ಡ್ರಗ್ಸ್ ಅಮಲು ಇಳಿದಾಗ ಹೋದ ಮಾನ ಬಂದಿತೇ?
Posted On September 14, 2020
ಉಪ್ಪು ತಿಂದವರು ನೀರು ಕುಡಿಯಬೇಕು. ಡ್ರಗ್ಸ್ ಸೇವಿಸಿದವರು ಜೈಲಿಗೆ ಹೋಗಲೇಬೇಕು. ಸಿಸಿಬಿ ಪೊಲೀಸರು ಬಂಧಿಸಿರುವ ಎಂಟು ಜನರಲ್ಲಿ ರಾಗಿಣಿ, ರಾಹುಲ್, ಪ್ರಶಾಂತ್, ಲೂಮ್, ನಿಯಾಜ್ ನೇರಾ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಆಗಿದ್ದಾರೆ. ಸಂಜನಾ, ರವಿಶಂಕರ್, ವಿರೇನ್ ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಕಸ್ಟಡಿಯಲ್ಲಿ ಇದ್ದಾರೆ. ನಮ್ಮ ಬಳಿ ಘಟಾನುಘಟಿ ರಾಜಕಾರಣಿಗಳ ಹೆಸರುಗಳು ಇವೆ ಎಂದು ನಟಿಮಣಿಯರು ಹೇಳಿರುವುದರಿಂದ ಅವರು ಯಾರು ಎಂದು ತಿಳಿಯುವ ಕುತೂಹಲ ಸದ್ಯ ಎಲ್ಲರಿಗೂ ಇರುತ್ತದೆ. ಅನೇಕರಿಗೆ ರಾಜಕಾರಣಿಗಳ ಬಗ್ಗೆ ದೂರದಿಂದ ಒಂದು ಕೋಪ ಇದ್ದೇ ಇರುತ್ತದೆ. ಈಗ ಇಂತಹ ಪ್ರಕರಣದಲ್ಲಿ ಅದು ಹೊರಗೆ ಬಂದರೆ “ಒಳ್ಳೆಯದಾಯಿತು, ಹಾಗೆ ಆಗಬೇಕು” ಎಂದು ಅಂದುಕೊಳ್ಳುವವರೇ ಹೆಚ್ಚು. ಅನೇಕ ಸಂದರ್ಭಗಳಲ್ಲಿ ಈ ರಾಜಕಾರಣಿಗಳು ಭಾಗವಹಿಸುವ ರಂಗೀನಾಟದ ಕಾರ್ಯಕ್ರಮಗಳಿಗೆ ಪೊಲೀಸರೇ ವಿನಂತಿಯ ಮೇರೆಗೆ ಭದ್ರತೆಯನ್ನು ಒದಗಿಸಿರುತ್ತಾರೆ. ಅಲ್ಲಿ ಕಾರ್ಯಕ್ರಮದಲ್ಲಿ ಯಾರು ಬಂದಿದ್ದಾರೆ, ಯಾರು ಏನು ಸೇವಿಸಿದ್ದಾರೆ, ಯಾರು ಪೂರೈಕೆ ಮಾಡಿರುವುದು ಎಂದು ಪೊಲೀಸರಿಗೆ ಗೊತ್ತಾಗದ ವಿಷಯವೇನು ಇದಾಗಿರಲಿಲ್ಲ. ಮಂಗಳೂರಿನಲ್ಲಿ ತೆಗೆದುಕೊಂಡರೆ ಬಂದರು ಪೊಲೀಸ್ ಠಾಣೆಯ ಹಿಂದಿನ ರಸ್ತೆಯಲ್ಲಿಯೇ ಡ್ರಗ್ಸ್ ಸೇವಿಸುವವರ ಪಟಾಲಾಂ ಹುಡುಕಿದರೆ ಸಿಗಲೂಬಹುದು. ಅವರಲ್ಲಿ ಒಬ್ಬನನ್ನು ಹಿಡಿದು ನಾಲ್ಕು ಬಾರಿಸಿದರೆ ಅವನು ಎಲ್ಲಿ ಖರೀದಿ ಮಾಡಿದ್ದು ಎಂದು ಹೇಳಿಯೇ ಹೇಳುತ್ತಾನೆ. ಇನ್ನು ಮಾರುವವನ ಬಳಿ ಹೋದರೆ ಅವನು ತಾನು ಎಲ್ಲಿ ಚಿಲ್ಲರೆ ಪೊಟ್ಟಣ ಖರೀದಿ ಮಾಡುವುದು ಎಂದು ಹೇಳಲು ತುಂಬಾ ಸಮಯ ತೆಗೆದುಕೊಳ್ಳುವುದಿಲ್ಲ. ಇನ್ನು ಅವನಿಂದ ರಖಂ, ರಖಂನಿಂದ ಪೂರೈಕೆ ಎಲ್ಲಿಂದ ಆಗುತ್ತದೆ ಎಂದು ಗೊತ್ತಾದರೆ ಇದರ ಜಾಲ ಪತ್ತೆಹಚ್ಚುವುದು ಮತ್ತು ಅಲ್ಲಿಗೆ ಮುಗಿಸುವುದು ಪೊಲೀಸ್ ಇಲಾಖೆಗೆ ಹಿಮಾಲಯ ಹತ್ತಿದ್ದಷ್ಟು ಕಷ್ಟವೇನಲ್ಲ.
ರಾಜ್ಯದಲ್ಲಿರುವ ಟಿವಿ ವಾಹಿನಿಗೆ ಕಳೆದ ಆರೇಳು ತಿಂಗಳಿನಿಂದ ಒಂದೇ ವಿಷಯ ತೋರಿಸಿ ಬೋರ್ ಆಗಿತ್ತು. ಕೊರೊನಾದಿಂದ ಎಪ್ರಿಲ್, ಮೇಯಲ್ಲಿ ಇದ್ದ ಟಿಆರ್ ಪಿ ಅಗಸ್ಟ್ ನಲ್ಲಿ ಇರಲೇ ಇಲ್ಲ. ಅವರಿಗೆ ಹೊಸ ವಿಷಯ ಬೇಕಿತ್ತು. ಇನ್ನು ಪೇಪರ್ ನವರಿಗೆ ಎಷ್ಟು ಎಂದು ಕೊರೊನಾ ವಿಷಯ ತುಂಬುವುದು ಎನ್ನುವುದೇ ಸವಾಲಾಗಿತ್ತು. ಈ ಹೊತ್ತಿನಲ್ಲಿ ಇವರಿಗೆ ಆಪತ್ಬಾಂಧವರಂತೆ ಬಂದದ್ದು ರಾಗಿಣಿ ಮತ್ತು ಸಂಜನಾ. ಇವರಿಬ್ಬರನ್ನು ತೋರಿಸುವಾಗ ಒಂದಿಷ್ಟು ರಂಗಿನ ಹಾಡುಗಳು, ಗ್ಲಾಮರ್ ಫೋಟೋ, ವಿಡಿಯೋ ಹಾಕಬಹುದು. ಜನರಿಗೆ ಇಷ್ಟವಾಗುತ್ತೆ ಎಂದು ತೋರಿಸಲು ಶುರು ಮಾಡಿದವು. ಈಗ ಅದು ಕೂಡ ಜನರಿಗೆ ಬೋರಾಗಿದೆ. ಮನಸ್ಸು ಒಂದೇ ವಿಷಯವನ್ನು ತುಂಬಾ ದಿನ ನೋಡಲು ಬಯಸುವುದಿಲ್ಲ. ಹಾಗಂತ ಡ್ರಗ್ಸ್ ಈಗ ಮಾತ್ರ ಇಡೀ ದಿನ ಸುದ್ದಿಯಾಗುತ್ತಿದೆ ಎನ್ನುವುದು ಬಿಟ್ಟರೆ ಇಷ್ಟು ವರ್ಷಗಳಲ್ಲಿ ಅನೇಕ ಸಲ ಪೊಲೀಸರು ರಾಜ್ಯದ ವಿವಿಧ ಭಾಗಗಳಲ್ಲಿ ಡ್ರಗ್ಸ್ ಪೆಡ್ಲರ್ ಗಳನ್ನು ಹಿಡಿದಿದ್ದಾರೆ. ಆದರೆ ಅದು ವಾರ್ತೆಯ ಮೂಲೆಯಲ್ಲಿ ಒಂದು ಝಲಕ್ ಆಗಿ ಬರುತ್ತಿತ್ತು. ಹಾಗೇ ಪತ್ರಿಕೆಗಳ ಮಧ್ಯದ ಪೇಜಿನಲ್ಲಿ ಎಲ್ಲೋ ಒಂದು ಭಾಗದಲ್ಲಿ ಮುದ್ರಿತವಾಗುತ್ತಿತ್ತು. ಆದರೆ ಕಳೆದ 15 ದಿನಗಳಿಂದ ಇಡೀ ದಿನ ಟಿವಿಯಲ್ಲಿ, ಪತ್ರಿಕೆಗಳ ಇಡೀ ಪೇಜುಗಳಲ್ಲಿ ಬರುತ್ತಿದೆ. ಕಾರಣ ಸೆಲೆಬ್ರಿಟಿಗಳು ಸಿಕ್ಕಿ ಬಿದ್ದಿರುವುದು. ಶ್ರೀಮಂತರ ಮಕ್ಕಳು ಸಿಕ್ಕಿಬಿದ್ದಿರುವುದು. ನಮ್ಮಲ್ಲಿ ಕೋಟ್ಯಾಧೀಶೆ ಕಂಗನಾ ರಾಣಾವತ್ ಕಚೇರಿಯ ಒಂದು ಭಾಗ ಧ್ವಂಸವಾದದ್ದು ಇಡೀ ದೇಶದಲ್ಲಿ ಸುದ್ದಿಯಾಗುತ್ತದೆ. ಅದೇ ಪಾಪದ ಬಡವ ಹೊಟ್ಟೆಪಾಡಿಗೆ ಒಂದು ಗೂಡಂಗಡಿ ಇಟ್ಟಿದ್ದು, ಅದನ್ನು ಕ್ಲೀನ್ ಡ್ರೈವ್ ಹೆಸರಿನಲ್ಲಿ ಪಾಲಿಕೆ ಒಡೆದರೆ ಸುದ್ದಿಯಾಗಲ್ಲ. ಕಂಗನಾರಿಗೆ ಅಂತಹ ನಾಲ್ಕು ಆಫೀಸು ಕಟಟುವ ತಾಕತ್ತು ಇದೆ. ಬಡವನಿಗೆ ಮತ್ತೊಮ್ಮೆ ಅದೇ ಗೂಡಂಗಡಿ ಮಾಡಲು ಸಾಧ್ಯವೇ? ಹಾಗಾದರೆ ನಿಜಕ್ಕೂ ನಾವು ಮಾನವೀಯತೆ ಮತ್ತು ಸುದ್ದಿರಸವತ್ತಿನ ನಡುವೆ ಎಲ್ಲಿ ಹೋಗುತ್ತಿದ್ದೇವೆ ಎನ್ನುವುದು ಈಗ ಉಳಿದಿರುವ ಪ್ರಶ್ನೆ.
ಇನ್ನು ಈಗ ಪೊಲೀಸರು ಕೂಡ ಸ್ಪರ್ಧೆಗೆ ಬಿದ್ದವರಂತೆ ತಮ್ಮ ಠಾಣಾ ವ್ಯಾಪ್ತಿಯಲ್ಲಿರುವ ಗಾಂಜಾ ಸಹಿತ ಡ್ರಗ್ಸ್ ಜಾಲವನ್ನು ಬಯಲಿಗೆ ಎಳೆಯಬೇಕು. ಇದು ಕೇವಲ ರಾಗಿಣಿ ಅಥವಾ ಸಂಜನಾ ವಿಷಯವಲ್ಲ. ಇದು ಬೆಂಗಳೂರಿಗೆ ಮಾತ್ರ ಸೀಮಿತವಾಗಿಯೂ ಇಲ್ಲ. ಸಿನೆಮಾ ತಾರೆಯರು ತಮ್ಮ ನಟನೆಯಿಂದ ಜನರ ಪ್ರೀತಿಯನ್ನು ಪಡೆದುಕೊಂಡಿರುತ್ತಾರೆ. ಅದನ್ನು ಕಾಪಾಡುವ ಜವಾಬ್ದಾರಿ ಕೂಡ ಅವರ ಮೇಲಿದೆ. ಮೊನ್ನೆ ಯಶ್ ಎನ್ನುವ ಸಿನೆಮಾ ನಟ ಹೇಳಿದಂತೆ “ನಿಮ್ಮ ದೇಹ ತಂದೆ, ತಾಯಿ ಕೊಟ್ಟ ಭೀಕ್ಷೆ” ಆದರೆ ಈ ನಟಿಮಣಿಗಳಿಗೆ ಯಾರೋ ಕೊಟ್ಟ ಡ್ರಗ್ಸ್ ಎಂಬ ಭೀಕ್ಷೆಯ ಎದುರು ಏನೂ ಕಾಣಿಸಲಿಲ್ಲ. ಅದಕ್ಕಾಗಿ ಈಗ ಅನುಭವಿಸುತ್ತಿದ್ದಾರೆ. ಡ್ರಗ್ಸ್ ಇಲ್ಲದೆಯೂ ಮನುಷ್ಯ ಬದುಕಬಹುದು. ಆದರೆ ಡ್ರಗ್ಸ್ ನಿಂದ ಹೋದ ಮಾನ ಮತ್ತೆ ಬರುತ್ತದೆಯಾ ?
- Advertisement -
Leave A Reply