ಪಾಲಿಕೆಗೆ ಕೋಟ್ಯಾಂತರ ರೂಪಾಯಿ ವಂಚಿಸುತ್ತಿರುವ ಜಾಹೀರಾತು ಏಜೆನ್ಸಿಗಳ ಮಾಲೀಕರ ಹೆಸರುಗಳು…..
ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಹೋರ್ಡಿಂಗ್ ಗಳ ಹಾಗೆ. ಇಲ್ಲಿ ಯಾವ ಹೋರ್ಡಿಂಗ್ ಸರಕಾರಿ ಜಾಗದಲ್ಲಿದೆ, ಯಾವುದೂ ಖಾಸಗಿ ಭೂಮಿಯಲ್ಲಿದೆ. ಯಾವುದಕ್ಕೆ ದೀಪ ಅಳವಡಿಸಲು ಒಪ್ಪಿಗೆ ಇದೆ, ಯಾವುದರ ಅವಧಿ ನವೀಕರಣ ಆಗಿದೆ ಎನ್ನುವುದರ ಒಂದೇ ಒಂದು ದಾಖಲೆ ಪಾಲಿಕೆಯ ಕಂದಾಯ ವಿಭಾಗದಲ್ಲಿ ಇಲ್ಲ ಎಂದು ನಾನು ಧೈರ್ಯವಾಗಿ ಹೇಳಬಲ್ಲೆ. ಮನಪಾದಂತಹ ಇಷ್ಟು ಸಣ್ಣ ಪ್ರದೇಶದಲ್ಲಿ ಕಣ್ಣಿಗೆ ಕಾಣುವ ಹೋರ್ಡಿಂಗ್ಸ್ ಲೆಕ್ಕವೇ ಸಿಗದೇ ಗೋಲ್ ಮಾಲ್ ಕೋಟಿಯಲ್ಲಿ ಆಗುತ್ತಿರುವಾಗ ನದಿ, ಕೊಳ ಭಯಂಕರ ಅರಣ್ಯ, ನಾಲೆ, ಕಬ್ಬಿಣದ ಪೈಪುಗಳು ಎಲ್ಲ ಸೇರಿ ರಾಮನ ಲೆಕ್ಕ, ಕೃಷ್ಣನ ಲೆಕ್ಕ ಎಲ್ಲಾ ಕೈಗೆ ಸಿಗುತ್ತಾ?
ಇನ್ನೂ ಈ ಹೋರ್ಡಿಂಗ್ ಗಳ ನವೀಕರಣದ ಕಥೆ ನಿಮಗೆ ಹೇಳಲೇಬೇಕು. ಒಂದು ಫೆಕ್ಸ್ ಮಂಗಳೂರಿನ ಎಂ.ಜಿ.ರಸ್ತೆಯಲ್ಲಿಯೇ ಇರುವ ಹಿರಿಯ ರಾಜಕಾರಣಿಯೊಬ್ಬರ ಮನೆಯ ಅಂಗಳದಲ್ಲಿ ಇದೆ ಎಂದು ಅಂದುಕೊಳ್ಳೋಣ. ಸಾಮಾನ್ಯವಾಗಿ ಒಂದು ಹೋರ್ಡಿಂಗ್ ಖಾಸಗಿ ವ್ಯಕ್ತಿಯ ಜಾಗದಲ್ಲಿ ಹಾಕಲು ಆ ಖಾಸಗಿ ವ್ಯಕ್ತಿಯ ಮತ್ತು ಜಾಹೀರಾತು ಏಜೆನ್ಸಿಗಳ ನಡುವೆ ಒಂದು ವರ್ಷದ ಮಟ್ಟಿಗೆ ಕರಾರುಗೊಂಡಿರುತ್ತದೆ. ಅದರ ಬಳಿಕ ಜಾಹೀರಾತು ಏಜೆನ್ಸಿಯವರಿಗೆ ಮುಂದುವರೆಯುವ ಅವಶ್ಯಕತೆ ಇದ್ದಲ್ಲಿ ಅವರು ಖಾಸಗಿಯವರೊಂದಿಗೆ ಒಪ್ಪಂದವನ್ನು ನವೀಕರಿಸುತ್ತಾರೆ. ಕೆಲವು ಜಾಹೀರಾತು ಏಜೆನ್ಸಿಗಳು ಎಷ್ಟೋ ವರ್ಷಗಳಿಂದ ಖಾಸಗಿ ವ್ಯಕ್ತಿಗಳ ಜಾಗದಲ್ಲಿರುವ ಹೋರ್ಡಿಂಗ್ ಗಳ ನವೀಕರಣವನ್ನು ಪ್ರತಿ ವರ್ಷ ಚಾಚೂ ತಪ್ಪದೆ ಮಾಡುತ್ತಲೇ ಬರುತ್ತಿರುತ್ತಾರೆ. ಆದರೆ ಅದೇ ಒಪ್ಪಂದದ ನವೀಕರಣದ ಪ್ರತಿಯನ್ನು ಮನಪಾಗೆ ಸಲ್ಲಿಸಿ ಅಲ್ಲಿನ ಕಂದಾಯ ವಿಭಾಗದಲ್ಲಿ ನವೀಕರಣದ ಪ್ರಕ್ರಿಯೆ ಮಾಡುವುದಿಲ್ಲ. ಏಕೆಂದರೆ ಅದೊಂದು ನಿರ್ಲಕ್ಷ್ಯ. ಆ ಮೂಲಕ ಪಾಲಿಕೆಯಲ್ಲಿ ನವೀಕರಣವಾಗದ ನಾಮಫಲಕಗಳನ್ನು ಪಾಲಿಕೆ ಮನಸ್ಸು ಮಾಡಿದರೆ ಕಿತ್ತು ಹಾಕಬಹುದು. ಅಗತ್ಯ ಇದ್ದಲ್ಲಿ ಕೆಲವು ದಿನಗಳ ಸೂಚನೆ ಕೊಟ್ಟು ಪಾಲಿಕೆಗೆ ದಂಡ ಕಟ್ಟಿ ನವೀಕರಣ ತಡಮಾಡಿದ್ದಕ್ಕೆ ಸಕಾರಣ ನೀಡಿ ಮುಂದುವರೆಯಬಹುದು. ಆದರೆ ಯಾವ ಜಾಹೀರಾತು ಏಜೆನ್ಸಿಯವರು ಕೂಡ ಪಾಲಿಕೆಯನ್ನು ಕ್ಯಾರೇ ಅನ್ನುವುದಿಲ್ಲ. ಹೋರ್ಡಿಂಗ್ ಗಳನ್ನು ಕಿತ್ತು ಹಾಕಲು ಹೊರಡುವುದಕ್ಕೆ ಯಾವುದು ಅಕ್ರಮ, ಯಾವುದೂ ಸಕ್ರಮ ಎಂದು ಪಾಲಿಕೆಯ ಕಂದಾಯ ಅಧಿಕಾರಿಗಳಿಗೆ ಗೊತ್ತೇ ಇಲ್ಲ.
ಇನ್ನೂ ಒಂದು ಜಾಹೀರಾತು ಏಜೆನ್ಸಿಯವರದ್ದು ಎಂಜಿ ರಸ್ತೆಯಲ್ಲಿ ಹತ್ತು ಹೋರ್ಡಿಂಗ್ಸ್ ಇವೆ ಎಂದು ಅಂದುಕೊಳ್ಳೋಣ. ಅವರು ಮಾರ್ಚನಲ್ಲಿ ಅದರ ನವೀಕರಣದ ಶುಲ್ಕ ಎಂದು ಇಂತಿಷ್ಟು ಹಣವನ್ನು ಚೆಕ್ಕಿನ ರೂಪದಲ್ಲಿ ಸಂದಾಯ ಮಾಡುತ್ತಾರೆ. ಆದರೆ ಆ ಜಾಹೀರಾತು ಏಜೆನ್ಸಿಯವರು ಕಟ್ಟಿದ ಹಣ ನಿಯಮ ಪ್ರಕಾರ ಸರಿ ಇದೆಯೊ ಎಂದು ನೋಡುವ ಪ್ರಮೇಯಕ್ಕೆ ಪಾಲಿಕೆ ಹೋಗುವುದೇ ಇಲ್ಲ. ಏಜೆನ್ಸಿಯವರು ಕೊಟ್ಟದ್ದೇ ಲಾಭ. ಅಧಿಕಾರಿಗಳೇ ಕೇಳದಿದ್ದರೆ ಒಂದು ರೂಪಾಯಿ ಕೂಡ ಗೋಲ್ ಮಾಲ್ ಮಾಡದೇ ಸರಿಯಾಗಿ ಕಟ್ಟಲು ಜಾಹೀರಾತು ಏಜೆನ್ಸಿಯವರೇನು ಸತ್ಯ ಹರಿಶ್ಚಂದ್ರನ ಕಸಿನ್ಸಾ? ಅದಲ್ಲದೆ ಏಜೆನ್ಸಿಯವರು ಚೆಕ್ಕಿನೊಂದಿಗೆ ಒಂದು ಕವರಿಂಗ್ ಲೆಟರ್ ಕೂಡ ಇಡುವುದಿಲ್ಲ. ಅದರಿಂದ ಆ ಏಜೆನ್ಸಿ ಯಾವ ಹೋರ್ಡಿಂಗ್ ನ ಹಣ ಕಟ್ಟಿದೆ, ಇವರು ನಿಯಮಕ್ಕಿಂತ ಕಡಿಮೆ ಕಟ್ಟುತ್ತಿದ್ದಾರಾ, ದೀಪ ಇರುವ ಹೋರ್ಡಿಂಗ್ ಗೆ ದೀಪ ಇಲ್ಲದ ಹೋರ್ಡಿಂಗ್ ಶುಲ್ಕ ಕಟ್ಟುತ್ತಿದ್ದಾರಾ? ಯಾವ ಲೆಕ್ಕವೂ ಇಲ್ಲ. ಅವರು ಕೊಟ್ಟಿದ್ದು, ಇವರು ಇಸ್ಕೊಂಡಿದ್ದು ಇಷ್ಟೇ ಲಾಭ. ಇದನ್ನು ಪಾಲಿಕೆಯಲ್ಲಿ ಯಾವ ಕಾಂಗ್ರೆಸ್ಸಿನ ಅಥವಾ ಭಾರತೀಯ ಜನತಾ ಪಕ್ಷದ ಅಥವಾ ಎಡಪಕ್ಷದ ಸದಸ್ಯ ಕೂಡ ಮಾತನಾಡುವುದಿಲ್ಲ. ಯಾಕೆ ಗೊತ್ತಾ, ಆಯಾ ಪಕ್ಷದ ಸಮಾರಂಭಗಳು ಇರುವಾಗ ವಾರಕ್ಕೊ, ಹತ್ತು ದಿನಗಳಿಗೊ ಈ ಜಾಹೀರಾತು ಏಜೆನ್ಸಿಯವರು ಉಚಿತವಾಗಿ ಈ ಹೋರ್ಡಿಂಗ್ಸ್ ಅನ್ನು ಬಿಟ್ಟುಕೊಟ್ಟಿರುತ್ತಾರೆ. ಇವತ್ತು ಮಾತನಾಡಿದರೆ ನಾಳೆ ಅವರ ಬಳಿಗೆ ಹೋಗಿ ಹೇಗೆ ಧರ್ಮಕ್ಕೆ ಹೋರ್ಡಿಂಗ್ ಕೇಳುವುದು. ನೈತಿಕತೆ ಎಲ್ಲಿರುತ್ತೆ? ಇನ್ನು ಇಷ್ಟೆಲ್ಲ ಹೋರ್ಡಿಂಗ್ಸ್ ಗೋಲ್ ಮಾಲ್ ಮಾಡುತ್ತಿರುವ ಜಾಹೀರಾತು ಏಜೆನ್ಸಿಗಳ ಅಧಿಕೃತ ಮಾಲೀಕರ ಹೆಸರನ್ನು ನಿಮಗೆ ತಿಳಿಸುತ್ತೇನೆ ಎಂದು ಹೇಳಿದ್ದೆ. ಲೆಕ್ಕ ಪ್ರಕಾರ ಇವತ್ತು ನಾನು ತಿಳಿಸಬೇಕಿತ್ತು. ಆದರೆ ನಾನು ಈ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ಇನ್ನೂ ನನ್ನ ಕೈಗೆ ಸಿಕ್ಕಿಲ್ಲ. ನನಗೆ ಹೆಸರು ಗೊತ್ತಿದ್ದರೂ ಕೈಯಲ್ಲಿ ದಾಖಲೆ ಇಲ್ಲದೆ ನಾನು ಮಾತನಾಡುವುದಿಲ್ಲ. ಮಾಹಿತಿ ಹಕ್ಕಿನಲ್ಲಿ ಉತ್ತರ ಬಂದ ಕೂಡಲೇ ಪಾಲಿಕೆಗೆ ಕೋಟ್ಯಾಂತರ ರೂಪಾಯಿ ವಂಚಿಸುತ್ತಿರುವ ಮಹಾನುಭಾವರ ಹೆಸರುಗಳನ್ನು ತಿಳಿಸುತ್ತೇನೆ.
Leave A Reply