ಬದಲಾವಣೆಗಾಗಿ ಬಿಜೆಪಿಗೆ ಮತ ನೀಡಿದರೂ ಲಂಚ ಅಷ್ಟೇ ಕೊಡಬೇಕು!!
ಕಾಂಗ್ರೆಸ್ ಸರಕಾರ ಇದ್ದಾಗ ತಾಲೂಕು ಕಚೇರಿ, ಪ್ರಾಪರ್ಟಿ ಕಾರ್ಡ್ ಕಚೇರಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಚೇರಿ, ಮಂಗಳೂರು ಮಹಾನಗರ ಪಾಲಿಕೆಯ ಕಚೇರಿಯಲ್ಲಿ ಹಣ ಕೊಟ್ಟರೆ ಮಾತ್ರ ಕೆಲಸ ಆಗುತ್ತಿತ್ತು. ಅದರಿಂದ ಜನ ತುಂಬಾ ಬೇಸತ್ತಿದ್ದರು. ಈ ವಿಷಯವನ್ನು ಹಿಡಿದುಕೊಂಡು ಭಾರತೀಯ ಜನತಾ ಪಾರ್ಟಿ ಹೋರಾಟ ಮಾಡಿತು. ನಮಗೆ ಅಧಿಕಾರ ಕೊಟ್ಟರೆ ಬದಲಾವಣೆ ತರುತ್ತೇವೆ ಎಂದು ಬಿಜೆಪಿ ಮುಖಂಡರು ಮೈಕ್ ಹಿಡಿದು ಸರದಿಯಲ್ಲಿ ಮಾತನಾಡಿದರು. ಮತದಾರರು ಬಿಜೆಪಿ ಮುಖಂಡರು ಬಿಸಿಲಿಗೆ ಶಾಮಿಯಾನದ ಕೆಳಗೆ ಕುಳಿತು ಬೆವರುತ್ತಾ ಮಾತನಾಡುತ್ತಿರುವುದನ್ನು ನೋಡಿ ಇವರಿಗೆ ಒಂದು ಅಧಿಕಾರ ಕೊಡೋಣ, ಇವರು ಗೆದ್ದ ಬಳಿಕ ಪರ್ಸ್ ನಲ್ಲಿ ಚಿಲ್ಲರೆ ಮಾತ್ರ ಹಿಡಿದು ಹೋದರೂ ಕೆಲಸ ಆಗುತ್ತದೆ ಎಂದು ಭಾವಿಸಿದರು. ಬಿಜೆಪಿಯನ್ನು ಅಭೂತಪೂರ್ವವಾಗಿ ಗೆಲ್ಲಿಸಿದರು. ನಂತರ ಬಿಜೆಪಿಗೆ ಮತ ನೀಡಿದ ಅದೇ ನಾಗರಿಕರು ಸರಕಾರಿ ಕಚೇರಿಗಳಿಗೆ ಕೆಲಸ ಮಾಡಲು ಹೋದಾಗ ಶಾಕ್ ಕಾದಿತ್ತು.
ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಒಂದು ವರ್ಷವಾಗಿ ಮೂರು ತಿಂಗಳು. ಯಡಿಯೂರಪ್ಪನವರು ಸಿಎಂ ಆದಾಗ ಕರಾವಳಿಯ ಬಿಜೆಪಿ ನಾಯಕರು ಸಂತಸಪಡುವುದಕ್ಕಿಂತ ಮೊದಲು ಒಂದು ಮಹತ್ತರ ಕೆಲಸ ಮಾಡಿದಿದ್ದರೆ ನಿನ್ನೆ ಮಂಗಳೂರು ನಗರ ಉತ್ತರ ಶಾಸಕ ಡಾ.ಭರತ್ ಶೆಟ್ಟಿಯವರು ತಾಲೂಕು ಕಚೇರಿಗೆ ಹೋಗಿ ಅಲ್ಲಿ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಎಚ್ಚರಿಕೆ ಕೊಟ್ಟು ಬಂದಿದ್ದರಲ್ಲ, ಆ ಅನಿವಾರ್ಯತೆಯೇ ಬರುತ್ತಿರಲಿಲ್ಲ. ಇನ್ನು ಹೀಗೆ ಪಾಪದವರಿಂದ ಲಂಚ ಪೀಕಿಸಲು ಅಲೆದಾಡಿಸಿದರೆ ನಿಮ್ಮ ಇಲ್ಲಿಯವರೆಗಿನ ಎಲ್ಲ ದಾಖಲೆ ಹೊರಗೆ ತೆಗೆದು ವಿಚಾರಣೆ ಮಾಡಲು ಮುಂದಾಗಬೇಕಾಗುತ್ತದೆ ಎಂದು ಖಂಡಾತುಂಡವಾಗಿ ಹೇಳುವ ಪರಿಸ್ಥಿತಿ ಒಬ್ಬ ಶಾಸಕನಿಗೆ ಬರುತ್ತಿರಲಿಲ್ಲ.
ಅದು ಬಂದಿದೆ ಎಂದರೆ ನಮ್ಮ ಸರಕಾರಿ ಕಚೇರಿಗಳ ಪರಿಸ್ಥಿತಿ ಎಲ್ಲಿಗೆ ಹೋಗಿ ಮುಟ್ಟಿರಬೇಡಾ. ತಾಲೂಕು ಕಚೇರಿ, ತಹಶೀಲ್ದಾರ್ ಕಚೇರಿ, ಭೂದಾಖಲೆಗಳ ಪತ್ರದ ಕಚೇರಿ ಇಲ್ಲೆಲ್ಲ ಈಗ ವ್ಯವಸ್ಥೆ ಹೇಗಿದೆ ಎಂದರೆ ಪಾಪದ ಜನರಿಂದ 500, 1000 ಕ್ಕಾಗಿ ನಾಲ್ಕೈದು ತಿಂಗಳು ಅಧಿಕಾರಿಗಳು ಅಲೆದಾಡಿಸುತ್ತಾರೆ. ತಾಲೂಕು ಕಚೇರಿಯಲ್ಲಿ ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಮಾಡಿಸಬೇಕಾದರೆ ನೀವು ಮೊದಲು ಗ್ರಾಮ ಕರಣಿಕರ ಬಳಿ ಹೋಗಬೇಕು. ಅಲ್ಲಿ ವಿಎಯನ್ನು ನೋಡುವ ಮೊದಲು ಅವರ ಅಸ್ಟಿಸ್ಟೆಂಟ್ ಗೆ ನೂರು ರೂಪಾಯಿ ಕೊಡಬೇಕು. ನಂತರ ವಿಲೇಜ್ ಅಕೌಂಟೆಂಟ್ ನಿಮ್ಮನ್ನು ಕರೆಯುತ್ತಾರೆ. ನಂತರ ಅವರಿಗೆ ಐನೂರು ರೂಪಾಯಿ ಕೊಟ್ಟರೆ ಅವರು ಸಹಿ ಮಾಡಿ ಅದನ್ನು ತಾಲೂಕು ಕಚೇರಿಗೆ ಕಳುಹಿಸುತ್ತಾರೆ. ಇನ್ನು ಆದಾಯ ಪ್ರಮಾಣ ಪತ್ರ ಮಾಡಿಸುವಾಗ ರೇಶನ್ ಕಾರ್ಡ್ ಪ್ರತಿ ಇಟ್ಟು ಎಷ್ಟು ಕಡಿಮೆ ಆದಾಯ ನಮೂದಿಸಬೇಕು ಎನ್ನುವುದರ ಮೇಲೆ ಐನೂರೋ, ಒಂದು ಸಾವಿರವೋ ನಿರ್ಧಾರವಾಗುತ್ತದೆ. ನಾವು ಯೋಧರನ್ನು ಗೌರವದಿಂದ ಕಾಣುವ ದೇಶ. ಆ ಗೌರವ ಇಟ್ಟುಕೊಂಡೇ ಒಂದು ಮಾತು ಹೇಳುತ್ತೇನೆ. ನಮ್ಮಲ್ಲಿ ಮಾಜಿ ಯೋಧರೊಬ್ಬರು ಗ್ರಾಮಕರಣಿಕರಾಗಿದ್ದಾರೆ. ಅವರು ಕೂಡ ಯಾವುದೇ ದಯ, ದಾಕ್ಷಿಣ್ಯ ಇಲ್ಲದೆ ಲಂಚ ಕೇಳಿಯೇ ಕೆಲಸ ಮಾಡುತ್ತಾರೆ. ಅವರು ನಿಜಕ್ಕೂ ಭಾರತ ಸೈನ್ಯದಲ್ಲಿಯೇ ಇದ್ರಾ ಅಥವಾ ಬಾಂಗ್ಲಾ ಸೈನ್ಯದಲ್ಲಿ ಇದ್ರಾ ಎಂದು ನನಗೆ ಕೆಲವೊಮ್ಮೆ ಅನುಮಾನ ಬರುವುದುಂಟು. ಇನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಲಂಚದ ಬಗ್ಗೆ ಒಂದು ಮೆನು ಕಾರ್ಡ್ ಇದೆ. ಯಾವ ಕೆಲಸಕ್ಕೆ ಯಾರಿಗೆ ಎಷ್ಟು ಕೊಡಬೇಕು ಎಂದು ಅಲ್ಲಿ ಮಾನ ಮರ್ಯಾದೆ ಇಲ್ಲದೆ ಹೇಳಿಬಿಡುತ್ತಾರೆ. ಆರ್ ಟಿಒದಲ್ಲಿ ಕೇವಲ ಎಲ್ ಎಲ್ ಆರ್ ಮಾಡಿಸಲು ಶುಲ್ಕದ ಜೊತೆ ಒಂದರಿಂದ ಒಂದೂವರೆ ಸಾವಿರ ಹಣ ನೀಡಬೇಕು.
ನಮ್ಮ ರಾಜ್ಯದಲ್ಲಿ ಸಿಎಂ ಬದಲಾದರು, ಉಸ್ತುವಾರಿ ಸಚಿವರು ಬೇರೆ ಬಂದ್ರು, ಶಾಸಕರು ಯುವಕರಾದರು, ಆದರೆ ಸರಕಾರಿ ವ್ಯವಸ್ಥೆ ಹಾಗೇ ಇದೆ. ಹಿಂದೆ ಐನೂರು ರೂಪಾಯಿಗೆ ಆಗುತ್ತಿದ್ದ ಕೆಲಸ ಈಗ ಎಂಟು ನೂರು ರೂಪಾಯಿ ಆಗಿದೆ. ಹಿಂದೆ ಹತ್ತು ದಿನಗಳಲ್ಲಿ ಆಗುತ್ತಿದ್ದ ಕೆಲಸ ಈಗ 12 ದಿನಗಳಾಗುತ್ತಿವೆ. ಹಾಗಾದರೆ ಇದಕ್ಕೆ ಏನೂ ಮಾಡಲು ಆಗುವುದಿಲ್ಲವೇ?. ಆಗುತ್ತದೆ, ಆದರೆ ಶಾಸಕರುಗಳು ಧೈರ್ಯ ಮಾಡಬೇಕು. ಒಂದೇ ಕಡೆ ಜಿಡ್ಡು ಹಿಡಿದು ಕುಳಿತಿರುವ ಅಧಿಕಾರಿಗಳನ್ನು ಅಲ್ಲಿಂದ ಹಿಂದೆ ಮುಂದೆ ನೋಡದೆ ಕಳುಹಿಸಿಬಿಡಬೇಕು. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪ್ರತಿ ಶಾಸಕರ ಕಚೇರಿಯಲ್ಲಿ ಒಂದು ಭ್ರಷ್ಟಾಚಾರ ವಿರೋಧಿ ಡೆಸ್ಕ್ ಇಡಬೇಕು ಎಂದು ಹೇಳಿದ್ದನ್ನು ಎಷ್ಟು ಶಾಸಕರು ಮಾಡಿದ್ದಾರೆ. ಅಲ್ಲಿ ತಮಗೆ ಇಂತಿಂತಹ ಅಧಿಕಾರಿಯಿಂದ ತೊಂದರೆ ಆಗಿದೆ ಎಂದು ಲಿಖಿತವಾಗಿ ಯಾರಾದರೂ ಕೊಟ್ಟರೆ ಅಂತಹ ಅಧಿಕಾರಿಯನ್ನು ಕೂಡಲೇ ವರ್ಗಾವಣೆ ಮಾಡಬೇಕು. ಮುಂದೆ ಬರುವವರು ಕೂಡ ಕಳ್ಳರೇ ಇರುತ್ತಾರೆ ಎಂದು ಅಂದುಕೊಂಡು ಇದ್ದವರನ್ನೇ ಮೇಯಲು ಬಿಟ್ಟರೆ ಮುಂದೆ ಹೆಸರು ಹಾಳಾಗುವುದು ಇದೇ ಶಾಸಕರದ್ದು. ಯಾಕೆಂದರೆ ಯಾವ ಅಧಿಕಾರಿ ಕೂಡ ವೋಟ್ ಕೇಳಲು ಹೋಗಬೇಕಾಗಿಲ್ಲ!
Leave A Reply