ಬೆರಳು ತೋರಿಸಿದರೆ ಉಂಗುರ ಸಹಿತ ನುಂಗುವ ಮನಪಾ ಅಧಿಕಾರಿಗಳು ಫ್ಲೆಕ್ಸ್ ನಲ್ಲಿ ತಿಂದ ಹಣವೆಷ್ಟು?
ಈ ಒಂದು ವಿಷಯದಲ್ಲಿ ಕಾಂಗ್ರೆಸ್ಸಿಗರು ಮತ್ತು ಭಾರತೀಯ ಜನತಾ ಪಕ್ಷದ ಸದಸ್ಯರು ಒಂದೇ. ಯಾಕೆಂದರೆ ಇಬ್ಬರೂ ಮಾತನಾಡುವುದಿಲ್ಲ. ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಎಲ್ಲಾ ಕಡೆ ನೀವು ಈ ಫ್ಲೆಕ್ಸ್, ಬ್ಯಾನರ್ಸ್, ಹೋರ್ಡಿಂಗ್ಸ್ ನೋಡಿರುತ್ತೀರಿ. ಅದಕ್ಕಾಗಿ 8*4 ಅಳತೆಯ ಬ್ಯಾನರ್ ಹಾಕಲು ಮನಪಾಗೆ 125ರೂಪಾಯಿ ಕಟ್ಟಲು ಮಾತ್ರ ಇರುತ್ತದೆ. ಬ್ಯಾನರ್ ಹಾಕುವ ಮೊದಲು ಅದಕ್ಕಾಗಿ ಮನಪಾದಿಂದ ಪೂರ್ವ ಅನುಮತಿಯನ್ನು ಪಡೆಯಲೇಬೇಕು. ಅನುಮತಿ ಕೇಳುವ ಸಮಯದಲ್ಲಿ ನೀವು ಎಲ್ಲಿ ಫ್ಲೆಕ್ಸ್, ಹೋರ್ಡಿಂಗ್ಸ್ ಹಾಕುತ್ತಿರಿ ಎಂದು ಸ್ಪಷ್ಟವಾಗಿ ತಿಳಿಸಬೇಕು ಮತ್ತು ಅನುಮತಿ ಸಿಕ್ಕಿದ ಸ್ಥಳದಲ್ಲಿಯೇ ಅದನ್ನು ಹಾಕಬೇಕು. ಆದರೆ ಈ ಕಂಡೀಷನ್ ಅನ್ನು ಇಲ್ಲಿ ತನಕ ಎಷ್ಟು ಜನರು ಪಾಲಿಸಿದ್ದಾರೆ ಎನ್ನುವುದು ಬಹಳ ಪ್ರಮುಖವಾಗಿರುವ ಪ್ರಶ್ನೆ. ಈ ಮೇಲಿನ ನಿರ್ಬಂಧ ಓದುವುದಕ್ಕೆ ನಿಮಗೆ ಸುಲಭವಾಗಿ ಅನಿಸಬಹುದು. ಆದರೆ ಈ ಒಂದು ಕಾರಣದಿಂದಲೇ ಪಾಲಿಕೆಗೆ yearly ಕೋಟ್ಯಾಂತರ ರೂಪಾಯಿ ನಷ್ಟ ಸಂಭವಿಸುತ್ತದೆ. ಹೇಗೆ ಎಂದು ವಿವರಿಸುತ್ತೇನೆ.
ಮಂಗಳೂರಿನಲ್ಲಿ ಎನಾಗುತ್ತದೆ ಎಂದು ಪ್ರಾರಂಭದಲ್ಲಿ ಹೇಳಿ ಬಿಡ್ತೇನೆ. ಯಾವುದಾದರೂ ಸಂಘ, ಸಂಸ್ಥೆಗಳ ಕಾರ್ಯಕ್ರಮದ ಆಯೋಜಕರು ಏನು ಮಾಡುತ್ತಾರೆ ಎಂದರೆ ತಮ್ಮ ಕಾರ್ಯಕ್ರಮದ ಬ್ಯಾನರ್ ಗಳನ್ನು ಪ್ರಿಂಟಿಂಗ್ ಕೊಡುವಾಗ ಅದೇ ಡಿಜಿಟಲ್ ಪ್ರಿಂಟಿಂಗ್ ನವರಿಗೆ ಅದನ್ನು ಪ್ರಿಂಟ್ ಹಾಕಿಸಿ ಎಲ್ಲ ಕಡೆ ಅಳವಡಿಸಲು direction ನೀಡಿರುತ್ತಾರೆ. ಉದಾಹರಣೆಗೆ ನಿಮ್ಮ ಒಂದು ಕಾರ್ಯಕ್ರಮದ ಫ್ಲೆಕ್ಸ್ ಬ್ಯಾನರ್ ಅಥವಾ ಹೋರ್ಡಿಂಗ್ ಅನ್ನು ನೂರು ಕಡೆ ಅಳವಡಿಸಲು ನಿಮ್ಮ ಡಿಜಿಟಲ್ ಪ್ರಿಂಟ್ ಹಾಕಿಸುವವರಿಗೆ ಉದಾಹರಣೆ ಎಕ್ಸ್ ಸಂಸ್ಥೆಗೆ ಆದೇಶ ನೀಡಿರುತ್ತಿರಿ. ಅವರು ಮನಪಾ ಕಂದಾಯ ವಿಭಾಗಕ್ಕೆ ಹೋಗಿ ನೂರು ಫ್ಲೆಕ್ಸ್ ,ಬ್ಯಾನರ್ ಅಥವಾ ಹೋರ್ಡಿಂಗ್ಸ್ ಅಳವಡಿಸಲು ಅನುಮತಿ ಕೇಳಬೇಕು, ತಾನೆ. ಅವರು ಹತ್ತು ಫ್ಲೆಕ್ಸ್ ಅಥವಾ ಬ್ಯಾನರ್ ಎಂದು ಮನಪಾದ ಕಂದಾಯ ಅಧಿಕಾರಿಗಳಿಗೆ ಸುಳ್ಳು ಹೇಳುತ್ತಾರೆ. ಇವರು ಸುಳ್ಳು ಹೇಳುತ್ತಿದ್ದಾರೆ ಎಂದು ಗೊತ್ತಿಲ್ಲದಷ್ಟು ದಡ್ಡರಲ್ಲ ಅಲ್ಲಿ ಕುಳಿತಿರುವ ಅಧಿಕಾರಿಗಳು. ಬೆರಳು ನೀಡಿದರೆ ಬೆರಳಿಗೆ ಹಾಕಿರುವ ಉಂಗುರವನ್ನು ಸಹಿತ ನುಂಗುವ ಕಂದಾಯ ವಿಭಾಗದವರು “ಹೌದಾ, ಬರಿ ಹತ್ತೆ ಕಡೆ ಬ್ಯಾನರ್ ಹಾಕಿಸುತ್ತಾ ಇದ್ದಿರಾ, ಸರಿ, ಇಲ್ಲೊಂದು ಸಹಿ ಮಾಡಿ” ಎಂದು ಹತ್ತು ಬ್ಯಾನರ್ ಹಾಕಿಸಲು ಕೇಳಿರುವ ಅನುಮತಿ ಪತ್ರಕ್ಕೆ ಸಹಿ ಹಾಕಿಸುತ್ತಾರೆ ಮತ್ತು ಪ್ರಿಂಟಿಂಗ್ ನವರ ಮುಖ ನೋಡಿ ಪೇಲವ ನಗೆ ನಗುತ್ತಾರೆ. ಅದರರ್ಥ ಇಷ್ಟೇ ” ಮಗನೇ, ನಮಗೊತ್ತು ನೀನು ಎಷ್ಟು ಕಡೆ ಈ ಫ್ಲೆಕ್ಸ್ ಹಾಕಿಸುತ್ತೀಯಾ ಅಂತ, ಉಳಿದ ತೊಂಭತ್ತಕ್ಕೆ ಯಾರೂ ನಿಮ್ಮ ಅಜ್ಜ ಹಣ ಕೊಡುತ್ತಾನಾ” ಎನ್ನುವ ಅರ್ಥದಲ್ಲಿ ಡಿಜಿಟಲ್ ಪ್ರಿಂಟಿಂಗ್ ನವನ ಮುಖ ನೋಡುತ್ತಾರೆ. ಅಲ್ಲಿಗೆ ಪ್ರಿಂಟಿಂಗ್ ನವನಿಗೆ ಅರ್ಥವಾಗುತ್ತದೆ. “ಸರ್, ನೂರು ಫ್ಲೆಕ್ಸ್ ಮತ್ತು ಹೋರ್ಡಿಂಗ್ಸ್ ಹಾಕಲು ಆರ್ಡರ್ ಸಿಕ್ಕಿದೆ. ನಿಮಗೆ ಎಷ್ಟು ಕೊಡಬೇಕು ಹೇಳಿ” ಎಂದು ಹಲ್ಲುಗಿಂಜುತ್ತಾನೆ. ಅಲ್ಲಿಗೆ ಉಳಿದ ಫ್ಲೆಕ್ಸ್ ಅಥವಾ ಹೋರ್ಡಿಂಗ್ಸ್ ನ ಹಣದಲ್ಲಿ ಇಂತಿಷ್ಟು percentage ಕಂದಾಯ ಅಧಿಕಾರಿಗಳ ಜೇಬಿಗೆ ಹೋಗುತ್ತದೆ. ಅಲ್ಲಿಗೆ ಡಿಜಿಟಲ್ ನವರು ಖುಷ್, ಕಂದಾಯ ಅಧಿಕಾರಿ ಖುಷ್, ಮನಪಾಗೆ ಮಾತ್ರ ಲಾಸ್. ಆದ್ದರಿಂದ ಈ ಪ್ರಿಂಟಿಂಗ್ ನವರೆಂದರೆ ಕಂದಾಯ ಅಧಿಕಾರಿಗಳಿಗೆ ದೇವರಿದ್ದಂತೆ. ಅವರು ಬಿಸಾಡುವ ಬಿಸ್ಕಿತ್ ಅನ್ನು ತಿನ್ನಲು ಕಾಯ್ತಾ ಇರುತ್ತಾರೆ.
ಈ ಒಂದು ಅಕ್ರಮದಿಂದಲೇ ಮನಪಾಗೆ ಬರುವ ಆದಾಯ ಸೋರುತ್ತಾ ಹೋಗುತ್ತಿರುವುದು ಇಂದು ನಿನ್ನೆಯಿಂದಲ್ಲ. ಫ್ಲೆಕ್ಸ್ ಅಥವಾ ಹೋರ್ಡಿಂಗ್ಸ್ ನ ಜಮಾನಾ ಯಾವಾಗ ಪರಾಕಾಷ್ಟೆ ಗೆ ಮುಟ್ಟಲು ಆರಂಭಿಸಿತೊ ಅಲ್ಲಿಂದಲೇ ಈ ಪ್ರಿಂಟಿಂಗ್ ಮತ್ತು ಅಧಿಕಾರಿಗಳ “ಕೊಡು-ಕೊಳ್ಳುವಿಕೆ” ಯ ಸಂಬಂಧ ಪ್ರಾರಂಭವಾಗಿದೆ. ಇನ್ನೂ ಇವರು ಮಾಡುವ ಅಕ್ರಮದ ಮುಂದಿನ ಹಂತ ಈ ಫ್ಲೆಕ್ಸ್ ಅಥವಾ ಹೋರ್ಡಿಂಗ್ಸ್ ಅನ್ನು ಎಲ್ಲೆಲ್ಲಿ ಹಾಕುತ್ತೇವೆ ಎಂದು ಆಯೋಜಕರು application ಯಲ್ಲಿ ಸ್ಪಷ್ಟವಾಗಿ ನಮೋದಿಸಬೇಕು. ಆದರೆ application ಗಳ ಆ ಕಾಲಂ ಖಾಲಿ ಇರುತ್ತದೆ. ಯಾಕೆಂದರೆ ಒಂದು ವೇಳೆ ಹತ್ತೇ ಅನುಮತಿ ಪಡೆದಿದ್ದರೆ ಆ ಹತ್ತು ಜಾಗಗಳ ಹೆಸರನ್ನು ನಿಖರವಾಗಿ ಬರೆಯಬಹುದಿತ್ತಲ್ಲ. ಆದರೆ ಹತ್ತು ಕಡೆ ಅನುಮತಿ ಪಡೆದು ನೂರು ಕಡೆ ಫ್ಲೆಕ್ಸ್ ಅಥವಾ ಹೋರ್ಡಿಂಗ್ಸ್ ಅಳವಡಿಸುವುದರಿಂದ ಯಾವ ಸ್ಥಳದ ಹೆಸರನ್ನು ಬರೆಯುವುದು ಎಂದು ಗೊಂದಲಕ್ಕೆ ಈಡಾಗಿ ಯಾವ ಹೆಸರನ್ನು ಪ್ರಿಂಟಿಂಗ್ ನವರು ಬರೆಯಲು ಹೋಗುವುದಿಲ್ಲ. ಇದರಿಂದ ಯಾವ ಹತ್ತು ಸ್ಥಳಕ್ಕೆ ಅನುಮತಿ ಸಿಕ್ಕಿದೆ ಎಂದು ಗೊತ್ತಾಗದೆ ಇರುವುದರಿಂದ ಅದನ್ನು ಹಿಡಿಯುವುದು ಕಷ್ಟವಾಗುತ್ತದೆ ಎನ್ನುವುದು ಅಧಿಕಾರಿಗಳ ಅಂದಾಜು. ನಾವು ಚಾಪೆಯ ಕೆಳಗೆ ನುಗ್ಗಿದರೆ ಇವರು “ರಂಗೋಲಿ” ಕೆಳಗೆ ನುಗ್ಗುತ್ತಾರೆ ಎನ್ನುವ ಗಾದೆ ನಿಮಗೆ ಸರಿಯಾಗಿ ಅರ್ಥವಾಗಿರಬಹುದು. ಇಲ್ಲಿಯ ತನಕ ಮನಪಾ ವ್ಯಾಪ್ತಿಯಲ್ಲಿ 180 ಕಡೆಗಳಲ್ಲಿ ಇರುವ ಫ್ಲೆಕ್ಸ್ ಅಥವಾ ಹೋರ್ಡಿಂಗ್ಸ್ ಅಕ್ರಮ ಎಂದು ಪತ್ತೆ ಹಚ್ಚಲಾಗಿದೆ. ನಾನು ಕಳೆದ ಬಾರಿ ಹೇಳಿದಂತೆ ಈ ಅಕ್ರಮಗಳನ್ನು ಪತ್ತೆ ಹಚ್ಚಲು ಮನಪಾದಲ್ಲಿ ವಲಯ ಆಯುಕ್ತರಾಗಿ ನೇಮಕವಾಗಿ ಬಂದಿದ್ದ ಶ್ರೀಮತಿ ಎಂಕೆ ಪ್ರಮೀಳಾ ಅವರು ಆದೇಶಿಸಿದ್ದರು. ಆದರೆ ವರದಿ ಅವರ ಕೈ ಸೇರುವ ಮೊದಲೇ ಅವರನ್ನು ಆ ಜವಾಬ್ದಾರಿಯಿಂದ ಮುಕ್ತಿಗೊಳಿಸಲಾಗಿತ್ತು. ಪಾಲಿಕೆಯ ಈ ಒಂದು ನಡೆಯೇ ಫ್ಲೆಕ್ಸ್ , ಬ್ಯಾನರ್ ಅಥವಾ ಹೋರ್ಡಿಂಗ್ಸ್ ವಿಷಯದಲ್ಲಿ ಪಾಲಿಕೆ ಅದೆಷ್ಟು ಸೂಕ್ಷ್ಮವಾಗಿ ವರ್ತಿಸುತ್ತದೆ ಎನ್ನುವ ಸಂಶಯ ತರಿಸುತ್ತದೆ. ಈ ವಿಷಯದಲ್ಲಿ ನಮ್ಮ ರಾಜ್ಯದ ನಗರಾಭಿವೃದ್ಧಿ ಸಚಿವರಾಗಿದ್ದ ವಿನಯ ಕುಮಾರ್ ಸೊರಕೆ ನಂತರ ಯು ಟಿ ಖಾದರ್ ರವರಿಗೆ ದೂರು ನೀಡಿದರೂ ಪ್ರಯೋಜನವಾಗಲಿಲ್ಲ ತಿಂಗಳ ಬಳಿಕ ನನಗೆ ಗೊತ್ತಾಯಿತು. ಈ ಫ್ಲೆಕ್ಸ್ ಅಥವಾ ಹೋರ್ಡಿಂಗ್ಸ್ ವಿಷಯದಲ್ಲಿ ವಿನಯ ಕುಮಾರಸೊರಕೆಮತ್ತುಖಾದರ್ ಹಲ್ಲು ಕಿತ್ತ ಹಾವುಗಳು! ತನ್ನ ಸಹಪಾಠಿಯದೆ ಹೆಚ್ಚು ಅಕ್ರಮ ಹೊರ್ಡಿಂಗ್ ಇರುವಾಗ ಇವರಾದರೂ ಏನು ಮಾಡಲು ಸಾಧ್ಯ ಹಾಗಾಗಿ ಇವರಿಬ್ಬರೂ ಕಣ್ಣು ಮುಚ್ಚಿ ಏನು ತಿಳಿಯದಂತೆ ವರ್ತಿಸಿದರು.
Leave A Reply