ಮಿಥುನ್ ರೈ ಹೇಳಿಕೆ ಜಿಲ್ಲೆಯ ಕಾಂಗ್ರೆಸ್ ಗೋರಿಗೆ ಮತ್ತೊಂದು ಕಲ್ಲು ಜೋಡಿಸಿದಂತೆ!!

ಮಿಥುನ್ ರೈಗೆ ತಕ್ಷಣಕ್ಕೆ ರಾಜ್ಯ ಮಟ್ಟದ ನಾಯಕನಾಗಬೇಕು ಎನ್ನುವ ಹಪಾಹಪಿ ಇದೆ. ಆದ್ದರಿಂದ ಹೇಗಾದರೂ ಮಾಡಿ ಯಾವ ಕನಿಷ್ಟ ಮಟ್ಟಕ್ಕೆ ಇಳಿದಾದರೂ ಪ್ರಚಾರದಲ್ಲಿ ಇರಬೇಕೆಂದು ನಿರ್ಧರಿಸಿದ್ದಾರೆ. ಅದಕ್ಕಾಗಿ ಅವರು ಈ ಬಾರಿ ಟಾರ್ಗೆಟ್ ಮಾಡಿರುವುದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು.
ಯೋಗಿ ಆದಿತ್ಯನಾಥ್ ಮಂಗಳೂರಿಗೆ ಬಂದರೆ ಚಪ್ಪಲಿಯಿಂದ ಹೊಡೆಯುತ್ತೆನೆ, ಮುಖಕ್ಕೆ ಮಸಿ ಬಳಿಯುತ್ತೇನೆ ಎನ್ನುವಂತಹ ಮಾತುಗಳನ್ನು ಮಿಥುನ್ ರೈ ಆಡಿದ್ದಾರೆ. ಇದರಿಂದ ತಾನು ಸುದ್ದಿಯಲ್ಲಿರುತ್ತೇನೆ ಎಂದು ಅವರು ಅಂದುಕೊಂಡಿದ್ದಾರೆ. ಆದರೆ ಇದರಿಂದ ತಮಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಅವರಿಗೆ ಅರಿವಿಗೆ ಬರುವಷ್ಟರಲ್ಲಿ ಕಾಲ ಮೀರಿರುತ್ತದೆ ಎಂದು ತಿಳಿಯುವಷ್ಟು ಪ್ರೌಢಿಮೆ ಅವರಿಗಿಲ್ಲ ಎನ್ನುವುದು ಸ್ಪಷ್ಟ.
ಅಷ್ಟಕ್ಕೂ ಮಿಥುನ್ ಬೈಯ್ದಯ್ದು ಯಾರಿಗೆ? ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ. ರಾಜಕೀಯಕ್ಕೆ ಇಳಿದ ಮೇಲೆ ಇಂತಹ ಮಾತುಗಳನ್ನು ಕೇಳಬೇಕು ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ ದೇಶದ ಪ್ರಮುಖ ಪಂಥಗಳಲ್ಲಿ ಒಂದಾಗಿರುವ ನಾಥ ಪಂಥದ ಮುಖ್ಯಸ್ಥರಾಗಿರುವ ಯೋಗಿ ಹೊಲಸು ರಾಜಕೀಯಕ್ಕೆ ಬಂದದ್ದು ಇಲ್ಲಿಯೇ ಮುಳುಗಿ ಕಾಂಗ್ರೆಸ್ ಮುಖಂಡರಂತೆ ಭ್ರಷ್ಟಾಚಾರ ಮಾಡಿ ಮಜಾ ಮಾಡಲು ಅಲ್ಲ. ಅವರು ಬಂದ ಮೇಲೆ ಉತ್ತರಪ್ರದೇಶದಲ್ಲಿ ಗೂಂಡಾ ರಾಜ್ಯ ಬಹುತೇಕ ಕೊನೆಗೆ ಬಂದು ಮುಟ್ಟಿದೆ. ಇನ್ನು ಹತ್ರಸ್ ಪ್ರಕರಣದಲ್ಲಿ ಪ್ರಕರಣ ದಾಖಲಿಸುವಲ್ಲಿ ವಿಳಂಬ ಮಾಡಿದ ಪೊಲೀಸ್ ಅಧಿಕಾರಿಯಿಂದ ಹಿಡಿದು ಉನ್ನತ ಅಧಿಕಾರಿಗಳ ತನಕ ಎಲ್ಲರನ್ನು ಅಮಾನತು ಮಾಡಲಾಗಿದೆ. ಸಿಬಿಐ ತನಿಖೆಗೆ ಆದೇಶ ಮಾಡಲಾಗಿದೆ. ಸುಪ್ರೀಕೋರ್ಟ್ ನ್ಯಾಯಾಧೀಶರಿಂದ ತನಿಖೆಗೆ ಸರಕಾರ ಒಪ್ಪಿದೆ. ಇನ್ನು ಆ ಬಗ್ಗೆ ವಿಸ್ತ್ರತ ವಿಚಾರಣೆ ನಡೆದು ಇನ್ನಷ್ಟು ಸತ್ಯ ಹೊರಗೆ ಬರಲು ಇದೆ. ಅಷ್ಟೆಲ್ಲ ಆಗಿರುವಾಗ ಯೋಗಿಗೆ ಚಪ್ಪಲಿಯಿಂದ ಹೊಡೆಯುವುದು, ಮುಖಕ್ಕೆ ಮಸಿ ಬಳಿಯುವಂತಹ ಹೇಳಿಕೆಯನ್ನು ಕೊಡುವ ಮೊದಲು ಕಾಂಗ್ರೆಸ್ಸಿಗರು ನೂರು ಸಲ ಯೋಚಿಸಬೇಕು. ಇಂತಹ ಹೇಳಿಕೆಯನ್ನು ಒಬ್ಬ ಹಿರಿಯ ಕಾಂಗ್ರೆಸ್ ನಾಯಕ ಕೊಡಲು ತಯಾರಿರುವುದಿಲ್ಲ. ಆದರೆ ಕಾಲಿಪಿಲಿಗೆ ಹೇಗಾದರೂ ಮಾಡಿ ತಮ್ಮ ಒರಗೆಯ ಕೆಲಸವಿಲ್ಲದ ಯುವಕರ ಎದುರು ಮಿಂಚಬೇಕಲ್ಲ.
ಇನ್ನು ಮಿಥುನ್ ರೈ ಪ್ರಕಾರ ಯೋಗಿ ಆದಿತ್ಯನಾಥ್ ಹಿಂದೂವೇ ಅಲ್ಲವಂತೆ. ಕೂಡಲೇ ಮಿಥುನ್ ರೈಯನ್ನು ಮಾಜಿ ಮೇಯರ್ ಹರಿನಾಥ್ ಅವರಂತವರು ಕರೆದಾದರೂ ನಾಥ ಪಂಥದ ಮಹತ್ವವನ್ನು ವಿವರಿಸಬೇಕು. ಕದ್ರಿಯಲ್ಲಿ ನಾವು ಜೋಗಿಮಠ ಎಂದು ಕರೆಯುವ ನಾಥಪಂಥದ ಮಠದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಹೊಸ ಅರಸರಿಗೆ ಪಟ್ಟಾಭಿಷೇಕ ಆಗುತ್ತದೆ. ಆಗ ನಾಥ ಪಂಥಿಯರು ಗೋರಖ್ ಪುರದಿಂದ ನಡೆದುಕೊಂಡು ಕದ್ರಿಗೆ ಬರುತ್ತಾರೆ. ಯೋಗಿ ಆದಿತ್ಯನಾಥ್ ಅವರು ಎರಡು ವರ್ಷಗಳ ಹಿಂದೆ ಮಂಗಳೂರಿಗೆ ಬಂದಿದ್ದಾಗ ಕದಳಿ ಮಠದಲ್ಲಿ ನೆಲದ ಮೇಲೆಯೇ ಮಲಗಿ ರಾತ್ರಿ ಕಳೆದಿದ್ದರು. ಅವರು ಮನಸ್ಸು ಮಾಡಿದಿದ್ದರೆ ಫೈವ್ ಸ್ಟಾರ್ ಹೋಟೇಲಿನ ಮೆತ್ತನೆಯ ಹಾಸಿಗೆಯಲ್ಲಿ ರಾತ್ರಿ ಕಳೆಯಬಹುದಿತ್ತು.
ದೇಶದ ಅತೀ ದೊಡ್ಡ ರಾಜ್ಯದ ಸಿಎಂಗೆ ಅದು ಕಷ್ಟವೂ ಅಲ್ಲ. ಅವರು ಬಯಸಿದರೆ ಇಡೀ ಹೋಟೇಲ್ ಬುಕ್ ಮಾಡಲು ತಯಾರಿರುವ ಗಣ್ಯರು ಮಂಗಳೂರಿನಲ್ಲಿ ಇದ್ದರು. ಆದರೆ ನಿತ್ಯ ಪೂಜೆ, ಪುನಸ್ಕಾರದಿಂದ ಅನುಷ್ಟಾನದಲ್ಲಿರುವ ಯೋಗಿ ಆದಿತ್ಯನಾಥ್ ಅವರು ಕದಳಿ ಮಠದಲ್ಲಿಯೇ ಕೊಟ್ಟ ಆಹಾರ ಸೇವಿಸಿ ವ್ರತ ಪಾಲಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಹೊರಗೆ ಮಿಥುನ್ ರೈ ಯಾರು ಎಂದು ಯಾರಿಗೆ ಗೊತ್ತಿದೆ. ಅದೇ ಯೋಗಿ ಸಿಎಂ ಆಗುವ ಮೊದಲು ಐದು ಬಾರಿ ಸಂಸದರಾಗಿದ್ದರು. ಅರ್ಧ ಯುಪಿಯಲ್ಲಿ ಆಗಲೇ ಅವರ ಪ್ರಬಲ ಹಿಡಿತವಿತ್ತು. ಅವರು ಪ್ರಚಾರಕ್ಕೆ ಇಳಿಯದೇ ಗೆಲ್ಲುತ್ತಾ ಬಂದಿರುವ ನಾಯಕ. ಅವರ ಕಾಲು ತೊಳೆದ ನೀರನ್ನು ತೀರ್ಥ ಎಂದು ತಲೆಗೆ ಹಾಕುವ ಜನರಿದ್ದಾರೆ. ಅವರಿಗೆ ಚಪ್ಪಲಿಯಿಂದ ಹೊಡೆಯುವುದು ಬಿಡಿ, ಅವರು ಚಪ್ಪಲಿ ಬಿಡುವ ಜಾಗದಲ್ಲಿ ಗಂಟೆಗಟ್ಟಲೆ ಕಾಯುವ ರಾಜಕಾರಣಿಗಳು ಯುಪಿಯಲ್ಲಿದ್ದಾರೆ. ಮಸಿ ಬಳಿಯುವ ವಿಷಯ ಪಕ್ಕಕ್ಕೆ ಇಡಿ, ಅವರು ದೂರದಿಂದ ಬಿಸಾಡುವ ಪ್ರಸಾದವನ್ನು ಹಿಡಿದು ಮನೆಗೆ ತೆಗೆದುಕೊಂಡು ಹೋಗಿ ಮಕ್ಕಳಿಗೆ ತಿನ್ನಿಸುವ ಅಸಂಖ್ಯಾತ ಪೋಷಕರು ಯುಪಿಯಲ್ಲಿದ್ದಾರೆ. ಅಂತಹ ಯೋಗಿ ಒಂದು ಹೆಣ್ಣು ಮಗಳ ರೇಪ್ ಮತ್ತು ಸಾವಿಗೆ ಸಂಬಂಧಿಸಿದಂತೆ ಯಾರನ್ನಾದರೂ ರಕ್ಷಿಸುವ ಕೆಲಸ ಮಾಡುತ್ತಾರೆ ಎಂದು ಯೋಚಿಸುವುದೇ ತಪ್ಪು. ಪೂಜೆಗಾಗಿ ಯುಪಿ ರಾಜಧಾನಿ ಲಕ್ನೋದಿಂದ ಗೋರಖ್ ಪುರದ ತನಕ ಹೋಗಿ ನಿತ್ಯ ಪೂಜೆ ವಿಧಿವಿಧಾನವನ್ನು ಮಾಡಿಬರುವ ಯೋಗಿ ಸಣ್ಣ ವಯಸ್ಸಿನಿಂದಲೂ ಭಾಗ್ವಾ ಧರಿಸಿಯೇ ಜನಸೇವೆ ಮಾಡಿದವರು, ಈಗಲೂ ಅದೇ ಧಿರಿಸಿನಲ್ಲಿ ರಾಜ್ಯಾಭಾರ ಮಾಡುತ್ತಿದ್ದಾರೆ. ಅವರು ಪಬ್ ಹಣದಲ್ಲಿ ಮೋಜು ಮಾಡಿಲ್ಲ, ಡಿಕೆಶಿಯ ಭ್ರಷ್ಟ ಹಣದಲ್ಲಿ ಚುನಾವಣೆ ಎದುರಿಸಿಲ್ಲ, ಗೂಂಡಾಗಳನ್ನು ಬಿಟ್ಟು ತನ್ನದೇ ಪಕ್ಷದ ಯುವ ನಾಯಕರನ್ನು ಹೊಡೆಸಿಲ್ಲ. ಅಂತವರ ವಿರುದ್ಧ ಮಾತನಾಡುವಷ್ಟು ಮಿಥುನ್ ಲಾಯಕ್ ಆಗಿಲ್ಲ!
Leave A Reply