ಹರ್ಷ ವಿಷಯದಲ್ಲಿ ಆದ ತಪ್ಪು ಮತ್ತೇ ಮಾಡಬೇಡಿ ಯಡಿಯೂರಪ್ಪ!!
ಎಲ್ಲರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು. ಈಗ ಅರ್ಜೆಂಟಾಗಿ ಸ್ವಾತಂತ್ರ್ಯ ಕೊಡಬೇಕಾಗಿರುವುದು ಯಡಿಯೂರಪ್ಪನವರ ನೇತೃತ್ವದ ರಾಜ್ಯ ಸರಕಾರ. ಕಾನೂನು ಸುವ್ಯವಸ್ಥೆಯನ್ನು ಸ್ವತಂತ್ರವಾಗಿ ನಿರ್ವಹಿಸಲು ಸ್ವಾತಂತ್ರ್ಯ ಸಿಗುತ್ತಾ ಎನ್ನುವುದು ಈಗಿನ ಪ್ರಶ್ನೆ. ಬೆಂಗಳೂರಿನಲ್ಲಿ ಗಲಾಟೆ ಆದ ಬಳಿಕ ರಾಜ್ಯ ಸರಕಾರ ಸಹಿತ ಭಾರತೀಯ ಜನತಾ ಪಾರ್ಟಿಯ ಮುಖಂಡರಿಗೆ ಹೆಚ್ಚು ಕಡಿಮೆ ಇಂತಹುದೇ ಘಟನೆ ಮಂಗಳೂರಿನಲ್ಲಿ ಕೂಡ ಆಗಿದೆಯಲ್ಲ ಎಂದು ಮಾತು ಹೊರಗೆ ಬರುತ್ತಿದೆ. ಹಾಗೇ ಅವರ ಬಾಯಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಮಂಗಳೂರಿನ ಉಲ್ಲೇಖ ಆಗಿದೆ. ಆದರೆ ವಿಷಯ ಏನೆಂದರೆ ಎಸ್ ಡಿಪಿಐ ಅಥವಾ ಮೂಲಭೂತವಾದಿ ಮುಸ್ಲಿಮರು ರಾಜ್ಯದಲ್ಲಿ ಈಗ ಮಾಡುತ್ತಿರುವ ದೊಂಬಿ, ಗಲಭೆಯ ಪಟ್ಟಿ ಮಾಡುವಾಗ ಇವರಿಗೆ ಮಂಗಳೂರು ನೆನಪಾಗುತ್ತದೆ. ಆದರೆ ಇದೇ ಮಂಗಳೂರಿನಲ್ಲಿ ಜಿಹಾದಿಗಳು ಸಿಎಎ ನೆಪದಲ್ಲಿ ಮಂಗಳೂರು ಬಂದರು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ದಾಳಿ ಮಾಡಿದಾಗ ಪೊಲೀಸ್ ಕಮೀಷನರ್ ಡಾ.ಹರ್ಷ ಅವರು ಕ್ರಮ ತೆಗೆದುಕೊಂಡರಲ್ಲ, ಆಗ ಯಾವ ಯಡಿಯೂರಪ್ಪ ಸಾಹೇಬ್ರು ಹರ್ಷ ಪರವಾಗಿ ನಿಂತಿದ್ರು ಎಂದು ಹೇಳಬಹುದಾ?
ಮಂಗಳೂರಿನಲ್ಲಿ ಸಿಎಎ ಗಲಭೆ ಆಗುವಾಗ ಅಸಂಖ್ಯಾತ ಮುಸ್ಲಿಂ ಪ್ರತಿಭಟನಾಕಾರರು ಏನು ಮಾಡಿದ್ರು ಎನ್ನುವುದನ್ನು ಇಡೀ ಪ್ರಪಂಚ ನೋಡಿದೆ. ಆ ಘಟನೆಯ ಬಳಿಕ ಆಗಿನ ಪೊಲೀಸ್ ಕಮೀಷನರ್ ಡಾ.ಹರ್ಷ ಅವರು ನಾಗರಿಕರಿಂದ ವಿಡಿಯೋ ಕ್ಲಿಪ್ ಆಹ್ವಾನಿಸಿದ್ದರು. 600 ರಷ್ಟು ವಿಡಿಯೋ ಕ್ಲಿಪ್ಸ್ ಬಂದಿರಬಹುದು. ಅದನ್ನು ಸಾಕಷ್ಟು ಕಾಪಿ ಮಾಡಿಸಿ ಹರ್ಷ ಅವರು ಎಲ್ಲಾ ಪೊಲೀಸ್ ಠಾಣೆಗಳಿಗೆ ಕಳುಹಿಸಿಕೊಟ್ಟಿದ್ದರು. ಯಾಕೆಂದರೆ ದೊಂಬಿಯಲ್ಲಿ ಭಾಗವಹಿಸಿದ ವ್ಯಕ್ತಿಗಳು ಸಾಮಾನ್ಯವಾಗಿ ಯಾರಿರುತ್ತಾರೆ ಎನ್ನುವ ಐಡಿಯಾ ಆಯಾ ಪೊಲೀಸ್ ಠಾಣೆಯ ಪೊಲೀಸರಿಗೆ ಇದ್ದೇ ಇರುತ್ತಾರೆ. ಅಂತವರನ್ನು ಗುರುತಿಸಿ ವಿಚಾರಣೆಗೆ ಕರೆಸುವುದು ಸುಲಭ. ಯಾರ ಗುರುತು ಒಂದು ಚೂರು ಕೂಡ ಇರುವುದಿಲ್ಲವೋ ಅಂತವರು ಕೇರಳದಿಂದ ಬಂದಿರುವ ಸಾಧ್ಯತೆಗಳ ಬಗ್ಗೆ ತನಿಖೆ ಮಾಡುವ ಯೋಜನೆ ಹರ್ಷ ಅವರಿಗೆ ಇತ್ತು. ಹಾಗೆಲ್ಲ ಮಾಡಿ ಒಟ್ಟು 32 ಜನರನ್ನ ಬಂಧಿಸಲಾಗಿತ್ತು. ಸುಮಾರು 400 ರಷ್ಟು ಜನರನ್ನು ಗುರುತಿಸಲಾಗಿತ್ತು. ಅದರ ಬಳಿಕ ಉಡುಪಿಯ ಜಿಲ್ಲಾಧಿಕಾರಿ ಜಗದೀಶ್ ಅವರಿಗೆ ತನಿಖೆ ಮಾಡಿ ವರದಿ ಕೊಡಲು ರಾಜ್ಯ ಸರಕಾರ ಸೂಚಿಸಿತು.
ಅದರ ನಂತರ ಹರ್ಷ ಅವರು ಆ ಪ್ರಕರಣದಲ್ಲಿ ಯಾರನ್ನೂ ಬಂಧಿಸಲು ಹೋಗಲೇ ಇಲ್ಲ. ಯಾಕೆಂದರೆ ಅವರಿಗೆ ರಾಜ್ಯ ಸರಕಾರದಿಂದ ನಿರೀಕ್ಷಿಸಿದಷ್ಟು ಸಹಕಾರ ಸಿಗಲೇ ಇಲ್ಲ. ಆಗಲೂ ಇದ್ದದ್ದು ಇದೇ ಬಿ.ಎಸ್.ಯಡಿಯೂರಪ್ಪನವರ ಸರಕಾರ. ಯಾರು ಈಗ ಬೆಂಗಳೂರಿನಲ್ಲಿ, ಮೈಸೂರಿನಲ್ಲಿ ಕುಳಿತು ನಿಂತು ಘರ್ಜಿಸುತ್ತಿದ್ದಾರೋ ಅವರು ಆವತ್ತು ಕೂಡ ಇದ್ದರು. ಯಡಿಯೂರಪ್ಪನವರಿಗೆ 78 ವರ್ಷ ಆಗಲು ಕೆಲವು ತಿಂಗಳು ಕಡಿಮೆ ಇತ್ತು ಎನ್ನುವುದು ಬಿಟ್ಟರೆ ಬೇರೆ ಏನೂ ಬದಲಾವಣೆ ಇರಲಿಲ್ಲ. ಆದರೆ ಪೊಲೀಸರನ್ನೇ ಕಟಕಟೆಯಲ್ಲಿ ನಿಲ್ಲಿಸಿ ಅನುಮಾನದಿಂದ ನೋಡುವ ವ್ಯವಸ್ಥೆ ಆಗಿತ್ತು ಬಿಟ್ಟರೆ ಪೊಲೀಸ್ ಇಲಾಖೆಗೆ ಒಂದು ರೀತಿಯಲ್ಲಿ ಅವಮಾನಕರವಾಗಿಯೇ ನಡೆಸಲಾಗಿತ್ತು. ಪೊಲೀಸರ ವಿರುದ್ಧವೇ ವಿಚಾರಣೆ ಶುರುವಾಗಿತ್ತು.
ಜಿಲ್ಲಾಧಿಕಾರಿ ಜಗದೀಶ್ ಅವರು ಸಾಕ್ಷ್ಯ ನುಡಿಯಲು ನಾಗರಿಕರನ್ನು ಕರೆದರೆ ನೂರಾರು ಸಂಖ್ಯೆಯಲ್ಲಿ ಮುಸ್ಲಿಮರು ಬಂದರೇ ವಿನ: ಹಿಂದೂಗಳ ಸಂಖ್ಯೆ ಬಹಳ ಕಡಿಮೆ ಇತ್ತು.ಹೆಚ್ಚೆಂದರೆ ಸುಮಾರು 51 ಜನ ಇದ್ದಿರಬಹುದು. ಆವತ್ತು ಹರ್ಷ ಜೊತೆಯಲ್ಲಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ಗಟ್ಟಿಯಾಗಿ ನಿಂತಿದ್ದರೆ ಇವತ್ತು ಮೂಲಭೂತವಾದಿಗಳಿಗೆ ಹೆದರಿಕೆ ಉಳಿಯುತ್ತಿತ್ತು. ಆದರೆ ಬಿಜೆಪಿಯವರು ಭಾಷಣ ಮಾಡಿ ತಿರುಗಿದರೆ ವಿನ: ಪೊಲೀಸ್ ಅಧಿಕಾರಿಗಳ ಜೊತೆಗೆ ನಾವಿದ್ದೇವೆ, ನೀವು ಸರಿಯಾಗಿ ತನಿಖೆ ಮಾಡಿ ಎಂದು ಸೂಚಿಸಿದರೆ ಈ ಗಲಭೆ ಅಲ್ಲಿಗೆ ಸೀಮಿತವಾಗುತ್ತಿತ್ತು. ಆದರೆ ಪೊಲೀಸರ ಜೊತೆ ನಿಲ್ಲಲು ಬಿಜೆಪಿ ಯಾಕೆ ಹಿಂದಡಿ ಇಟ್ಟಿತ್ತು ಎನ್ನುವುದು ಅವರಿಗೆ ಗೊತ್ತು.
ಮೊನ್ನೆ ಬೆಂಗಳೂರಿನಲ್ಲಿ ಪೊಲೀಸ್ ಠಾಣೆಗೆ ಮತಾಂಧರು ದಾಳಿ ಮಾಡಿದಾಗ ಪೊಲೀಸ್ ಸಿಬ್ಬಂದಿಯೊಬ್ಬರು ಉನ್ನತ ಪೊಲೀಸ್ ಅಧಿಕಾರಿಗೆ ದೂರವಾಣಿಯಲ್ಲಿ ಮಾತನಾಡುತ್ತಾ, ಫೈಯರಿಂಗ್ ಮಾಡಲು ಅನುಮತಿ ಕೇಳಿದ್ದಾರೆ. ಅದು ವೈರಲ್ ಆಗಿದೆ. ಮುಂದೆ ವಿಚಾರಣೆ ಆಗುವಾಗ ಆ ಠಾಣೆಯ ಪೊಲೀಸರ ಜೊತೆ ರಾಜ್ಯ ಸರಕಾರ ಬಂಡೆಯಂತೆ ನಿಲ್ಲಬೇಕಾಗುತ್ತದೆ. ಸರಕಾರ ಕೈ ಬಿಟ್ಟರೆ ಮುಂದೆ ಪೊಲೀಸರು ಮತಾಂಧರ ದಾಳಿಯಾದಾಗ ತಮ್ಮ ಜೀವ ಉಳಿಸಲು ಕೂಡ ಶೂಟೌಟ್ ಮಾಡಲು ಹಿಂಜರಿಯುವ ವಾತಾವರಣ ನಿರ್ಮಾಣವಾಗಲಿದೆ. ಹರ್ಷರವರ ವಿಷಯದಲ್ಲಿ ಅನ್ಯಾಯ ಮಾಡಿದ ರಾಜ್ಯ ಸರಕಾರ ಈಗ ಮತ್ತೆ ಅದೇ ತಪ್ಪು ಮಾಡಬಾರದು. ಕಾಂಗ್ರೆಸ್ಸ್ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಿದ್ರೆ ಮುಸ್ಲಿಮರು ದಾಳಿ ಮಾಡಿ ಪೊಲೀಸರು ಮರುತ್ತರ ಕೊಟ್ಟರೆ ಆಗ ಪೊಲೀಸರ ಪರ ರಾಜ್ಯ ಸರಕಾರ ನಿಲ್ಲಲಿ ಎಂದು ಹೇಳುವ ಅಗತ್ಯವೇ ಬರುವುದಿಲ್ಲ. ಯಾಕೆಂದರೆ ಆಗ ಕಾಂಗ್ರೆಸ್ ನಿಸ್ಸಂಶಯವಾಗಿ ಮುಸ್ಲಿಮರ ಪರವಾಗಿಯೇ ನಿಲ್ಲುತ್ತದೆ. ಆದರೆ ಈಗ ಬಿಜೆಪಿ ಸರಕಾರ. ಮಾತನಾಡಿದರೆ ಕೇಸರಿ, ಕೇಸರಿ ಎನ್ನುತ್ತೀರಿ. ಮಂಗಳೂರಿನಲ್ಲಿ ಪೊಲೀಸರ ಮೇಲೆ ಪೆಟ್ರೋಲ್ ಬಾಂಬ್ ಹಾಕಲು ಬಂದವರು ಗುಂಡೇಟಿನಿಂದ ಸತ್ತಾಗ ಅವರಿಗೂ ಪರಿಹಾರ 5 ಲಕ್ಷ ಕೊಡಲು ಇದೇ ಯಡಿಯೂರಪ್ಪನವರು ಮುಂದಾಗಿದ್ದರು. ನಂತರ ತಮ್ಮ ಹೇಳಿಕೆ ಹಿಂದೆ ಪಡೆದುಕೊಂಡಿದ್ದರು. ಹುಲಿ, ಸಿಂಹ ಎಂದು ಕರೆಸಿಕೊಂಡರೆ ಪ್ರಯೋಜನವಿಲ್ಲ. ಕೃತಿಯಲ್ಲಿಯೂ ಹಾಗೆ ಇರಬೇಕು. ಆದರೆ ರಾಜ್ಯದ ಹುಲಿ ಬೇಟೆಯಾಡುವುದು ಮರೆತಾಗ ಹೀಗೆ ಆಗುತ್ತದೆ!!
Leave A Reply