ಈಶು ಮೇಲೆ ನೋಡಿ ಉಗಿದದ್ದೇ ಆಶ್ಚರ್ಯ!!
ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮುಂದಿನ ಎರಡು ವರ್ಷ ಏನೂ ಮಾಡದಿದ್ದರೂ ಅವರ ಕೈಗೆ ಬೇಕಾದಷ್ಟು ಅಸ್ತ್ರಗಳನ್ನು ಕೊಡಲು ಭಾರತೀಯ ಜನತಾ ಪಾರ್ಟಿಯ ಸರಕಾರವೇ ಸರ್ವಸಿದ್ಧತೆ ಮಾಡಿಕೊಂಡಿದೆ ಎನ್ನುವುದು ಈಗ ಮೇಲ್ನೋಟಕ್ಕೆ ಗೋಚರವಾಗುತ್ತಿರುವ ಸಂಗತಿ. ಇಲ್ಲದಿದ್ದರೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೀಗೆ ತಮ್ಮ ಇಲಾಖೆಯಲ್ಲಿ ಮುಖ್ಯಮಂತ್ರಿ ಯಡ್ಯೂರಪ್ಪನವರು ಮಾಡುತ್ತಿರುವ ಹಸ್ತಕ್ಷೇಪವನ್ನು ಬೀದಿಗೆ ತರುತ್ತಿರಲಿಲ್ಲ. ಅವರು ತಮ್ಮ ಇಲಾಖೆಯ ಕಚೇರಿಯಿಂದ ಪತ್ರವನ್ನು ಟೈಪ್ ಮಾಡಿಸಿ ಅದಕ್ಕೆ ಸಹಿ ಹಾಕಿ ರಾಜಭವನದ ತನಕ ಹೋಗಿ ರಾಜ್ಯಪಾಲರಿಗೆ ಕೊಡುವ ಮಟ್ಟಿಗೆ ಶ್ರಮ ತೆಗೆದುಕೊಳ್ಳುತ್ತಾರೆ ಎಂದರೆ ಅವರ ಕೋಪ ಯಾವ ಮಟ್ಟದಲ್ಲಿ ಇದೆ ಎನ್ನುವುದು ಸ್ಪಷ್ಟವಾಗುತ್ತದೆ. ಯಾಕೆಂದರೆ ಈಶ್ವರಪ್ಪ ವಲಸೆ ಸಚಿವರಲ್ಲ. ಸಂಘದ ಗರಡಿಯಿಂದಲೇ ಮೇಲೆ ಬಂದವರು. ಕಾಂಗ್ರೆಸ್ಸಿಗರು ಅವರ ಮೇಲೆ ಎಂತಹ ಭ್ರಷ್ಟಾಚಾರಗಳನ್ನು ಹಾಕಲಿ, ಬಿಡಲಿ ಅದು ಬೇರೆ ವಿಷಯ. ಆದರೆ ಈಶು ಯಾವತ್ತೂ ಮೇಲೆ ನೋಡಿ ಉಗಿದವರಲ್ಲ. ಅವರದ್ದೇನಿದ್ದರೂ ವಿರೋಧಿಗಳತ್ತ ಬಾಣ ಎಸೆಯುವ ಶೈಲಿ. ಅವರು ಖಡಕ್ ಮಾತುಗಳನ್ನು ಆಡಿ ವಿಪಕ್ಷಗಳ ಬಾಯಿ ಮುಚ್ಚಿಸುವುದರಲ್ಲಿ ಪರಿಣಿತರು. ಅಂತಹ ಈಶು ಈಗ ನಿರ್ಣಾಯಕ ಯುದ್ಧ ಆರಂಭವಾಗುವ ಹೊತ್ತಿನಲ್ಲಿ ಉಲ್ಟಾ ನಿಂತು ಆಯುಧ ಬಿಡಲು ಟೊಂಕ ಕಟ್ಟಿ ನಿಂತಿದ್ದಾರೆ. ಸಿಎಂ ಬೇರೆ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎನ್ನುವುದು ಕೇವಲ ಈಶ್ವರಪ್ಪನವರಿಗೆ ಒಬ್ಬರಿಗೆ ಮಾತ್ರ ಇರುವ ಸಮಸ್ಯೆ ಅಲ್ಲ. ಅದನ್ನು ಹೆಚ್ಚಿನ ಸಚಿವರು ಅನುಭವಿಸುತ್ತಿದ್ದಾರೆ. ಹಾಗಂತ ಯಾರೂ ಕೂಡ ಹೊರಗೆ ಬಂದು ಯಡಿಯೂರಪ್ಪನವರ ವಿರುದ್ಧ ಕೆಂಡ ಕಾರಿಲ್ಲ. ಒಳಗೊಳಗೆ ಅರುಣ್ ಸಿಂಗ್ ಅವರಿಗೋ, ಸಂತೋಷ್ ಅವರಿಗೋ ಹೇಳಿ ನೋವು ತೋಡಿಕೊಂಡಿರುತ್ತಾರೆ. ಆದರೆ ಈಶ್ವರಪ್ಪನವರು ಇದಕ್ಕಿಂತ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಅರುಣ್ ಸಿಂಗ್ ಅವರಿಗೋ, ಇನ್ಯಾರಿಗೋ ದೂರು ಕೊಟ್ಟಿರುವುದು ಹೌದು. ಆದರೆ ರಾಜ್ಯಪಾಲರಿಗೂ ಲಿಖಿತ ದೂರು ನೀಡಿ ತಮ್ಮ ನೋವನ್ನು ದೂರಿನ ರೂಪದಲ್ಲಿ ಅಧಿಕೃತವನ್ನಾಗಿ ಮಾಡಿಕೊಂಡಿದ್ದಾರೆ. ಒಬ್ಬ ಸಚಿವ ಅಧಿಕಾರ ಸ್ವೀಕರಿಸುವಾಗ ಪ್ರಮಾಣವಚನ ಭೋದಿಸುವುದು ರಾಜ್ಯಪಾಲರು. ಆಯಾ ರಾಜ್ಯಕ್ಕೆ ಆಯಾ ರಾಜ್ಯಪಾಲರೇ ಸಂವಿಧಾನಾತ್ಮಕವಾಗಿ ತಂದೆ ಇದ್ದ ಹಾಗೆ. ಅವರಿಗೆ ದೂರು ಕೊಡುವುದು ಎಂದರೆ ಅದು ದಾಖಲೆಯಾಗುತ್ತದೆ. ನೀವು ನಿಮ್ಮ ಪಕ್ಷದ ಉನ್ನತ ಮುಖಂಡರಿಗೆ ನೂರು ಪತ್ರ ಬರೆದು ಗೋಳು ತೋಡಿಕೊಳ್ಳುವುದು ಒಂದೇ ಮತ್ತು ರಾಜ್ಯಪಾಲರಿಗೆ ಒಂದೇ ಒಂದು ಪತ್ರ ಬರೆದು ಏನಾಗುತ್ತಿದೆ ಎಂದು ಹೇಳುವುದು ಒಂದೇ. ಸಾಮಾನ್ಯವಾಗಿ ಕೇಂದ್ರ ಸರಕಾರ ಯಾವ ಪಕ್ಷದ್ದು ಇರುತ್ತದೆಯೋ ಅವರದ್ದೇ ಪಕ್ಷದ ರಾಜ್ಯಪಾಲರು ಇರುವುದು ಸಹಜ. ಈಗ ಎನ್ ಡಿಎ ಸರಕಾರ ಇರುವುದರಿಂದ ಗುಜರಾತಿನ ಮಾಜಿ ಸಚಿವ ವಜುಬಾಯ್ ಪಟೇಲ್ ಇಲ್ಲಿ ರಾಜ್ಯಪಾಲರು. ಇನ್ನು ರಾಜ್ಯಪಾಲರಿಗೆ ನಿತ್ಯ ಅಂತಹ ಟೆನ್ಷನ್ ಇರುವುದಿಲ್ಲ. ಒಂದೂವರೆ ಲಕ್ಷ ಸಂಬಳ, ರಾಜಭವನ, ಹತ್ತಾರು ಜನ ಆಳು, ಕಾಳುಗಳು, ಅಷ್ಟೇ ಸಂಖ್ಯೆಯಲ್ಲಿ ರಕ್ಷಣಾ ಸಿಬ್ಬಂದಿ ದಿನನಿತ್ಯ ರಾಜಭವನದ ಒಳಗೆ ಇರುತ್ತಾರೆ. ಇನ್ನು ಅವರ ಆಪ್ತ ಸಹಾಯಕರು, ಅವರ ಸಿಬ್ಬಂದಿಗಳ ಸಂಖ್ಯೆ ಪ್ರತ್ಯೇಕ. ಅಡುಗೆಯವನಿಂದ ಹಿಡಿದು ತೋಟದ ಮಾಲೀಯ ತನಕ ಅವರದ್ದೇ ಪ್ರತ್ಯೇಕ ತಂಡವಿದೆ. ಸ್ವಚ್ಚತೆಯಿಂದ ಹಿಡಿದು ರಾಜ್ಯಪಾಲರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಬೇರೆಯದ್ದೇ ಪ್ರತ್ಯೇಕ ತಂಡ ಅಲ್ಲಿರುತ್ತದೆ. ಒಂದು ರೀತಿಯಲ್ಲಿ ರಾಜ್ಯಪಾಲರ ಖರ್ಚು ವೆಚ್ಚ ಎಂದರೆ ನಮ್ಮ ತೆರಿಗೆಯ ಹಣದಿಂದ ಬಿಳಿಯಾನೆಯನ್ನು ಸಾಕುವುದು. ರಾಜ್ಯಪಾಲರ ಮುಂದೆ ಸವಾಲು ಬರುವುದು ಅತಂತ್ರ ಸರಕಾರ ಬಂದಾಗ ಮತ್ತು ಆಪರೇಶನ್ ಕಮಲ-ಹಸ್ತ-ತೆನೆಗಳು ಆದಾಗ. ಅಂತಹ ರಾಜ್ಯಪಾಲರ ಭವನದ ಮೆಟ್ಟಿಲು ತುಳಿಯುವುದು ವಿಪಕ್ಷಗಳು ಮಾತ್ರ. ನಮಗೆ ಅನ್ಯಾಯ ಮಾಡುತ್ತಿದ್ದಾರೆ, ಭ್ರಷ್ಟ ಸರಕಾರ ವಜಾ ಮಾಡಿ ಹೀಗೆ ನಿರ್ದಿಷ್ಟ್ಯ ವಿಷಯದ ಮೇಲೆ ಹೋಗಿ ಮನವಿ ಕೊಟ್ಟು ಫೋಟೋ ತೆಗೆಸಿ ಬರುವುದು ಸಂಪ್ರದಾಯ. ಆದರೆ ಈಶ್ಚರಪ್ಪ ಆಡಳಿತ ಪಕ್ಷದ ಸದಸ್ಯರು. ಅವರು ನಿನ್ನೆ ಗೆದ್ದು ಇವತ್ತು ಮಂತ್ರಿಯಾದವರಲ್ಲ. ಅವರಿಗೆ ರಾಜ್ಯಪಾಲರಿಗೆ ತಮ್ಮದೇ ಪಕ್ಷದ ಸಿಎಂ ವಿರುದ್ಧ ದೂರು ಕೊಡುವುದು ಎಂದರೆ ಅದರ ಮಹತ್ವ ಗೊತ್ತಿದೆ. ಇದೇ ಮುಂದಿನ ಎರಡು ವರ್ಷ ವಿಪಕ್ಷಗಳಿಗೆ ಒಂದು ಅಸ್ತ್ರವಾಗುತ್ತೆ ಎನ್ನುವ ಅರಿವು ಇದೆ. ಒಂದು ಕಡೆ ಯತ್ನಾಳ್ ದೀಪಾವಳಿಗೆ ಸುಡುವಂತಹ ಬಾಂಬ್ ಹಿಡಿದು ಸಿಎಂ ಮೇಲೆ ನಿತ್ಯ ಹಾಕುತ್ತಿದ್ದರೆ, ಈಶ್ವರಪ್ಪನವರು ಹಿಡಿದಿರುವುದು ಪರಮಾಣು ಅಸ್ತ್ರ. ಅವರ ಈ ನಡೆಯಿಂದ ಮುಂದಿನ ಬಾರಿ ಯಡ್ಡಿಗೆ ಚುನಾವಣೆಗೆ ಹೋಗುವಾಗ ಸಂಕಷ್ಟ ಶುರುವಾಗುತ್ತಾ ಅಥವಾ ಯಡ್ಡಿಯನ್ನು ಇಳಿಸಲು ಈಶ್ವರಪ್ಪನವರ ಬೆನ್ನನ್ನು ಮೆಟ್ಟಿಲಾಗಿ ಮಾಡಲಾಗಿದೆಯಾ? ವಿಷಯ ಅಂದುಕೊಂಡದ್ದು ಸಲೀಸಾಗಿಲ್ಲ. ಕಳೆದ ಬಾರಿ ಕೂಡ ಹೀಗೆ ಆಗಿತ್ತು. ಜನ ಇವರ ಆಟ ನೋಡಿ, ಬೇಸತ್ತು ಕಾಂಗ್ರೆಸ್ಸಿಗೆ ಜೈ ಎಂದಿದ್ದರು. ಈಗಲೂ ಇವರು ಎಲ್ಲಾ ಗೊತ್ತಿದ್ದು ತಮ್ಮದೇ ಮನೆಯ ವರಾಂಡದಲ್ಲಿ ಅಸಹ್ಯ ಮಾಡುತ್ತಾರೆ ಎಂದರೆ ವಿಪಕ್ಷಗಳು ಬೇಡಾ ಬೇಡಾ ಎಂದರೂ ಚುನಾವಣೆಯ ಹೊತ್ತಿಗೆ ಒಂದು ಸೂಟ್ ಕೇಸಿಗೆ ಆಗುವಷ್ಟು ಸರಕನ್ನು ಇವರೇ ಕೆಪಿಸಿಸಿ ಕಚೇರಿ ಅಂಗಣದಲ್ಲಿ ಇಟ್ಟು ಬರುತ್ತಾರೆ!!
Leave A Reply