Breach of Trust ಕೇಸ್ ಸೂಟ್ ಆಗುತ್ತಾ ಎಂದು ನೋಡಬೇಕು!
Posted On January 28, 2021
ಕರ್ಮವನ್ನು ಮಾಡುವಾಗ ಫಲಾಪೇಕ್ಷೆ ಇಲ್ಲದೆಯೇ, ಕರ್ತವ್ಯವನ್ನು ಮಾಡುತ್ತೇನೆ ಎಂಬ ದೃಷ್ಟಿಯಿಂದ ಮಾಡಿದರೆ, “ಮಹಾಫಲ”ವೇ ಆಗಿರುವ ದೇವರ ಅನುಗ್ರಹವೇ ನಮಗೆ ಸಿಗುವುದು ಎನ್ನುವುದು ನಮಗೆ ಪರಮಪೂಜ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರು ಹೇಳಿಕೊಟ್ಟ ದಿವ್ಯವಾಣಿ. ಬಹುಶ: ಅದನ್ನು ಅನುಸರಿಸಲೇಬೇಕೆಂದು decide ಮಾಡಿದರೆ ಜೀವನ ಕಷ್ಟವೇನಲ್ಲ. ಎಲ್ಲಾ ಸಮಾಜದಲ್ಲಿ ಅದನ್ನು ಅನುಷ್ಠಾನಕ್ಕೆ ತರುವ ಒಂದಿಷ್ಟು ಜನರು ಇದ್ದೇ ಇರುತ್ತಾರೆ. ಅದರೆ ಅವರು ಫಲಾಪೇಕ್ಷೆಯಿಲ್ಲದೆ ಮಾಡಿದರೂ ಅದರ ದುರುಪಯೋಗ ಬೇರೆಯವರು ಮಾಡಿದರೆ ಅದರಿಂದ ಸಹಾಯ ಮಾಡಿದವರಿಗೆ ಹೇಗೆ ಆಗಬೇಡಾ. ನಾನು ಈ ಮಾತನ್ನು ಹೇಳುತ್ತಿರುವುದು ಮಂಗಳೂರಿನ ಭವಂತಿ ಸ್ಟ್ರೀಟ್ ಎಂಬ ರಸ್ತೆಯ ಬಗ್ಗೆ. ಈ ರಸ್ತೆಯನ್ನು ಅಗಲ ಮಾಡುವ ಪ್ರಕ್ರಿಯೆ ಪ್ರಾರಂಭವಾದದ್ದು ನಿಮಗೆ ಗೊತ್ತೆ ಇದೆ. ರಥಬೀದಿಯ ಶ್ರೀರಾಮಮಂದಿರದಿಂದ ಲೇಡಿಗೋಷನ್ ಆಸ್ಪತ್ರೆಯ ತನಕ ಈ ರಸ್ತೆಯನ್ನು ಅಗಲ ಮಾಡುವ ಪ್ರಕ್ರಿಯೆ ಶುರುವಾಗಿತ್ತು. ಆ ರಸ್ತೆಯನ್ನು ಚತುಷ್ಪಥ ಮಾಡಬೇಕೆಂದು ಯೋಜನೆಯಾಗಿತ್ತು. ಆದ್ದರಿಂದ “ದೊಡ್ಡ” ಮನಸ್ಸು ಮಾಡಿ ಅನೇಕ ಜನ ಆ ರಸ್ತೆಯಲ್ಲಿದ್ದ ತಮ್ಮ ಭಾವನಾತ್ಮಕ ಜಾಗವನ್ನು ಬಿಟ್ಟು ಕೊಟ್ಟು ಮಂಗಳೂರು ಮಹಾನಗರ ಪಾಲಿಕೆಗೂ, ಆ ರಸ್ತೆಯನ್ನ ಬಳಸುವವರಿಗೂ ಮಹಾದುಪಕಾರ ಮಾಡಿದ್ದರು. ಕ್ರಮೇಣ ಪಾಲಿಕೆ ಜಾಗ ಬಿಟ್ಟುಕೊಟ್ಟವರಿಗೆ ಕೊಡಬೇಕಾದದ್ದನ್ನು ಕೊಟ್ಟು ಕಾನೂನು ಪ್ರಕ್ರಿಯೆಯನ್ನು ಮುಗಿಸಿತ್ತು. ರಸ್ತೆ ಅಗಲ ಮಾಡುವ ಪ್ರಕ್ರಿಯೆ ಶುರುವಾಗಿತ್ತು. ರಸ್ತೆ ಬಹುತೇಕ ಅಗಲವೂ ಆಯಿತು. ನೋಡುವಾಗ ತುಂಬಾ ಅಗಲವಾದ ರಸ್ತೆ. ಇನ್ನೆಂದೂ ಮಾರುಕಟ್ಟೆಗೆ ಹೋಗುವವರಿಗೆ, ಪುರಭವನದ ಕಡೆ ಹೋಗುವವರಿಗೆ ಏನೂ ತೊಂದರೆ ಆಗುವುದಿಲ್ಲ ಎಂದು ಅನಿಸಲು ಶುರುವಾಗಿತ್ತು, ಅಷ್ಟೇ.
ಅಷ್ಟರಲ್ಲಿ ಯಾರೊ ಒಬ್ಬರು ತಂದು ಆ ಅಗಲವಾದ ರಸ್ತೆಯ ಬದಿಯಲ್ಲಿ ತಮ್ಮ ಕಾರನ್ನು ತಂದು ನಿಲ್ಲಿಸಿದರು. ಒಬ್ಬ ಕಾರು ತಂದು ನಿಲ್ಲಿಸಿದ ಕೂಡಲೇ ಅದನ್ನು ನೋಡಿದ ಇನ್ನೊಬ್ಬ ತನ್ನ ಟೆಂಪೊ ತಂದು ನಿಲ್ಲಿಸಿದ. ಅದರ ಪಕ್ಕದಲ್ಲಿ ಮತ್ತೊಂದು ಇನ್ನೊವಾ ಬಂದು ನಿಂತಿತು. ಭವಂತಿ ಸ್ಟ್ರೀಟ್ ಅರ್ಧ ಇಂತಹ ವಾಹನಗಳಿಂದ ತುಂಬಿ ಹೋಯಿತು. ದೊಡ್ಡ ದೊಡ್ಡ ಕಾರು, ಜೀಪಿನವರೇ ತಂದು ಹೀಗೆ ಮೈಚಾಚಿ ನಿಲ್ಲಿಸಿರುವಾಗ ನನ್ನದೊಂದು ಬೈಕ್ ದೊಡ್ಡ ವಿಷಯ ಆಗುತ್ತಾ ಎಂದು ಅಂದುಕೊಂಡು ಇನ್ನೊಬ್ಬ ಬೈಕ್ ತಂದು ಅಡ್ಡ ಇಟ್ಟ. ಒಂದು ಬೈಕ್ ಮತ್ತೊಂದಕ್ಕೆ ಪ್ರೇರೆಪಣೆ ಕೊಟ್ಟಿತು. ಬೈಕ್ ಗಳು ಸೆಕೆಂಡ್ ಹ್ಯಾಂಡ್ ಸೇಲ್ ಗೆ ಇಟ್ಟಂತೆ ಉದ್ದಕ್ಕೆ ರಾಜ ಗಾಂಭೀರ್ಯದಿಂದ ನಿಲ್ಲಲು ಶುರು ಮಾಡಿದವು. ರಸ್ತೆಯ ಇಕ್ಕೆಲಗಳಲ್ಲಿಯೂ ಈ ವಾಹನಗಳದ್ದೇ ಸಂತೆ. ಎರಡೂ ಕಡೆ ರಸ್ತೆಯೇನೊ ಅಗಲವಾಗಿದೆ. ಆದರೆ ಅಗಲವಾದ ಜಾಗಗಳಲ್ಲಿ ಅದಕ್ಕಿಂತ ಹೆಚ್ಚು ವಾಹನಗಳು ನಿಂತು ತಮ್ಮ ತೃಷೆಯನ್ನು ತೀರಿಸಿಕೊಳ್ಳುತ್ತಿವೆ. ಯಾರಾದರೂ ಜಾಗ ಬಿಟ್ಟು ಕೊಟ್ಟ ವ್ಯಕ್ತಿ ಜಾಗ ಬಿಟ್ಟು ಕೊಟ್ಟ ಮರುದಿನ ವಿದೇಶಕ್ಕೆ ಹೋಗಿ ಇತ್ತೀಚೆಗೆ ಹಿಂದಿರುಗಿ ಬಂದು ಅದೇ ರಸ್ತೆಯಲ್ಲಿ ನಿಂತರೆ ಆತನಿಗೆ ಒಂದು ಸಲ ಎದೆ ಧಸಕ್ ಎಂದಿತು. ನಾನು ಜಾಗ ಬಿಟ್ಟು ಕೊಟ್ಟಿದ್ದು ಯಾವ ಕರ್ಮಕ್ಕೆ. ಇವರಿಗೆ ತಮ್ಮ ವಾಹನಗಳನ್ನು ಈ ಪರಿಯಲ್ಲಿ ನಿಲ್ಲಿಸುವುದಕ್ಕಾ ಎಂದು ಖಂಡಿತ ಒಂದು ಸಲ ಕೂಗಿ ಕೂಗಿ ಹೇಳಬೇಕೆನಿಸಬಹುದು. ಇದು ಒಂದು ರೀತಿಯಲ್ಲಿ ಪರೋಕ್ಷವಾಗಿ ಮಂಗಳೂರು ಮಹಾನಗರ ಪಾಲಿಕೆ, ಜಾಗ ಬಿಟ್ಟುಕೊಟ್ವವರ ನಂಬಿಕೆಗೆ ಮಾಡಿದ ದ್ರೋಹ. ತಾಂತ್ರಿಕವಾಗಿ, ಕಾನೂನಾತ್ಮಕವಾಗಿ ನಂಬಿಕೆ ದ್ರೋಹವನ್ನು ಸಾಬೀತು ಪಡಿಸಲು ಈ ವಿಷಯದಲ್ಲಿ ಆಗುವುದಿಲ್ಲ. ಆದ್ದರಿಂದ ಪಾಲಿಕೆ ಬಚಾವ್. ಇಲ್ಲದೆ ಹೋದ್ರೆ ಯಾರಾದರೂ ನ್ಯಾಯಾಲಯಕ್ಕೆ ಹೋಗಿ ನನ್ನ ಜಾಗವನ್ನು ಪಾಲಿಕೆ ಒಂದು ಉದ್ದೇಶಕ್ಕೆ ಪಡೆದು ಮತ್ತೊಂದು ಉದ್ದೇಶಕ್ಕೆ ಬಳಸಿದೆ ಎಂದು ಕೇಸ್ ಹಾಕಿದ್ರೆ, ನ್ಯಾಯಾಲಯದಲ್ಲಿ ಗೆಲ್ಲುವುದು, ಸೋಲುವುದು ನಂತರದ ವಿಷಯ. ಆದರೆ ಮನಪಾದ ಮಾನ, ಮರ್ಯಾದೆ ಎಲ್ಲಿ ಉಳಿದಿತು.
ನಾನು ಈ ನಂಬಿಕೆ ದ್ರೋಹವನ್ನು ಮತ್ತೊಂದು ಆಯಾಮದಲ್ಲಿ ನೋಡಲು ಇಚ್ಚೆ ಪಡುತ್ತೇನೆ. ನಂಬಿಕೆದ್ರೋಹದ ಬಗ್ಗೆ ನನಗೆ ಪಾಲಿಕೆ ಈ ರೀತಿ ಮಾಡುವುದು ಹೊಸತು ಎಂದು ಅನಿಸುವುದಿಲ್ಲ. ಪಾಲಿಕೆಯ ಹುಟ್ಟಿನಿಂದ ಇವತ್ತಿನ ತನಕ ಸೂಕ್ಷ್ಮವಾಗಿ ನೋಡಿದರೆ ಇವರು ಯಾವುದರಲ್ಲಿ ದ್ರೋಹ ಮಾಡದೆ ನಂಬಿಕೆಯನ್ನು ಉಳಿಸಿದ್ದಾರೆ, ನೀವೆ ಹೇಳಿ. ಅಲ್ಲದಿದ್ದರೆ ನಾನು ಇಲ್ಲಿಯ ತನಕ ಅಷ್ಟು ಮಾತನಾಡುವುದು, ಬರೆಯುವುದು ಎಲ್ಲಾ ಮಾಡಬೇಕಾಗಿಯೇ ಇರಲಿಲ್ಲ. ಆದರೆ ನಾನು ಇವತ್ತು ಕೇಳುವುದು, ಸ್ವಾಮಿ, ನೀವು ರಸ್ತೆ ಅಗಲ ಮಾಡುತ್ತೇವೆ, ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತೇವೆ ಎಂದು ರೀಲು ಬಿಟ್ಟು ಶೋ ಕೊಟ್ಟು, ಗುದ್ದಲಿ ಹಿಡಿದು ಪತ್ರಿಕೆಗಳಲ್ಲಿ ಫೋಟೋ ಬರುವಂತೆ ನೋಡಿಕೊಂಡದ್ದು ನನ್ನಂತಹ ಸಾಮಾನ್ಯ ನಾಗರಿಕನ ತೆರಿಗೆ ಹಣವನ್ನು ನಂಬಿ. ನಮ್ಮ ತೆರಿಗೆಯ ಹಣವನ್ನು ರಸ್ತೆ ಅಗಲೀಕರಣಕ್ಕಾಗಿ ವ್ಯಯಿಸಿ, ರಸ್ತೆ ಅಗಲಗೊಳಿಸಿದ್ದೇವೆ ಎಂದು ಪುಕ್ಕಟೆ ಹೆಸರು ಪಡೆದುಕೊಂಡು ಈಗ ಆ ಜಾಗದಲ್ಲಿ ಯಾವುದೋ ಕೆಲಸಕ್ಕೆ ಬಾರದ ವಾಹನಗಳನ್ನು ನಿಲ್ಲಿಸಲು ಬಿಟ್ಟಿದ್ದಿರಲ್ಲ, ಇದಕ್ಕಾ ನಾವು ನಿಮಗೆ ತೆರಿಗೆ ಕಟ್ಟುವುದು. ನೀವು ಹೀಗೆ ಮಾಡುತ್ತೀರಿ ಎಂದು ಗೊತ್ತಿರುವುದರಿಂದ ಭವಂತಿ ಸ್ಟ್ರೀಟ್ ನಲ್ಲಿ ಮೂರು ಮಳಿಗೆಯವರು ತಮ್ಮ ಜಾಗವನ್ನು ಬಿಟ್ಟುಕೊಟ್ಟಿಲ್ಲ. ಅವರದ್ದು ಸರಿಯಾದ ಕ್ರಮ ಎಂದು ನಾನು ಸುತಾರಾಂ ಹೇಳುತ್ತಿಲ್ಲ. ಆದರೆ ಮಾನವೀಯತೆಯಿಂದ ನಿಮ್ಮನ್ನು ನಂಬಿ ಜಾಗ ಬಿಟ್ಟುಕೊಟ್ಟವರ ಹೊಟ್ಟೆಉರಿಗೆ ಯಾಕೆ ತುಪ್ಪ ಸುರಿಯುತ್ತೀರಿ ಮಾರಾಯ್ರೆ. ನೀವು ಹೀಗೆ ಮಾಡುವುದರಿಂದಲೇ ಜನ ನೀವು ರಸ್ತೆ ಅಗಲ ಮಾಡಲು ಜಾಗ ಬಿಟ್ಟು ಕೊಡಿ ಎಂದಾಗ ಮೊದಲು ಕೇಳುವುದು “ಏನು parking ಮಾಡಲಿಕ್ಕಾ”
- Advertisement -
Trending Now
ರಾಜ್ಯ ಸರಕಾರ 350 ಕೋಟಿ ಬಾಕಿ ಹಿನ್ನಲೆ; ದಯಾಮರಣ ನೀಡಲು ಮನವಿ!
January 14, 2025
Leave A Reply