ಎಸ್ ಪಿ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ಗಲಭೆಗೆ ಸಂಚು!!

ಉಜಿರೆಯಲ್ಲಿ ಮತ ಎಣಿಕೆಯ ಬಳಿಕ ನಡೆದ ವಿಜಯೋತ್ಸವದಲ್ಲಿ ಎಸ್ ಡಿಪಿಐಯವರು ಪಾಕ್ ಜಿಂದಾಬಾದ್ ಘೋಷಣೆ ಮಾಡಿರುವುದು, ಆ ಬಗ್ಗೆ ತಪ್ಪಿತಸ್ಥರನ್ನು ಪೊಲೀಸರು ಬಂಧಿಸಿರುವುದು ಎಲ್ಲವೂ ನಮಗೆ ಗೊತ್ತೆ ಇದೆ. ಆದರೆ ಮೂರು ದಿನಗಳ ಒಳಗೆ ಆರೋಪಿಗಳನ್ನು ಬಿಡದಿದ್ದರೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಸ್ ಡಿಪಿಐ ಮುಖಂಡರು ಸುದ್ದಿಗೋಷ್ಟಿ ಮಾಡಿ ಹೇಳಿದ್ದಾರೆ. ಇದನ್ನು ಅಹಂಕಾರ ಎನ್ನುವುದಾ? ನಾವು ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಹೆದರುವುದಿಲ್ಲ ಎನ್ನುವ ಸಂದೇಶನಾ? ಹಾಗಾದರೆ ಎಸ್ ಡಿಪಿಐಯವರು ಕಾನೂನಿಗೆ ಹೆದರುವುದಿಲ್ಲವಾ? ಈಗ ವಿಷಯ ಇರುವುದು ಹಾಗಾದರೆ ನಮ್ಮದೇನೂ ಅರಾಜಕತೆ ಶುರುವಾಯಿತಾ? ಒಂದು ಪಕ್ಷ ಅದು ಕೂಡ ಇಡೀ ಜಿಲ್ಲೆಯಲ್ಲಿ ಒಂದೇ ಒಂದು ಶಾಸಕರು ಇಲ್ಲದ ಪಕ್ಷ, ಇಡೀ ಪಾಲಿಕೆಯಲ್ಲಿ ಒಬ್ಬ ಸದಸ್ಯನನ್ನು ಹೊಂದಿರುವ ಪಕ್ಷ, ಕೆಲವು ಗ್ರಾಮ ಪಂಚಾಯತ್ ಸೀಟುಗಳನ್ನು ಗೆದ್ದ ಕೂಡಲೇ ನಾವು ಎಸ್ ಪಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಸುದ್ದಿಗೋಷ್ಟಿ ಮಾಡಿ ಹೇಳುವ ಮಟ್ಟಿಗೆ ಬೆಳೆದಿದೆ ಎಂದರೆ ಈ ಪಕ್ಷ ಇನ್ನಷ್ಟು ಬೆಳೆದರೆ ಮುಂದೆ ನಿಜಕ್ಕೂ ಅರಾಜಕತೆ ಸೃಷ್ಟಿಯಾಗಲಿದೆ. ಎಸ್ ಡಿಪಿಐ ಎನ್ನುವುದು ಕಾಂಗ್ರೆಸ್ಸಿನಿಂದ ಸಿಡಿದು ಹೋದ ಕಟ್ಟರ್ ಮೂಲಭೂತವಾದಿಗಳ ಪಕ್ಷ. ಕಾಂಗ್ರೆಸ್ ಯಾವಾಗ ಮೃಧು ಹಿಂದೂತ್ವ ಮತ್ತು ಅಲ್ಪಸಂಖ್ಯಾತ ತುಷ್ಟೀಕರಣದ ನಾಟಕದ ನಡುವೆ ತಾನು ಯಾವ ನಿಲುವು ತಳೆಯಬೇಕು ಎನ್ನುವ ಗೊಂದಲಕ್ಕೆ ಬಿದ್ದಾಗ ಭ್ರಮನಿರಸನಗೊಂಡ ಮುಸ್ಲಿಂ ಸಂಘಟನೆಗಳು ಜನ್ಮ ನೀಡಿದ್ದೇ ಎಸ್ ಡಿಪಿಐಯನ್ನು. ಆರಂಭದಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಅಧಿಕಾರದಿಂದ ದೂರ ಇಡಬೇಕೆಂಬ ಉದ್ದೇಶದಿಂದ ಎಸ್ ಡಿಪಿಐ ತನ್ನ ನಿಲುವನ್ನು ಧೃಡಗೊಳಿಸಿತ್ತಾದರೂ ನಂತರ ಪಕ್ಷ ಬೆಳೆದಂತೆ ಮುಖಂಡರು ಅನುಕೂಲವಾದರು. ಹಲವು ಕಡೆ ವಿಧಾನಸಭಾ ಚುನಾವಣೆಗೆ ತಮ್ಮ ಅಭ್ಯರ್ಥಿಗಳನ್ನು ಹಾಕಿ ನಂತರ ಕೊನೆಯ ಕ್ಷಣದಲ್ಲಿ ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳುವ ಚಾಳಿ ಆರಂಭವಾದ ನಂತರ ಎಸ್ ಡಿಪಿಐ ಬಗ್ಗೆ ಮೊದಲಿದ್ದ ನಂಬಿಕೆ ಹೊರಟು ಹೋಯಿತು. ಈ ಹಂತದಲ್ಲಿ ಕಾರ್ಯಕರ್ತರಿಗೆ ಅತ್ತ ಅಧಿಕಾರವೂ ಇಲ್ಲದೆ, ಇತ್ತ ತಮ್ಮ ಪಕ್ಷದ ಮುಖಂಡರು ಮಾತ್ರ ಆರ್ಥಿಕವಾಗಿ ಬೆಳೆಯುತ್ತಿರುವುದು ನೋಡಿ ಈ ಪಕ್ಷದ ಬಗ್ಗೆ ಕಾರ್ಯಕರ್ತರಿಗೆನೆ ಅಸಹ್ಯ ಮೂಡುತ್ತಿದೆ. ಆದರೆ ಕಾಂಗ್ರೆಸ್ಸ್ ಬಹುತೇಕ ಸರಿಯಾದ ನಾಯಕತ್ವ ಇಲ್ಲದೆ ಸೊರಗುತ್ತಿರುವುದರಿಂದ ಮತ್ತು ಪ್ರತಿ ನಾಯಕನಿಗೊಂದು ಗುಂಪು ಇರುವುದರಿಂದ ಕಾಂಗ್ರೆಸ್ ಅಲ್ಪಸಂಖ್ಯಾತ ಮತದಾರರು ಗ್ರಾಮ ಪಂಚಯತ್ ನಲ್ಲಿ ಬಿಜೆಪಿ ಪರ ಬೆಂಬಲಿತರಿಗೆ ಮತ ಹಾಕಲು ಆಗದೇ ಎಸ್ ಡಿಪಿಐ ಬೆಂಬಲಿತರಿಗೆ ಮತ ನೀಡಿರಬಹುದು. ಹಾಗಂತ ಇದು ಎಸ್ ಡಿಪಿಐ ಗೆಲುವಲ್ಲ. ಆದರೆ ಇದನ್ನೇ ಗೆಲುವು ಎಂದು ಭ್ರಮಿಸಿರುವ ಪಕ್ಷದ ಕಾರ್ಯಕರ್ತರು ತಮ್ಮ ಶಕ್ತಿ ಬೆಳೆದಿದೆ ಎನ್ನುವ ಉತ್ಸಾಹದಿಂದ ಮೊನ್ನೆ ಉಜಿರೆಯಲ್ಲಿ ಮತ ಎಣಿಕೆಯ ಕೇಂದ್ರದ ಹೊರಗೆ ಸಂಭ್ರಮಿಸಿದ್ದಾರೆ. ಅವರು ಸಂಭ್ರಮಿಸುವುದು ತಪ್ಪಲ್ಲ, ತಮ್ಮ ಪಕ್ಷದ ಪರ ಘೋಷಣೆ ಕೂಗುವುದು ಕೂಡ ತಪ್ಪಲ್ಲ. ಅದೇ ಜಾಗದಲ್ಲಿ ಬಿಜೆಪಿ ಕಾರ್ಯಕರ್ತರು ಕೂಡ ತಮ್ಮ ಭರ್ಜರಿ ಗೆಲುವನ್ನು ಸಂಭ್ರಮಿಸುತ್ತಿದ್ದರು. ಬಿಜೆಪಿಗರು ಭಾರತ್ ಮಾತಾ ಕೀ ಜೈ ಎನ್ನುವುದು ಸಾಮಾನ್ಯ, ಆದರೆ ಅಲ್ಲಿ ಎಸ್ ಡಿಪಿಐ ಕಾರ್ಯಕರ್ತರು ಪಾಕ್ ಜಿಂದಾಬಾದ್ ಘೋಷಣೆ ಕೂಗಿದರು ಎನ್ನುವ ವಿಡಿಯೋ ವೈರಲ್ ಆಗಿದೆ. ಒಂದು ವೇಳೆ ಅದು ಸುಳ್ಳು ವಿಡಿಯೋ ಎಂದಾದರೆ ಎಸ್ ಡಿಪಿಐ ವಕೀಲರು ತಮ್ಮ ಕಕ್ಷಿದಾರರ ಪರ ವಾದಿಸುವಾಗ ಅದನ್ನು ಸಾಬೀತುಪಡಿಸಲಿ. ಆವಾಗ ನ್ಯಾಯಾಲಯಕ್ಕೆ ಈ ಪ್ರಕರಣದಲ್ಲಿ ಎಸ್ ಡಿಪಿಐಗಳದ್ದು ತಪ್ಪಿಲ್ಲ ಎಂದರೆ ಆರೋಪಿಗಳ ಬಿಡುಗಡೆಯಾಗುತ್ತದೆ. ಆಗ ಜನರಿಗೆ ಯಾರದ್ದು ತಪ್ಪು, ಸರಿ ಎನ್ನುವುದು ಗೊತ್ತಾಗುತ್ತದೆ. ಅದು ಬಿಟ್ಟು ಯಾರೋ ಕಾರ್ಯಕರ್ತರು ಪಾಕ್ ಪರ ಜಿಂದಾಬಾದ್ ಘೋಷಿಸಿದ್ದು ಸರಿ ಎನ್ನುವಂತೆ ತನಿಖೆ ಮುಗಿದು ನ್ಯಾಯಾಲಯದಲ್ಲಿ ಪ್ರಕರಣ ಬರುವ ಮೊದಲೇ ಏಳು ತಿಂಗಳಿಗೆ ಹುಟ್ಟಿದವರಂತೆ ಆ ಪಕ್ಷದ ಮುಖಂಡರು ವರ್ತಿಸಬಾರದು. ಇನ್ನು ಜಿಲ್ಲಾ ಪೊಲೀಸರು ಕೂಡ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಆರೋಪಿಗಳು ತಪ್ಪಿತಸ್ಥರೆಂದು ಸಾಬೀತು ಆಗುವ ತನಕ ಸೂಕ್ತ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಅನೇಕ ಬಾರಿ ಏನಾಗುತ್ತದೆ ಎಂದರೆ ಆರಂಭದಲ್ಲಿರುವ ಉತ್ಸಾಹ ನಂತರ ತನಿಖಾಧಿಕಾರಿಗಳಲ್ಲಿ ಇರುವುದಿಲ್ಲ. ಹೀಗೆ ಆಗಬಾರದು. ಇನ್ನು ಈ ಪ್ರಕರಣಕ್ಕೆ ಹೊಸ ತಿರುವು ಕೊಡುವ ಪ್ರಯತ್ನ ಎಸ್ ಡಿಪಿಐಯಿಂದ ನಡೆಯುತ್ತಿದೆ. ಬಿಜೆಪಿ ಕಾರ್ಯಕರ್ತರೊಬ್ಬರ ಮೇಲೆ ಗೂಬೆ ಕೂರಿಸಿ ಅವರ ಹೆಸರು ಹಾಳು ಮಾಡುವ ಪ್ರಯತ್ನ ನಡೆಯುತ್ತಿದೆ. ಇದನ್ನು ವಿರೋಧಿಸಿ ಬಿಜೆಪಿ ಬೆಳ್ತಂಗಡಿ ಕಾರ್ಯಕರ್ತರು ಸುದ್ದಿಗೋಷ್ಟಿ ಮಾಡಿದ್ದಾರೆ. ಈ ಪ್ರಕರಣದಲ್ಲಿ ಯಾರು ತಪ್ಪು ಮಾಡಿದರೂ ಅವರಿಗೆ ಸೂಕ್ತ ಶಿಕ್ಷೆ ಆಗಬೇಕು. ಒಟ್ಟಿನಲ್ಲಿ ಸತ್ಯಾಸತ್ಯತೆ ಹೊರಗೆ ಬರಲಿ. ಇನ್ನು ಹೀಗೆ ದೇಶದ್ರೋಹಿ ಘೋಷಣೆಗಳನ್ನು ಕೂಗುವವರನ್ನು ದೇಶದ್ರೋಹಿ ಎಂದು ಘೋಷಿಸಿ ಅವರಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತರಬೇಕು. ಒಂದು ವೇಳೆ ಎಸ್ ಪಿ ಕಚೇರಿಗೆ ಮುತ್ತಿಗೆ ಹಾಕುವ ನೆಪದಲ್ಲಿ ಮಂಗಳೂರಿನಲ್ಲಿ ಗಲಭೆ ಸೃಷ್ಟಿಸಲು ಎಸ್ ಡಿಪಿಐ ಸಂಚು ಹೂಡಿದ್ದರೆ ಅದನ್ನು ಈಗಲೇ ನಿಷ್ಕ್ರಿಯಗೊಳಿಸಬೇಕಾಗಿದೆ. ಹಿಂದೆ ಕೂಡ ಮುತ್ತಿಗೆ ಹೆಸರಲ್ಲಿ ಇವರ ಒರಗೆಯ ಸಂಘಟನೆಗಳಿಂದ ಗಲಭೆ ನಡೆಸುವ ಪ್ರಯತ್ನ ನಡೆದಿದೆ. ಅದು ಈಗಿನ ಎಸ್ ಪಿಯವರಿಗೆ ತಿಳಿದಿರಲಿ!!
Leave A Reply