ಮಹಾರಾಷ್ಟ್ರದಲ್ಲಿ ಪೊಲೀಸ್ ಅಧಿಕಾರಿಗಳನ್ನು ಸೇಲ್ಸ್ ಮೆನ್ ಮಾಡಿರುವ ಎನ್ ಸಿಪಿ ಗೃಹಸಚಿವರು!!
ಇದು ಇವತ್ತು ಹೊರಗೆ ಬಂದಿದೆ. ನಿರ್ಗಮಿತ ಪೊಲೀಸ್ ಕಮೀಷನರ್ ಒಬ್ಬರು ಹೇಳಿದ್ದು ಸದ್ಯ ಎಲ್ಲರಿಗೂ ಗೊತ್ತಾಗಿದೆ. ಆದರೆ ಹೀಗೆ ಪೊಲೀಸ್ ಅಧಿಕಾರಿಗಳು ಹೇಳದ ಅದೆಷ್ಟು ಸತ್ಯಗಳು ಅವರ ಹೊಟ್ಟೆಯೊಳಗೆ ಅವಿತುಕೊಂಡು ಹಾಗೆ ಅವರ ಮರಣ ನಂತರ ಮಣ್ಣಿನಡಿ ಸಮಾಧಿಯಾಗಿದೆಯೋ, ಎಷ್ಟು ಸತ್ಯಗಳು ಅವರ ನಿಧನದೊಂದಿಗೆ ಬೆಂಕಿಯೊಂದಿಗೆ ಲೀನವಾಗಿದೆಯೋ ಯಾರಿಗೆ ಗೊತ್ತು. ಮುಂಬೈಯ ನಿರ್ಗಮಿತ ಪೊಲೀಸ್ ಕಮೀಷನರ್ ಪರಂಬೀರ್ ಸಿಂಗ್ ಅವರು ಗೃಹ ಸಚಿವ ಅನಿಲ್ ದೇಶಮುಖ್ ತಮಗೆ ನೀಡಿರುವ ಟಾರ್ಗೆಟ್ ಬಗ್ಗೆ ಮುಖ್ಯಮಂತ್ರಿ ಉದ್ಭವ ಠಾಕ್ರೆಯವರಿಗೆ ಬರೆದ ಪತ್ರ ಇವತ್ತು ಇಡೀ ರಾಜಕೀಯ ವ್ಯವಸ್ಥೆಯ ಬಣ್ಣವನ್ನು ಬಯಲು ಮಾಡಿದೆ. ಯಾವುದೇ ಒಂದು ವ್ಯಾಪಾರಿ ಕ್ಷೇತ್ರದಲ್ಲಿ ಸೇಲ್ಸ್ ಮೆನ್ ಗಳಿಗೆ ಇಂತಿಷ್ಟು ಎಂದು ಟಾರ್ಗೆಟ್ ಇರುತ್ತದೆ. ಅಷ್ಟು ಟಾರ್ಗೆಟ್ ಪೂರ್ಣಗೊಳಿಸಿದರೆ ಇಂತಿಷ್ಟು ಸಂಬಳ, ಕಮೀಷನ್ ಹಾಗೂ ಇತರ ಭತ್ಯೆಗಳ ಬಗ್ಗೆ ಮಾತುಕತೆ ಆಗಿರುತ್ತದೆ. ಆದರೆ ಸೇವಾ ಕ್ಷೇತ್ರದಲ್ಲಿ ಮುಖ್ಯವಾಗಿ ಪೊಲೀಸ್ ಇಲಾಖೆಯಲ್ಲಿಯೂ ಇಂತಹ ಟಾರ್ಗೆಟ್ ಇದೆ ಎಂದು ಗೊತ್ತಾಗುವಾಗ ಸ್ವಸ್ಥ ಸಮಾಜ ಈ ರಾಜಕಾರಣಿಗಳ ಬಗ್ಗೆ ಇನ್ನಷ್ಟು ಅಸಹ್ಯ ಪಡುವುದು ಸಹಜ. ಭಾರತೀಯ ಜನತಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಮಾಡಿದಿದ್ದರೆ ಐದು ವರ್ಷ ಸಮರ್ಪಕವಾಗಿ ಶಿವಸೇನೆ ಅಧಿಕಾರ ಮಾಡಬಹುದಿತ್ತು. ಆದರೆ ಅಹಂ ಮತ್ತು ದುರಾಸೆ ಶಿವಸೇನೆಯನ್ನು ಹಸಿದ ಹುಲಿಗಳೊಂದಿಗೆ ನೆಂಟಸ್ತಿಕೆ ಮಾಡುವಂತೆ ಪ್ರೇರೆಪಿಸಿತು. ಹಸಿದ ಹುಲಿಗಳಾದರೂ ಒಮ್ಮೆ ಹೊಟ್ಟೆ ತುಂಬಿದ ನಂತರ ಎದುರಿಗೆ ಆಹಾರ ಇದ್ದರೂ ತಿನ್ನಲ್ಲ. ಆದರೆ ಕಾಂಗ್ರೆಸ್ ಹಾಗೂ ವಿಶೇಷವಾಗಿ ನಮ್ಮ ರಾಜ್ಯದಲ್ಲಿ ಜೆಡಿಎಸ್ ಇರುವಂತೆ ಅವಕಾಶವಾದಿ ರಾಜಕಾರಣ ಮಾಡುತ್ತಾ ಬರುತ್ತಿರುವ ಎನ್ ಸಿಪಿ ಹಸಿದ ಬಕಾಸುರನ ಲೆವೆಲ್ಲಿಗೆ ಬಂದಿದ್ದರು. ಈ ಅಧಿಕಾರ ಎಷ್ಟು ದಿನ ಎಂದು ಗೊತ್ತಿಲ್ಲ, ಒಂದೊಂದು ದಿನವೂ ಮೃಷ್ಟಾನ್ನ ಭೋಜನ ಮಾಡೋಣ ಎಂದು ಅವರು ನಿರ್ಧರಿಸಿಬಿಟ್ಟಿದ್ದರು. ಅದಕ್ಕಾಗಿ ಟಾರ್ಗೆಟ್ ಕೊಟ್ಟಿದ್ದು ಪೊಲೀಸ್ ಕಮೀಷನರ್ ಆಗಿದ್ದ ಸಿಂಗ್ ಅವರಿಗೆ. ಅದು ಕೂಡ ಒಂದೊಂದು ತಿಂಗಳಿಗೆ ನೂರು ಕೋಟಿ. ಅದು ಕೂಡ ಕೇವಲ ಪಬ್ ಹಾಗೂ ಬಾರ್ ಗಳಿಂದ. ನೀವೆ ಊಹಿಸಿ ಒಂದು ಪಕ್ಷ ಅಧಿಕಾರದಲ್ಲಿ ಇದ್ದಾಗ ಹೀಗೆ ಎಲ್ಲೆಲ್ಲಿಂದ ಗಬರಿ ತಿನ್ನಬಹುದು ಎಂದು ಎನ್ ಸಿಪಿ ತೋರಿಸಿಕೊಟ್ಟಂತೆ ಆಗಿದೆ. ರಾಜಕಾರಣದಲ್ಲಿ ಎಡಬಿಡಂಗಿ ಆಟ ಆಡುತ್ತಿರುವುದು ಮಾತ್ರವಲ್ಲ ತಮ್ಮ ಮಾತು, ಕೃತಿಯಲ್ಲಿಯೂ ಅಪ್ಪಟ ಅರೆಹುಚ್ಚರಂತೆ ಆಡುವ ಎನ್ ಸಿಪಿ ನಾಯಕರು ಈ ಗುಟ್ಟು ಹೊರಗೆ ಬಿದ್ದ ಬಳಿಕ ಅಕ್ಷರಶ: ಮೀನಿನಂತೆ ಆಡುತ್ತಿದ್ದಾರೆ. ಅವರ ಪರಮೋಚ್ಚ ನಾಯಕ ಶರದ್ ಪವಾರ್ ಅವರು ಒಂದು ಸಲ ಈ ಬಗ್ಗೆ ತನಿಖೆ ಆಗಬೇಕು ಎಂದು ಹೇಳಿಕೆ ನೀಡಿದರು. ಆದರೆ ನಂತರ ಯಾವ ಒತ್ತಡ ಬಂತೋ ಏನು ಕಥೆಯೋ ಉಲ್ಟಾ ಹೊಡೆದು ಬಿಟ್ಟರು. ಪರಂಬೀರ್ ಸಿಂಗ್ ಈ ಟಾರ್ಗೆಟ್ ಬಂದ ಒಂದು ತಿಂಗಳ ನಂತರ ಯಾಕೆ ಮುಖ್ಯಮಂತ್ರಿಗೆ ಪತ್ರ ಬರೆದರು ಎಂದು ಕೇಳಲು ಶುರು ಮಾಡಿದರು. ಅದರೊಂದಿಗೆ ಫೆಬ್ರವರಿಯಲ್ಲಿ ಅನಿಲ್ ದೇಶಮುಖ್ ಹೀಗೆ ಸೂಚನೆ ಕೊಡಲು ಸಾಧ್ಯವಿಲ್ಲ. ಅವರು ಆಗ ಕೊರೊನಾದಿಂದ ಮಲಗಿದ್ದರು ಎಂದು ಹೇಳಿ ನಗೆಪಾಟಲಿಗೆ ಗುರಿಯಾಗಿದ್ದಾರೆ. ಮೊದಲನೇಯದಾಗಿ ಅವರ ಎರಡು ಸಮರ್ಥನೆಗಳು ಕೂಡ ಅರ್ಥಹೀನ. ಯಾಕೆಂದರೆ ಗೃಹಸಚಿವರು ಒಮ್ಮೆ ಹೇಳಿದ ಕೂಡಲೇ ನೇರವಾಗಿ ಪತ್ರವನ್ನು ತೆಗೆದುಕೊಂಡು ನನಗೆ ಹೀಗಿಗೆ ಸೂಚನೆ ಕೊಡಲಾಗಿದೆ ಎಂದು ಸಿಎಂಗೆ ಪತ್ರ ಬರೆಯಲು ಅದೇನು ತುರ್ತು ಪರಿಸ್ಥಿತಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪತ್ರ ಅಲ್ಲ. ಒಂದು ತಿಂಗಳು ಬಹಳ ಕಿರು ಅವಧಿ. ಅವರು ಒಂದು ತಿಂಗಳೊಳಗಾದರೂ ಪತ್ರ ಬರೆದರಲ್ಲ. ಅದೇ ದೊಡ್ಡದು. ಅದೇ ಕೆಲವರು ಇಂತಹ ವಿಷಯಗಳನ್ನು ತಾವು ನಿವೃತ್ತರಾದ ಎಷ್ಟೋ ವರ್ಷಗಳ ಬಳಿಕ ತಮ್ಮ ಆತ್ಮಚರಿತ್ರೆಯಲ್ಲಿ ಹೆಸರು ಹೇಳದೆ ಬರೆಯುವುದುಂಟು. ಹಾಗೆ ಏನೂ ಆಗಿಲ್ಲವಲ್ಲ. ಕನಿಷ್ಟ ಸತ್ಯ ಅಷ್ಟು ಬೇಗ ಹೊರಗೆ ಬಂತಲ್ಲ. ಇನ್ನು ಫೆಬ್ರವರಿಯಲ್ಲಿ ಅನಿಲ್ ದೇಶಮುಖ್ ಅವರಿಗೆ ಕೊರೊನಾ ಬಂದಿತ್ತು, ಹೇಗೆ ಹೇಳಿದ್ದಾರೆ ಎಂದು ಶರದ ಪವಾರ್ ಕೇಳುತ್ತಿದ್ದಾರೆ. ಸ್ವಾಮಿ, ಪವಾರ್ ಅವರೇ, ಕೊರೊನಾ ಬಂದರೆ ಬಾಯಿಯಿಂದ ಹೇಳಲು ಆಗುವುದಿಲ್ಲವೇ? ಅಷ್ಟಕ್ಕೂ ಕೊರೊನಾ ಇಡೀ ತಿಂಗಳು ಬಂದಿರುತ್ತಾ? ಇನ್ನು ಇಲ್ಲಿ ಅನಿಲ್ ಅವರು ಕ್ಯಾಬಿನೆಟ್ ಮೀಟಿಂಗ್ ಮಾಡಿ ಹೇಳಬೇಕಾಗಿಲ್ಲ. ಎಲ್ಲಿಯಾದರೂ ತಮ್ಮ ಗುಪ್ತ ಜಾಗದಲ್ಲಿ ಕರೆದು ಹೇಳಿದರೆ ಆಯಿತು. ಆ ಬಗ್ಗೆ ತನಿಖೆಗೆ ತಾವು ಕೂಡ ಆಗ್ರಹಿಸಿ. ಆಗ ಸತ್ಯ ಹೊರಗೆ ಬಂದೇ ಬರುತ್ತದೆ ಅಲ್ವಾ?
ಇನ್ನು ಈ ವಿಷಯದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎನ್ನುವುದರ ಬಗ್ಗೆ ಕಾಂಗ್ರೆಸ್ ನಲ್ಲಿ ಗೊಂದಲ ಇದೆ. ಇದನ್ನು ಸಮರ್ಥಿಸಿದರೆ ಕಾಂಗ್ರೆಸ್ ಈಗಲೇ ಭ್ರಷ್ಟರ ಪಾರ್ಟಿ ಎಂದು ಮಹಾರಾಷ್ಟ್ರ ಸಹಿತ ರಾಷ್ಟ್ರದ ಜನ ಅಂದುಕೊಂಡಿದ್ದಾರೆ. ಅದು ಇನ್ನು ಕೂಡ ಗಟ್ಟಿಯಾಗುತ್ತದೆ. ಅದೇ ಕಾಂಗ್ರೆಸ್ ವಿರೋಧಿಸಿದರೆ ಒಂದೇ ಮೈತ್ರಿ ಪಕ್ಷದಲ್ಲಿ ಇದ್ದು ಅವರ ಬೆಂಬಲಕ್ಕೆ ನಿಂತಿಲ್ಲ, ಇವರು ತಮ್ಮ ಮೈತ್ರಿ ಪಕ್ಷವನ್ನೇ ನಂಬುವುದಿಲ್ಲ ಎನ್ನುವ ಸಂದೇಶ ಇಡೀ ರಾಷ್ಟ್ರಕ್ಕೆ ಹೋಗಲಿದೆ. ಕಾಂಗ್ರೆಸ್ ಮುಖಂಡರು ಅನೇಕರು ಈ ಬಗ್ಗೆ ತನಿಖೆಗೆ ಅಪಸ್ವರ ಎತ್ತಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷದ ಮುಖಂಡ ಸಂಜಯ್ ನಿರುಪಮ್ ಅವರಿಗೆ ಎನ್ ಸಿಪಿ ಗೃಹ ಸಚಿವರ ಈ ಸೂಚನೆ ಬಿಸಿತುಪ್ಪದಂತೆ ಆಗಿದೆ. ಕೇವಲ ಮುಂಬೈಯಲ್ಲಿಯೇ ನೂರು ಕೋಟಿ ಸಂಗ್ರಹ ಮಾಡಲು ಸೂಚನೆ ಕೊಟ್ಟಿರುವ ಇವರು ಇಂತಹ ಮೆಟ್ರೋ ಸಿಟಿಗಳನ್ನು ಇನ್ನಷ್ಟು ಹೊಂದಿರುವ ರಾಜ್ಯದ ಇತರ ಜಿಲ್ಲೆಗಳಿಂದ ಇನ್ನಷ್ಟು ಸಂಗ್ರಹ ಮಾಡುತ್ತಾರೋ ಎಂದು ಹೇಳಿದ್ದಾರೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಹೇಳಿದ್ದಾರೆ. ಗೃಹಸಚಿವರ ಇಂತಹ ಸೂಚನೆ ಒಂದು ರೀತಿಯಲ್ಲಿ ಸರಕಾರಗಳೇ ಹಫ್ತಾ ವಸೂಲಿ ಮಾಡಿದಂತೆ ಆಗುತ್ತದೆ. ಹಿಂದೆ ರೌಡಿ, ಗೂಂಡಾ ಎಲಿಮೆಂಟ್ ಗಳು ಅನಧಿಕೃತ, ಅಧಿಕೃತ ಉದ್ದಿಮೆಗಳಿಂದ ಪ್ರೊಟೆಕ್ಷನ್ ಮನಿ ಎಂದು ವಸೂಲಿ ಮಾಡುತ್ತಿದ್ದವು. ಈಗ ಅದನ್ನು ಸರಕಾರಗಳೇ ನಿರ್ವಹಿಸಿಕೊಂಡು ಹೋಗುತ್ತಿವೆ ಎನ್ನುವ ಭಾವನೆ ಮಹಾರಾಷ್ಟ್ರದ ಗೃಹಸಚಿವರ ವಸೂಲಿಬಾಜಿ ಹೇಳಿಕೆಯಿಂದ ಸೃಷ್ಟವಾಗಿದೆ. ಇನ್ನು ಪೊಲೀಸರೇ ವಸೂಲಿ ಮಾಡುವುದರಿಂದ ಯಾರು ಕೊಡುವುದಿಲ್ಲ ಅಂತಹ ಬಾರ್, ಪಬ್ ಗಳ ಮೇಲೆ ರೇಡ್ ಮಾಡಿ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಲ್ಲ. ಇನ್ನು ಇದು ಪಬ್, ಬಾರ್ ಗಳಿಗೆ ಮಾತ್ರ ಸೀಮಿತವಾಗಿಲ್ಲ. ಬೇರೆ ಬೇರೆ ಉದ್ಯಮಿಗಳು ಆಡಳಿತ ಪಕ್ಷದ ಸಚಿವರಿಗೆ ಇಂತಿಷ್ಟು ಎಂದು ಕಪ್ಪಕಾಣಿಕೆ ಕೊಟ್ಟೆ ಕೊಡಬೇಕು. ಒಟ್ಟಿನಲ್ಲಿ ಯಾಕೋ ಮಹಾರಾಷ್ಟ್ರ ಒಂದು ಕಡೆಯಿಂದ ಕೊರೊನಾ ಸ್ಫೋಟದಿಂದ ಒದ್ದಾಡುತ್ತಿರುವಾಗ ಹೀಗೆ ಎರಡು ಕೈ ಬಾಚಿ ತಿನ್ನಲು ಕುಳಿತಿರುವ ರಾಜಕಾರಣಿಗಳ ವರ್ತನೆ ಅಸಹ್ಯ ಎನಿಸುತ್ತಿದೆ!
Leave A Reply