ಶ್ರೀಲತಾ ಪೊಲೀಸ್ ಮಾನವನ್ನು ಬೀದಿಯಲ್ಲಿ ಹರಾಜು ಹಾಕಿದ್ದಾಳೆ!!
ಬೇಲಿಯೇ ಎದ್ದು ಹೊಲ ಮೇಯುವುದು ಎನ್ನುವ ಗಾದೆ ಮಾತು ನೀವು ಕೇಳಿರಬಹುದು. ಅದು ಸರಕಾರಿ ವ್ಯವಸ್ಥೆಯಲ್ಲಿ ಹೆಚ್ಚಾಗಿ ಅನ್ವಯವಾಗುತ್ತದೆ. ನಾರ್ಕೋಟಿಕ್ ವಿಭಾಗದಲ್ಲಿ ಹೆಡ್ ಕಾನ್ಸಟೇಬಲ್ ಆಗಿರುವ ಶ್ರೀಲತಾ ಎನ್ನುವ ಮಹಿಳೆಯೇ ಸ್ವತ: ರೇವ್ ಪಾರ್ಟಿಯೊಂದಕ್ಕೆ ರಕ್ಷಣೆ ನೀಡಲು ಹೋಗಿ ಗ್ರಹಚಾರ ಕೆಟ್ಟು ಈಗ ಅಮಾನತುಗೊಂಡಿದ್ದಾಳೆ. ಅಷ್ಟಕ್ಕೂ ಪಾರ್ಟಿ ಆಯೋಜನೆ ಮಾಡಿದ ಮಾಸ್ಟರ್ ಮೈಂಡ್ ಬೇರೆ ಯಾರೂ ಅಲ್ಲ ಅವಳ ಮಗ ಅತುಲ್. ಈಕೆ ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಉದ್ಯೋಗ ಮಾಡುತ್ತಿದ್ದರೆ ಇವಳ ಮಗ ಬೆಂಗಳೂರಿನ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಇದ್ದ. ಇವರಿಬ್ಬರೂ ಪಾರ್ಟಿ ಆಯೋಜಿಸಿದ್ದು ಮಂಗಳೂರು ಮತ್ತು ಬೆಂಗಳೂರು ಮಧ್ಯದಲ್ಲಿರುವ ಹಾಸನದಲ್ಲಿ.
ಹಾಸನದ ಆಲೂರಿನಲ್ಲಿರುವ ಏಸ್ಟೇಟ್ ನಲ್ಲಿ ಇವರು ರೇವ್ ಪಾರ್ಟಿ ಆಯೋಜಿಸಿದ್ದಾರೆ. ಏಸ್ಟೇಟ್ ಮಾಲೀಕನಿಗೆ ಹೀಗೆ ಆಗಬಹುದು ಎಂದು ಹೆದರಿಕೆ ಇತ್ತೋ ಏನೋ ಅವನು ಆತಂಕದಿಂದ ಕೊಡಲು ಆಗಲ್ಲ ಎಂದಿದ್ದಾನೆ. ಅದಕ್ಕೆ ಶ್ರೀಲತಾ “ಏನ್ ಹೆದರಬೇಡ್ರಿ, ನಾನು ಇದೇ ನಾರ್ಕೋಟಿಕ್ ನಲ್ಲಿ ಎಎಸ್ ಐ ಆಗಿರೋದು. ನಮ್ಮನ್ನು ಯಾರೂ ಏನೂ ಮಾಡಲು ಆಗಲ್ಲ, ಪೊಲೀಸಿನವರೇ ಕೇಳಿದ ಮೇಲೆ ನಿಮಗ್ಯಾಕ್ರಿ ಹೆದರಿಕೆ” ಎಂದು ಧೈರ್ಯ ಕೊಟ್ಟಿದ್ದಾಳೆ. ಆದರೆ ತನ್ನ ಮೇಲೆ ಒಬ್ಬರು ಪೊಲೀಸ್ ವರಿಷ್ಠಾಧಿಕಾರಿ ಎನ್ನುವವರು ಇರುತ್ತಾರೆ ಎನ್ನುವುದು ಅವಳಿಗೆ ಮರೆತು ಹೋಗಿತ್ತು. ಹೇಗೂ ಯಾವುದೋ ಕಾಡಮೂಲೆಯಲ್ಲಿ ಮಾಡೋದು, ಯಾರಿಗೂ ಗೊತ್ತಾಗಲ್ಲ ಎಂದು ತಾಯಿ ಮತ್ತು ಮಗ ಅಂದುಕೊಂಡಿದ್ದರು.
ಅಲ್ಲಿ ಬರುವವರಿಗೂ ಕೊನೆಯ ದಿನದ ಕೊನೆಯ ಗಂಟೆಯ ತನಕ ಎಲ್ಲಿ ಪಾರ್ಟಿ ಎಂದು ಹೇಳಿರಲಿಲ್ಲ. ಎಲ್ಲಿಯಾದರೂ ಲೀಕ್ ಆಗುತ್ತಾ ಎನ್ನುವ ಹೆದರಿಕೆಯಿಂದ ಎಲ್ಲವನ್ನು ಗೌಪ್ಯವಾಗಿ ಇಡಲಾಗಿತ್ತು. ಆದರೆ ಗಾಂಜಾ ಸಹಿತ ವಿವಿಧ ಡ್ರಗ್ಸ್ ಗಳು, ಮದ್ಯದ ಹೊಳೆ ಹರಿಯಲು ಶುರುವಾದಂತೆ ತಮ್ಮ ವ್ಯಾಪ್ತಿಯಲ್ಲಿ ಎಲ್ಲೋ ಏನೋ ನಡೆಯುತ್ತಿದೆ ಎಂದು ಹಾಸನ ಎಸ್ಪಿಯವರಿಗೆ ತಿಳಿಯಲು ತಡವಾಗಲಿಲ್ಲ. ಅವರು ಬೆಳಗ್ಗಿನ ಜಾವ ಸುಮಾರು 50 ಪೊಲೀಸರೊಂದಿಗೆ ಅಲ್ಲಿ ದಾಳಿ ಮಾಡಿದ್ದಾರೆ. ಶ್ರೀಲತಾ ಶಾಕ್ ಗೆ ಒಳಗಾಗಿದ್ದಾಳೆ. ಅಲ್ಲಿಂದ ನೂರಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ನೋಡಿದ್ರೆ ಇವರ ರಕ್ಷಣೆಗೆ ಮಂಗಳೂರಿನ ಪೊಲೀಸ್ ಕಾನ್ಸಟೇಬಲ್ ನಿಂತಿದ್ದದ್ದು ಹಾಸನ ಎಸ್ಪಿಯವರ ಗಮನಕ್ಕೆ ಬಂದಿದೆ. ಅವರಿಂದ ಮಾಹಿತಿ ಪಡೆದ ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ಅವರು ಸದ್ಯ ಶ್ರೀಲತಾಳನ್ನು ಅಮಾನತು ಮಾಡಿದ್ದಾರೆ.
ಅತುಲ್ ಪೊಲೀಸರ ಅತಿಥಿಯಾಗಿದ್ದಾನೆ. ಇದನ್ನೆಲ್ಲ ನೋಡುವಾಗ ನಿಮಗೆ ಏನು ಅನಿಸುತ್ತದೆ? ಸಿಂಪಲ್, ಅವಳು ಪೊಲೀಸ್ ಆಗಲು ಲಾಯಕ್ಕಿಲ್ಲ ಮಾತ್ರವಲ್ಲ ಒಬ್ಬ ಒಳ್ಳೆಯ ತಾಯಿಯಾಗಲು ಕೂಡ ಯೋಗ್ಯತೆ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಪೊಲೀಸ್ ಎಂದರೆ ಅವರು ಡ್ರಗ್ಸ್ ಜಾಲವನ್ನು ಪೂರ್ಣ ಪ್ರಮಾಣದಲ್ಲಿ ನಿಲ್ಲಿಸಲು ಸಾಧ್ಯವಿಲ್ಲವಾದರೂ ಎಷ್ಟು ಸಾಧ್ಯವಿದೆಯೋ ಅಷ್ಟು ತಡೆಯಲು ಅವರು ಗರಿಷ್ಟ ಪ್ರಯತ್ನ ಮಾಡಬೇಕು. ಅದರಲ್ಲಿಯೂ ನಾರ್ಕೊಟಿಕ್ ವಿಭಾಗದವರ ಕರ್ತವ್ಯವೇ ಅದು. ಇನ್ನು ತನ್ನ ಮಗ ಹಾದಿ ತಪ್ಪಿದ್ದಾನೆ, ನನಗೆ ಗೊತ್ತಿಲ್ಲದೆ ಹೀಗೆ ಆಗಿದೆ ಎಂದು ಶ್ರೀಲತಾ ಹೇಳಿದ್ದರೆ ಅದು ಬೇರೆ ವಿಷಯ. ಆದರೆ ತನ್ನ ಅಧಿಕಾರವನ್ನು ದುರುಪಯೋಗಪಡಿಸಿ ತಾನು ಎಎಸ್ ಐ ಎಂದು ಸುಳ್ಳು ಹೇಳಿ ಪಾರ್ಟಿ ಆಯೋಜಿಸಿದ್ದು ಮತ್ತು ಅಲ್ಲಿ ಯುವಕ, ಯುವತಿಯರನ್ನು ಡ್ರಗ್ಸ್ ಸೇವಿಸಲು ಅವಕಾಶ ಕಲ್ಪಿಸಿದ್ದು ಎಲ್ಲವನ್ನು ನೋಡಿದಾಗ ಶ್ರೀಲತಾಳಿಗೆ ಪೊಲೀಸ್ ಇಲಾಖೆಯಿಂದ ಕತ್ತು ಹಿಡಿದು ಶಾಶ್ವತವಾಗಿ ಹೊರದೂಡುವುದು ಒಳ್ಳೆಯದು. ಅಂತವರು ಪೊಲೀಸ್ ಇಲಾಖೆಯಲ್ಲಿ ಇದ್ದರೆ ಕೊಳೆತ ಟೊಮೆಟೋ ಬುಟ್ಟಿಯಲ್ಲಿ ಇರುವ ಬೇರೆ ಹಣ್ಣನ್ನು ಕೂಡ ಹಾಳು ಮಾಡಿಬಿಡುವಂತೆ ಹಾಳು ಮಾಡಿಬಿಡುತ್ತಾರೆ. ಮಗ ಅಥವಾ ಮಗಳು ಡ್ರಗ್ಸ್ ಸೇವಿಸುತ್ತಿದ್ದರೆ ಅವರಿಗೆ ಬುದ್ಧಿ ಹೇಳುವುದು ತಾಯಿಯೊಬ್ಬಳ ಕರ್ತವ್ಯ. ಆದರೆ ಶ್ರೀಲತಾ ಮಗನನ್ನು ಬೆಳಿಗ್ಗೆ ನೋಡಿದ ಬಾವಿಗೆ ರಾತ್ರಿ ದೂಡಿಬಿಟ್ಟಿದ್ದಾಳೆ. ಇತ್ತೀಚೆಗೆ ರೇವ್ ಪಾರ್ಟಿಗಳು ಕಡಿಮೆಯಾಗಿದ್ದವು. ಹಿಂದೆ ಮಣಿಪಾಲದಲ್ಲಿ ನಡೆಯುತ್ತಿದ್ದ ಇಂತಹ ರೇವ್ ಪಾರ್ಟಿಗಳು ಮಾಧ್ಯಮಗಳಲ್ಲಿ ನಿರಂತರ ವರದಿಯಾದ ಬಳಿಕ ಜನ ಅದಕ್ಕೆ ಬರಲು ಹೆದರುತ್ತಿದ್ದರು. ಸಿಕ್ಕಿಬಿದ್ದರೆ ಮಾನ, ಮರ್ಯಾದೆಗೆ ಏನು ಮಾಡುವುದು ಎಂದು ಅಂಜುತ್ತಿದ್ದರು. ಅದರಲ್ಲಿಯೂ ಸಿನೆಮಾ ನಟಿಮಣಿಯರು, ಅವರ ಹಿತೈಷಿಗಳ ಬಗ್ಗೆ ಟಿವಿಯಲ್ಲಿ ದಿನಗಟ್ಟಲೆ ಸುದ್ದಿಗಳು ಬಂದ ಬಳಿಕ ಸಿಕ್ಕಿಬಿದ್ದರೆ ಜೈಲಿನೂಟವೇ ಗತಿ ಎಂದು ಹೆದರಿದವರು ಹಾಗೆ ಪಾರ್ಟಿಗಳಿಗೆ ಬರಲು ಹಿಂದೇಟು ಹಾಕುತ್ತಿದ್ದರು. ಆದರೆ ಅತುಲ್ ಹಾಗೂ ಆತನ ಗೆಳೆಯರು ಇದಕ್ಕೆ ಪೊಲೀಸರ ರಕ್ಷಣೆ ಇದೆ ಎನ್ನುವಂತೆ ಬಿಂಬಿಸಿದ್ದರು. ಅತುಲ್ ತನ್ನ ತಾಯಿ ಪೊಲೀಸರನ್ನು ನೋಡಿಕೊಳ್ಳುತ್ತಾರೆ, ಪೊಲೀಸರು ಹತ್ತಿರಕ್ಕೂ ಬರಲ್ಲ ನೋಡಿ ಎಂದು ಗ್ಯಾರಂಟಿ ಕೊಡಿಸಿದ್ದ. ಈಗ ಶ್ರೀಲತಾಳಿಗೆ ಯೋಗ್ಯ ಶಿಕ್ಷೆ ಆದರೆ ಮುಂದಿನ ದಿನಗಳಲ್ಲಿ ರೇವ್ ಪಾರ್ಟಿಗಳು ಎನ್ನುವ ಶಬ್ದವೇ ಅಳಿಸಿಹೋಗಬೇಕು. ಇನ್ನು ಮಾಧ್ಯಮಗಳು ರಾಗಿಣಿ, ಸಂಜನಾ ಪ್ರಕರಣಗಳನ್ನು ಇಷ್ಟು ತೋರಿಸಿದ ನಂತರವೂ ನಮ್ಮ ಯುವಜನಾಂಗ ಮತ್ತೆ ಕೂಡ ಅಂತುಹುದೇ ತಪ್ಪು ಮಾಡುತ್ತದೆ ಎಂದರೆ ಹಾಗಾದರೆ ಇಲ್ಲಿ ತಪ್ಪು ಯಾರದ್ದು? ಈ ಟಿವಿಯವರು ಇಡೀ ದಿನ ಇದನ್ನೇ ತೋರಿಸುತ್ತಾರೆ ಎಂದು ಗೋಳು ಹಾಕುವವರು ಟಿವಿಯವರು ಅಂತಹುದ್ದನ್ನು ತೋರಿಸಲು ಕಡಿಮೆ ಮಾಡಿದ ಕೂಡಲೇ ಅಂತಹುದೇ ತಪ್ಪಿಗೆ ಕೈ ಹಾಕುತ್ತಾರಲ್ಲ ಎನ್ನುವುದೇ ಅಸಹ್ಯ !
Leave A Reply