ವಾಜೆ ಬೆನ್ನಿಗೆ ಠಾಕ್ರೆ, ದೇಶಮುಖ್ ಹೆಗಲ ಮೇಲೆ ಪವಾರ್ ಕೈ!!
ಮಹಾರಾಷ್ಟ್ರದಲ್ಲಿ ಅಘಾಡಿ ಸರಕಾರ ಲಗಾಡಿ ಹೊಡೆಯುತ್ತಿರುವುದಕ್ಕೆ ಮುನ್ಸೂಚನೆ ಸಿಗುತ್ತಿದೆ. ಅಲ್ಲಿ ಪೊಲೀಸ್ ಅಧಿಕಾರಿಗಳು ವಿವಿಧ ಕಾರಣಗಳಿಗೆ ಸುದ್ದಿಯಾಗುತ್ತಿದ್ದಾರೆ. ಪೊಲೀಸ್ ಕಮೀಷನರ್ ಅವರಿಗೆ ಪಬ್, ಬಾರ್ ಗಳಿಂದ ನೂರು ಕೋಟಿಯ ಟಾರ್ಗೆಟ್ ವಸೂಲು ಮಾಡುವ ಬಗ್ಗೆ ಸ್ವತ: ಗೃಹ ಸಚಿವರೇ ಸೂಚನೆ ಕೊಟ್ಟ ವಿಷಯದ ಕುರಿತು ನಿನ್ನೆ ನಾನು ಬರೆದಿದ್ದೆ. ಅದರ ಜೊತೆಗೆ ಇನ್ನೊಬ್ಬ ಪೊಲೀಸ್ ಸುದ್ದಿಯಾಗುತ್ತಿದ್ದಾರೆ. ಗೃಹ ಸಚಿವ ಅನಿಲ್ ದೇಶಮುಖ್ ಅವರು ಎನ್ ಸಿಪಿಯ ಮುಖಂಡರಾಗಿರುವುದರಿಂದ ಅವರ ಬೆಂಬಲಕ್ಕೆ ಶರದ್ ಪವಾರ್ ನಿಂತಿದ್ದಾರೆ. ಇನ್ನು ಸಚಿನ್ ವಾಜೆಯ ಬೆಂಬಲಕ್ಕೆ ಸ್ವತ: ಮುಖ್ಯಮಂತ್ರಿ ಉದ್ದವ್ ಠಾಕ್ರೆ ನಿಂತಿದ್ದಾರೆ. ಅದು ಯಾಕೆ ಎನ್ನುವುದು ರಾಜಕೀಯ ಲೋಕದ ಮತ್ತೊಂದು ಅಸಹ್ಯದ ಮುಖ. ದೇಶದ ಪರಮ ಶ್ರೀಮಂತ ಮುಕೇಶ್ ಅಂಬಾನಿ ಅರಮನೆಯ ಹೊರಗೆ ಜಿಲೆಟಿನ್ ತುಂಬಿದ ಕಾರು ನಿಂತಿದ್ದು ನಿಮಗೆ ನೆನಪಿರಬಹುದು. ಅದಕ್ಕೆ ಸಿಕ್ಕಿದ ರೆಕ್ಕೆಪುಕ್ಕ, ಪಾಕಿಸ್ತಾನದ ಉಗ್ರಗಾಮಿ ಸಂಘಟನೆಗಳು ಭಾಗಿಯಾಗಿದೆಯಾ ಎನ್ನುವುದರ ಬಗ್ಗೆ ಇದ್ದ ಗುಮಾನಿ, ನಂತರ ಜೈಲಿನೊಳಗಿನಿಂದ ಸಂಚು ನಡೆದಿತ್ತು ಎನ್ನುವುದರ ಬಗ್ಗೆ ಸಾಕ್ಷ್ಯ, ಕೊನೆಗೆ ಆ ವಾಹನದ ಅಸಲಿ ನಂಬರ್ ಬೋರ್ಡ್ ಒಬ್ಬ ಪೊಲೀಸ್ ಅಧಿಕಾರಿಯ ಮನೆಯಲ್ಲಿಯೇ ಸಿಕ್ಕಿದ್ದು ಎಲ್ಲವೂ ನಿಮ್ಮ ಅರಿವಿಗೆ ಮಾಧ್ಯಮಗಳ ಮೂಲಕ ಬಂದಿರಬಹುದು. ಅಂತಿಮವಾಗಿ ಅದು ಮಹಾರಾಷ್ಟ್ರದ ಅಸಿಸ್ಟೆಂಟ್ ಪೊಲೀಸ್ ಇನ್ಸಪೆಕ್ಟರ್ ಸಚಿನ್ ವಾಜೆ ಮನೆಯ ಬಾಗಿಲಿಗೆ ಪ್ರಕರಣ ಹೋಗಿ ನಿಂತಿದೆ. ಈಗ ಈ ಕಳಂಕಿತ ಅಧಿಕಾರಿಯ ಬೆನ್ನಿಗೆ ಮುಖ್ಯಮಂತ್ರಿಯವರೇ ಯಾಕೆ ನಿಂತಿದ್ದಾರೆ ಎನ್ನುವುದನ್ನು ಹೇಳುತ್ತೇನೆ. ಈ ಸಚಿನ್ ವಾಜೆ ಯಾವುದೋ ಅಕ್ರಮ ಕೆಲಸ ಮಾಡಿದ ಆರೋಪದ ಮೇಲೆ ಹದಿನಾರು ವರ್ಷಗಳ ಅಮಾನತುಗೊಂಡಿದ್ದರು. ಅಮಾನತು ಆದ ನಾಲ್ಕು ವರ್ಷಗಳ ಬಳಿಕ ಇದೇ ವಾಜೆ ಶಿವಸೇನೆಗೆ ಸೇರಿದರು. ಕೆಲವು ಕಳಂಕಿತರನ್ನು ತಮ್ಮ ಜೊತೆ ಅಗತ್ಯಕ್ಕೆ ತಕ್ಕಂತೆ ಇಟ್ಟುಕೊಳ್ಳುವ ಅಭ್ಯಾಸ ಕೆಲವರಿಗೆ ಇದೆ. ಹಾಗೆ ಶಿವಸೇನೆಯಲ್ಲಿದ್ದ ವಾಜೆ ಯಾವಾಗ ಶಿವಸೇನೆ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂತೋ ತಕ್ಷಣ ಚಿಗಿತುಕೊಂಡರು. ಶಿವಸೇನೆಯ ಮುಖಂಡರಿಗೂ ಏನು ಅನಿಸಿತು ಎಂದರೆ ನಮ್ಮವ ಒಬ್ಬ ನೇರವಾಗಿ ಇಲಾಖೆಯಲ್ಲಿ ಇದ್ದರೆ ನಮಗೂ ಸುಲಭ. ಆದ್ದರಿಂದ ವಾಜೆಗೆ ಯಾವುದೇ ಕಷ್ಟ ಆಗದೇ ಇಲಾಖೆಗೆ ಮತ್ತೊಮ್ಮೆ ಪ್ರವೇಶ ಸಿಕ್ಕಿತು. ಅದು ಅಕ್ಷರಶ: ತಪ್ಪು. ಯಾಕೆಂದರೆ ವಾಜೆ ಮೇಲಿರುವ ಆರೋಪ ಇನ್ನೂ ದಡ ಸೇರಿಲ್ಲ. ಆ ಬಗ್ಗೆ ಇವರು ನಿರ್ದೋಶಿ ಎಂದು ಸಾಬೀತಾಗಿಲ್ಲ. ಆದರೆ ವಾಜೆಗೆ ರಕ್ಷಣೆಗೆ ಇದ್ದದ್ದು ಶಿವಸೇನೆಯ ಮುಖ್ಯ ನಾಯಕರೂ, ಮುಖ್ಯಮಂತ್ರಿಯೂ ಆಗಿರುವ ಠಾಕ್ರೆ ಅಲ್ವಾ? ಇನ್ನೇನು ತೊಂದರೆ. ಅಷ್ಟೇ ಅಲ್ಲ, ವಾಜೆಗೆ ಶಿವಸೇನೆಯ ಮುಖಂಡರು ತಮಗಾದವರನ್ನು ಹಣಿಯಲು ಒಂದು ಗುರಾಣಿಯನ್ನಾಗಿ ಬಳಸಿಕೊಂಡರು. ಹೈಪ್ರೋಫೈಲ್ ಪ್ರಕರಣಗಳನ್ನು ವಾಜೆಗೆ ಒಪ್ಪಿಸಲಾಯಿತು. ಅದರಲ್ಲಿ ರಿಪಬ್ಲಿಕ್ ವಾಹಿನಿಯ ಮುಖ್ಯಸ್ಥ ಅರ್ನಬ್ ಗೋಸ್ವಾಮಿಯವರನ್ನು ಮನೆಯಿಂದ ಎತ್ತಾಕಿಕೊಂಡು ಸ್ಟೇಶನ್ನಿಗೆ ಕರೆದುಕೊಂಡ ಪ್ರಕರಣ ಕೂಡ ಸೇರಿದೆ. ಆ ಕೇಸಿನಲ್ಲಿಯೂ ಶಿವಸೇನೆಗೆ ಹಿನ್ನಡೆಯಾಗಿದೆ. ವಾಜೆಯಂತಹ ಕೆಳದರ್ಜೆಯ ಅಧಿಕಾರಿಯನ್ನು ದೊಡ್ಡ ದೊಡ್ಡ ಕೇಸುಗಳಿಗೆ ಅಸ್ತ್ರವನ್ನಾಗಿ ಬಳಸಿಕೊಳ್ಳುವುದರ ಬಗ್ಗೆ ಉನ್ನತ ಅಧಿಕಾರಿಗಳಿಗೆ ಕೂಡ ಅಸಮಾಧಾನ ಇತ್ತು. ಆದರೆ ಏನೂ ಮಾಡುವಂತಿರಲಿಲ್ಲ. ಯಾಕೆಂದರೆ ವಾಜೆ ಶಿವಸೇನೆಯ ಕಾರ್ಯಕರ್ತ. ಆದರೆ ವಾಜೆಗೆ ಹೇಗೂ ತಮ್ಮದೇ ಸರಕಾರ ಇದೆಯಲ್ಲ, ತಮ್ಮ ಪವರ್ ಏನಿದೆ ಎಂದು ಇಡೀ ಮಹಾರಾಷ್ಟ್ರಕ್ಕೆ ತೋರಿಸಬೇಕೆಂಬ ಹಪಾಹಪಿ ಶುರುವಾಯಿತು. ಸಣ್ಣಪುಟ್ಟ ಪ್ರಕರಣ ಎತ್ತಿಕೊಂಡರೆ ಪ್ರಯೋಜನವಿಲ್ಲ. ರಾಷ್ಟ್ರಮಟ್ಟದಲ್ಲಿ ಮಿಂಚಬೇಕೆಂದರೆ ಹುತ್ತಕ್ಕೆ ಕೈ ಹಾಕಬೇಕೆಂಬ ದುರಾಸೆ ಆಯಿತು. ಅಂತಹ ವಾಜೆ ತಮ್ಮ ಇಮೇಜನ್ನು ಇಲಾಖೆಯಲ್ಲಿ ಮತ್ತೆ ತೋರಿಸಲು ಹೋಗಿ ಅಧಿಕ ಪ್ರಸಂಗ ಮಾಡಿಬಿಟ್ಟರು. ಅಂಬಾನಿ ಅರಮನೆಯ ಹೊರಗೆ ತಾವೇ ಜಿಲೆಟಿನ್ ತುಂಬಿದ ಕಾರು ನಿಲ್ಲಿಸಿ ಆ ಕೇಸು ತಮಗೆ ಸಿಗುವಂತೆ ಮಾಡಿ ಆ ಮೂಲಕ ಮತ್ತೆ ಯಾರನ್ನಾದರೂ ಸಿಕ್ಕಿಸಿ ಮಿಂಚೋಣ ಎಂದು ಅಂದುಕೊಂಡಿದ್ದ ವಾಜೆಗೆ ತಾವೇ ಸ್ಟಂಪ್ ಆಗುತ್ತೇವೆ ಎಂದು ಗೊತ್ತಿರಲಿಲ್ಲ. ಎನ್ ಐಎ ಆ ಪ್ರಕರಣವನ್ನು ಕೈಗೆತ್ತಿಕೊಳ್ಳುತ್ತಿದ್ದಂತೆ ವಾಜೆಯ ಬಣ್ಣ ಬಯಲಾಗಿತ್ತು. ಅದರೊಂದಿಗೆ ವಾಜೆಯ ಬೇರೆ ಬೇರೆ ರೂಪ ಕೂಡ ಪ್ರಪಂಚದ ಮುಂದೆ ಬಂತು. ಹೆಚ್ಚೆಂದರೆ ಐವತ್ತು ಸಾವಿರ ರೂಪಾಯಿ ಸಂಬಳ ಬರುತ್ತಿದ್ದ ವ್ಯಕ್ತಿಯೊಬ್ಬನ ಬಳಿ ಎರಡು ಮರ್ಸಿಡಿಸ್, ಒಂದು ರಾಲ್ಸ್ ರೋಯ್, ಒಂದು ಇನ್ನೊವಾ ಹಾಗೂ ಮತ್ತೊಂದು ಕಾರು ಕೂಡ ಇರುವುದು ಪತ್ತೆಯಾಗಿದೆ.
ಇನ್ನು ಪರಂಬೀರ್ ಸಿಂಗ್ ತಾವು ಗೃಹಸಚಿವರ ವಿರುದ್ಧ ಮಾಡಿರುವ 100 ಕೋಟಿ ಟಾರ್ಗೆಟ್ ವಿಷಯದಲ್ಲಿ ತನಿಖೆಗೆ ಆದೇಶ ನೀಡಬೇಕೆಂದು ಸುಪ್ರೀಂಕೋರ್ಟ್ ಗೆ ಮನವಿ ಮಾಡಿದ್ದಾರೆ. ಅವರನ್ನು ಈಗ ಮುಂಬೈ ಕಮೀಷನರ್ ಸ್ಥಾನದಿಂದ ವರ್ಗಾವಣೆ ಮಾಡಲಾಗಿದೆ. ಇನ್ನು ಈ ವರ್ಗಾವಣೆಗಳ ಬಗ್ಗೆ ಸಿಬಿಐ ತನಿಖೆ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ. ಇನ್ನು ಗೃಹಸಚಿವ ಅನಿಲ್ ದೇಶಮುಖ್ ಮನೆಯ ಸಿಸಿಟಿವಿಗಳನ್ನು ತಮ್ಮ ನೂರು ಕೋಟಿ ಆರೋಪಕ್ಕೆ ಸಾಕ್ಷಿಗಳಾಗಿ ಮಾಡಬೇಕಾಗಿ ವಿನಂತಿಸಿದ್ದಾರೆ. ಅವರ ಬಳಿ ಸಾಕಷ್ಟು ಮಾಹಿತಿ ಇರುವುದರಿಂದ ಅವರು ಧೈರ್ಯವಾಗಿ ದೇಶದ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಅದೇ ಸಚಿನ್ ವಾಜೆ ತಾವು ಸಿಕ್ಕಿಬೀಳುವುದಿಲ್ಲ ಎಂದು ಧೈರ್ಯವಾಗಿ ಅಂಬಾನಿ ಬಂಗ್ಲೆ ಮುಂದೆ ಜಿಲೆಟಿನ್ ಗಾಡಿಯನ್ನು ನಿಲ್ಲಿಸಿದ್ದಾರೆ. ಒಟ್ಟಿನಲ್ಲಿ ಮಹಾರಾಷ್ಟ್ರ ಸರಕಾರದಲ್ಲಿ ಈಗ ಎಲ್ಲವೂ ಅಸಹ್ಯಕ್ಕೆ ಬಂದು ತಲುಪಿದೆ. ಜಾಗತಿಕವಾಗಿ ಸ್ಕಾಟ್ಲೆಂಡ್ ಪೊಲೀಸರನ್ನು ಬಿಟ್ಟರೆ ನಂತರದ ಶ್ರೇಣಿಯಲ್ಲಿ ಇರುವವರು ಮುಂಬೈ ಪೊಲೀಸರು. ಆದರೆ ರಾಜಕೀಯ ಎನ್ನುವುದು ಅವರನ್ನು ಹೇಗೆ ಬಳಸುತ್ತದೆ ಎನ್ನುವುದು ಈಗ ಗೊತ್ತಾಗುತ್ತಿದೆ. ವಾಜೆ ಯೂನಿಫಾರ್ಮಂನಲ್ಲಿರುವ ಶಿವಸೇನೆ ಕಾರ್ಯಕರ್ತರಂತೆ ವರ್ತಿಸಿದ್ದಾರೆ. ಪರಂಬೀರ್ ಸಿಂಗ್ ಈ ಸರಕಾರದ ಪರದೆ ಸರಿಸಲು ಹೆಣಗಾಡುತ್ತಿದ್ದಾರೆ!
Leave A Reply