ಯಾಕೆ ಕರಾವಳಿಯ ಶಾಸಕರು ಮೌನವಾಗಿದ್ದಾರೆ? ಕುಮಾರಸ್ವಾಮಿ ತೋರಿಸಿದ್ದಷ್ಟು ಧೈರ್ಯವನ್ನಾದರೂ ಕನಿಷ್ಟ ತೋರಿಸಬಾರದಾ? ಯಾವಾಗ ಮಾಜಿ ಮುಖ್ಯಮಂತ್ರಿಯೊಬ್ಬರು ಅನುಶ್ರೀ ಪ್ರಕರಣದಲ್ಲಿ ಇದ್ದಾರೆ ಎಂದು ಮಾಧ್ಯಮಗಳು ಪ್ರಶ್ನಾರ್ಥಕ ಚಿಹ್ನೆಯೊಂದಿಗೆ ತೋರಿಸಿದ ಕೂಡಲೇ ವೀರಾವೇಶದಿಂದ ಹೊರಗೆ ಬಂದು ಮಾತನಾಡಿದವರು ಕುಮಾರಸ್ವಾಮಿ.
ಅಷ್ಟೇಅಲ್ಲ, ಇದನ್ನು ಬ್ರೇಕ್ ಮಾಡಿದ ವರದಿಗಾರ ಯಾರು ಎಂದು ಪತ್ತೆ ಹಚ್ಚಿ ಆ ವರದಿಗಾರನಿಗೆ ಕಾಲ್ ಮಾಡಿ ಆತನಿಗೆ ಹೀಗೆ ಮಾಹಿತಿ ಕೊಟ್ಟಿರುವ ಸಿಸಿಬಿ ಪೊಲೀಸ್ ಅಧಿಕಾರಿ ಯಾರೆಂದು ತಿಳಿದು ಅದನ್ನು ಕಮೀಷನರ್ ಅವರಿಗೆ ಹೇಳಿದ್ದೇನೆ ಎಂಬರ್ಥದ ಮಾತುಗಳನ್ನು ಮಾಧ್ಯಮಗಳ ಮುಂದೆ ಹೇಳಿದವರು ಇದೇ ಕುಮಾರಸ್ವಾಮಿ. ಅವರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಕುಂಬಳಕಾಯಿ ಕಳ್ಳ ಎಂದರೆ ಹೆಗಲಮುಟ್ಟಿ ನೋಡಿಕೊಂಡ್ರು ಎನ್ನುವ ಗಾದೆ ಎದುರಿಗಿಟ್ಟು ಕುಮಾರಸ್ವಾಮಿಯವರನ್ನು ಟ್ರೋಲ್ ಮಾಡಲಾಯಿತಾದರೂ ಆ ಮನುಷ್ಯ ತೋರಿಸಿದ ಧೈರ್ಯ ಮೆಚ್ಚತಕ್ಕದ್ದೇ ಆಗಿದೆ. ಈಗ ನಮ್ಮ ಕರಾವಳಿಯ ಶಾಸಕರ ಸರದಿ. ಕರಾವಳಿಯ ಶಾಸಕರೊಬ್ಬರು ಅನುಶ್ರೀ ಪ್ರಕರಣದಲ್ಲಿ ಸಿಸಿಬಿಗೆ ಕರೆ ಮಾಡಿ ಒತ್ತಡ ಹಾಕಿದ್ದಾರೆ ಎನ್ನುವುದು ಸುಳ್ಳಾದರೆ ನಮ್ಮ ಶಾಸಕರು ಹೊರಗೆ ಬಂದು ಈ ಬಗ್ಗೆ ಧ್ವನಿ ಎತ್ತಲೇಬೇಕು. ಕರಾವಳಿ ಶಾಸಕರು ಎಂದ ಕೂಡಲೇ ಉಳ್ಳಾಲದಿಂದ ಕಾರವಾರದ ತನಕ ಹಿಡಿದುಕೊಂಡರೆ 17 ಜನ ಬರುತ್ತಾರೆ. ಮಂಗಳೂರು ಸಿಸಿಬಿಗೆ ಫೋನ್ ಮಾಡಿದ್ದಾರೆ ಎಂದ ಮೇಲೆ ಅದು ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರೇ ಇರಬೇಕು. ಅಂಗಾರ ಹಾಗೂ ಖಾದರ್ ಬಿಟ್ಟರೆ ಉಳಿದವರು ಫಸ್ಟ್ ಟೈಮರ್ಸ್.
ಅಂಗಾರ ಇಂತಹ ವಿಷಯಗಳಲ್ಲಿ ತಲೆ ಹಾಕಲು ಹೋಗುವುದಿಲ್ಲ. ಅವರಿಗೆ ಅನುಶ್ರೀ ಫೋನ್ ಮಾಡಿ ರಕ್ಷಿಸಿ ಸರ್ ಎಂದು ಹೇಳುವ ಚಾನ್ಸೇ ಇಲ್ಲ. ಅಂಗಾರ ಅವರ ಬಳಿ ಇರುವ ಎರಡೂ ಫೋನ್ ಗಳಿಗೆ ಅವರ ಊರಿನವರೇ ಕಾಲ್ ಮಾಡಿದರೂ ಅನೇಕ ಬಾರಿ ನಾಟ್ ರಿಚೇಬಲ್ ಆಗಿರುತ್ತದೆ. ಅಲ್ಲಿ ಅಂತಹ ನೆಟ್ ವರ್ಕ್ ಸಮಸ್ಯೆ ಇದೆ. ಇನ್ನು ಖಾದರ್ ವಿಷಯ ನೋಡೋಣ. ಅಂಗಾರ ಅವರನ್ನು ಬಿಟ್ಟರೆ ಜಿಲ್ಲೆಯ ಉಳಿದ ಬಿಜೆಪಿ ಶಾಸಕರಿಗೆ ಹೋಲಿಸಿದರೆ ಖಾದರ್ ಸೀನಿಯರ್. ಇನ್ನು ಸಚಿವರಾಗಿಯೂ ಅನುಭವವಿದೆ. ಉಸ್ತುವಾರಿ ಸಚಿವರಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಓಡಾಡಿದ್ದಾರೆ. ಸೀನಿಯರ್ ಶಾಸಕ ಮಾತ್ರವಲ್ಲ, ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದರೂ ಜಿಲ್ಲೆಯ 7 ಬಿಜೆಪಿ ಶಾಸಕರಿಗೆ ಹೋಲಿಸಿದರೆ ಯಾವುದೇ ಕೆಲಸಕ್ಕೂ ಕೈ ಹಾಕಿ ಗಿಟ್ಟಿಸಿಕೊಳ್ಳಬಲ್ಲ ಸಾಮರ್ತ್ಯ ಇದೆ. ಹಾಗಾದರೆ ಅವರು ಕರೆ ಮಾಡಿದ್ರಾ? ಸಿಸಿಬಿಯವರು ಅದನ್ನು ಹೇಳುತ್ತಿಲ್ಲ. ಖಾದರ್ ಕೂಡ ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಒಂದು ವೇಳೆ ಖಾದರ್ ಅವರೇ ಕರೆ ಮಾಡಿ ಒತ್ತಡ ಹಾಕಿದ್ರು ಎನ್ನುವುದು ರಾಜ್ಯದ ಪ್ರಭಾವಿ ಸಚಿವರುಗಳಿಗೆ ಗ್ಯಾರಂಟಿ ಆದರೆ ಅವರಿಗೆ ವಿಪಕ್ಷ ಕಾಂಗ್ರೆಸ್ಸನ್ನು ಹಣಿಯಲು ಇದಕ್ಕಿಂತ ಬೇರೆ ಮಾರ್ಗ ಬೇಕಾಗಿಲ್ಲ. ಅದರಲ್ಲಿಯೂ ಉಪಚುನಾವಣೆ ಬರುತ್ತಿರುವ ಈ ಸಂದರ್ಭದಲ್ಲಿ ಖಾದರ್ ಬಲೆಗೆ ಬಿದ್ದರೆ ಬಿಜೆಪಿ ಮುಖಂಡರು ಆ ಅವಕಾಶ ಮಿಸ್ ಮಾಡಿಕೊಳ್ಳುವುದಿಲ್ಲ. ಆದ್ದರಿಂದ ಇಂತಹ ಹೊತ್ತಿನಲ್ಲಿ ದೂರಗಾಮಿ ಚಿಂತನೆಯ ಖಾದರ್ ಸಿಸಿಬಿಗೆ ಕರೆ ಮಾಡಿ ಅನುಶ್ರೀ ಪ್ರಕರಣದಲ್ಲಿ ಒತ್ತಡ ಹಾಕುತ್ತಾರೆ ಎನ್ನುವುದು ಒಪ್ಪಿಕೊಳ್ಳುವುದು ಕಷ್ಟ. ಒಂದು ವೇಳೆ ಅವರು ಹಾಗೆ ಮಾಡಿದ್ದಿದ್ರೆ ಬಿಜೆಪಿ ರಾಜ್ಯ ನಾಯಕರು ಇಷ್ಟು ಹೊತ್ತಿಗೆ ವೇಷ ಕಟ್ಟಿ ರಂಗಕ್ಕೆ ಇಳಿದು ಬಿಡುತ್ತಿದ್ದರೋ ಏನೋ. ಹಾಗಾದರೆ ಯಾರು? ಇಲ್ಲಿ ಎರಡು ವಿಚಾರ ಇದೆ.
ಒಂದೋ ಹೀಗೆ ಒಂದು ಒತ್ತಡವೇ ಸಿಸಿಬಿ ಮೇಲೆ ಬಿದ್ದಿಲ್ಲ. ಆದರೆ ಹೀಗೆ ಹೇಳದಿದ್ದರೆ ಯಾರೋ ಏನೋ ಕಳೆದುಕೊಳ್ಳುವ ಸಾಧ್ಯತೆ ಇದ್ದ ಕಾರಣ ಹೀಗೆ ಒಂದು ವಿಚಾರ ಗಾಳಿಗೆ ತೇಲಿಬಿಟ್ಟಿರಲೂಬಹುದು. ಇಲ್ಲದಿದ್ದರೆ ಪಿಕ್ ಪಾಕೆಟ್ ಮಾಡಿ ಸಿಕ್ಕಿಬಿದ್ದವರ ಪಾಸ್ ಪೋರ್ಟ್ ಸೈಝ್ ಫೋಟೋ ಪೇಪರ್ ನವರಿಗೆ ಕೊಟ್ಟು ಮೈಲೇಜ್ ತೆಗೆದುಕೊಳ್ಳುವ ಸಿಸಿಬಿಯವರು ಇಂತಹ ವಿಷಯದಲ್ಲಿ ಚಾನ್ಸ್ ಮಿಸ್ ಮಾಡಿಕೊಳ್ಳುತ್ತಾರಾ? ಸದ್ಯ ನಮ್ಮ ಸಂಸದರೂ, ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರೂ ಆಗಿರುವ ನಳಿನ್ ಕುಮಾರ್ ಕಟೀಲ್ ಅವರು ತಮ್ಮ ಪಕ್ಷದ ಶಾಸಕರನ್ನು ಕರೆದು ಪೊಲೀಸ್ ಕಮೀಷನರ್ ಅವರ ಕಚೇರಿಗೆ ಹೋಗಿ ಅಲ್ಲಿ ಸಿಸಿಬಿ ಇನ್ಸಪೆಕ್ಟರ್ ಅವರನ್ನು ಕರೆದು ಅಲ್ಲಿಯೇ ವಿಚಾರಣೆ ಮಾಡಿಬಿಡಬೇಕು. ಇದು ಕರಾವಳಿಯ ವರ್ಚಸ್ಸಿನ ಪ್ರಶ್ನೆ. ಇದು ರಾಷ್ಟ್ರೀಯ ವಾಹಿನಿಯಲ್ಲಿ ಕೂಡ ಬಂದಿದೆ. ಇನ್ನು ಅದೇ ಸಿಸಿಬಿ ಇನ್ಸಪೆಕ್ಟರ್ ಅವರು ಅನುಶ್ರೀ ಅವರನ್ನು ಕರೆದು ವಿಚಾರಿಸಿ ಕಳಿಸಿ ವಾರಗಳಾಗುತ್ತಿವೆ. ಮುಂದೆ ಕೇಸಿನ ಬೆಳವಣಿಗೆ ಏನು? ತರುಣ್ ಹಾಗೂ ಕಿಶೋರ್ ಹೇಳಿದ್ದು ಇದೊಂದೇ ಹೆಸರಾ? ಉಳಿದವರು ಯಾರೂ ಇಲ್ವಾ? ಕೇವಲ ತರುಣ್, ಕಿಶೋರ್ ಹಾಗೂ ಅನುಶ್ರೀ ಮಾತ್ರ ಪಾರ್ಟಿ ಮಾಡುತ್ತಿದ್ರಾ? ಯಾಕೋ ಏನೋ ಸಂಶಯ ಜನರಿಗೆ ಬರುತ್ತಿದೆ. ಸಿಸಿಬಿ ಪೊಲೀಸರು ಅನುಶ್ರೀಯ ನಂತರ ತೋರಿಸುತ್ತಿರುವ ಮೌನದ ಹಿಂದೆ ಏನಾದರೂ ಸೆಟಲ್ ಮೆಂಟ್ ವಾಸನೆ ಹೊಡೆಯುತ್ತಿದೆ ಎಂದು ಜಿಲ್ಲೆಯ ಬುದ್ಧಿವಂತರ ಅನಿಸಿಕೆ. ಹೀಗಾಗಬಾರದು ಎಂದರೆ ಪೊಲೀಸ್ ಕಮೀಷನರ್ ಸೂಕ್ತ ತನಿಖೆ ಮಾಡಿ ಪ್ರಾಮಾಣಿಕ ಅಧಿಕಾರಿಗಳನ್ನು ಸಿಸಿಬಿಗೆ ನೇಮಿಸಬೇಕು. ಮಂಗಳೂರು ಅನೇಕರಿಗೆ ಸಮೃದ್ಧವಾಗಿ ಮೇಯಲು ಇರುವ ಹುಲ್ಲುಗಾವಲು ಎನಿಸಿಕೊಂಡಿದೆ. ಬಂದವರಿಗೆ ಇಲ್ಲಿಂದ ಹೋಗಲು ಮನಸ್ಸೇ ಬರುವುದಿಲ್ಲ ಎಂದು ಹಿಂದೆ ಒಮ್ಮೆ ಹೇಳಿದ್ದೆ. ಹಾಗಂತ ಅವರನ್ನು ಎತ್ತಂಗಡಿ ಮಾಡಲು ಹೋದರೆ ಏನಾದರೂ ಸರ್ಕಸ್ ಮಾಡಿ ಇಲ್ಲಿಯೇ ಉಳಿಯುವ ಅಧಿಕಾರಿಗಳಿದ್ದಾರೆ. ಸದ್ಯ ಮಂಗಳೂರನ್ನು ಕಾಡುತ್ತಿರುವುದು ಅದೇ ಪ್ರಾಬ್ಲಂ!
Leave A Reply