ಚುನಾವಣಾ ಪ್ರಚಾರದಲ್ಲಿ ಬರದ ಕೊರೋನಾ ಸ್ವಲ್ಪ ಪಟಾಕಿ ಹೊಡೆದರೆ ಬರುತ್ತೆ!
Tulunadu News
Posted On November 6, 2020
ದೀಪಾವಳಿಗೆ ಈ ಬಾರಿ ಪಟಾಕಿಯನ್ನು ರಾಜ್ಯದಲ್ಲಿ ಎಲ್ಲಿಯೂ ಹೊಡೆಯಬಾರದು ಎಂದು ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಬೆಂಗಳೂರಿನಲ್ಲಿ ಕುಳಿತು ಘೋಷಣೆ ಹೊರಡಿಸಿದ್ದಾರೆ. ಈ ಮೂಲಕ ಈ ಬಾರಿ ದೀಪಾವಳಿ ಬಂದು ಹೋದದ್ದೇ ಗೊತ್ತಾಗದ ರೀತಿಯಲ್ಲಿ ಆಗಲಿದೆ. ಯಡಿಯೂರಪ್ಪನವರು ತಮ್ಮ ಈ ನಿಲುವಿಗೆ ಕೊಡುತ್ತಿರುವ ಕಾರಣ ಕೊರೋನಾ. ಕೊರೋನಾ ಪೀಡಿತರು ನಮ್ಮ ಸುತ್ತಮುತ್ತಲೂ ಇರುತ್ತಾರೆ, ಅವರಿಗೆ ಪಟಾಕಿಯಿಂದ ತೊಂದರೆಯಾಗುತ್ತದೆ ಎನ್ನುವುದು ಅವರ ಸಮಜಾಯಿಷಿಕೆ. ಆದರೆ ಇದನ್ನು ರಾಜ್ಯದಲ್ಲಿ ಸಾವರ್ತಿಕವಾಗಿ ಮಾಡುವ ಅಗತ್ಯ ಇರಲಿಲ್ಲ. ಈಗ ದೇಶದಲ್ಲಿ ಎಲ್ಲವೂ ತೆರೆದಿದೆ. ಸಿನೆಮಾ ಮಂದಿರಗಳಿಂದ ಹಿಡಿದು ಈಜುಕೊಳದ ತನಕ ಎಲ್ಲವೂ ಓಪನ್ ಆಗಿದೆ. ದೇವಸ್ಥಾನಗಳಿಂದ ಹಿಡಿದು ಮಸೀದಿ, ಚರ್ಚ್ ಕೂಡ ತೆರೆದಿದೆ. ನಾಡಿದ್ದು ಕಾಲೇಜುಗಳು ಕೂಡ ಆರಂಭವಾಗಲಿದೆ. ಅಷ್ಟೇ ಯಾಕೆ? ಶಿರಾ ಮತ್ತು ಆರ್ ಆರ್ ನಗರದಲ್ಲಿ ಈ ರಾಜಕೀಯ ಪಕ್ಷಗಳು ಮೈಮೇಲೆ ಬಿದ್ದು ಚುನಾವಣಾ ಪ್ರಚಾರ ಮಾಡಿದರಲ್ಲ, ತೆರೆದ ಲಾರಿಯಲ್ಲಿ ಇವರು ಮದುವೆಗೆ ಹೋಗುವ ಬೀಗರಂತೆ ಒಟ್ಟೊಟ್ಟಿಗೆ ನಿಂತು ಕೈಬೀಸುವುದೇನು, ರ್ಯಾಲಿಗಳಲ್ಲಿ, ಸಭೆಗಳಲ್ಲಿ ಸ್ಪರ್ಧೆಗೆ ಬಿದ್ದವರಂತೆ ಜನ ಸೇರಿಸುವುದೇನು ಒಟ್ಟಿನಲ್ಲಿ ಎಲ್ಲಾ ಚುನಾವಣೆ, ಸಭೆ ಎಲ್ಲಾ ಮುಗಿದು ಇನ್ನು ಏನೂ ಕೆಲಸ ಕೆಲವು ದಿವಸ ಇಲ್ಲ ಎಂದ ಕೂಡಲೇ ಪಟಾಕಿ ನೆನಪಾಗಿದೆ. ಸಾಮಾಜಿಕ ಅಂತರ ಮರೆತು, ಮಾಸ್ಕ್ ಧರಿಸದೇ ಪ್ರಚಾರ ಮಾಡುವಾಗ ಇವರಿಗೆ ಕೊರೊನಾ ನೆನಪಾಗಿಲ್ಲ. ಈಗ ಆಗ್ತಾ ಇದೆ. ಬೇಕಾದರೆ ಒಂದು ಕಾನೂನು ಮಾಡಲಿ. ಆಸ್ಪತ್ರೆಯ ಸುತ್ತಲೂ ಇಂತಿಷ್ಟೇ ಅಂತರದಲ್ಲಿ ಪಟಾಕಿ ಹೊಡೆಯಬಾರದು, ಕ್ವಾರಂಟೈನ್ ಕೇಂದ್ರಗಳ ಹತ್ತಿರ ಹೊಡೆಯಬಾರದು, ಸೀಲ್ ಡೌನ್, ಹಾಟ್ ಸ್ಪಾಟ್, ಬಫರ್ ಝೋನ್ ಹೀಗೆ ಇತ್ತಲ್ಲ, ಅಂತಹ ಜಾಗದ ಸುತ್ತಮುತ್ತಲೂ ಪಟಾಕಿ ಹೊಡೆಯಬಾರದು ಎಂದು ಹೇಳಲಿ. ಅದು ಬಿಟ್ಟು ಪಟಾಕಿ ಮುಟ್ಟುವಂತಿಲ್ಲ ಎನ್ನುವ ಅರ್ಥದ ಘೋಷಣೆಯನ್ನು ಯಾವ ಆಧಾರದಲ್ಲಿ ನೀಡಿದ್ದಿರಿ ಮುಖ್ಯಮಂತ್ರಿಗಳೇ. ಒಂದು ಮನೆಯಲ್ಲಿ ಕೊರೊನಾ ಸೊಂಕೀತರು ಇದ್ದರೆ ಅಲ್ಲಿ ಪಟಾಕಿ ಹೊಡೆಯುವುದಿಲ್ಲ. ಒಂದು ಮನೆಯಲ್ಲಿ ಶ್ವಾಸಕೋಶದ, ಹೃದಯದ ಸಮಸ್ಯೆ ಇದ್ದವರು ದೀಪಾವಳಿ ಸಮಯದಲ್ಲಿ ತಮ್ಮ ಎಚ್ಚರಿಕೆಯನ್ನು ತಾವು ತೆಗೆದುಕೊಳ್ಳುತ್ತಾರೆ ವಿನ: ಮನೆಯ ಮಕ್ಕಳಿಗೆ, ಯುವಕರಿಗೆ ಪಟಾಕಿ ಹೊಡೆಯಬೇಡಿ ಎಂದು ಹೇಳಿ ಅವರ ಖುಷಿಗೆ ಭಂಗ ತರುವುದಿಲ್ಲ. ದೀಪಾವಳಿ ಇರುವುದೇ ಒಂದಿಷ್ಟು ಪಟಾಕಿ ಹೊಡೆದು ಸಂಭ್ರಮಿಸಲಿಕ್ಕೆ. ಈಗ ಎಪ್ರಿಲ್ ನಲ್ಲಿ ಇದ್ದದ್ದೇ ಲಾಕ್ ಡೌನ್ ಇದ್ದಿದ್ದರೆ ಅದು ಬೇರೆ ವಿಷಯ. ಆದರೆ ವ್ಯಾಪಾರ-ವಹಿವಾಟುಗಳೆಲ್ಲವೂ ತೆರೆದಿವೆ. ಜನ ಮತ್ತೆ ಮುಖ್ಯ ವಾಹಿನಿಗೆ ಮರಳುತ್ತಿದ್ದಾರೆ. ಹಾಗಿರುವಾಗ ಮುಂಜಾಗ್ರತೆಯೊಂದಿಗೆ ಆಚರಿಸಿ ಎಂದು ಹೇಳುವ ಬದಲು ಪಟಾಕಿಯನ್ನೇ ನಿಷೇಧಿಸಲಾಗಿದೆ.
ಅಲ್ಲಿ ದೆಹಲಿಯಲ್ಲಿ ಪಟಾಕಿ ಸುಡುವುದನ್ನು ಅಲ್ಲಿನ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಿಷೇಧ ಮಾಡಿರಬಹುದು. ದೆಹಲಿಯಲ್ಲಿ ವಿಪರೀತವಾದ ವಾಯುಮಾಲಿನ್ಯ ಇದೆ. ಚಳಿಗಾಲದಲ್ಲಿ ಅಲ್ಲಿ ದಟ್ಟನೆಯ ಮಂಜು ಕೂಡ ಉಂಟಾಗುತ್ತದೆ. ಕೊರೊನಾ ಸೋಂಕಿತರ ಸಂಖ್ಯೆಯ ನೆಪದಲ್ಲಿ ಕೇಜ್ರಿವಾಲ್ ತೆಗೆದುಕೊಂಡಿರುವ ನಿರ್ಧಾರವನ್ನು ಕಾಂಗ್ರೆಸ್ ಸರಕಾರಗಳಿರುವ ರಾಜಸ್ಥಾನ ಮತ್ತು ಮೈತ್ರಿ ಸರಕಾರವಿರುವ ಮಹಾರಾಷ್ಟ್ರ ಸರಕಾರ ಕೂಡ ತೆಗೆದುಕೊಂಡಿರಬಹುದು. ಹಾಗಂತ ದೀಪಾವಳಿ ಹಿಂದೂಗಳ ಸಂಭ್ರಮದ ಹಬ್ಬ. ಈ ಹಬ್ಬ ಹತ್ತಿರ ಬರುವಾಗಲೇ ಕೆಲವು ನಟಿಯರಿಗೆ ಜೋರಾಗಿ ಅಸ್ತಮಾದ ನೆನಪಾಗುತ್ತದೆ. ಅಲ್ಲಿಯ ತನಕ ಅವರು ಎಷ್ಟೇ ಸಿಗರೇಟು ಸೇದಿರಲಿ, ಅವರಿಗೆ ನೆನಪಿರುವುದಿಲ್ಲ. ದೀಪಾವಳಿ ಬರುವಾಗ ಟ್ವಿಟರ್, ಫೇಸ್ ಬುಕ್ ನಲ್ಲಿ ತಮ್ಮ ಹಿಂದೂ ವಿರೋಧಿ ನೀತಿಯನ್ನು ಹೊರಹಾಕುವ ಇವರು ಕ್ರಿಸ್ಮಸ್ ಬರುವಾಗ ಈ ಬಗ್ಗೆ ಒಂದು ಚೂರು ಕೂಡ ಕೆಮ್ಮುವುದಿಲ್ಲ. ಆಗ ಯಾವ ರಾಜ್ಯವೂ ಪಟಾಕಿ ಸುಡುವುದನ್ನು ನಿಷೇಧಿಸುವ ಧೈರ್ಯ ಮಾಡುವುದಿಲ್ಲ. ಎಲ್ಲಿಯಾದರೂ ಕ್ರೈಸ್ತರು ಬೇಸರಗೊಳ್ಳುತ್ತಾರಾ ಎನ್ನುವ ಆತಂಕ ಇದ್ದೇ ಇರುತ್ತದೆ. ಒಂದು ವೇಳೆ ವಾಯು ಮಾಲಿನ್ಯದಿಂದ ಕೊರೊನಾ ಸೋಂಕಿತರಿಗೆ ತೊಂದರೆ ಆಗುತ್ತದೆ ಎನ್ನುವುದಾದರೆ ರಾಜ್ಯದಲ್ಲಿ ಎಲ್ಲವನ್ನು ಇಲೆಕ್ಟ್ರಿಕಲ್ ವಾಹನಗಳನ್ನಾಗಿ ಮಾಡಬಹುದಲ್ಲ. ಯಾಕೆ ಆಗಲ್ವಾ? ಭಯಾನಕ ವಿಷ ವಾಂತಿ ಮಾಡುವ ಕಾರ್ಖಾನೆಗಳಿಂದ ವಾಯುಮಾಲಿನ್ಯ ಆಗುವುದಿಲ್ಲವೇ? ಅದನ್ನು ಯಾರೂ ಯಾಕೆ ಬಂದ್ ಮಾಡುವುದಿಲ್ಲ. ಫ್ಯಾಕ್ಟರಿಗಳು ಇರಲಿ, ವಾಹನಗಳು ಹೆಚ್ಚೆಚ್ಚು ಖರೀದಿಯಾಗುತ್ತಿವೆ ಎಂದು ಸಂಭ್ರಮಿಸುವ ಸರಕಾರಗಳು ಇದರಿಂದ ಆರ್ಥಿಕ ಚೈತನ್ಯ ಸಿಗುತ್ತದೆ ಎಂದು ಭಾವಿಸಿಕೊಂಡಿರುವಾಗ ಪಟಾಕಿಗಳಿಂದ ದೇಶದಲ್ಲಿ ಏನೋ ಆಗಬಾರದ್ದು ಆಗಿ ಹೋಗುತ್ತದೆ ಎಂದು ಭ್ರಮಿಸಲು ಶುರು ಮಾಡಿವೆ. ಸ್ವಲ್ಪ ಪಟಾಕಿ ಹೊಡೆಯುವುದರಿಂದ ಕೊರೊನಾ ಸೋಂಕಿತರು ಸಾಯುತ್ತಾರೆ ಎನ್ನುವ ಯಾವ ವೈಜ್ಞಾನಿಕ ತಳಹದಿ ಕೂಡ ಇವರ ಬಳಿ ಇಲ್ಲ. ಆದರೆ ದೆಹಲಿಯಲ್ಲಿ ನಿಷೇಧ ಮಾಡಿದ ಕಾರಣ ನಾವು ಮಾಡೋಣ ಎಂದು ಹಿಂದೂ ಧರ್ಮದ ಆಧಾರದಲ್ಲಿ ಮತ ಕೇಳಿ ಅಧಿಕಾರದ ಗದ್ದುಗೆ ಏರಿರುವ ನಮ್ಮ ಸರಕಾರ ಹೀಗೆ ಮಾಡುತ್ತಿದೆ. ಒಂದು ವೇಳೆ ಇದನ್ನೇ ಕಾಂಗ್ರೆಸ್ ಮಾಡಿದಿದ್ದರೆ ಇದೇ ಬಿಜೆಪಿಯವರು ಹಿಂದೂ ವಿರೋಧಿ ಎಂದು ಸುದ್ದಿಗೋಷ್ಟಿ ಮಾಡಿ ಹೇಳುತ್ತಿದ್ದರು. ಈಗ ಅದನ್ನು ತಾವೇ ಮಾಡುತ್ತಿದ್ದಾರೆ. ಯಾಕೆಂದರೆ ಬಹುಸಂಖ್ಯಾತ ಹಿಂದೂಗಳು ಮಾತನಾಡುವುದಿಲ್ಲ. ಎಷ್ಟೆಂದರೂ ಹಿಂದೂಗಳು ಸಹಿಷ್ಣುತೆಯನ್ನು ಕುಡಿದು ಅರಗಿಸಿಕೊಂಡಿದ್ದಾರೆ!
- Advertisement -
Leave A Reply