ಮಂಗಳೂರು ಮಹಾನಗರ ಪಾಲಿಕೆ ಇವತ್ತು ನಿತ್ಯಕ್ಕಿಂತ ಹೆಚ್ಚು ಆಕ್ಟಿವ್ ಆಗಿದೆ. ಅದಕ್ಕೆ ಕಾರಣವೇನೆಂದರೆ ಪಾಲಿಕೆಗೆ ಹೊಸ ಕಮೀಷನರ್ ಅವರು ಬರಲಿದ್ದಾರೆ. ಅದು ಕೂಡ ಐಎಎಸ್. ಹೊಸ ಕಮೀಷನರ್ ಅವರ ಅದ್ದೂರಿ ಸ್ವಾಗತಕ್ಕೆ ಪಾಲಿಕೆ ಸಜ್ಜಾಗುತ್ತಿದೆ ಎಂದು ಅಂದುಕೊಳ್ಳಬೇಡಿ. ಇಲ್ಲಿ ವಿಷಯ ಇರುವುದು ಹೊಸ ಐಎಎಸ್ ಕಮೀಷನರ್ ಅವರು ಬಂದ ನಂತರ ನಮ್ಮ ಹಳೆ ಬಿಲ್ ಗಳು ಪಾಸಾಗುವುದಿಲ್ಲ ಎಂದು ಅಂದುಕೊಂಡಿರುವ ಗುತ್ತಿಗೆದಾರರ ಆಪ್ತ ಕಾರ್ಪೋರೇಟರ್ ಗಳು ನಿನ್ನೆಯಿಂದ ಫೈಲ್ ಹಿಡಿದು ಓಡಾಡುತ್ತಿದ್ದಾರೆ. ಜೆಇಇ, ಎಇಇ ಗಳ ಟೇಬಲ್ ಮುಂದೆ ಮಣಗಾತ್ರದ ಫೈಲುಗಳ ರಾಶಿ ಕಂಡುಬರುತ್ತಿದೆ. ಹೀಗೆ ಫೈಲ್ ಹಿಡಿದು ಓಡಾಡುತ್ತಿರುವ ಎಲ್ಲಾ ಕಾರ್ಪೋರೇಟರ್ ಗಳಿಗೆ ಒಂದೇ ಟಾರ್ಗೆಟ್. ಈಗ ಪ್ರಭಾರ ಕಮೀಷನರ್ ಆಗಿರುವವರಿಂದ ಆದಷ್ಟು ಬೇಗ ಸಹಿ ಹಾಕಿಸಿಕೊಳ್ಳಬೇಕು. ನಾಳೆ ಹೊಸ ಪೂರ್ಣಕಾಲಿಕ ಆಯುಕ್ತರು ಅದು ಕೂಡ ಐಎಎಸ್ ಬಂದ ಬಳಿಕ ಕಥೆ ಏನೋ ಎಂದು ಹೆದರುತ್ತಿದ್ದಾರೆ.
ಯಾಕೆಂದರೆ ಅನೇಕ ಕೆಲಸಗಳು ಆಗದೇ ಬಿಲ್ ಗಳು ಆಗಿರುತ್ತವೆ. ಇನ್ನು ಕೆಲವು ಕೆಲಸ ಚೂರುಪಾರು ಆಗಿದ್ದರೂ ಬಿಲ್ ಆಗಿರುತ್ತವೆ. ಇನ್ನು ಹೆಚ್ಚಿನವು ಕಳಪೆ ಆಗಿರುತ್ತವೆ. ನೆಲದ ಕೆಳಗೆ ಡ್ರೈನೇಜ್ ಮಾಡದೇಯೆ ಬಿಲ್ ಮಾಡುವುದಕ್ಕೆ ಇವರು ಹೇಸುವವರಲ್ಲ. ಯಾಕೆಂದರೆ ನೆಲದ ಕೆಳಗೆ ಡ್ರೈನೇಜ್ ಮಾಡಿದ್ದಾರಾ ಇಲ್ಲವಾ ಎಂದು ನೋಡುವಷ್ಟು ಪುರುಸೊತ್ತು ಪಾಲಿಕೆ ತೋರಿಸಬೇಕಲ್ಲ. ಅಂತಹುಗಳಿಗೂ ಬಿಲ್ ಆಗಿ ಆ ಹಣ ಬಂದು ಅದನ್ನು ಹಂಚಿಕೊಂಡು ತಿನ್ನುವ ಗಡಿಬಿಡಿ ಎಲ್ಲರಲ್ಲಿಯೂ ಕಾಣುತ್ತಿದೆ. ಮೊದಲನೇಯದಾಗಿ ಒಂದು ಲಕ್ಷಕ್ಕೆ 10 ಸಾವಿರ ಫಿಕ್ಸ್ ಕಮೀಷನ್ ಕಾರ್ಪೋರೇಟರ್ ಗಳು ಮಾತನಾಡಿಕೊಂಡು ಆಗಿರುತ್ತದೆ. ಇದು ಕೈ ಪಕ್ಷ, ಕಮಲ ಪಕ್ಷ ಎಂದು ನಾನು ಹೇಳುತ್ತಿಲ್ಲ. ಕಮೀಷನ್ ಕಡಿಮೆ ಆದರೆ ಕಿರಿಕ್ ಮಾಡುವುದರಲ್ಲಿ ಯಾವುದೇ ಪಕ್ಷದ ಕಾರ್ಪೋರೇಟರ್ ಹಿಂದೆ ಇಲ್ಲ. ಈಗ ಟೆನ್ಷನ್ ಏನೆಂದರೆ ನಾಲ್ಕು ಲಕ್ಷದ ಕಾಮಗಾರಿಯ ಬಿಲ್ ಪಾಸಾಗದೇ ಹೋದರೆ ಅದರಲ್ಲಿ ಕಾರ್ಪೋರೇಟರ್ ಗೆ ನಲ್ವತ್ತು ಸಾವಿರ ರೂಪಾಯಿ ಬರುವುದಿಲ್ಲ. ಇಂಜಿನಿಯರ್ ಗಳಿಗೆ ಇಷ್ಟೆಂದು ಫಿಕ್ಸ್ ಆಗಿರುತ್ತದೆ. ಹೀಗೆ ಅವರಿಗೆ ಇವರಿಗೆ ಎಂದು ಗುತ್ತಿಗೆದಾರ ಒಂದು ಲಕ್ಷದ ಮಿಕ್ಕಿ ಹಂಚಿ ಬಂದರೂ ಅವನಿಗೆ ಮೂರುವರೆ ಲಕ್ಷ ನೆಟ್ ಉಳಿದೇ ಉಳಿಯುತ್ತದೆ. ಆದ್ದರಿಂದ ಪಾಲಿಕೆ ಕಮೀಷನರ್ ಪಿಎ ಬಳಿ ಏನಾದರೂ ಮಾಡಿ ಎಂದು ಫೈಲ್ ರಾಶಿ ಬಂದು ಕುಳಿತಿದೆ. ಆದರೆ ಸದ್ಯ ದಿವಾಕರ್ ಪಾಂಡೇಶ್ವರ್ ಅವರು ಮೇಯರ್ ಆಗಿ ಇರುವುದರಿಂದ ಇಂತಹುದ್ದಕ್ಕೆಲ್ಲಾ ಅವರ ಅವಕಾಶ ಕೊಡುವುದಿಲ್ಲ. ಅದು ನನಗೆ ಮೊದಲೇ ಗೊತ್ತಿತ್ತು. ಎಲ್ಲಾ ಫೈಲ್ ಗಳನ್ನು ಗಂಟುಮೂಟೆ ಕಟ್ಟಿ ಇಟ್ಟುಬಿಡಿ ಎಂದು ಅವರು ತಮ್ಮ ಸಹಾಯಕರಿಗೆ ಹೇಳಿಬಿಟ್ಟಿದ್ದಾರೆ. ಯಾವುದಕ್ಕೂ ಸಹಿ ಹಾಕುವ ವಿಷಯವೇ ಇಲ್ಲ. ಆದ್ದರಿಂದ ಕಾರ್ಪೋರೇಟರ್ ಗಳು ಕೈ ಕಾಲು ಬಡಿಯುತ್ತಿದ್ದಾರೆ. ನಾನು ಹೇಳುವುದೇನೆಂದರೆ ಬಿಜೆಪಿ ಪಾರ್ಟಿ ವಿದ್ ಡಿಫರೆನ್ಸ್ ಅಲ್ವಾ? ಆದ್ದರಿಂದ ತಮ್ಮದೇ ಪಕ್ಷದ ಮೇಯರ್ ಒಬ್ಬರು ದಿಟ್ಟತನದಿಂದ ತೆಗೆದುಕೊಂಡಿರುವ ನಿರ್ಧಾರಕ್ಕೆ ಪಾರ್ಟಿ ಬೆಂಬಲಕ್ಕೆ ನಿಲ್ಲಬೇಕು. ದಿವಾಕರ್ ಅವರು ಅಡ್ಜಸ್ಟ್ ಮಾಡಿ ಹೋಗುವಂತವರಲ್ಲ. ಅವರಿಗೆ ಭ್ರಷ್ಟಾಚಾರದ ಹಣದಲ್ಲಿ ಒಂದು ರೂಪಾಯಿ ಕೂಡ ಬೇಕಾಗಿಲ್ಲ. ತಾನು ಮೇಯರ್ ಆಗಿ ಇರುವಷ್ಟು ದಿನ ಭ್ರಷ್ಟಾಚಾರ ಆಗಲು ಬಿಡುವುದಿಲ್ಲ ಎಂದು ಅವರು ಗಟ್ಟಿಯಾಗಿ ಕುಳಿತುಕೊಂಡಿದ್ದಾರೆ. ಇಂತವರಿಗೆ ಬೆಂಬಲ ಕೊಡುವ ಜವಾಬ್ದಾರಿ ಬಿಜೆಪಿಯದ್ದು. ಕೊಡದಿದ್ದರೆ ಪಾಠ ಕಲಿಯುತ್ತೀರಿ!
Leave A Reply