ಬಿಜೆಪಿ ಪಾಲಿಕೆಯಲ್ಲಿ ಅಧಿಕಾರಕ್ಕೆ ಬಂದ 1 ವರ್ಷದಲ್ಲಿಯೇ ಲಗಾಮು ತಪ್ಪಿ ಹೋಗಿದೆ!!

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಈಗ ಆಡಳಿತ ಪಕ್ಷವೊಂದು ಜೀವಂತವಾಗಿ ಇದೆಯೋ ಇಲ್ಲವೋ ಎನ್ನುವ ಸಂಶಯ ಬರುತ್ತಿದೆ. ಯಾಕೆಂದರೆ ಅಧಿಕಾರಿಗಳು ಮಾಡುವ ಒಂದೊಂದು ಅಧ್ವಾನಗಳು ನೇರವಾಗಿ ಭಾರತೀಯ ಜನತಾ ಪಾರ್ಟಿಯ ಜನಪ್ರತಿನಿಧಿಗಳ ಕುತ್ತಿಗೆಯ ತನಕ ಬರಲು ಇನ್ನು ತುಂಬಾ ದಿನ ಬೇಕಾಗಿಲ್ಲ. ಈಗಲೇ ಸಂಬಂಧಪಟ್ಟವರು ಎಚ್ಚೆತ್ತುಕೊಂಡರೆ ಒಳ್ಳೆಯದು. ಯಾವುದನ್ನು ಸರಿ ಮಾಡಬೇಕು, ಬಿಡಬೇಕು ಎನ್ನುವುದನ್ನು ನೋಡದೇ ಹೋದರೆ ಈಗ ಕಮಲದ ಕೈಗೆ ಬಂದ ಅಧಿಕಾರ ಮತ್ತೆ ಹಿಂತಿರುಗಿ ಹೋದರೆ ಅಚ್ಚರಿ ಇಲ್ಲ. ಪಟ್ಟಿ ಮಾಡಲು ಹೋದರೆ ತುಂಬಾ ಇದೆ. ಮೊದಲನೇಯದಾಗಿ ಈ-ಖಾತಾ. ಹಿಂದೆ ಒಂದು ಖಾತಾ ಮಾಡಿಸಬೇಕಾದರೆ ಎರಡು ಮೂರು ದಿನಗಳು ಸಾಕಿತ್ತು. ಈಗ ಈ-ಖಾತಾ ಮಾಡಿಸಲು ಕನಿಷ್ಟ 50 ದಿನಗಳಾದರೂ ಬೇಕಾಗುತ್ತವೆ. ಈ-ಖಾತಾ ಸಾಪ್ಟವೇರ್ ಇಡೀ ಕರ್ನಾಟಕದಲ್ಲಿ ಎರಡು ಕಡೆ ಮಾತ್ರ ಬಳಕೆಯಲ್ಲಿದೆ. ಈ ಸಮಸ್ಯೆ ಎಷ್ಟು ದಿನ ಮುಂದುವರೆಯುತ್ತದೆಯೋ ಅಷ್ಟು ದಿನ ಬಿಜೆಪಿಗೆ ಡ್ಯಾಮೇಜ್ ಮಾಡುತ್ತಾ ಹೋಗುತ್ತದೆ. ಯಾಕೆ ಇದು ಯಾರ ಗಮನಕ್ಕೂ ಬಂದಿಲ್ವಾ? ಎರಡನೇಯದಾಗಿ ಪಾಲಿಕೆಯ ಬಿಜೆಪಿ ಆಡಳಿತದ ಮುಂದೆ ಇರುವ ಸವಾಲು ಟ್ರೇಡ್ ಲೈಸೆನ್ಸ್. ಇಷ್ಟು ವರ್ಷ ಹೇಗೆ ನಡೆದುಕೊಂಡು ಬರಲಾಗಿದೆಯೋ ಅದೇ ರೀತಿಯಲ್ಲಿ ಇವರು ನಡೆದುಕೊಂಡು ಹೋದರೆ ಸಮಸ್ಯೆ ಇರಲಿಲ್ಲ. ಆದರೆ ಇವರು ತಂದಿರುವ ಬದಲಾವಣೆಯಿಂದ ಟ್ರೇಡ್ ಲೈಸೆನ್ಸ್ ನವೀಕರಣ ಮಾಡುವವರಿಗೆ ಸಾಕಷ್ಟು ತೊಂದರೆಯಾಗಿದೆ. ಆದ್ದರಿಂದ 35000 ಉದ್ದಿಮೆಗಳು ನವೀಕರಣ ಆಗುವ ಕಡೆ ಒಂದು ಸಾವಿರ ನವೀಕರಣ ಆಗಿದೆ. ಸುಪ್ರೀಂ ಕೋರ್ಟಿನ ಆದೇಶ ಇದ್ದ ಬಳಿಕವೂ ಇವರು ಟ್ರೇಡ್ ಲೈಸೆನ್ಸ್ ನವೀಕರಣದ ವಿಷಯದಲ್ಲಿ ಮಾಡಿರುವ ಬದಲಾವಣೆ ನಿಯಮಗಳಿಗೆ ವಿರುದ್ಧವಾಗಿವೆ. ಬಹುಶ: ಬ್ರೋಕರ್ ಗಳ ಹಾವಳಿಯನ್ನು ತಡೆಗಟ್ಟಲು ಏನಾದರೂ ಮಾಡಬೇಕು ಎನ್ನುವುದೇ ಬಿಜೆಪಿಯವರ ಉದ್ದೇಶವಾಗಿದ್ದರೆ ಆನ್ ಲೈನ್ ಮೂಲಕವೇ ಮಾಡಬಹುದಿತ್ತು. ಒಂದು ವೇಳೆ ಆನ್ ಲೈನ್ ಮಾಡಿದರೂ, ಹೀಗೆ ಮ್ಯಾನುವಲ್ ಆಗಿ ಮಾಡಿದರೂ ಫೀಸ್ ಬರುವುದು ಬಂದೇ ಬರುತ್ತದೆ. ಆನ್ ಲೈನ್ ನಲ್ಲಿ ನಿಮ್ಮ ದಾಖಲೆಗಳ್ನು ಅಪಲೋಡ್ ಮಾಡಿದರೆ ಟ್ರೇಡ್ ಲೈಸೆನ್ಸ್ ನವೀಕರಣ ಮಾಡಲು ಸಾಕಾಗುತ್ತದೆ. ಆದರೆ ಇವರಿಗೆ ಹೆದರಿಕೆ ಏನೆಂದರೆ ಒಬ್ಬ 2000 ಚದರ ಅಡಿಯ ಅಂಗಡಿಯನ್ನು ಇಟ್ಟುಕೊಂಡು 800 ಚದರ ಅಡಿ ಎಂದು ಸುಳ್ಳು ಹೇಳಿದರೆ ಆಗ ಏನು ಮಾಡುವುದು ಎನ್ನುವುದು ಇವರ ಪ್ರಶ್ನೆ. ಅದಕ್ಕೆ ನಾನು ಹೇಳುವುದು ಏನೆಂದರೆ ಒಬ್ಬ ವ್ಯಾಪಾರಿ ಹಾಗೆ ತಮ್ಮ ಅಂಗಡಿಯ ವಿಷಯದಲ್ಲಿ ಸುಳ್ಳು ಮಾಹಿತಿ ನೀಡಿದರೆ ನಿಮ್ಮ ಬಳಿ ಅದನ್ನು ತಕ್ಷಣ ಪತ್ತೆಹಚ್ಚುವಂತಹ ವ್ಯವಸ್ಥೆ ಇದ್ದೇ ಇದೆ. ಅದು ಯಾವುದೆಂದರೆ ಕಂದಾಯ ವಿಭಾಗದ ಸಾಫ್ಟವೇರ್. ಆ ಅಂಗಡಿಯ ಡೋರ್ ನಂಬ್ರ ಹಾಕಿದರೆ ಆಗ ಕಂದಾಯ ವಿಭಾಗದ ಸಾಫ್ಟವೇರ್ ನಲ್ಲಿ ಎಷ್ಟು ಚದರ ಅಡಿಯ ಅಂಗಡಿ ಎಂದು ಗೊತ್ತೆ ಆಗುತ್ತದೆ. ಎರಡು ಸಾಫ್ಟವೇರ್ ನಲ್ಲಿ ಅಂಗಡಿಯ ನಂಬ್ರ ಹಾಕುವಾಗ ತಾಳೆ ಆಗದಿದ್ದರೆ ಗೊತ್ತೆ ಆಗುತ್ತದೆ. ಹೀಗೆ ಕೆಲವು ವ್ಯಾಪಾರಿಗಳು ಮಾಡಿದ್ದು ಗೊತ್ತಾದರೆ ಆಗ ಅವರಿಗೆ ಏನು ಕ್ರಮ ಕೈಗೊಳ್ಳಬೇಕೊ ತೆಗೆದುಕೊಂಡರೆ ಆಯಿತು. ಅದು ಯಾಕೆ ಆಗುವುದಿಲ್ಲ. ಹೇಗೂ ಪ್ರತಿ ಅಂಗಡಿಗೂ ಡೋರ್ ನಂಬರ್ ಇದ್ದೇ ಇರುತ್ತದೆ. ಹಾಗಿರುವಾಗ ನೀವು ಎಲ್ಲವನ್ನು ಆನ್ ಲೈನ್ ನಲ್ಲಿಯೇ ತಾಳೆ ಮಾಡಿದರೆ ಅಲ್ಲಿಗೆ ಎಲ್ಲವೂ ಸರಿಯಾಗುತ್ತಲ್ಲ, ವ್ಯಾಪಾರಿಗಳಿಗೂ ಪಾಲಿಕೆಯಲ್ಲಿ ಅಡ್ಡಾಡುವುದು ತಪ್ಪುತ್ತದೆ. ಬ್ರೋಕರ್ ಗಳ ಮೂಲಕ ಕೆಲವರದ್ದು ಮಾತ್ರ ಕೆಲಸ ಬೇಗ ಆಗುತ್ತೆ ಎನ್ನುವುದು ಕೂಡ ತಪ್ಪುತ್ತದೆ. ಇದೆಲ್ಲ ಬಿಜೆಪಿಯ ಕಾರ್ಪೋರೇಟರ್ ಗಳಿಗೆ ಗೊತ್ತಿಲ್ಲ ಎಂದಲ್ಲ. ಹೆಚ್ಚಿನವರು ಹೊಸಬರಿರಬಹುದು. ಆದರೆ ಮೂರ್ನಾಕು ಸಲ ಗೆದ್ದವರು ಕೂಡ ಇದ್ದಾರಲ್ಲ. ಅವರಾದರೂ ಯೋಚಿಸಬೇಕಲ್ಲ ಅಥವಾ ಅವರು ಮೇಯರ್ ಆಗುತ್ತಾರೆ, ಇವರು ಮೇಯರ್ ಆಗುತ್ತಾರೆ ಎಂದು ವೈಮನಸ್ಸಿನಿಂದ ಪಕ್ಷವೇ ಸೋಲುವ ತನಕ ಕಾಯುತ್ತಾರಾ? ಒಂದಂತೂ ನಿಜ. ಅಧಿಕಾರಿಗಳು ಜನರಿಗೆ ಏನೇ ತೊಂದರೆ ಮಾಡಿದರೂ ಅದನ್ನು ಕೊನೆಗೆ ಅನುಭವಿಸಬೇಕಾದವರು ಜನಪ್ರತಿನಿಧಿಗಳು. ಅದು ಬಿಜೆಪಿಗೆ ಚೆನ್ನಾಗಿ ಗೊತ್ತಿದೆ. ಹಿಂದೆ ಅನುಭವಿಸಿದ್ದಾರೆ ಕೂಡ. ಇನ್ನು ಮೂರನೇಯದಾಗಿ ಕುಡಿಯುವ ನೀರಿನ ಬಿಲ್. ಅಧಿಕಾರಕ್ಕೆ ಬಂದ ಬಳಿಕ ನೀರಿನ ದರ ಕಡಿಮೆ ಮಾಡುತ್ತೇವೆ ಎಂದು ಹೇಳಿದ್ದ ಬಿಜೆಪಿ ಕಡಿಮೆ ಮಾಡಲಿಲ್ಲ ಎಂದು ವಿಪಕ್ಷಗಳು ಹೇಳಲು ಶುರು ಮಾಡಿವೆ. ಇನ್ನು ಇವರು 3-4 ತಿಂಗಳಿಗೊಮ್ಮೆ ಬಿಲ್ ಕೊಟ್ಟರೆ ಅದು ಸಹಜವಾಗಿ ಜಾಸ್ತಿಯಾಗಿರುತ್ತದೆ. ಆಗ ಕೋಪ ಸ್ವಲ್ಪ ಜಾಸ್ತಿನೆ ಬರುತ್ತದೆ. ಇನ್ನು ನೀರಿನ ಬಿಲ್ ಕಟ್ಟಲು ಹೋದರೆ ಯಾವಾಗ ನೋಡಿದರೂ ರಶ್. ಯಾಕೆಂದರೆ ಅಲ್ಲಿ ಒಬ್ಬರೇ ಸಿಬ್ಬಂದಿ ಇರುವುದು. ಇದು ಕೂಡ ಜನರು ಶಾಪ ಹಾಕಲು ಕಾರಣವಾಗಿದೆ. ಇನ್ನು ಕಟ್ಟಡ ಕಟ್ಟಲು ಬೇಕಾಗುವ ಅನುಮತಿ ಪತ್ರ ಈ-ನಿರ್ಮಾಣ್ ಸಾಫ್ಟವೇರ್ ಅನ್ನು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಅಳವಡಿಸಲಿಲ್ಲ. ಇವತ್ತಿಗೂ ಮ್ಯಾನುವಲ್ ಆಗಿಯೇ ಅನುಮತಿ ಪತ್ರ ನೀಡಲಾಗುತ್ತಿದೆ. ಹೀಗೆ ನನ್ನ ಬಳಿ ಕುಳಿತರೆ ಪಟ್ಟಿಯೇ ಕೊಡಬಲ್ಲೆ. ಸರಿ ಮಾಡಲು ಆಸಕ್ತಿ ಬೇಕು ಅಷ್ಟೇ. ಜನಸಾಮಾನ್ಯರ ಶಾಸಕರು ಎಂದು ಜನರಿಗೆ ಮನವರಿಕೆ ಆಗಬೇಕಾದರೆ ಜನಸಾಮಾನ್ಯರ ಸಮಸ್ಯೆ ಪರಿಹಾರ ಆಗಬೇಕು. ಅದು ಬಿಟ್ಟು ಬೇರೆ ಏನು ಮಾಡಿದರೂ ಫೋಟೋಗೆ ಮಾತ್ರ ಚೆಂದ. ಅಷ್ಟು ಗೊತ್ತಿದ್ದರೆ ಸಾಕು!!!
- Advertisement -
Trending Now
ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
Tulunadu News
September 29, 2023
Leave A Reply