ಮೆಸ್ಕಾಂನವರು ಕರೆಂಟನ್ನು ಅವರ ಮನೆಯಿಂದ ತರುವುದಿಲ್ಲ, ಮತ್ತೇ ಹೇಗೆ ಅಧ್ಯಾದೇಶ ಇಲ್ಲದೆ ಕೊಡುತ್ತಾರೆ?
ಯಾರಿಗೂ ಗೊತ್ತಾಗುವುದಿಲ್ಲ ಅಂತ ಹಾಗೆ ಮಾಡುತ್ತಾರಾ ಅಥವಾ ಯಾರೂ ಕೇಳುವುದಿಲ್ಲ ಎಂದು ಹಾಗೆ ನಡೆಯುತ್ತದೆಯಾ ಅಥವಾ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಇರುವ ಕೆಲವು ಭ್ರಷ್ಟ ಅಧಿಕಾರಿಗಳಿಗೆ ಒಂದಿಷ್ಟು ಬಿಸ್ಕಿಟ್ ಬಿಸಾಡಿದರೆ ಅವರು ಎಲ್ಲದಕ್ಕೂ ಓಕೆ ಎಂದು ಹೇಳುತ್ತಾರಾ. ಈ ಪ್ರಶ್ನೆಗಳಿಗೆ ಮನಪಾದ ಅಂಗಣದಲ್ಲಿ ಯಾವತ್ತೂ ಉತ್ತರ ಸಿಗುವುದಿಲ್ಲ. ಈ ಪ್ರಶ್ನೆಗಳು ಒಂದು ರೀತಿಯಲ್ಲಿ ಪಾಲಿಕೆಯ ಅತೃಪ್ತ ಆತ್ಮಗಳಿದ್ದಂತೆ. ಇದಕ್ಕೆ ಯಾರೂ ಶಾಂತಿ ಮಾಡಿಸುವುದಿಲ್ಲ. ಆದ್ದರಿಂದ ಅವುಗಳು ಪಾಲಿಕೆಗೆ ಗಿರಕಿ ಹೊಡೆಯುತ್ತಲೇ ಇರುತ್ತವೆ. ಇಲ್ಲದೆ ಹೋದರೆ ಮಂಗಳೂರಿನ ಕಾವೂರಿನಿಂದ-ಬಜ್ಪೆ ವಿಮಾನ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿರುವ ಅನೇಕ ಹೋರ್ಡಿಂಗ್ಸ್, ಯೂನಿಪೋಲ್ ಗಳು, ಫೆಕ್ಸ್ ಗಳು ರಸ್ತೆಯಲ್ಲಿ ಸಂಚರಿಸುವವರ ಕಣ್ಣಿಗೆ ಕುಕ್ಕುವಂತೆ ರಸ್ತೆಯ ಬದಿಯಲ್ಲಿಯೇ ಮೈ ಚಾಚಿ ನಿಂತುಕೊಂಡಿದೆ. ಒಂದಕ್ಕಿಂತ ಒಂದು ಬೃಹತ್ ಗಾತ್ರ, ಸುಂದರ ವಿದ್ಯುತ್ ವಿನ್ಯಾಸ ಮತ್ತು ಮುಖ್ಯ ರಸ್ತೆಗೆ ಆತುಕೊಂಡೆ ತಮ್ಮ ಮೂಲವನ್ನು ಊರಿಬಿಟ್ಟಿವೆ.
1996 ರಿಂದಲೇ ಯಾವುದೇ ಸರಕಾರಿ ಜಮೀನಿನಲ್ಲಿ ಹೋರ್ಡಿಂಗ್ಸ್ ಅಳವಡಿಸಬಾರದು ಎನ್ನುವ ನಿಯಮ ಇರುವುದರಿಂದ ಇವೆಲ್ಲ ಹೀಗೆ ಹೇಗೆ ಹುಟ್ಟಿಕೊಂಡವು ಎನ್ನುವ ನನ್ನ ಪ್ರಶ್ನೆಗೆ ಪಾಲಿಕೆಯಲ್ಲಿ ಕೊಡುವ ಉತ್ತರ “ಇವೆಲ್ಲ ಅಲ್ಲಿ ಖಾಸಗಿ ವ್ಯಕ್ತಿಗಳ ಜಾಗದಲ್ಲಿ ಅಳವಡಿಸಲ್ಪಟ್ಟಿದೆ”. ಸರಕಾರಿ ಜಾಗದಲ್ಲಿ ಅಳವಡಿಸಲು ಮಾತ್ರ ನಿರ್ಭಂದ ಇರುವುದು, ಖಾಸಗಿ ವ್ಯಕ್ತಿಗಳ ಜಾಗಗಳಲ್ಲಿ ಅಲ್ಲ. ಸರಿ, ಅದು ನನಗೆ ಗೊತ್ತಿದೆ. ಆದರೆ ಎಂತಹ ಕುರುಡನಾದರೂ ಅದನ್ನು ಮುಟ್ಟಿದರೆ ಇದು ರಸ್ತೆಯ ಬದಿಯಲ್ಲಿ ಮತ್ತು ರಸ್ತೆಯ ಘಾಟಿಯಂತಹ ತಿರುವುಗಳಲ್ಲಿ ಇದೆ ಎಂದು ಧೈರ್ಯವಾಗಿ ಹೇಳಬಲ್ಲ ಮತ್ತು ಕಣ್ಣು ಸರಿಯಾಗಿ ಕಾಣುವವರು ಈ ಹೋರ್ಡಿಂಗ್ಸ್ ಅಳವಡಿಸಿರುವ ಜಾಗ ನೋಡಿದರೆ ಅದು ಖಾಸಗಿ ವ್ಯಕ್ತಿಗಳಿಗೆ ಒಳಪಡಲು ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಬಲ್ಲರು. ಆದರೆ ಕಣ್ಣಿದ್ದು ಕುರುಡರಾಗಿರುವ, ಕೇವಲ ತಮ್ಮ ಕಿಸೆ ತುಂಬುವ ಹಣವನ್ನು ಮಾತ್ರ ಸ್ಪಷ್ಟವಾಗಿ ನೋಡಬಲ್ಲ, ದೂರದೃಷ್ಟಿ ದೋಷವಿರುವ ಪಾಲಿಕೆಯ ಕಂದಾಯ ಅಧಿಕಾರಿಗಳಿಗೆ ಈ ಹೋರ್ಡಿಂಗ್ಸ್ ಕಾಣುವುದಿಲ್ಲ. ಆ ರಸ್ತೆಯಲ್ಲಿರುವ 90% ಹೋರ್ಡಿಂಗ್ಸ್ ಇರುವುದೆ ಸರಕಾರಿ ಜಮೀನಿನಲ್ಲಿ. ಆದರೆ ಆ ಏರಿಯಾದ ರೆವೆನ್ಯೂ ಆಫೀಸರ್ ಈ ಹೋರ್ಡಿಂಗ್ಸ್ ಇರುವುದು ಖಾಸಗಿ ಜಾಗಗಳಲ್ಲಿ ಎಂದು ಪಾಲಿಕೆಗೆ ವರದಿ ನೀಡುತ್ತಾರೆ. ಮುಖ್ಯ ರಸ್ತೆಯ ಬದಿಯಲ್ಲಿಯೇ ಧಾರಾಳವಾಗಿ ಎದ್ದು ನಿಂತಿರುವ ಈ ಹೋರ್ಡಿಂಗ್ಸ್ ನಮ್ಮ ಕಣ್ಣಿಗೆ ಬೀಳುತ್ತವೆ. ಆದರೆ ರೆವೆನ್ಸೂ ಆಫೀಸರ್ಸ್ ಈ ರಸ್ತೆಗೆ ಕಾಲಿಟ್ಟ ಕೂಡಲೇ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟುತ್ತಾರೆ. ಅಧಿಕಾರಿಗಳು ಇಷ್ಟು ಸುಳ್ಳು ಹೇಳಿ ಮನೆಗೆ ಹೋಗಿ ಊಟ ಮಾಡಿದರೆ ಅದು ಜೀರ್ಣವಾಗುತ್ತದಾ?
ನನಗೆ ಇನ್ನೊಂದು ಆಶ್ಚರ್ಯ ಆಗುತ್ತದೆ. ಈ ಜಾಹೀರಾತು ಏಜೆನ್ಸಿಯವರು ಈ ಹೋರ್ಡಿಂಗ್ಸ್ ಹಾಕಲು ಒಪ್ಪಂದ ಮಾಡುತ್ತಾರಲ್ಲ, ಕಾವೂರು-ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಕಾರಿ ಭೂಮಿಯಲ್ಲಿ ನಿಂತಿರುವ ಈ ಹೋರ್ಡಿಂಗ್ಸ್ ಹಾಕಿಸುವಾಗ ಅದು ಖಾಸಗಿ ವ್ಯಕ್ತಿಗಳದ್ದು ಎಂದು ಸಾಬೀತು ಮಾಡಲು ಯಾರೊಂದಿಗಾದರೂ ಒಪ್ಪಂದ ಮಾಡಲೇಬೇಕಲ್ಲ. ಒಪ್ಪಂದ ಮಾಡದಿದ್ದರೆ ಅದು ಸರಕಾರಿ ಭೂಮಿಯಲ್ಲಿ ಹಾಕಿದ ಹೋರ್ಡಿಂಗ್ಸ್ ಎಂದಾಗುತ್ತದೆ. ಹಾಗಾದರೆ ಇವರು ಯಾರೊಡನೆ ಒಪ್ಪಂದ ಮಾಡಿರುತ್ತಾರೆ. ಯಾರೊ ದೂಮ, ರಾಮ, ಶ್ಯಾಮ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಅವರೊಂದಿಗೆ ಒಪ್ಪಂದದ ಪತ್ರ ತಾವೇ ತಯಾರಿಸಿ ಅದಕ್ಕೆ ಸುಳ್ಳು ಸಹಿ ಹಾಕಿ ಅದನ್ನೇ ಒಪ್ಪಂದವಾಗಿದೆ ಎಂದು ಪಾಲಿಕೆಗೆ ಸಲ್ಲಿಸುತ್ತಾರಾ. ಯಾಕೆಂದರೆ ಹಾಗೇ ಮಾಡಿದರೂ ಪಾಲಿಕೆಗೆ ಏನೂ ಗೊತ್ತಾಗುವುದಿಲ್ಲ. ಯಾಕೆಂದರೆ ಪಾಲಿಕೆಯ ಕಂದಾಯ ವಿಭಾಗದಲ್ಲಿರುವವರು ಗಾಂಧಿಜಿಯ ಮೂರು ಮಂಗಗಳಂತೆ ಕಣ್ಣು, ಬಾಯಿ, ಕಿವಿಯನ್ನು ಮುಚ್ಚಿ ತುಂಬಾ ಕಾಲವಾಗಿದೆ. ಆದ್ದರಿಂದ ಅವರನ್ನು ಹೇಗೆ ಯಾಮಾರಿಸಿದರೂ ಅವರಿಗೆ ತಿಳಿಯುವುದೇ ಇಲ್ಲ. ತಿಳಿದರೂ ಮಾತನಾಡುವುದಿಲ್ಲ.
ನಿಮಗೆ ಇನ್ನೊಂದು ಅಕ್ರಮದ ಪರಿಚಯ ಮಾಡಿಕೊಡುತ್ತೇನೆ. ಕೊಡಿಯಾಲ್ ಬೈಲಿನಲ್ಲಿರುವ ಬಿಷಪ್ ಹೌಸ್ ಗೆ ಒಳಪಟ್ಟ, ಮಂಗಳೂರು ಧರ್ಮಪ್ರಾಂತ್ಯದ ಅಧ್ಯಕ್ಷರ ಮಾಲೀಕತ್ವದ ಕೊಡಿಯಾಲ್ ಬೈಲ್ ಅಂಚೆ ಕಚೇರಿಯ ಪಕ್ಕದಲ್ಲಿ JYOTHI ADVT ನವರು ಐದು ಹೋರ್ಡಿಂಗ್ಸ್ ಹಾಕಲು ಬಿಷಪ್ ಅವರೊಂದಿಗೆ ಒಪ್ಪಂದ ಮಾಡಿಕೊಂಡರು. JYOTHI ADVT ನವರು ಒಪ್ಪಂದ ಆದ ಕೂಡಲೇ ಮೆಸ್ಕಾಂ ಗೆ application ಹಾಕಿಯೇ ಬಿಟ್ಟರು. ಇಂತಹ ಜಾಹೀರಾತು ಏಜೆನ್ಸಿಯವರ application ಬಂದ ಕೂಡಲೇ ಹಬ್ಬ ಬಂದಂತೆ ಮೆಸ್ಕಾಂ ತಕ್ಷಣ ವಿದ್ಯುತ್ ಸಂಪರ್ಕಕ್ಕೆ ಅನುಮತಿ ನೀಡುತ್ತದೆ. ಆದರೆ ಈ ಜಾಹೀರಾತು ಏಜೆನ್ಸಿಯವರ ದುರಾದೃಷ್ಟ ಈ ಬಾರಿ ಪಾಲಿಕೆ ಹೋರ್ಡಿಂಗ್ಸ್ ಹಾಕಲು ಅನುಮತಿ ಕೊಟ್ಟಿಲ್ಲ. ಆದರೆ ಅಧಿಕ ಪ್ರಸಂಗ ಮಾಡಿದ ಮೆಸ್ಕಾಂನ ಕೆಲವು ಭ್ರಷ್ಟರು ತಮ್ಮ ಕಡೆಯಿಂದ ಸಂಪರ್ಕಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಾಗಿದೆ. ಪಾಲಿಕೆಯ ಕಾರ್ಯಾದೇಶ ಇಲ್ಲದೆ ಮೆಸ್ಕಾಂ ಯಾವ ಕಾರಣಕ್ಕೂ ತಮ್ಮ ಕಡೆಯಿಂದ ವಿದ್ಯುತ್ ಸಂಪರ್ಕಕ್ಕೆ ಅನುಮತಿ ಕೊಡಲೇಬಾರದು. ಮೆಸ್ಕಾಂನವರ ಬಳಿ ಪಾಲಿಕೆಯಿಂದ ಅಧ್ಯಾದೇಶ ಆಗಿರುವ ಪತ್ರ ತೋರಿಸಿ ಎಂದರೆ ಬೆಬೆಬೆ ಎಂದು ಬಾಯಿ ಬಿಡುತ್ತಾರೆ. ಅದ್ಯಾದೇಶದ ಪ್ರತಿಯೇ ಕೊಡದಿದ್ದರೆ ಇವರ ಬಳಿ ಹೇಗೆ ಇರಲು ಸಾಧ್ಯ? ಹಾಗಾದರೆ ಇವರು ಹೇಗೆ ವಿದ್ಯುತ್ ಸಂಪರ್ಕ ಕೊಡುತ್ತಾರೆ. ಕರೆಂಟ್ ಏನೂ ಮೆಸ್ಕಾಂನವರು ತಮ್ಮ ಮನೆಯಿಂದ ತರುತ್ತಾರಾ? ಒಂದು ಚೂರಾದರೂ ನಾಚಿಗೆ ಬೇಡವೇ? ಅಷ್ಟಕ್ಕೂ JYOTHI ADVT ನವರು 2013 ರ ನವೆಂಬರ್ ನಲ್ಲಿಯೇ ಸಂಬಂಧಪಟ್ಟ ಭೂ ಮಾಲೀಕರೊಂದಿಗೆ ಹೋರ್ಡಿಂಗ್ಸ್ ಹಾಕಲು ಒಪ್ಪಂದ ಮಾಡಿ ಆಗಿತ್ತು. ಪಾಲಿಕೆಗೆ ಅರ್ಜಿ ಹಾಕಿದ್ದು 6.1.14 ಕ್ಕೆ. ಕೊನೆಗೆ ಅನುಮತಿ ಏನೂ ಸಿಗಲಿಲ್ಲ. ಆದರೆ ಇಂತಹ ಅದೆಷ್ಟೋ ಅನುಮತಿ ಇಲ್ಲದ ಹೋರ್ಡಿಂಗ್ಸ್ ಮಂಗಳೂರಿನಲ್ಲಿ ನಿಂತುಕೊಂಡಿವೆ ಎನ್ನುವುದು ನಿಮಗೆ ನಾನು ಮೊದಲೇ ಹೇಳಿದ್ದೇನೆ. ಲೆಕ್ಕ ಕೂಡ ಹಿಂದೆ ಕೊಟ್ಟಿದ್ದೇನೆ. ನೀವು ಅದನ್ನು ಮತ್ತೇ ಓದಿದರೆ ಅದರ ಆಳ ಪರಿಚಯ ಆಗುತ್ತದೆ. ಅಷ್ಟು ಅಕ್ರಮ ಹೋರ್ಡಿಂಗ್ಸ್ ಅನ್ನು ಕೇಳುವವರಾರು? ನಾನು ನಿನ್ನೆಯೇ ಹೇಳಿದ ಹಾಗೆ ಇದು ಕನಿಷ್ಟ 2 ರಿಂದ 4 ಕೋಟಿಯ ಅವ್ಯವಹಾರ. ಇಪ್ಪತ್ತು ಲಕ್ಷದ ಗೋಲ್ ಮಾಲ್ ಹಿಡಿದು ಪೋಸ್ ಕೊಡುವುದಕ್ಕಿಂತ ಕಾಂಗ್ರೆಸ್ಸಿಗರೇ ಇಲ್ಲಿ ಬನ್ನಿ. ಇದನ್ನು ಪತ್ತೆ ಹಚ್ಚಿ. ನಾನು ದಾಖಲೆ ಕೊಡುತ್ತೇನೆ. ಅಂದ ಹಾಗೆ, ನೀವು ಬರುವುದಿಲ್ಲ. ಯಾಕೆಂದರೆ ಮಂಗಳೂರಿನ ಪ್ರಮುಖ ಜಾಹೀರಾತು ಏಜೆನ್ಸಿ ನಿಮ್ಮ ನಾಯಕನದ್ದು ಅಲ್ವಾ?
Leave A Reply