ಕಾರಿಂಜೇಶ್ವರ ದೇವಸ್ಥಾನದ ಬುಡದಲ್ಲಿ ಅಕ್ರಮ ಗಣಿಗಾರಿಕೆ ಆಗುವಾಗ ಬಿಜೆಪಿ ಮೌನವಾಗಿರಬಾರದು!!
Tulunadu News
Posted On October 19, 2020
ತುಳುನಾಡಿನ ಪ್ರಸಿದ್ಧ ಕಾರಿಂಜೇಶ್ವರ ದೇವಸ್ಥಾನ ಕರಾವಳಿಯ ಪ್ರತಿ ಆಸ್ತಿಕಬಂಧುವಿಗೂ ಗೊತ್ತಿರುವ ಪವಿತ್ರ ಕ್ಷೇತ್ರ. ಈಗ ಆ ದೇವಸ್ಥಾನದ ಅಸ್ತಿತ್ವಕ್ಕೆ ಸಂಚಕಾರ ಬಂದಿದೆ. ನಿಮಗೆ ಗೊತ್ತಿರುವಂತೆ ಕಾರಿಂಜೆ ಕ್ಷೇತ್ರ ದೇವರೇ ನಿರ್ಮಿಸಿದ ಬೃಹತ್ ಬಂಡೆಯ ಮೇಲೆ ದೇವರ ಕೃಪೆಯಿಂದ ನಿಂತಿರುವ ಪುಣ್ಯ ಕ್ಷೇತ್ರ. ಮನುಷ್ಯನ ಕೈಯಿಂದ ಇಂತಹ ವೈಶಿಷ್ಯವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಆದರೆ ಮನುಷ್ಯ ಯಾವಾಗ ಸ್ವಾರ್ಥಿಯಾಗುತ್ತಾನೋ ಆವಾಗ ಆತ ದೇವರ ಸೃಷ್ಟಿಯನ್ನೇ ಚಾಲೆಂಜ್ ಮಾಡುತ್ತಾನೆ. ಆ ಬಳಿಕ ತಕ್ಕಪಾಠ ಕಲಿತುಕೊಳ್ಳುತ್ತಾನೆ. ಸದ್ಯ ಹೀಗೆ ದೇವರ ಸೃಷ್ಟಿ ಪುಣ್ಯ ಕ್ಷೇತ್ರ ಕಾರಿಂಜೇಶ್ವರ ದೇವಸ್ಥಾನದ ಅಸ್ತಿತ್ವಕ್ಕೆ ಸಂಚಕಾರ ತರಲು ಕಾಂಗ್ರೆಸ್ಸಿನ ಮರಿ ಪುಢಾರಿಯೊಬ್ಬರು ಹೊರಟಿದ್ದಾರೆ. ಮಾಧ್ಯಮದಲ್ಲಿ ಬಂದಂತೆ ಅವರ ಹೆಸರು ಪದ್ಮಶೇಖರ್ ಜೈನ್. ಇವರು ಮಾಜಿ ಅರಣ್ಯ ಸಚಿವರೂ, ಬಂಟ್ವಾಳದ ಮಾಜಿ ಶಾಸಕರೂ ಆಗಿರುವ ರಮಾನಾಥ್ ರೈ ಅವರ ಆಪ್ತಬಂಟ ಎಂದೇ ಹೇಳಲಾಗುತ್ತದೆ. ನಾವು ಅಲ್ಲಿ ಹೋದಾಗ ನಮಗೆ ಧಮ್ಕಿ ಹಾಕಿದ್ರು ಎಂದು ಮಾಧ್ಯಮದ ವರದಿಗಾರರೊಬ್ಬರು ಪಬ್ಲಿಕ್ ಆಗಿ ಫೋನ್ ಇನ್ ನಲ್ಲಿ ಹೇಳುತ್ತಿದ್ದ ವಿಡಿಯೋ ವೈರಲ್ ಆಗುತ್ತಿದೆ. ನನಗೆ ಭಾರತೀಯ ಜನತಾ ಪಾರ್ಟಿಯವರ ಬಗ್ಗೆ ಆಶ್ಚರ್ಯವಾಗುವುದು ಅವರ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು 15 ತಿಂಗಳು ಕಳೆದಿದೆ. ಪುರಾಣ ಪ್ರಸಿದ್ಧ ದೇವಸ್ಥಾನವೊಂದರ ಬದಿ ಕುಸಿಯುವ ತನಕ ಇವರು ಕಾಯುತ್ತಿದ್ದರಾ? ಈಗ ಅದಕ್ಕೆ ಯಾರು ಕಾರಣ ಎಂದು ಮಾಧ್ಯಮದವರು ಬಹಿರಂಗವಾಗಿ ಹೆಸರು ಹೇಳಿದ ನಂತರ ಬಿಜೆಪಿಯವರು ಸುದ್ದಿಗೋಷ್ಟಿ ಮಾಡಿ ಆ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೆವೆ ಎಂದೋ ಮತ್ತೊಂದೋ ಹೇಳಬಹುದು. ಅದು ಬೇರೆ ವಿಷಯ. ಆದರೆ ತಮ್ಮ ಸರಕಾರ ಇಲ್ಲದಿದ್ದರೂ ಕಾಂಗ್ರೆಸ್ ಪಕ್ಷದ ಜಿಲ್ಲಾ ಪಂಚಾಯತ್ ಸದಸ್ಯರೊಬ್ಬರು ತಮ್ಮ ಮಾಜಿ ಶಾಸಕರ ಹೆಸರು ಹೇಳಿ ಹವಾ ಕ್ರಿಯೇಟ್ ಮಾಡುತ್ತಾರೆ ಎಂದರೆ ಇನ್ನೇನು ಬಾಕಿ ಇದೆ.
ಹಾಗಾದ್ರೆ ರಾಜಕೀಯ ನಾಯಕರ ಆರ್ಶೀವಾದ ಇದ್ರೆ ಏನೂ ಮಾಡಬಹುದು ಎನ್ನುವುದು ಬುದ್ಧಿವಂತರ ಜಿಲ್ಲೆಯಲ್ಲಿ ಮತ್ತೆ ಸಾಬೀತಾಗಿದೆಯಾ? ಇಲ್ಲಿ ಭೂವಿಜ್ಞಾನ ಮತ್ತು ಗಣಿಗಾರಿಕೆ ಇಲಾಖೆಯ ಅಧಿಕಾರಿಗಳು ಅಕ್ರಮ ಗಣಿಗಾರಿಕೆ ಮಾಡುವವರ ಎಂಜಿಲು ಹಣವನ್ನು ನೆಕ್ಕುತ್ತಿರುವುದರಿಂದ ಯಾರೂ ಏನೂ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಇಲ್ಲಿ ಇಲಾಖೆಯ ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಲೋಕಾಯುಕ್ತರಿಗೆ ಸುಳ್ಳು ಮಾಹಿತಿ ಕೊಟ್ಟು ದಾರಿ ತಪ್ಪಿಸಿದ್ದಾರೆ. ಬಹುತೇಕ ಸಂದರ್ಭಗಳಲ್ಲಿ ಹೀಗೆ ಆಗುತ್ತದೆ. ಅಧಿಕಾರಿಗಳು ಲಂಚದ ಆಸೆಗೆ ಮೇಲಾಧಿಕಾರಿಗಳಿಗೆ ಸುಳ್ಳು ಮಾಹಿತಿ ಕೊಟ್ಟಿರುತ್ತಾರೆ. ಅದು ರಕ್ಷಿತಾರಣ್ಯದ ವ್ಯಾಪ್ತಿಯಲ್ಲಿ ಬರಲ್ಲ ಸರ್, ಅವರಿಗೆ ನಾವು ಎಲ್ಲಿ ಗಣಿಗಾರಿಕೆ ಮಾಡಲು ಸೂಚಿಸಿದ್ದೇವೊ ಅಲ್ಲಿಯೇ ಮಾಡುತ್ತಿದ್ದಾರೆ, ಕಾನೂನು ಉಲ್ಲಂಘನೆಯಾಗಿಲ್ಲ ಎಂದೇ ನಂಬಿಸಿರುತ್ತಾರೆ. ಇದನ್ನು ಜಿಲ್ಲಾಧಿಕಾರಿ ನಂಬಿರುತ್ತಾರೆ. ಲೋಕಾಯುಕ್ತರಿಗೂ ಅದೇ ಮಾಹಿತಿ ವರದಿ ಕೊಡಲಾಗುತ್ತದೆ. ಇದು ನಿಲ್ಲಬೇಕಾದರೆ ಹೀಗೆ ಅಕ್ರಮ ಗಣಿಗಾರಿಕೆ ವಿಷಯ ಮಾಧ್ಯಮಗಳಲ್ಲಿ ಬಂದ ಕೂಡಲೇ ಜಿಲ್ಲಾಧಿಕಾರಿಯವರು ಆ ಸ್ಥಳಕ್ಕೆ ಭೇಟಿ ಕೊಡಬೇಕಿತ್ತು. ಪ್ರಸ್ತುತ ಜಿಲ್ಲಾಧಿಕಾರಿಯವರು ಕೋವಿಡ್ 19 ಪಾಸಿಟಿವ್ ಆಗಿರುವುದರಿಂದ ಕ್ವಾರಂಟೈನ್ ನಲ್ಲಿ ಇದ್ದಾರೆ. ಆದರೆ ಇದು ಸದ್ಯದ ವಿಷಯ. ಆದರೆ ಈ ಗಣಿಗಾರಿಕೆ ಹತ್ತು ವರುಷಗಳಿಂದ ನಡೆಯುತ್ತಿದೆ. ಅದನ್ನು ಯಾವತ್ತೋ ನಿಲ್ಲಿಸಬೇಕಿತ್ತು. ಆದರೆ ಎರಡೂವರೆ ವರ್ಷಗಳ ಹಿಂದಿನ ತನಕ ಕಾಂಗ್ರೆಸ್ ಭದ್ರವಾಗಿ ಅಧಿಕಾರದಲ್ಲಿತ್ತು. ರಮಾನಾಥ್ ರೈ ಸಚಿವರಾಗಿದ್ದರು. ಯಾರೂ ಏನೂ ಮಾಡುವಂತಿರಲಿಲ್ಲ. ಆದರೆ ನಂತರ ಚೌಚೌ ಸರಕಾರ ಬಂತು. ಆಗ ರೈ ಮಾಜಿ ಆಗಿದ್ದರೂ ಏನೂ ಮಾಡುವಂತಿರಲಿಲ್ಲ. ಆದರೆ ಈಗ ಬಿಜೆಪಿ ಗಟ್ಟಿಯಾಗಿ ಅಧಿಕಾರದಲ್ಲಿ ಕುಳಿತಿದೆ. ಈಗಲೂ ಗಣಿಗಾರಿಕೆ ನಿರಾಂತಕವಾಗಿ ನಡೆಯುತ್ತಿದೆ ಎಂದರೆ ಇದರ ಅರ್ಥ ಏನು? ಇಲ್ಲಿ ತಕ್ಷಣ ಆಗಬೇಕಾದದ್ದು ಏನೆಂದರೆ ಜಿಲ್ಲಾಧಿಕಾರಿ ಕ್ವಾರಂಟೈನ್ ನಿಂದ ಬಂದ ಕೂಡಲೇ ಅಲ್ಲಿ ಸ್ಥಳ ಪರಿಶೀಲನೆ ಮಾಡಬೇಕು. ಅದಕ್ಕಿಂತ ಮೊದಲು ವರದಿ ತಂದು ನೋಡಬೇಕು. ಒಂದು ವೇಳೆ ಭೂವಿಜ್ಞಾನ ಮತ್ತು ಗಣಿಗಾರಿಕೆ ಅಧಿಕಾರಿಗಳು ತಪ್ಪು ಮಾಡಿದ್ರೆ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು. ಅಲ್ಲಿ ಬಂಡೆಗೆ ಡೈನಮೇಟ್ ಇಟ್ಟು ಸಿಡಿಸುವಾಗ ದೇವಸ್ಥಾನ ಕೂಡ ಅಲ್ಲಾಡಿದಂತೆ ಆಗುತ್ತದೆ ಎಂದು ಅರ್ಚಕರು ಹೇಳುತ್ತಾರಂತೆ. ಅಂತಹ ಪರಿಸ್ಥಿತಿಯಲ್ಲಿ ಪೂಜೆ, ಪುನಸ್ಕಾರಗಳು ನಡೆಯುತ್ತಿವೆ. ಕಾಂಗ್ರೆಸ್ ನವರು ಇದ್ದಾಗ ಹೀಗೆ ಆಗಿದಿದ್ರೆ ಬಿಜೆಪಿಯವರು ಅಲ್ಲಿಯೇ ಧರಣಿ ಕುಳಿತುಕೊಳ್ಳುತ್ತಿದ್ದರೋ ಏನೋ. ಈಗ ಬಿಜೆಪಿ ಆಳ್ವಿಕೆಯಲ್ಲಿ ಕಾಂಗ್ರೆಸ್ ಪುಢಾರಿಗಳು ಅಕ್ರಮ ಗಣಿಗಾರಿಕೆ ರಾಜಾರೋಷವಾಗಿ ಮಾಡುತ್ತಿದ್ದಾರೆ. ಇದನ್ನು ನಿಲ್ಲಿಸದಿದ್ದರೆ ಮೆಚ್ಚನಾ ಪರಮಾತ್ಮನು. ಅಷ್ಟಕ್ಕೂ ಜಿಲ್ಲಾ ಉಸ್ತುವಾರಿ ಸಚಿವರು ರಾಜ್ಯದ ಮುಜುರಾಯಿ ಸಚಿವರೂ ಆಗಿದ್ದಾರೆ. ಅವರ ನೇರ ಅಡಿಯಲ್ಲಿ ದೇವಸ್ಥಾನಗಳು ಬರುತ್ತವೆ. ಅವರು ಮನಸ್ಸು ಮಾಡಿದ್ರೆ ಎಷ್ಟು ಹೊತ್ತು? ದೇವರಿಗೆ ಈ ಪರಿಸ್ಥಿತಿ ದೇವರ ಹೆಸರಿನಲ್ಲಿಯೇ ಗೆದ್ದವರ ಟೈಮ್ ನಲ್ಲಿ ಬರಬಾರದಿತ್ತು!
- Advertisement -
Leave A Reply