ಅಸಂಖ್ಯಾತ ಮದುವೆಗಳ ನಡುವೆ ಜಿಲ್ಲಾಡಳಿತಕ್ಕೆ ನಿಜವಾದ ಅಗ್ನಿಪರೀಕ್ಷೆ ಆರಂಭ!!
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾಧಿಕಾರಿಗಳಿಬ್ಬರು ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಪೆಟ್ರೋಲ್ ಪಂಪಿನ ಹುಡುಗನಿಗೆ ದಬಾಯಿಸಿದ್ದಷ್ಟೇ ಸುಲಭವಾಗಿ ರಾಜಕಾರಣಿಗಳು ಮರೆತಿರುವ ಸಾಮಾಜಿಕ ಅಂತರವನ್ನು ಯಾಕೆ ಕಡೆಗಣಿಸುತ್ತಿದ್ದಾರೆ, ಪ್ರಭಾವಿಗಳಿಗೆ ಒಂದು ರೂಲ್, ಜನಸಾಮಾನ್ಯರಿಗೆ ಒಂದು ರೂಲಾ ಎಂದು ನಾಗರಿಕರು ಕೇಳುತ್ತಿದ್ದಾರೆ. ಇನ್ನು ಉಡುಪಿ ಜಿಲ್ಲಾಧಿಕಾರಿಯವರು ತುಂಬಿ ತುಳುಕುತ್ತಿದ್ದ ಬಸ್ಸೊಂದನ್ನು ನಿಲ್ಲಿಸಿ ಅದರೊಳಗಿನಿಂದ ವಿದ್ಯಾರ್ಥಿನಿಯರನ್ನು ಕೆಳಗಿಳಿಸಿ ಬೇರೆ ಬಸ್ಸಿನಲ್ಲಿ ಹೋಗಿ ಎಂದಿರುವುದು ಮತ್ತು ಅದರಲ್ಲಿ ಒಬ್ಬಳು ವಿದ್ಯಾರ್ಥಿನಿ ಎಲ್ಲಾ ಬಸ್ಸುಗಳು ಹೀಗೆ ತುಂಬಿವೆ, ನಾವು ಕುಂದಾಪುರದಿಂದ ಮುಂದಕ್ಕೆ ಹಳ್ಳಿಗೆ ಹೋಗಬೇಕು, ಕತ್ತಲಾದರೆ ಮನೆಯಲ್ಲಿ ಆತಂಕಕ್ಕೆ ಒಳಗಾಗುತ್ತಾರೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾಳೆ. ಇಲ್ಲಿ ಆ ಹೆಣ್ಣುಮಗಳಿಗೆ ಕೊರೊನಾಗಿಂತ ತನಗೆ ಊರಿಗೆ ಕತ್ತಲಾಗುವ ಮೊದಲು ತಲುಪಲು ಬಸ್ಸು ಸಿಗುತ್ತಾ ಎನ್ನುವುದೇ ಆತಂಕ. ಇನ್ನು ಡಿಸಿಯವರಿಗೆ ತಾವು ಕಟ್ಟುನಿಟ್ಟಾಗಿ ಕೊರೊನಾ ನಿಯಮಗಳನ್ನು ಜಾರಿಗೆ ತರಬೇಕು ಎನ್ನುವ ಧಾವಂತ. ಇಲ್ಲಿ ಆ ಹೆಣ್ಣುಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಆಗುವ ತನಕ ನಿಲ್ಲಲು ಅಥವಾ ಬೇರೆ ಬಸ್ ವ್ಯವಸ್ಥೆ ಜಿಲ್ಲಾಡಳಿತದಿಂದ ಮಾಡಲು ಡಿಸಿಯವರು ಮುಂದಾಗಬಹುದಿತ್ತಲ್ಲವೇ? ಹಾಗಂತ ಶಾಲೆ, ಕಾಲೇಜು ಬಿಟ್ಟ ಮೇಲೆ ಮಕ್ಕಳು ಸಹಜವಾಗಿ ದೊಡ್ಡ ಸಂಖ್ಯೆಯಲ್ಲಿ ಬಸ್ ಗಾಗಿ ಕಾದು ನಂತರ ಸಿಕ್ಕಿದ ಬಸ್ಸಿನಲ್ಲಿ ಹೋಗುತ್ತಾರೆ. ಅವರನ್ನು ಹೋಗಬೇಡಾ ಎಂದರೆ ಗ್ರಾಮಾಂತರ ಭಾಗಗಳಿಗೆ ಹೋಗುವವರು ಏನು ಮಾಡಬೇಕು. ಸದ್ಯ ಮೇ 4 ರ ತನಕ ಶಾಲಾ, ಕಾಲೇಜುಗಳು ಬಂದ್ ಎಂದು ಸರಕಾರಗಳು ಆದೇಶ ಹೊರಡಿಸಿರುವುದರಿಂದ ಮಕ್ಕಳು ಬಚಾವ್. ಇಲ್ಲದಿದ್ದರೆ ಇಂತಹುದು ಇನ್ನೆಷ್ಟು ನಡೆಯಲು ಇತ್ತೋ, ದೇವರಿಗೆ ಗೊತ್ತು. ಇನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ವಿಕೆಂಡ್ ಕರ್ಫರ್ೂ ಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಈಗಾಗಲೇ ನಿಗದಿಯಾಗಿರುವ ಮದುವೆಗೆ ಅನುಮತಿ ನೀಡಲಾಗಿದೆ. ಆದರೆ ಆ ಮದುವೆಗಳಿಗೆ 50 ಜನರು ಮಾತ್ರ ಭಾಗವಹಿಸಬಹುದಾಗಿದೆ. ಇದೇ ಎಪ್ರಿಲ್ 25 ರ ಭಾನುವಾರ ಕೇವಲ ಕಟೀಲು ದೇವಸ್ಥಾನದಲ್ಲಿಯೇ ಅನೇಕ ಮದುವೆಗಳಿವೆ. ಕನಿಷ್ಟ 50 ಮದುವೆಗಳು ಇರಬಹುದು ಎಂದು ಅಂದಾಜು. ಒಂದೊಂದು ಮದುವೆಗೆ ಐವತ್ತು ಜನ ಬಂದರೂ ಎಷ್ಟು ಜನರು ಅಲ್ಲಿ ಸೇರಬಹುದು. ಇನ್ನು ದೇವಸ್ಥಾನಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಭಂದ ಹಾಕಲಾಗಿದೆ. ಹಾಗಿರುವಾಗ ಜನರಲ್ಲಿ ಗೊಂದಲ ಏರ್ಪಡುವುದು ಸಾಮಾನ್ಯ. ಇನ್ನು ಈ ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯ ಸಣ್ಣ, ದೊಡ್ಡ ಸಹಿತ ಹೆಚ್ಚಿನ ಹಾಲ್ ಗಳಲ್ಲಿ ಶುಭ ಸಮಾರಂಭಗಳಿವೆ. ಲೆಕ್ಕವಿಲ್ಲದಷ್ಟು ಮದುವೆಗಳಿವೆ. ಈಗ ಯಾರದ್ದು ಮದುವೆ ಇದೆಯೋ ಅವರು 50 ಜನರ ಪಟ್ಟಿ ಮಾಡಬೇಕು. ಆ ಪಟ್ಟಿಯನ್ನು ಸ್ಥಳೀಯಾಡಳಿತಕ್ಕೆ ತೋರಿಸಿ ಅಪ್ರೂವ್ ಮಾಡಬೇಕು. ಆ ಬಳಿಕ ಆ 50 ಜನರು ಅನುಮತಿ ಪಡೆದ ಪತ್ರ ಮತ್ತು ಮದುವೆ ಆಮಂತ್ರಣ ಪತ್ರಿಕೆ ಹಾಗೂ ಮದುವೆಗೆ ಹೋಗುವವರ ಐಡಿ ಕಾರ್ಡ್ ಕಡ್ಡಾಯವಾಗಿ ಇರಬೇಕು. ಈ ಮೂರು ದಾಖಲೆಗಳನ್ನು ವಾಟ್ಸಪ್ ನಲ್ಲಿ ಪೊಲೀಸರಿಗೆ ತೋರಿಸಿ ಪ್ರಯಾಣಿಸಬಹುದು ಎಂದು ಹೇಳಲಾಗಿದೆ. ಆದರೆ ಮದುವೆ ಆಮಂತ್ರಣ ಪತ್ರಿಕೆಯ ನೈಜ ಪ್ರತಿ ಪ್ರಯಾಣದ ವೇಳೆ ಕೈಯಲ್ಲಿರಬೇಕು. ಇನ್ನು ಮದುವೆ ಗೆಸ್ಟ್ ಲಿಸ್ಟ್ ನಲ್ಲಿರುವ ಐಡಿ ತೋರಿಸಿದರಷ್ಟೇ ಪ್ರಯಾಣಕ್ಕೆ ಅವಕಾಶವಿದೆ. ಇನ್ನು ಮದುವೆಗೆ ಹೋಗುವವರು ಕಾರಿನಲ್ಲಿ ಏಳೆಂಟು ಜನರನ್ನು ತುಂಬಿದ್ರೆ ಪ್ರಯಾಣಿಸಲು ಅವಕಾಶ ಇಲ್ಲ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಇಲ್ಲಿ ಈಗ ಮದುವೆಗೆ ಹೋಗುವವರು ಸಂಭ್ರಮದಲ್ಲಿ ಅಲಂಕಾರ ಮಾಡಿಕೊಂಡು ಹೋಗುವುದಕ್ಕಿಂತ ಹೆಚ್ಚಾಗಿ ಪೊಲೀಸರು ಎಲ್ಲಿಯಾದರೂ ನಿಲ್ಲಿಸುತ್ತಾರಾ, ಕೇಳುತ್ತಾರಾ ಎನ್ನುವ ಆತಂಕದಲ್ಲಿ ಇರುತ್ತಾರೆ. ಇನ್ನು ಮದುವೆ ಮನೆಯವರು ಐವತ್ತು ಜನ ಆಪ್ತರನ್ನೇ ಕರೆಯುವುದಾದರೆ ಐವತ್ತು ಸಾವಿರ ಕೊಟ್ಟು ಹಾಲ್ ಬುಕ್ ಮಾಡುವುದು ಬೇಡಾ ಇತ್ತು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಐವತ್ತು ಜನರನ್ನು ಮಾತ್ರ ಕರೆಯಬೇಕಾಗಿರುವುದರಿಂದ ಕುಟುಂಬದಲ್ಲಿರುವ ಆ ಐವತ್ತು ವಿವಿಐಪಿ ಯಾರು ಎನ್ನುವ ಪ್ರಶ್ನೆ ಮದುವೆ ಮನೆಯವರಲ್ಲಿ ಇರುತ್ತದೆ. ಇನ್ನು ವಧು, ವರರ ಕಡೆಯವರನ್ನು ಸೇರಿಸಿ ಐವತ್ತು ಆಗಿರುವುದರಿಂದ ಇಪ್ಪತ್ತೈದು ವಧುವಿನ ಕಡೆಯವರು ಮತ್ತು ಇಪ್ಪತ್ತೈದು ವರನ ಕಡೆಯವರು ಬರಬೇಕಾಗುತ್ತದೆ. ಇನ್ನು ಈ ಐವತ್ತು ಮಂದಿಯಲ್ಲಿ ಪುರೋಹಿತರು, ಫೋಟೋಗ್ರಾಫರ್ಸ್ ಎಲ್ಲರೂ ಸೇರುತ್ತಾರೆ. ಕ್ಯಾಟರಿಂಗ್ ನವರಿಗೆ ಐನೂರು ಜನರ ಊಟದ ಆರ್ಡರ್ ಕೊಟ್ಟಿದ್ದರೆ ಅವರು ಅಷ್ಟು ಜನರಿಗೆ ಬೇಕಾದಷ್ಟು ವ್ಯವಸ್ಥೆ ಮಾಡುವಂತಿಲ್ಲ. ಹೀಗೆ ಮದುವೆಯ ಸಿದ್ಧತೆಯ ಗಡಿಬಿಡಿಗಿಂತ ಕರೊನಾ ನಿಯಮಾವಳಿಗಳನ್ನು ಪಾಲಿಸುವುದೇ ಚಾಲೆಂಜ್ ಆಗಿ ಹೋಗಿರುತ್ತದೆ. ಇನ್ನು ಜಿಲ್ಲಾಡಳಿತದ ಅಧಿಕಾರಿಗಳು, ಪಾಲಿಕೆಯ ಅಧಿಕಾರಿಗಳು ಎಲ್ಲರೂ ಇದರಲ್ಲಿ ವ್ಯಸ್ತರಾಗಿರಬೇಕಾಗುತ್ತದೆ. ಎಲ್ಲಿಯಾದರೂ ಒಂದಿಷ್ಟು ಕಿರಿಕಿರಿಯಾದರೂ ನೇರವಾಗಿ ಫೋನ್ ಹೋಗುವುದು ಶಾಸಕರಿಗೆ ಹಾಗೂ ಸಂಸದರಿಗೆ. ಅವರಿಗೆ ತಮಗೆ ವೋಟ್ ಕೊಟ್ಟವರ ಪರ ಮಾತನಾಡುವುದೋ, ಸರಕಾರದ ಪರ ಮಾತನಾಡುವುದೋ ಅಥವಾ ಕೊರೊನಾ ನಿಯಮ ಹೇಳುವುದೋ ಎನ್ನುವ ಗೊಂದಲದಲ್ಲಿ ಇರುತ್ತಾರೆ!
Leave A Reply