ಮುಂಬೈ ಟು ತಿರುವನಂತಪುರಂ: ಸುಶಾಂತ್ ಟು ಬಿನಿಶ್ ಬಾಲಕೃಷ್ಣ!!

ಒಬ್ಬ ಸಿನೆಮಾ ನಟನ ಸಂಶಯಾಸ್ಪದ ಸಾವು ಅವನ ಆಪ್ತ ಗೆಳತಿಯಿಂದ ಹಿಡಿದು ಮುಂಬೈ ಗಡಿಯನ್ನು ದಾಟಿ ಬೆಂಗಳೂರಿನಿಂದ ಪಾಸಾಗಿ ತಿರುವನಂತಪುರಂ ತನಕ ಬಂದು ಬಿಡುತ್ತದೆ ಎಂದು ಆವತ್ತಿಗೆ ಅನಿಸಲೇ ಇಲ್ಲ. ಒಬ್ಬ ಡಿಫ್ರೆಶನ್ ಗೆ ಒಳಗಾದ ನಾಯಕ ನಟ ಅದನ್ನು ಭರಿಸಲಾಗದೇ ಮೃತಪಟ್ಟ ಪ್ರಕರಣ ಕೇರಳದ ಅತೀ ದೊಡ್ಡ ರಾಜಕೀಯ ನಾಯಕನ ಮನೆಬಾಗಿಲಿಗೆ ತಂದು ನಿಲ್ಲಿಸುತ್ತದೆ ಎಂದು ಯಾರಿಗೂ ಗೊತ್ತಿರಲಿಲ್ಲ. ಎಲ್ಲಿಯ ಮುಂಬೈ ಮತ್ತು ಎಲ್ಲಿಯ ತಿರುವನಂತಪುರಂ. ನೇರ ವಿಮಾನ, ರೈಲು ಇದೆ ಎನ್ನುವುದು ಬಿಟ್ಟರೆ ಮಲಯಾಳಿಗಳು ಚಂದ್ರಲೋಕ ಬಿಟ್ಟು ಎಲ್ಲಾ ಕಡೆ ಇರುತ್ತಾರೆ ಎಂದುಕೊಂಡರೂ ಯಾವ ಪರಸ್ಪರ ಒಂದೇ ರಾಜಕೀಯ ಸ್ಪರ್ಶ, ಬಣ್ಣವೂ ಈ ಎರಡೂ ಮಹಾನಗರಗಳಿಗೆ ಇಲ್ಲ. ಆದರೂ ಕೋಡಿಯೇರಿ ಬಾಲಕೃಷ್ಣನ್ ಅವರ ಮಗನಿಗೆ ಈ ಮುಂಬೈ, ಬೆಂಗಳೂರು ಡ್ರಗ್ಸ್ ಡೀಲರ್ ಗಳೊಂದಿಗೆ ಸಂಬಂಧ ಇದೆ ಎಂದು ಹೇಳಲಾಗುತ್ತದೆ. ಅಷ್ಟಕ್ಕೂ ಕೋಡಿಯೇರಿ ಬಾಲಕೃಷ್ಣನ್ ಕೇರಳ ರಾಜಕೀಯದಲ್ಲಿ ದೊಡ್ಡ ಹೆಸರು. ಸಿಪಿಐ(ಎಂ) ನಲ್ಲಿ ರಾಜ್ಯ ಕಾರ್ಯದರ್ಶಿ ಎಂದರೆ ಮುಖ್ಯಮಂತ್ರಿ ಸಮಾನವಾದ ಹುದ್ದೆ. ಅವರಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಎಂದು ಇರುವುದಿಲ್ಲ. ಕಾರ್ಯದರ್ಶಿ ಎಂದರೆ ಅದಕ್ಕೆ ಎಲ್ಲಕ್ಕಿಂತ ದೊಡ್ಡ ಜವಾಬ್ದಾರಿ. ಒಂದು ರಾಜ್ಯದ ಕಾರ್ಯದರ್ಶಿ ಎಂದರೆ ಅವರ ಪಕ್ಷದ ರಾಷ್ಟ್ರೀಯ ನಾಯಕರಾದ ಸೀತಾರಾಂ ಯೆಚೂರಿ, ವೃಂದಾ ಕಾರಟ್ ಅಂತವರು ಕೂಡ ಇವರ ಮಾತುಗಳನ್ನು ಆಲಿಸುತ್ತಾರೆ. ಬಿಜೆಪಿಯಲ್ಲಾದರೆ ಕಾರ್ಯದರ್ಶಿ ಎಂದ್ರೆ ಊಟಕ್ಕೆ ಉಪ್ಪಿನಕಾಯಿ ಇದ್ದಂತೆ.
ಅಂತಹ ಕೋಡಿಯೇರಿ ಬಾಲಕೃಷ್ಣನ್ ಅವರಿಗೆ ಇತ್ತೀಚೆಗೆ ಆರೋಗ್ಯ ಸರಿಯಿಲ್ಲದೆ ಅಮೇರಿಕಾದಲ್ಲಿ ಕೆಲವು ಸಮಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಬಂದವರೇ ಮೋದಿ ಸರಕಾರದ ವಿರುದ್ಧ ತಿರುಗಿಬಿದ್ದಿದ್ದರು. ಈಗ ಅಂತವರ ಮಗ ಬಿನಿಶ್ ಬಾಲಕೃಷ್ಣನ್ ಡ್ರಗ್ಸ್ ಸರಬರಾಜುದಾರ ಅನೂಬ್ ನಿಗೆ ಹಣ ಕೊಟ್ಟಿದ್ದಾನೆ ಎಂದು ಕೇರಳದ ಮುಸ್ಲಿಂ ಲೀಗ್ ಯುವ ಘಟಕ ಯೂತ್ ಲೀಗ್ ಆರೋಪ ಮಾಡಿದೆ. ಅದಕ್ಕೆ ಸರಿಯಾಗಿ ಕೇಂದ್ರ ತನಿಖಾದಳ ಬಿನಿಶ್ ನನ್ನು ತನಿಖೆಗೆ ಕರೆದಿದೆ. ಆದರೆ ಬಿನಿಶ್ ಪ್ರಕಾರ ಅನೂಬ್ ಆತನ ಸ್ನೇಹಿತ ಅಷ್ಟೇ. ಹಿಂದೆ ಟಿಶರ್ಟ್ ಬ್ಯುಸಿನೆಸ್ ಮಾಡುತ್ತಿದ್ದ. ನಂತರ ಹೋಟೇಲ್ ಉದ್ಯಮಕ್ಕೆ ಇಳಿದ. ಆಗ ಹೋಟೇಲಿಗೆ ಪ್ರಾರಂಭಿಸಲು ನಾವು ಹಲವಾರು ಸ್ನೇಹಿತರು ಹಣ ಕೊಟ್ಟಿದ್ದೇವೆ. ತಾನು ಬೆಂಗಳೂರಿಗೆ ಬಂದಾಗ ಹೋಟೇಲ್ ರೂಂ ಬುಕ್ ಮಾಡಿ ಇಡುತ್ತಿದ್ದ. ಅದು ಬಿಟ್ಟರೆ ಬೇರೆ ಸಂಬಂಧಗಳಿಲ್ಲ ಎನ್ನುತ್ತಾನೆ ಬಿನಿಶ್ ಬಾಲಕೃಷ್ಣ. ಈಗ ಅದೇ ತನಿಖೆ ಆಗಬೇಕಿದೆ.
ಅಂದ ಹಾಗೆ ಈಗ ಕಾರ್ಮಿಕ ಸಂಘಟನೆಯ ಮುಂದುವರೆದ ರಾಜಕೀಯ ಪಕ್ಷವಾಗಿರುವ ಸಿಪಿಐ(ಎಂ) ಕಾರ್ಮಿಕರ ಪರವಾಗಿ ಮಾತನಾಡುತ್ತಲೇ ಅಧಿಕಾರಕ್ಕೆ ಬಂದ ಬಳಿಕ ಹಣದ ಮುಖ ಕೂಡ ನೋಡಿದೆ. ಅವರಲ್ಲಿ ಅನೇಕ ಪದಾಧಿಕಾರಿಗಳಿಗೆ ವೇತನ ಕೂಡ ಇದೆ ಎಂದು ಹೇಳಲಾಗುತ್ತದೆ. ಅವರ ಕಾರ್ಯದರ್ಶಿಯೊಬ್ಬರಿಗೆ ಅಮೇರಿಕಾದಲ್ಲಿ ಚಿಕಿತ್ಸೆ ಕೂಡ ನೀಡುವಷ್ಟು ಆ ಪಕ್ಷ ಬೆಳೆದಿದೆ. ಕೇರಳದಲ್ಲಿ ಬಿನಿಶ್ ಜೀವನಶೈಲಿ ಕೂಡ ಕಡಿಮೆ ಏನಲ್ಲ. ಒಂದು ವೇಳೆ ಈ ಡ್ರಗ್ಸ್ ಪ್ರಕರಣವನ್ನು ಕೇಂದ್ರ ಗಂಭೀರವಾಗಿ ತೆಗೆದುಕೊಂಡು ತನಿಖೆ ಮಾಡಿದರೆ ಕೇರಳದ ಎಡಪಕ್ಷ ಸರಕಾರ ಮೊಣಕಾಲಿನಲ್ಲಿ ನಿಂತು ನಂತರ ತೆವಳಬೇಕಾಗಬಹುದು. ಮೊದಲೇ ಬಂಗಾರದ ಕೋಟ್ಯಾಂತರ ಸ್ಮಂಗ್ಲಿಂಗ್ ಡೀಲ್ ನಲ್ಲಿ ಸಿಲುಕಿ ಹಾಕಿಕೊಂಡಿರುವ ಪಿಣರಾಯಿಯೊಂದಿಗೆ ಡ್ರಗ್ಸ್ ನೊಂದಿಗೆ ಕೋಡಿಯೇರಿ ಕೂಡ ಸಿಲುಕಿಕೊಂಡರೆ ನಂತರ ಅಲ್ಲಿ ಸರಕಾರವನ್ನು ಯಾರೂ ಉಳಿಸಲಾರರು. ಅಷ್ಟಕ್ಕೂ ಅಗರ್ಭ ಪ್ರಭಾವಿ ರಾಜಕೀಯ ನಾಯಕರ ಮಕ್ಕಳು ಯಾಕೆ ಡ್ರಗ್ಸ್ ಜಾಲದಲ್ಲಿ ಬೆಸೆದುಕೊಂಡಿರುತ್ತಾರೆ ಎನ್ನುವುದಕ್ಕೆ ಬಿನಿಶ್ ಪ್ರಕರಣ ಸಾಕ್ಷಿಯಾಗಬಹುದು. ಯಾಕೆಂದರೆ ಅವರಿಗೆ ಗೊತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕೋಟ್ಯಾಂತರ ಬೆಲೆಬಾಳುವ ಬಂಗಾರದ ಸ್ಮಂಗ್ಲಿಂಗ್ ಆದಾಗಲೂ ನಮ್ಮ ಪಕ್ಷ ದಕ್ಕಿಸಿಕೊಂಡಿರುವಾಗ ಇದೇನೂ ಮಹಾ ಎಂದು ಅನಿಸಿರಲಿಕ್ಕೂ ಸಾಕು.
ಒಬ್ಬ ಅನೂಪ್ ನ ಸರಿಯಾದ ವಿಚಾರಣೆ ನಡೆದರೆ ಅವನಿಂದ ಇನ್ನಷ್ಟು ರಾಜಕಾರಣಿಗಳ ಮಕ್ಕಳ ಹೆಸರು ಬರಬಹುದು. ಅನೇಕ ಪೊಲಿಟಿಶಿಯನ್ ಗಳಲ್ಲಿ ಕೆಲವರು ತಮ್ಮ ರಾಜಕೀಯ ಜೀವನದ ಉದ್ದಕ್ಕೂ ರಾಜಕೀಯದಲ್ಲಿಯೇ ಬ್ಯುಸಿ ಆದ ಕಾರಣ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಲು ಹೋಗಲೇ ಇಲ್ಲ. ತಾಯಿಯ ಮಾತನ್ನು ಮಕ್ಕಳ ಕೇಳದೇ ಇದ್ದಾಗ ಹಣ ಕೊಟ್ಟು ಸಾಗ ಹಾಕಿದ ಪರಿಣಾಮ ಸುಲಭವಾಗಿ ಸಿಕ್ಕಿದ ಹಣದಿಂದ ಮೊದಲು ಸಿಗರೇಟ್, ನಂತರ ಬಿಯರ್, ಕೊನೆಗೆ ವಿಸ್ಕಿ. ಆ ಕಿಕ್ ಸಾಕಾಗುವುದಿಲ್ಲವೆಂದು ಮೊದಲಿಗೆ ಗಾಂಜಾ, ನಂತರ ಇನ್ನೊಂದು, ಮತ್ತೊಂದು ಎಂದು ಹೋಗಿ ಈಗ ಜೈಲಿನ ಸಲಾಕೆಗಳ ಹತ್ತಿರ ಬಂದು ತಲುಪಿದ್ದಾರೆ. ಈಗ ಬಾಲಕೃಷ್ಣನ್ ಮುಂದೆ ಇರುವುದು ಒಂದೇ ಪ್ರಶ್ನೆ. ಮಗ ತಪ್ಪಿತಸ್ಥ ಎಂದಾದರೆ ತನಿಖೆಯನ್ನು ಅದರ ಪಾಡಿಗೆ ಬಿಟ್ಟು ಆದರ್ಶ ರಾಜಕಾರಣಿ ಎನಿಸಿಕೊಳ್ಳುತ್ತಾರಾ ಅಥವಾ ಮಗನನ್ನು ಹೇಗಾದರೂ ಮಾಡಿ ಉಳಿಸುವ ಒಳ್ಳೆಯ ತಂದೆ ಅನಿಸಿಕೊಳ್ಳುತ್ತಾರಾ !!
Leave A Reply