ನೀವು ಕಟ್ಟಿದ ರಸೀದಿ ಮತ್ತು ಆ ಪುಸ್ತಕ ತೆಗೆದುಕೊಂಡು ಬನ್ನಿ… ತಾಳೆ ಆಗುತ್ತಾ ನೋಡೋಣ…
ಒಂದು ತಿಂಗಳು ಕಳೆದು ಹೋಯಿತು. ಮಂಗಳೂರು ಮಹಾನಗರ ಪಾಲಿಕೆಯ ಪರಿಷತ್ ನಲ್ಲಿ ಮಂಗಳೂರು ಒನ್ ನ ಮೂರು ಕೋಟಿ ಗೋಲ್ ಮಾಲ್ ಬಗ್ಗೆ ಧ್ವನಿ ಎತ್ತಿದವರಿಗೆ ಈ ಗೋಲ್ ಮಾಲ್ ಎಲ್ಲಿಂದ ಪ್ರಾರಂಭವಾಗಿತ್ತು ಎನ್ನುವುದೇ ಗೊತ್ತಿರಲಿಲ್ಲ.
ಪತ್ರಿಕೆಯೊಂದರಲ್ಲಿ ಬಂದ ವರದಿಯನ್ನು ಎತ್ತಿ ಬೊಬ್ಬೆ ಹೊಡೆದವರಿಗೆ ಅದರ ತಲೆ ಬುಡದ ಪರಿಚಯವೇ ಇರಲಿಲ್ಲ. ಹಾಗಿದ್ದ ಮೇಲೆ ಗೋಲ್ ಮಾಲ್ ಬಗ್ಗೆ ವರದಿ ಹೇಗೆ ಕೊಡುವುದು? ಭಾರತೀಯ ಜನತಾ ಪಕ್ಷದ ಸದಸ್ಯ ವಿಜಯಕುಮಾರ್ ಶೆಟ್ಟಿ ನೇತೃತ್ವದ ಸಮಿತಿ ನಮಗೆ ಒಂದು ತಿಂಗಳೊಳಗೆ ಆ ಬಗ್ಗೆ ವರದಿ ಕೊಡಲು ಆಗುವುದಿಲ್ಲ ಎಂದು ಕೈ ಎತ್ತಿ ಬಿಟ್ಟಿತ್ತು. ಒಂದು ತಿಂಗಳು ಬಿಡಿ, ಇವರಿಗೆ ಒಂದು ವರ್ಷ ಕೊಟ್ಟರೂ ಆಗುತ್ತಿರಲಿಲ್ಲ. ನಾನು ನಿನ್ನೆಯೇ ಹೇಳಿದಂತೆ ಆಗ ಮನಪಾದಲ್ಲಿ ಮೇಯರ್ ಆಗಿದ್ದವರು ಮಹಾಬಲ ಮಾರ್ಲ. ಅವರು ಬುದ್ಧಿವಂತಿಕೆ ಉಪಯೋಗಿಸಿದರು. ಅವರು ಒರ್ವ ಅಡಿಟರ್ ಅನ್ನು ನೇಮಿಸಿ, ಮಂಗಳೂರು ಓನ್ ನಲ್ಲಿ ಆದ ಹಣದ ಗೋಲ್ ಮಾಲ್ ಬಗ್ಗೆ ವರದಿ ತಯಾರಿಸಿ ಒಪ್ಪಿಸುವಂತೆ ಆದೇಶ ನೀಡಿದರು. ಅವರು ಹೀಗೆ ಮಾಡುವ ಮೂಲಕ ತಾನು ಬುದ್ಧಿವಂತ ಎಂದು ತೋರಿಸಲು ಹೋಗಿದ್ದರು. ಆದರೆ ಅದಕ್ಕಿಂತ ದೊಡ್ಡ ಮೂರ್ಖತನ ಬೇರೆ ಇಲ್ಲ ಎನ್ನುವುದು ಅವರಿಗೆ ಗೊತ್ತಿರಲಿಲ್ಲ. ಯಾಕೆ ಗೊತ್ತಾ?
ಅಡಿಟರ್ ಗೆ ಒಂದು ಸಂಸ್ಥೆಯ ಲೆಕ್ಕ ಸಿಗುವುದು ಅಲ್ಲಿ ದಾಖಲೆಗಳು ಎಂಟ್ರಿ ಆದರೆ ಮಾತ್ರ. ಇಲ್ಲಿ ಮಂಗಳೂರು ಒನ್ ನಲ್ಲಿ ನಾಗರಿಕರು ಕಟ್ಟಿದ ತೆರಿಗೆ ಹಣವನ್ನು ಇವರು ಕಂಪ್ಯೂಟರಿನಲ್ಲಿ ಎಂಟ್ರಿ ಮಾಡಿದ್ದರೆ ಅದೊಂದು ದಾಖಲೆ ಆಗುತ್ತಿತ್ತು. ಆಗ ಅದರ ಲೆಕ್ಕದ ಅಂದಾಜು ಸಿಗುತ್ತಿತ್ತು. ಆದರೆ ಇಲ್ಲಿ ಜನರಿಂದ ಪಡೆದ ಹಣದ ಎಂಟ್ರಿಯೇ ಇರಲಿಲ್ಲ. ಹಣದ ಎಂಟ್ರಿಯೇ ಇಲ್ಲದಿದ್ದರೆ ಲೆಕ್ಕ ಹೇಗೆ ಸಿಗುತ್ತದೆ. ಇವತ್ತಿಗೂ ಮಂಗಳೂರು ಒನ್ ನಲ್ಲಿ ಸರಿಯಾಗಿ ಎಷ್ಟು ಕೋಟಿ ಗೋಲ್ ಮಾಲ್ ಆಗಿದೆ ಎನ್ನುವುದರ ಲೆಕ್ಕ ಹಿಡಿಯಲು ಆಗಿಲ್ಲ.
ಒಂದು ಕಡೆ ಲೆಕ್ಕ ಹಿಡಿಯಲು ಆಗಿಲ್ಲ ಮತ್ತೊಂದೆಡೆ ಲೆಕ್ಕ ಹಿಡಿಯುವ ಅಗತ್ಯವೂ ಪಾಲಿಕೆಗೆ ಇಲ್ಲ. ಬಹುಶ: ಸರಿಯಾದ ಲೆಕ್ಕ ಸಿಕ್ಕಿದರೆ ಅದರಿಂದ ಎಷ್ಟು ಜನ ಒಳಗೆ ಹೋಗುವ ಸಾಧ್ಯತೆ ಇದೆಯೊ, ಯಾರಿಗೆ ಗೊತ್ತು. ಮನಪಾಗೆ ಈ ಲೆಕ್ಕ ಕಂಡು ಹಿಡಿದು ಏನೂ ಆಗಬೇಕಿಲ್ಲ. ಯಾಕೆಂದರೆ ಒಳಗೆ ಹಾಕಿದ ಜನರ ತೆರಿಗೆಯ ಹಣದಲ್ಲಿ ಯಾರಿಗೆ ಎಷ್ಟು ಪಾಲು ಹೋಗಿದೆಯೋ ಅಷ್ಟು ಹೋಗಿ ಆಗಿದೆ. ಅದಕ್ಕಾಗಿ ಯಾರು ಕೂಡ ಆ ಬಗ್ಗೆ ತಲೆಬಿಸಿ ಮಾಡಿಕೊಂಡಿಲ್ಲ. ಹಾಗಂತ ಆ ಮೂರು ಕೋಟಿ ಏನು ಗೋಲ್ ಮಾಲ್ ಆಗಿದೆ, ಅದರ ಲೆಕ್ಕ ಸಿಗುವುದೇ ಇಲ್ಲ ಎಂದಲ್ಲ. ಮನಸ್ಸು ಮಾಡಿದರೆ ಅದನ್ನು ಕಂಡುಹಿಡಿಯಬಹುದು. ಆದರೆ ಹೇಗೆ ಎನ್ನುವುದೇ ಪ್ರಶ್ನೆ. ಸರಿ, ಅದಕ್ಕೂ ನಾನು ಪರಿಹಾರ ಕೊಡುತ್ತೇನೆ. ನಾನು ಹೇಳಿದ ರೀತಿಯಲ್ಲಿ ಇವರು ಮಾಡಿದರೆ ಯಾರು ಹಣ ನುಂಗಿದ್ದಾರೆ ಅದನ್ನು ಅವರಿಂದ ಕಕ್ಕಿಸಬಹುದು.
ಮೊದಲಿಗೆ 2007-08 ರಿಂದ ಎಷ್ಟು ಕಟ್ಟಡ ಸಂಖ್ಯೆ ಇದೆಯೊ ಅಷ್ಟು ಕಟ್ಟಡದ ಮಾಲೀಕರಲ್ಲಿ 2007-08ರಿಂದ2014-15ರವರೆಗೆಯಾರ ಯಾರದು ಟ್ಯಾಕ್ಸ್ ಬಾಕಿ ಇದೆ ಅವರಿಗೆ ಪಾಲಿಕೆಯಿಂದ ಸೂಚನಾ ಪತ್ರ ಕಳುಹಿಸಿ ಇಂತಹ ವರ್ಷಗಳ ನೀವು ಸ್ವಯಂಘೋಷಿತ ಆಸ್ತಿ ತೆರಿಗೆ ಕಟ್ಟಿದ ರಸೀದಿಯ ನಕಲು ಪ್ರತಿಯನ್ನು ತೆಗೆದುಕೊಂಡು ಬನ್ನಿ. ಅದನ್ನು ಮನಪಾದಲ್ಲಿ ಒಪ್ಪಿಸಿ ಹಿಂಬರಹ ಪಡೆದುಕೊಂಡು ಹೋಗಿ. ಅಷ್ಟೂ ಕಟ್ಟಡಗಳ ಮಾಲೀಕರು ಅದನ್ನು ತೆಗೆದುಕೊಂಡು ಬಂದ ನಂತರ ಒಂದು ದಿನ ಅದನ್ನು ಒಟ್ಟು ಮಾಡಿ ಲೆಕ್ಕ ಹಾಕಿದರೆ ಪಾಲಿಕೆಗೆ ಬರಬೇಕಾಗಿರುವ ನಿಜವಾದ ಮೊತ್ತ ಮತ್ತು ಈಗ ವಂಚನೆ ಆಗಿರುವ ಮೊತ್ತದ ಒಂದು ಅಂದಾಜು ಸಿಗುತ್ತದೆ. ಅಷ್ಟಕ್ಕೂ ಈಗ ಪಾಲಿಕೆಗೆ ಆಗಿರುವ ನಷ್ಟದಿಂದ ವೈಯಕ್ತಿಕವಾಗಿ ಯಾರಿಗೂ ಬೇಸರವಿಲ್ಲ. ಯಾಕೆಂದರೆ ಅದು ಪಬ್ಲಿಕ್ ಹಣ. ಬರದಿದ್ದರೆ ತಮಗೇನೂ ಎನ್ನುವಂತಹ ಸದಸ್ಯರು ಹಾಗೂ ಅಧಿಕಾರಿಗಳು ಇರುವುದರಿಂದ ಅದು ಹಿಂದಕ್ಕೆ ಬರುವ ಸಾಧ್ಯತೆಯೂ ಇಲ್ಲ. ಏಕೆಂದರೆ ಜನರಿಗೆ ಮಾತ್ರ ಇದರಿಂದ ತುಂಬಾ ತೊಂದರೆ ಆಗುತ್ತದೆ. ಹೇಗೆಂದರೆ ಮುಂದಿನ ಬಾರಿ ತೆರಿಗೆ ಕಟ್ಟಿದ ನಾಗರಿಕರು ಪಾಲಿಕೆಗೆ ಬೇರೆ ಕೆಲಸಕ್ಕೆ ಬಂದಾಗ ನೀವು ಈ ವರ್ಷದ ತೆರಿಗೆ ಕಟ್ಟಿಲ್ಲ, ಆ ವರ್ಷದ ತೆರಿಗೆ ಕಟ್ಟಿಲ್ಲ ಎಂದು ನಿಮ್ಮನ್ನೇ ಪಾಲಿಕೆಯ ಸಿಬ್ಬಂದಿಗಳು ಪ್ರಶ್ನೆ ಮಾಡಬಹುದು. ಕಟ್ಟಿಲ್ಲ ಎಂದರೆ ಏನು, ನಾನು ಕಟ್ಟಿದ್ದೇನೆ ಎಂದು ನೀವು ವಾದ ಮಾಡುವ ಹಾಗಿಲ್ಲ, ಏಕೆಂದರೆ ನೀವು ಹಣ ಕಟ್ಟಿದ್ದು ಕಂಪ್ಯೂಂಟರಿನಲ್ಲಿ ಎಂಟ್ರಿಯೇ ಆಗಿಲ್ಲ. ಆದರೆ ಇಲ್ಲಿಯ ತನಕ ಮಂಗಳೂರು ಒನ್ ಗೆ ಒಂದೇ ಒಂದು ನೋಟಿಸು ನೀಡಿಲ್ಲ . ಈವರೆಗೆ ಒಂದೆ ಒಂದು ರೂಪಾಯಿಯನ್ನು ಪಾಲಿಕೆ ವಸೂಲಿ ಮಾಡಿಲ್ಲ ಈ ಗೋಲ್ ಮಾಲ್ ಬೆಳಕಿಗೆ ಬಂದ ಬಳಿಕ ಹಣ ಕಟ್ಟಿದ್ದಕ್ಕೆ ರಸೀದಿ ಕ್ಲಪ್ತವಾಗಿ ಕೊಡಲಾಗುತ್ತಿದೆ. ಆದರೆ ಹಿಂದೆ ಒಳಗೆ ಹಾಕಿದ ಹಣ ಎಲ್ಲಿಗೆ ಹೋಯಿತು, ಯಾವುದಾದರೂ ಒಬ್ಬ ಸಿಬ್ಬಂದಿ ಮಾಡಿದ್ದ ಎಂದುಕೊಂಡರೂ ನೋಡುವಾಗ ಎಲ್ಲರೂ ಕಳ್ಳರಂತೆ ಅಂದುಕೊಳ್ಳಬೇಕಾಗುತ್ತದೆ. ಇಷ್ಟು ಗೋಲ್ ಮಾಲ್ ಆದರೂ ಪಾಲಿಕೆ ಈ ಬಗ್ಗೆ ಸರಕಾರಕ್ಕೆ ವರದಿ ನೀಡಿಲ್ಲ. ಹಾಗಿದ್ದ ಮೇಲೆ ಈ ಗೋಲ್ ಮಾಲ್ ಹಿಂದಿರುವವರು ಯಾರು?ಈಗಿನ Dynamic ಮೇಯರ್ ದಿವಾಕರ್ ಪಾಂಡೇಶ್ವರ್ ರವರು ಈ ಗೋಲ್ ಮಾಲ್ ಮಾಡಿದವರಿಂದ ತೆರಿಗೆ ಹಣ ವಸೂಲಿ ಮಾಡಲು ಮನಸ್ಸು ಮಾಡುವರೆ?.
Leave A Reply