಿಗೆ ತಲುಪಿಸಬೇಕೊ ಅವರಿಗೆ ತಲುಪಿಸಿ ಅವರು ಈ ವಿಷಯದಲ್ಲಿ ಏನೂ ಕ್ರಮ ತೆಗೆದುಕೊಳ್ಳುವಂತೆ ಮಾಡಿದ್ದಾರೆ. ಆದ್ದರಿಂದ ಮೂರರಿಂದ ಏಳು ದಿನಗಳ ಒಳಗೆ ಉತ್ತರ ಕೊಡಿ ಎಂದು ಅವರು ಕೇಳಿದ್ದರೂ ಇವರು ಉತ್ತರ ಕೊಡದಿದ್ದರೂ ಏನೂ ತಲೆಬಿಸಿ ಮಾಡದೇ ಆರಾಮವಾಗಿದ್ದಾರೆ ಎಂದರೆ ದಾಲ್ ಮೇ ಕುಚ್ ಕಾಳಾ ಹೇ ಎಂದು ಯಾರಿಗಾದರೂ ಅನಿಸಿಯೇ ಅನಿಸುತ್ತದೆ. ಹಾಗೇ ಅನಿಸಿದ್ದ ಕಾರಣ ನಾನು ನನ್ನಷ್ಟಕ್ಕೆ ವಿಚಾರಿಸಿದಾಗ ಗುತ್ತಿಗೆದಾರರು ಸೇರಿ ಹಣ ಒಟ್ಟು ಮಾಡಿ ಪಾಲಿಕೆಯ ಸಂಬಂಧಪಟ್ಟವರ ಕೈಯಲ್ಲಿ ಕೊಟ್ಟಿರುವುದು ಗಮನಕ್ಕೆ ಬಂತು.
ಇದು ನಮ್ಮ ಪಾಲಿಕೆಯ ಅವಸ್ಥೆ. ನೀವು ತಪ್ಪು ಮಾಡಿದ್ದಿರಿ ಎಂದು ಬೊಟ್ಟು ಮಾಡಿದರೆ ಇವರು ಸೆಟಲ್ ಮೆಂಟಿಗೆ ಇಳಿಯುತ್ತಾರೆ.ಶಾಸಕ ವೇದವ್ಯಾಸ ಕಾಮತ್ ಮತ್ತು ಡಾ ಭರತ್ ಶೆಟ್ಟಿ ಅವರೇ ನೀವು ಒಳ್ಳೆಯ ಕೆಲಸಮಾಡುತ್ತಿದ್ದಿರಿ ಎಂದು ಎಲ್ಲರೂ ಹೇಳುತ್ತಿದ್ದಾರೆ. 2017-18 ಮತ್ತು 2018-19ರಲ್ಲಿ ಮಂಗಳೂರು ಮಹಾ ನಗರಪಾಲಿಕೆ ಯಲ್ಲಿ ನಡೆದಿರುವ ತಪ್ಪು ಲೆಕ್ಕಗಳ ಪಟ್ಟಿಯನ್ನು ಅಡಿಟ್ ಜನರಲ್ ನವರು ನೀಡಿದ್ದಾರೆ ತರಿಸಿ ಒಮ್ಮೆ ನೋಡಿ!ಅಡಿಟರ್ ಜನರಲ್ ನವರು ಎಷ್ಟು ಗೋಲ್ ಮಾಲ್ ಕಂಡು ಹಿಡಿದ್ದಿದ್ದಾರೆ ಎಂದು ಗೊತ್ತಾಗುತ್ತದೆ.
Leave A Reply