ಸದನದಲ್ಲಿ ಜಾರಕಿಹೊಳಿ ವಿಷಯ ಬಿಟ್ಟು ಅಭಿವೃದ್ಧಿ ಚರ್ಚೆಯಾಗಲಿ!!
ನಾವು ಶಾಸಕರುಗಳನ್ನು ಆಯ್ಕೆ ಮಾಡುವುದು ಅವರು ನಮ್ಮ ಕ್ಷೇತ್ರಗಳಲ್ಲಿ ಸುಧಾರಣೆ ತರಲಿ, ಅಭಿವೃದ್ಧಿ ಮಾಡಲಿ, ರಾಜ್ಯದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಲಿ, ಅದಕ್ಕಾಗಿ ಹೊಸ ಕಾನೂನುಗಳನ್ನು ತರಲಿ ಎನ್ನುವ ಕಾರಣಕ್ಕೆ. ಹೀಗೆ ಬಯಸುವುದು ರಾಜ್ಯದ ಪ್ರತಿ ನಾಗರಿಕರ ಸಹಜವಾದ ಆಶಯ. ಆದರೆ ನಮ್ಮ ಸದನಗಳಲ್ಲಿ ಅಧಿವೇಶನಗಳು ನಡೆಯುವಾಗ ಅಲ್ಲಿ ನಡೆಯುವುದು ಗಲಾಟೆ, ಘರ್ಷಣೆ ಮತ್ತು ಅನಗತ್ಯವಾದ ಯಾರಿಗೂ ಪ್ರಯೋಜನವಿಲ್ಲದ ರಾಜಕೀಯ ಆರೋಪ ಪ್ರತ್ಯಾರೋಪಗಳು. ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ಆರೋಗ್ಯಪೂರ್ಣ ಚರ್ಚೆಗಳು ನಡೆದರೆ ತೊಂದರೆ ಇಲ್ಲ. ಆದರೆ ಈ ಬಾರಿ ಅಧಿವೇಶನದಲ್ಲಿ ನನಗೆ ಅನಿಸುವುದು ಯಾರಿಗೂ ಮೂರು ಕಾಲು ಪೈಸೆಗೂ ಲಾಭ ಇಲ್ಲದ ರಮೇಶ್ ಜಾರಕಿಹೊಳೆಯ ವಿಷಯವೇ ಮೂರ್ನಾಕು ದಿನಗಳ ತನಕ ಎಳೆಯಲ್ಪಡುತ್ತದೆಯಾ ಎನ್ನುವುದು. ನಾನು ರಮೇಶ್ ಜಾರಕಿಹೊಳಿ ಪರವಾಗಿ ಅಥವಾ ವಿರುದ್ಧವಾಗಿ ಬರೆಯಲು ಹೋಗುವುದೇ ಇಲ್ಲ. ಯಾಕೆಂದರೆ ಅದು ಅಪ್ಪಟ ವೇಸ್ಟ್. ಒಬ್ಬ ಜನಪ್ರತಿನಿಧಿ ತನ್ನ ನೈತಿಕತೆಯ ರೇಖೆಯನ್ನು ತಾನೇ ಎಳೆದುಕೊಳ್ಳುವುದರಿಂದ ಯಾವುದು ಬೇರೆಯವರ ದೃಷ್ಟಿಯಲ್ಲಿ ತಪ್ಪಿದೆಯೋ ಅದು ಇನ್ನೊಬ್ಬರ ದೃಷ್ಟಿಯಲ್ಲಿ ಅಂತಹ ದೊಡ್ಡ ತಪ್ಪೇ ಇಲ್ಲದಿರಬಹುದು. ಸದ್ಯ ರಮೇಶ್ ಜಾರಕಿಹೊಳಿ ಕಾಮಕಾಂಡ ವಿವಾದ ತಾರಕಕ್ಕೆ ಹೋಗಿ ಸದನದಲ್ಲಿ ಗಲಾಟೆ ವಿಪರೀತಕ್ಕೆ ಹೋಗುವ ಮೊದಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು ನೋಡುವಾಗ ಇದ್ದುದ್ದರಲ್ಲಿಯೇ ಬೆಟರ್ ಎಂದು ಕಾಣುತ್ತಾರೆ. ಇರಲಿ, ಅದು ಬೇರೆ ವಿಷಯ. ಆದರೆ ಇವತ್ತಿನಿಂದ ಈ ವಿಚಾರದಲ್ಲಿ ಸದನದ ಅಮೂಲ್ಯ ಸಮಯವನ್ನು ಹಾಳು ಮಾಡುವುದು ಮಾತ್ರ ಶುದ್ಧ ಅಸಂಬದ್ಧ. ಹಿಂದೆ ಮೇಟಿ ಎನ್ನುವ ಸಚಿವರ ವಿಷಯದಲ್ಲಿಯೂ ಇಂತಹುದೇ ವಿಡಿಯೋ ಬಿಡುಗಡೆಯಾಗಿತ್ತು. ಆಗಲೂ ಸದನದಲ್ಲಿ ಇದೇ ವಿಷಯ ಹಿಡಿದುಕೊಂಡು ರಂಪ, ಗಲಾಟೆ ನಡೆದಿದ್ದವು. ನಂತರ ಏನಾಯಿತು? ಯಾರಿಗೂ ನೆನಪಿಲ್ಲ. ಈಗ ಆ ಪ್ರಕರಣ ಎಲ್ಲಿಗೆ ಬಂದು ತಲುಪಿದೆ ಎನ್ನುವುದು ಯಾರಿಗೂ ಬೇಕಾಗಿಲ್ಲ. ಆದರೆ ಒಬ್ಬ ಸಚಿವ ಒಂದು ಯುವತಿಯೊಂದಿಗೆ ಖಾಸಗಿಯಾಗಿ ನಾಲ್ಕು ಗೋಡೆಯ ನಡುವೆ ಮಾಡುವ ಕಾಮದಾಟಕ್ಕೆ ಸದನದಲ್ಲಿ ನಮ್ಮ ಕೋಟ್ಯಾಂತರ ರೂಪಾಯಿ ಹಣ ಪೋಲಾಗಬೇಕೆ ಎನ್ನುವುದು ನನ್ನ ಪ್ರಶ್ನೆ. ಒಂದು ವೇಳೆ ವಿಪಕ್ಷಗಳಿಗೆ ಇದನ್ನು ಪ್ರಶ್ನಿಸಲೇಬೇಕೆಂದಿದ್ದರೆ ಸದನ ಮುಗಿದ ಬಳಿಕ ಹೊರಗೆ ಆ ಶಾಸಕನನ್ನು ಹಿಡಿದು ಕೇಳಲಿ. ಹೊರಗೆ ಧರಣಿ ಮಾಡಲಿ. ಸದನದಲ್ಲಿ ಈ ಬಗ್ಗೆ ವಾಕ್ ಯುದ್ಧ ಬೇಡವೇ ಬೇಡಾ. ಒಂದು ದಿನ ಸದನ ವೇಸ್ಟ್ ಆದರೆ ದೇಶದ ಸಾಮಾನ್ಯ ನಾಗರಿಕನ ಕಷ್ಟಪಟ್ಟು ಕಟ್ಟಿದ ತೆರಿಗೆಯ ಹಣ ನಷ್ಟವಾಗುತ್ತದೆ. ಅದು ಪ್ರತಿಯೊಬ್ಬ ಶಾಸಕನಿಗೆ ಗೊತ್ತಿದ್ದರೆ ಸಾಕು.
ಇನ್ನು ಮಂಗಳೂರಿನ ವಿಷಯವನ್ನೇ ತೆಗೆದುಕೊಳ್ಳೋಣ. ಈ ಬಾರಿ ಎಪ್ರಿಲ್-ಮೇ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗುವುದಿಲ್ಲ ಎಂದು ಹೊಸ ಮೇಯರ್ ಪ್ರೇಮಾನಂದ ಶೆಟ್ಟಿಯವರು ಹೇಳಿದ್ದಾರೆ. ಆದರೆ ಅದು ಊಹೆ ವಿನ: ವಾಸ್ತವ ಆಗಲೇಬೇಕು ಎಂದೇನಿಲ್ಲ. ಒಂದು ವೇಳೆ ನೀರಿನ ಕೊರತೆ ಉಂಟಾದರೆ ನಂತರ ಪರಿತಪಿಸುವುದಕ್ಕಿಂತ ಈ ಬಾರಿ ಅಲ್ಲದಿದ್ದರೂ ಮುಂದೆ ಉದ್ಭವಿಸಬಹುದಾದ ನೀರಿನ ಸಮಸ್ಯೆಯನ್ನು ಪರಿಹರಿಸಲು ಏನು ಮಾಡಬೇಕು ಎನ್ನುವುದರ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಉಭಯ ಶಾಸಕರು ಈ ಬಾರಿ ಸದನದಲ್ಲಿ ಏನಾದರೂ ಮಾತನಾಡಬೇಕು. ತುಂಬೆಯ ಹೊಸ ಡ್ಯಾಂನಲ್ಲಿ ಏಳು ಮೀಟರ್ ಎತ್ತರದಲ್ಲಿ ನೀರು ನಿಲ್ಲಿಸಲು ನಿರ್ಧಾರ ಮಾಡಲೇಬೇಕು. ಆದರೆ ಆ ನಿರ್ಧಾರ ಮಾಡಬೇಕಾದರೆ ಮುಳುಗಡೆಯಾಗಲಿರುವ ಭೂಮಿಯ ಮಾಲೀಕರಿಗೆ ಕೊಡಬೇಕಾದ ನಷ್ಟ ಪರಿಹಾರವನ್ನು ನೀಡಲೇಬೇಕು. ಅದು ಅಂದಾಜು 145 ಕೋಟಿ ರೂಪಾಯಿಯಷ್ಟು ಆಗಲಿದೆ. ಆ ಮೊತ್ತವನ್ನು ರಾಜ್ಯ ಸರಕಾರದಿಂದ ಮುಖ್ಯಮಂತ್ರಿಗಳ ಮೂಲಕ ತಂದರೆ ನಂತರ ಏಳು ಮೀಟರ್ ನೀರನ್ನು ಧಾರಾಳವಾಗಿ ನಿಲ್ಲಿಸಬಹುದು. ಇಂತಹ ವಿಷಯಗಳ ಬಗ್ಗೆ ಚರ್ಚೆ ನಡೆಯಬೇಕಿದೆ. ಪಚ್ಚನಾಡಿ ಡಂಪಿಂಗ್ ಯಾರ್ಡ್ ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲು ಚರ್ಚೆ ನಡೆಸಬೇಕಿದೆ. ಮಂಗಳೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ತರುವುದಕ್ಕೆ ಚಿಂತನೆ ಮಾಡಬೇಕಿದೆ. ಸ್ಮಾರ್ಟ್ ಸಿಟಿಯ ಅಭಿವೃದ್ಧಿಯ ಬಗ್ಗೆ ಯೋಜನೆ ಕಾರ್ಯಗತಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಸರಕಾರಿ ಆಸ್ಪತ್ರೆಗಳ ಬಲವರ್ಧನೆಗೆ ಶ್ರಮಿಸಬೇಕಿದೆ. ಹೀಗೆ ನಮ್ಮ ಜಿಲ್ಲೆಯಲ್ಲಿಯೇ ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆಸಲು ಚರ್ಚೆ ನಡೆಸಬೇಕಿದೆ. ಹೀಗೆ ವಿವಿಧ ಜಿಲ್ಲೆಗಳಲ್ಲಿ ಆಗಬೇಕಾದ ಕಾರ್ಯಗಳ ಬಗ್ಗೆ ಸಾಕಷ್ಟು ಚರ್ಚೆಯನ್ನು ಸದನದಲ್ಲಿ ಈ ಬಜೆಟ್ ಅಧಿವೇಶನದಲ್ಲಿ ಮಾಡಬೇಕಿದೆ. ಬಜೆಟ್ ಅಧಿವೇಶನ ಬಹಳ ಪ್ರಮುಖವಾದ ಅಂಗ. ಅದರಲ್ಲಿ ಬಜೆಟ್ ಬಗ್ಗೆ ಚರ್ಚೆ ನಡೆಸಬೇಕಿದೆ. ಕೊರೊನಾ ನಂತರದ ಅವಧಿಯಲ್ಲಿ ಆಗಬೇಕಾದ ಸುಧಾರಣೆಗಳ ಬಗ್ಗೆ ಆಡಳಿತ, ವಿಪಕ್ಷದ ಮುಖಂಡರು ಶಿಸ್ತುಬದ್ಧವಾಗಿ ಚರ್ಚೆ ನಡೆಸಿದ್ದರೆ ಉತ್ತಮ. ಜನರು ನಿಮಗೆ ವಿಧಾನಸೌಧಕ್ಕೆ ಆರಿಸಿ ಕಳುಹಿಸಿ ರಾಜಕಾರಣ ಮಾಡಲು ಹೇಳಿದ್ದಾರೆ ಎನ್ನುವ ಕಾರಣಕ್ಕೆ ಪ್ರತಿಯೊಂದರಲ್ಲಿಯೂ ರಾಜಕೀಯ ಮಾಡಲು ಹೋಗಬೇಡಿ. ರಮೇಶ್ ಜಾರಕಿಹೊಳಿ ವಿಷಯ ರಾಜ್ಯದ ಅಭಿವೃದ್ಧಿಯ ವಿಷಯ ಅಲ್ಲ. ಹನಿಟ್ರಾಪ್ ನಲ್ಲಿ ಸಿಕ್ಕಿಬಿದ್ದವರು ಅವರ ಕರ್ಮ ಅನುಭವಿಸುತ್ತಾರೆ. ರಾಜ್ಯದ ಅಭಿವೃದ್ಧಿ ನೀವು ಚರ್ಚೆ ಮಾಡದಿದ್ದರೆ ಎರಡು ವರ್ಷಗಳ ನಂತರ ನೀವು ಕೂಡ ಅನುಭವಿಸಬೇಕಾಗುತ್ತದೆ!
Leave A Reply