ಜೀವ ಬೆದರಿಕೆಗೆ ಹೆದರಿ ಕೇಸು ಹಿಂದಕ್ಕೆ ಪಡೆದುಕೊಳ್ಳುವವರು ಸಾಮಾಜಿಕ ಕಾರ್ಯಕರ್ತ ಅಲ್ಲ!!
ದಿನೇಶ್ ಕಲ್ಲಹಳ್ಳಿ ತಾವು ಓರ್ವ ಸಂತ್ರಸ್ತ ಯುವತಿಗೆ ಅನ್ಯಾಯವಾಗಿದೆ ಎಂದು ಹೇಳಿ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಿಸಿದ್ದನ್ನು ಇಡೀ ರಾಜ್ಯ ಮತ್ತು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಬಗ್ಗೆ ಒಲವಿರುವ ಜನ ನೋಡಿದ್ದಾರೆ. ಆ ಹಂತದಲ್ಲಿ ದಿನೇಶ್ ಧೈರ್ಯ ನೋಡಿ ಜನಸಾಮಾನ್ಯರು ಆಶ್ಚರ್ಯಪಟ್ಟುಕೊಂಡಿದ್ದರು. ಬೆಳಗಾವಿಯ ಸಾಹುಕಾರ ಎಂದೇ ಕರೆಸಿಕೊಳ್ಳುವ ರಮೇಶ್ ಜಾರಕಿಹೊಳಿಯವರ ಧನಬಲ, ಜನಬಲ, ತೋಳ್ಬಲದಲ್ಲಿ ದಿನೇಶ್ ಎಲ್ಲಿಯೂ ಹತ್ತಿರಕ್ಕೆ ಸುಳಿಯಲು ಸಾಧ್ಯವಿರಲಿಲ್ಲ. ಅಷ್ಟಿದ್ದೂ ಎಲ್ಲವನ್ನು ಎದುರು ಹಾಕಿ ದಿನೇಶ್ ಕಬ್ಬನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಾಗ ಜನ ಮಾನಸಿಕವಾಗಿಯಾದರೂ ದಿನೇಶ್ ಅವರನ್ನು ಮೆಚ್ಚಿದ್ದರು. ಆದರೆ ಐದಾರು ದಿನಗಳಲ್ಲಿ ದಿನೇಶ್ ಆ ದೂರನ್ನು ಹಿಂದಕ್ಕೆ ಪಡೆದುಕೊಳ್ಳಲು ನಿರ್ಧರಿಸುವ ಮೂಲಕ ಇಡೀ ರಾಜ್ಯದ ಜನರ ಎದುರು ನಗೆಪಾಟಲಿಗೆ ಈಡಾಗಿದ್ದಾರೆ. ಅವರಿನ್ನು ಸಾಮಾಜಿಕ ಕಾರ್ಯಕರ್ತ ಎನ್ನುವ ಸೇವೆಯಿಂದ ವಿಮುಕ್ತಿಗೊಳ್ಳಬೇಕಿದೆ. ಇಂತವರಿಂದ ನೈಜವಾಗಿಯೂ ಸಾಮಾಜಿಕ ಸೇವೆಯನ್ನು ಮಾಡುವವರ ಬಗ್ಗೆ ಜನ ಸಂಶಯಪಡುವಂತಾಗಿದೆ.
ಮೊದಲನೇಯದಾಗಿ ಒಬ್ಬ ಸಾಮಾಜಿಕ ಕಾರ್ಯಕರ್ತ ತನ್ನ ಬಳಿ ಯಾವುದೇ ಕೇಸ್ ಬಂದಾಗ ಅದನ್ನು ಸಮಗ್ರವಾಗಿ ಪರಿಶೀಲಿಸಬೇಕು. ನೀವು ಜನಪರವಾಗಿ ಯಾರದ್ದೋ ಮುಲಾಜಿಲ್ಲದೆ ಹೋರಾಡುವವರಾಗಿದ್ದರೆ, ಆ ಹೋರಾಟಕ್ಕೆ ಯಾವುದೇ ಧನ ಸಹಿತ ಪ್ರತಿಫಲಾಪೇಕ್ಷೆ ಪಡದವರಾಗಿದ್ದರೆ ನಿಮ್ಮ ಬಳಿ ಬರುವವರ ಸಂಖ್ಯೆ ಸಾಕಷ್ಟಿರುತ್ತದೆ. ಹಾಗೆ ಇಂತಿಂತಹ ಪ್ರಭಾವಿ ವ್ಯಕ್ತಿ ವಿರುದ್ಧ ಹೋರಾಡಬೇಕು, ಅವರಿಂದ ಇಂತವರಿಗೆ ಅನ್ಯಾಯವಾಗಿದೆ ಎಂದು ಯಾರಾದರೂ ನಿಮ್ಮ ಬಳಿ ಕೇಸು ತೆಗೆದುಕೊಂಡು ಬಂದರೆ ನೀವು ತಕ್ಷಣ ಹೋಗೋಣ, ಈಗಲೇ ದೂರು ಕೊಟ್ಟು ಬರೋಣ, ಮೀಡಿಯಾಗಳಿಗೆ ಹೇಳೋಣ, ಪ್ರಚಾರ ಸಿಗುತ್ತದೆ ಎಂದು ಹೇಳಿ ಹೊರಟರೆ ನೀವು ನೈಜ ಸಾಮಾಜಿಕ ಹೋರಾಟಗಾರರೇ ಅಲ್ಲ. ಯಾಕೆಂದರೆ ದಿನೇಶ್ ಆವತ್ತು ಪೊಲೀಸ್ ಠಾಣೆಯಲ್ಲಿ ದೂರು ಕೊಡಲು ಬರುವ ಮೊದಲೇ ಎಲ್ಲಾ ಮಾಧ್ಯಮಗಳಿಗೆ ಇಂತಿಂತಹ ಬ್ರೇಕಿಂಗ್ ನ್ಯೂಸ್ ಕೊಡುವಂತಹ ದೂರು ಕೊಡಲಿದ್ದೇನೆ. ದಯಮಾಡಿ ನಿಮ್ಮ ಮಾಧ್ಯಮದಿಂದ ಯಾರನ್ನಾದರೂ ಕಳುಹಿಸಿಕೊಡಿ ಎಂದೇ ಕೇಳಿಕೊಂಡಿದ್ದರು. ಅಲ್ಲಿಗೆ ಅವರ ಉದ್ದೇಶ ಮೊದಲ ಹಂತದಲ್ಲಿಯೇ ಸ್ಪಷ್ಟವಾಗಿತ್ತು. ಎರಡನೇಯದಾಗಿ ಸಂತ್ರಸ್ತೆ ಯಾರೆಂದು ಗೊತ್ತಿಲ್ಲ, ಎಲ್ಲಿದ್ದಾರೆ ಎಂದು ಗೊತ್ತಿಲ್ಲ, ಅವರೊಂದಿಗೆ ಮಾತನಾಡಿಲ್ಲ ಹೀಗೆ ಇಲ್ಲಗಳನ್ನು ತೆಗೆದುಕೊಂಡು ದೂರು ಕೊಡಲು ಹೋಗುವುದೇ ಶುದ್ಧ ಅಸಂಬದ್ಧ. ಮೂರನೇಯದಾಗಿ ಸಿಡಿ ಆ ಹೋಟೇಲಿನ ಅಲ್ಲಿ ಕೊಟ್ಟಿದ್ದು, ಈ ಹೋಟೇಲಿನ ಇಲ್ಲಿ ಕೊಟ್ಟಿದ್ದು ಎಂದು ಹೇಳುತ್ತಾ ಅದು ಸುಳ್ಳೆಂದು ಸಾಬೀತಾಗುತ್ತಿದ್ದಂತೆ ನಾನು ದೂರು ಹಿಂದೆ ಪಡೆದುಕೊಳ್ಳುತ್ತೇನೆ, ಜೀವ ಬೆದರಿಕೆ ಇದೆ ಎಂದು ಹೇಳುವುದು ಶುದ್ಧ ಮೂರ್ಖತನ. ಇಂತಹ ಪ್ರಕರಣಗಳಲ್ಲಿ ಜೀವ ಬೆದರಿಕೆ ಸಾಮಾನ್ಯ. ನಾನು ರಮೇಶ್ ಜಾರಕಿಹೊಳಿಯೇ ಜೀವ ಬೆದರಿಕೆ ಹಾಕಿರುತ್ತಾರೆ ಎಂದು ಹೇಳಲ್ಲ. ಅವರಿಗೆ ಗೊತ್ತೆ ಇಲ್ಲದೆ ಯಾರಾದರೂ ಅವರ ಬೆಂಬಲಿಗರು ಹಾಕಿರಲೂಬಹುದು. ಹೀಗಿರುವಾಗ ಸಾವಿಗೆ ಹೆದರಿ ಹಿಂದಕ್ಕೆ ಪಡೆದುಕೊಳ್ಳುತ್ತೇನೆ ಎಂದಾದರೆ ದಿನೇಶ್ ಕಲ್ಲಹಳ್ಳಿ ಸಾಮಾಜಿಕ ಕಾರ್ಯಕರ್ತ ಎನಿಸಿಕೊಳ್ಳಲು ಸಮರ್ಥರೇ ಅಲ್ಲ.
ಅವರು ದೂರು ಹಿಂದಕ್ಕೆ ಪಡೆದುಕೊಂಡ ಬಳಿಕ ಜನಸಾಮಾನ್ಯರಿಂದ ಬರುತ್ತಿರುವ ಮಾತು “ಕೋಟಿಗಟ್ಟಲೆ ಹಣ ಸಿಕ್ಕಿರಬಹುದು, ಆದ್ದರಿಂದ ದೂರು ಹಿಂದಕ್ಕೆ ಪಡೆದುಕೊಂಡಿದ್ದಾರೆ” ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಒಂದು ವೇಳೆ ಅದು ಹೌದಾದರೆ ಅದು ತನಿಖೆ ಆಗಿ ದಿನೇಶ್ ತಪ್ಪಿತಸ್ಥ ಹೌದಾದರೆ ಅವರಿಗೆ ಸೂಕ್ತ ಶಿಕ್ಷೆ ಆಗಬೇಕು. ಇನ್ನು ಒಂದು ಪ್ರಕರಣವನ್ನು ಸಾಮಾಜಿಕ ಕಾರ್ಯಕರ್ತನ ನೆಲೆಯಲ್ಲಿ ತೆಗೆದುಕೊಳ್ಳುವಾಗ ಆ ವ್ಯಕ್ತಿ ಪೂರ್ಣವಾಗಿ ಹೋಂವರ್ಕ್ ಮಾಡಿಕೊಂಡಿರಬೇಕು. ತಮ್ಮ ವಕೀಲರೊಂದಿಗೆ ಚರ್ಚೆ ಮಾಡಿ ಅವರು ಹೇಳಿದ ಹಾಗೆ ಈ ದೂರು ದಾಖಲಿಸಲು ಬಂದಿದ್ದೇನೆ ಎಂದು ದಿನೇಶ್ ಆವತ್ತು ಹೇಳಿದ್ದರು. ಹಾಗಾದ್ರೆ ವಕೀಲರೇ ಸರಿಯಿರಲಿಲ್ಲವಾ? ಯಾಕೆಂದರೆ ಯಾವುದೇ ಪ್ರಕರಣವನ್ನು ಸಾಮಾಜಿಕ ಕಾರ್ಯಕರ್ತರು ತೆಗೆದುಕೊಂಡು ಹೋರಾಡುವಾಗ ಅವರಿಗೆ ವಕೀಲರ ಸಹಾಯ ಬೇಕೆ ಬೇಕು. ಕಾನೂನು ಸಲಹೆ ಬಹುತೇಕ ಎಲ್ಲಾ ಪ್ರಕರಣಗಳಲ್ಲಿ ತೆಗೆದುಕೊಂಡೇ ಸಾಮಾಜಿಕ ಕಾರ್ಯಕರ್ತರು ಮುಂದಡಿ ಇಡಬೇಕಾಗುತ್ತದೆ. ಅನೇಕ ಸಲ ಸಾಮಾಜಿಕ ಕಾರ್ಯಕರ್ತರಿಗೆ ಉಚಿತ ಕಾನೂನು ನೆರವು ನೀಡಿ ಪರೋಕ್ಷವಾಗಿ ಜನಸೇವೆ ಮಾಡುವ ವಕೀಲರಿದ್ದಾರೆ. ಅದೇ ರೀತಿಯಲ್ಲಿ ವಕೀಲರು ತಪ್ಪಾಗಿ ಒಂದು ಪ್ರಕರಣವನ್ನು ಅಂದಾಜು ಮಾಡಿ ಸಲಹೆ ಕೊಡುವಾಗ ಹೆಚ್ಚು ಕಡಿಮೆ ಮಾಡಿದರೆ ಅದು ಸಾಮಾಜಿಕ ಕಾರ್ಯಕರ್ತರ ಕುತ್ತಿಗೆಗೆ ಬರುತ್ತದೆ. ಇನ್ನು ರಮೇಶ್ ಸಹೋದರ ಬಾಲಚಂದ್ರ ಜಾರಕಿಹೊಳಿಯವರು ಆ ವಿಡಿಯೋವನ್ನೇ ಫೇಕ್ ಅಥವಾ ನಕಲಿ ಎಂದು ಹೇಳಿದ್ದಾರೆ. ಇನ್ನೊಂದೆಡೆ ಅದು ಹನಿಟ್ರಾಪ್ ಎಂದು ಕೂಡ ಅವರಿಗೆ ಅನಿಸುತ್ತಿದೆ. ಫೇಕ್ ಆದರೆ ಅದು ದಿನೇಶ್ ಅವರಿಗೆ ದೊಡ್ಡ ಹಿನ್ನಡೆ ಮತ್ತು ಅವರಿಗೆ ಕಾನೂನಾತ್ಮಕವಾಗಿ ತೊಂದರೆ ಸೃಷ್ಟಿಸಬಹುದು. ಇನ್ನು ಹನಿಟ್ರಾಪ್ ಆದರೆ ದಿನೇಶ್ ಅವರನ್ನು ಯಾರಾದರೂ ಬಳಸಿ ನಂತರ ಕೈಬಿಟ್ಟಿರಬಹುದು. ಈ ವಿಡಿಯೋದಿಂದ ರಮೇಶ್ ಅವರಿಗೆ ರಾಜಕೀಯವಾಗಿ ನಷ್ಟವಾಗುವುದು ಏನೂ ಕಾಣುವುದಿಲ್ಲ. ಯಾಕೆಂದರೆ ಅವರೆಲ್ಲ ಪೇಮೆಂಟ್ ಮಾಡಿ ಪಕ್ಷಕ್ಕೆ ಬಂದವರು. ಅವರು ಹೀಗೆ ಅನೈತಿಕವಾಗಿ ನಡೆದುಕೊಂಡ ಕಾರಣಕ್ಕೆ ಟಿಕೆಟ್ ನಿರಾಕರಿಸಲು ಬಿಜೆಪಿ ಅಷ್ಟು ಸುಲಭವಾಗಿ ಹೋಗುವುದಿಲ್ಲ. ಒಂದಿಷ್ಟು ದಿನ ಚರ್ಚೆಯಲ್ಲಿದ್ದು ನಂತರ ಜನ ಕೂಡ ಮರೆಯುತ್ತಾರೆ. ಆದರೆ ದಿನೇಶ್ ಕಲ್ಲಹಳ್ಳಿಯವರು ಮಾತ್ರ ಮುಂದೆ ಯಾವುದೇ ಸಂಗತಿ ಹಿಡಿದುಕೊಂಡು ಹೋರಾಡಲು ನಿಂತರೆ ಜನ ಅವರನ್ನು ನಂಬುವುದಿಲ್ಲ. ಯಾಕೆಂದರೆ ರಾಜಕಾರಣಿ ಬೇಲಿ ಹಾರಿದರೂ ಅವರ ಕೈ ಹಿಡಿಯುವ ಮತದಾರರಿದ್ದಾರೆ. ಅದೇ ಸಾಮಾಜಿಕ ಕಾರ್ಯಕರ್ತ ತಪ್ಪು ಮಾಡಿದರೆ ಅವರನ್ನು ಜನಸಾಮಾನ್ಯರೇ ಕ್ಷಮಿಸುವುದಿಲ್ಲ. ಯಾಕೆಂದರೆ ನಮ್ಮ ಸಮಾಜ ರಾಜಕಾರಣಿಯ ಬಗ್ಗೆ ತುಂಬಾ ನಿರೀಕ್ಷೆ ಇಟ್ಟುಕೊಳ್ಲುವುದಿಲ್ಲ. ಸಾಮಾಜಿಕ ಹೋರಾಟಗಾರರ ಬಗ್ಗೆ ತುಂಬಾ ನಂಬಿಕೆ ಇರಿಸಿಕೊಂಡಿರುತ್ತದೆ. ಅಂತವರೇ ನಂಬಿಕೆ ಕಳೆದುಕೊಂಡರೆ ಜನರ ಆಶಾಗೋಪುರವೇ ಕಳಚಿಬೀಳುತ್ತದೆ!
Leave A Reply