ಶಾಸಕರ ಖಾಸಗಿ ಆಸ್ಪತ್ರೆಯ ಬಿಲ್ ರಾಜ್ಯ ಸರಕಾರ ಕೊಡಲೇಬಾರದು!!
ನಮ್ಮ ಭವ್ಯ ಕರ್ನಾಟಕ ರಾಜ್ಯದಲ್ಲಿ ಪಕ್ಷಾತೀತವಾಗಿ ಕೆಲವು ಶಾಸಕರು ತಮ್ಮ ಹಾಗೂ ತಮ್ಮ ಕುಟುಂಬದವರು ಕೋವಿಡ್ 19 ಪಾಸಿಟಿವ್ ಆಗಿ ಚಿಕಿತ್ಸೆ ಪಡೆದುಕೊಂಡ ಆಸ್ಪತ್ರೆಯ ಬಿಲ್ ಅನ್ನು ಸರಕಾರ ಪಾವತಿಸಬೇಕೆಂದು ಮನವಿ ಮಾಡಿದ್ದಾರೆ. ಇದರಲ್ಲಿ ಸದ್ಯ ಅತೀ ದೊಡ್ಡ ಬಿಲ್ ಇರುವುದು ಬೆಳಗಾಂ ಉತ್ತರದ ಶಾಸಕ ಅನಿಲ್ ಬೆನಕೆ. ಇವರು ಭಾರತೀಯ ಜನತಾ ಪಾರ್ಟಿಯ ಶಾಸಕರು. ಇವರ ಮತ್ತು ಇವರ ಕುಟುಂಬದ ಆರು ಜನರ ಒಟ್ಟು ಬಿಲ್ 855856. ಅವರ ನಂತರದ ಸ್ಥಾನದಲ್ಲಿ ಇರುವವರು ನಾಗೇನಗೌಡ ಕಂದಕುರು ಇವರು ಗುರಮಿಟ್ಕಲ್ ನ ಜೆಡಿಎಸ್ ಶಾಸಕರು. ಇವರ ಮತ್ತು ಕುಟುಂಬದ ಓರ್ವ ಸದಸ್ಯನ ಒಟ್ಟು ಬಿಲ್ 552242. ನಂತರದ ಸ್ಥಾನದಲ್ಲಿರುವವರು ಬಿ.ಕೆ ಸಂಗಮೇಶ್, ಇವರು ಭದ್ರಾವತಿಯ ಕಾಂಗ್ರೆಸ್ ಶಾಸಕರು. ಇವರ ಮತ್ತು ಕುಟುಂಬದ ಓರ್ವ ಸದಸ್ಯನ ಒಟ್ಟು ಬಿಲ್ 511712. ಇಲ್ಲಿ ಮೊದಲನೇಯದಾಗಿ ನಾವು ನೋಡಬೇಕಾಗಿರುವುದು ಇವರನ್ನು ಸೇರಿಸಿ ಕನಿಷ್ಟ ಹತ್ತು ಶಾಸಕರು ಯಾರು ಬಿಲ್ ತೋರಿಸಿ ಹಣ ಕೊಡಿ ಎಂದು ಕೇಳುತ್ತಿದ್ದಾರಲ್ಲ, ಅವರು ಯಾಕೆ ಖಾಸಗಿ ಐಶಾರಾಮಿ ಆಸ್ಪತ್ರೆಗೆ ಹೋಗಿ ದಾಖಲು ಆಗಿದ್ದರು. ನಮ್ಮಲ್ಲಿ ಕೋವಿಡ್ 19 ಪಾಸಿಟಿವ್ ಆದವರು ಖಾಸಗಿ ಆಸ್ಪತ್ರೆಗೆ ಸೇರಬಾರದು ಎಂದು ನಾನು ಹೇಳುತ್ತಿಲ್ಲ. ಹಣವಿದ್ದವರು ಬೇಕಾದರೆ ಸೇರಲಿ, ಯಾಕೆಂದರೆ ಅವರ ಬಳಿ ಹಣವಿರುತ್ತದೆ. ಆದರೆ ಮಧ್ಯಮ ವರ್ಗದವರು ಅಥವಾ ಕೆಳಮಧ್ಯಮ ವರ್ಗದವರು ಇಷ್ಟು ಲಕ್ಷ ಬಿಲ್ ಆದರೆ ಕಟ್ಟುವುದು ಎಲ್ಲಿಂದ ಎನ್ನುವ ಹೆದರಿಕೆಯಿಂದ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಗುಣಮುಖರಾಗಿ ಬಿಡುಗಡೆ ಕೂಡ ಹೊಂದಿದ್ದಾರೆ. ಇದೇ ನಿಯಮ ಶಾಸಕರಿಗೂ, ಮಂತ್ರಿಗಳಿಗೂ ಅನ್ವಯವಾಗಬೇಕಲ್ಲ. ಒಂದು ವೇಳೆ ಶಾಸಕ ಅಥವಾ ಮಂತ್ರಿ ಬಳಿ ಸಾಕಷ್ಟು ಲೂಟಿದ ಹಣ ಇದ್ದರೆ ಅವರು ಆ ಹಣದಿಂದ ಖಾಸಗಿ ಆಸ್ಪತ್ರೆಯ ಐಷಾರಾಮಿ ಬೆಡ್ ಮೇಲೆ ಮಲಗಲಿ ಮತ್ತು ತಮ್ಮ ಕಿಸೆಯಿಂದಲೇ ಹಣವನ್ನು ಪಾವತಿಸಲಿ. ಅವರ ಬಿಲ್ ಸರಕಾರ ಪಾವತಿಸಲೇಬಾರದು. ಒಂದು ವೇಳೆ ಪಾವತಿಸಿದರೆ ಅದು ಮಧ್ಯಮ ವರ್ಗದವರನ್ನು ಮತ್ತು ಜನಪ್ರತಿನಿಧಿಗಳನ್ನು ಸರಕಾರ ಬೇರೆ ಬೇರೆ ತಕ್ಕಡಿಯಲ್ಲಿ ಇಟ್ಟು ನೋಡಿದ ಹಾಗೆ ಆಗುತ್ತದೆ. ಅಷ್ಟಕ್ಕೂ ಜನಪ್ರತಿನಿಧಿಗಳು ಆಕಾಶದಿಂದ ಕೆಳಗೆ ಉದುರಿದವರಲ್ಲ. ಅವರು ಜನರ ಸೇವೆ ಮಾಡಲು ಒಂದು ಅವಕಾಶ ಕೊಡಿ ಎಂದು ಮತ ಭಿಕ್ಷೆಯನ್ನು ಬೇಡಿಕೊಂಡು ನಮ್ಮ ಬಳಿ ಬಂದವರು. ನಾವು ನಮ್ಮ ಪರವಾಗಿ ಗ್ರಾಮ, ತಾಲೂಕಿನಲ್ಲಿ ಅಭಿವೃದ್ಧಿ ಮಾಡುವ ಹೊಣೆಯನ್ನು ಅವರನ್ನು ಆಯ್ಕೆ ಮಾಡುವ ಮೂಲಕ ನೀಡಿದ್ದೇವೆ ವಿನ: ನಮ್ಮ ನಾಯಕ ಎಂದು ಯಾವುದೇ ಶಾಸಕನನ್ನು ಆರಿಸಿದ್ದಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಜನಪ್ರತಿನಿಧಿಗಳು ನಮ್ಮ ಸೇವಕರು. ಯಾವಾಗ ಮಾಲೀಕರಾಗಿರುವ ಜನಸಾಮಾನ್ಯರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರಬೇಕಾದರೆ ಸೇವಕರು ಸರಕಾರಿ ಆಸ್ಪತ್ರೆಗೆ ಸೇರದೇ ಖಾಸಗಿ ಆಸ್ಪತ್ರೆಗೆ ಹೇಗೆ ದಾಖಲಾಗುತ್ತಾರೆ. ಖಾಸಗಿ ಆಸ್ಪತ್ರೆಗೆ ದಾಖಲಾದ ಸೇವಕನ ಬಿಲ್ ಅನ್ನು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಅವರ ಮಾಲೀಕ ಯಾಕೆ ಕೊಡಬೇಕು? ಒಂದು ವೇಳೆ ಯಡಿಯೂರಪ್ಪನವರ ಸರಕಾರ ಶಾಸಕ ಅಥವಾ ಮಂತ್ರಿಗಳ ಖಾಸಗಿ ಆಸ್ಪತ್ರೆಯ ಬಿಲ್ ಪಾವತಿಸಿದರೆ ಜನರಿಗೆ ಮಾಡುವ ಅನ್ಯಾಯವೆಂದೇ ಅದನ್ನು ಪರಿಗಣಿಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ಸಚಿವ ಶ್ರೀರಾಮುಲು ಅವರನ್ನು ಮೆಚ್ಚಬೇಕು. ತಮಗೆ ಕೋವಿಡ್ 19 ಪಾಸಿಟಿವ್ ಆದ ಕೂಡಲೇ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಇನ್ನು ಕೆಲವು ಶಾಸಕರು ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇನ್ನು ಕೆಲವರು ಖಾಸಗಿ ಆಸ್ಪತ್ರೆಗೆ ದಾಖಲಾದರೂ ಬಿಲ್ ಸರಕಾರಕ್ಕೆ ಕೊಡುವಷ್ಟು ಕನಿಷ್ಟ ಮಟ್ಟಕ್ಕೆ ಇಳಿದಿಲ್ಲ.
ಇದೊಂದು ಸುದ್ದಿಯಾಗಲ್ಲ ಎಂದು ಧೈರ್ಯದಿಂದ ಕೆಲವು ಶಾಸಕರು, ಸಚಿವರು ಖಾಸಗಿ ಆಸ್ಪತ್ರೆಯ ಬಿಲ್ ಕೊಟ್ಟಿರಬಹುದು. ಆದರೆ ಇವತ್ತಿನ ದಿನಗಳಲ್ಲಿ ಪ್ರತಿಯೊಂದು ವಿಷಯವೂ ಮಾಧ್ಯಮಗಳ ಮುಂದೆ ಬರುತ್ತದೆ ಎನ್ನುವುದು ಗೊತ್ತಿಲ್ಲದಷ್ಟು ಇವರು ದಡ್ಡರಲ್ಲ. ಈಗ ಮುಖ್ಯಮಂತ್ರಿ ಯಡಿಯೂರಪ್ಪನವರು ಏನು ಮಾಡಬೇಕು ಎಂದರೆ ಯಾವ ಶಾಸಕ ಅಥವಾ ಮಂತ್ರಿ ಕೂಡ ಸರಕಾರಿ ಆಸ್ಪತ್ರೆ ಬಿಟ್ಟು ಖಾಸಗಿ ಆಸ್ಪತ್ರೆಗೆ ದಾಖಲಾಗಬಾರದು ಎಂದು ನೋಟಿಸು ಕೊಡಬೇಕು. ದಾಖಲಾದರೆ ನೀವೆ ಬಿಲ್ ಕೊಡಬೇಕು ಎನ್ನಬೇಕು. ಈಗ ಬಿಲ್ ಪಾವತಿಸಲು ಮನವಿ ಮಾಡಿರುವ ಜನಪ್ರತಿನಿಧಿಗಳು ಅವರು ಮಾತ್ರವಲ್ಲ ಅವರ ಕುಟುಂಬ ಸದಸ್ಯರು ಕೂಡ ಖಾಸಗಿ ಆಸ್ಪತ್ರೆಗೆ ದಾಖಲಾದ ಬಿಲ್ ಕೊಟ್ಟಿದ್ದಾರೆ. ಇನ್ನು ಈ ಬಗ್ಗೆ ತನಿಖೆ ಕೂಡ ಆಗಬೇಕು. ಇಲ್ಲಿ ನನ್ನ ಪ್ರಕಾರ ಬಿಲ್ ಜನರಿಗೆ ಗೊತ್ತಾಗದೇ ಸೈಲೆಂಟಾಗಿ ಮಂಜೂರಾಗಲಿದೆ. ಯಾಕೆಂದರೆ ಎಲ್ಲಾ ಪಕ್ಷಗಳ ಶಾಸಕರು ಕೂಡ ಈ “ಬಿಲ್ ಪಾವತಿಸಿ” ಲಿಸ್ಟ್ ನಲ್ಲಿದ್ದಾರೆ. ಆದ್ದರಿಂದ ಯಾವ ಪಕ್ಷದ ಮುಖಂಡ ಕೂಡ ಈ ಬಗ್ಗೆ ಅಪಸ್ವರ ಎತ್ತಲಿಕ್ಕಿಲ್ಲ. ಈ ಬಗ್ಗೆ ಸರಕಾರ ನಾವು ಈ ಶಾಸಕರಿಗೆ, ಮಂತ್ರಿಗಳಿಗೆ ಹಣ ಕೊಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿಬಿಡಬೇಕು. ಯಾಕೆಂದರೆ ಸರಕಾರದ ಹಣ ಎಂದರೆ ಅದು ಜನರ ತೆರಿಗೆಯ ಹಣ. ಅದನ್ನು ಬೇಕಾಬಿಟ್ಟಿ ಪೋಲು ಮಾಡುವ ಅಧಿಕಾರ ಯಾವ ಸರಕಾರಕ್ಕೂ ಇಲ್ಲ.!!
Leave A Reply