ಹೂಳು ತಿನ್ನುವುದರಲ್ಲಿ ಬಿಜೆಪಿ ಎದುರು ಕಾಂಗ್ರೆಸ್ ಏನೂ ಇಲ್ಲ!!

ಬದಲಾವಣೆಗಾಗಿ ನಮ್ಮನ್ನು ಬೆಂಬಲಿಸಿ, ಹಾಗೆ ಮಾಡ್ತೇವೆ, ಹೀಗೆ ಮಾಡ್ತೇವೆ, ಗೆಲ್ಲಿಸಿ ಎಂದು ಹೇಳಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರಕ್ಕೆ ಬಂದಿರುವ ಭಾರತೀಯ ಜನತಾ ಪಾರ್ಟಿಯ ಮೇಯರ್ ಅವರಿಗೆ ತಮ್ಮದೇ ಆಡಳಿತದ ಪಾಲಿಕೆಯಲ್ಲಿ ಆಂತರಿಕ ವರ್ಗಾವಣೆ ಕೂಡ ಸರಿಯಾಗಿ ಮಾಡಲು ಆಗಲಿಲ್ಲ ಎಂದರೆ ಅದಕ್ಕಿಂತ ಹೀನಾಯ ಪರಿಸ್ಥಿತಿ ಬೇರೆ ಇಲ್ಲ. ಬಿಜೆಪಿ ಅಧಿಕಾರಕ್ಕೆ ಮರಳಿದ ಮೊದಲ ವರ್ಷ ದಿವಾಕರ್ ಪಾಂಡೇಶ್ವರ ಅವರು ಮೇಯರ್ ಆಗಿದ್ದಾಗ ಪಾಲಿಕೆಯಲ್ಲಿರುವ ಐದಾರು ವಿಭಾಗಗಳಲ್ಲಿ ಸಿಬ್ಬಂದಿಗಳ ಆಂತರಿಕ ವರ್ಗಾವಣೆಗೆ ಸೂಚನೆ ನೀಡಿದರು. ನಿಮಗೆಲ್ಲ ಗೊತ್ತಿರುವಂತೆ ಪಾಲಿಕೆಯಲ್ಲಿ ನಗರ ಯೋಜನಾ ವಿಭಾಗ, ಆರೋಗ್ಯ ವಿಭಾಗ, ಕಂದಾಯ ವಿಭಾಗ ಹೀಗೆ ಬೇರೆ ಬೇರೆ ವಿಭಾಗಗಳಿವೆ. ಹೆಚ್ಚಿನ ಸಿಬ್ಬಂದಿಗಳಿಗೆ ತಾವಿರುವ ವಿಭಾಗಗಳು ಎಷ್ಟು ಸಮೃದ್ಧವಾಗಿ ಹೊಂದಾಣಿಕೆ ಆಗಿದೆ ಎಂದರೆ ಅವರು ಅಲ್ಲಿಂದ ಬೇರೆ ವಿಭಾಗಕ್ಕೆ ಹೋಗುವುದು ಬಿಡಿ, ಯೋಚಿಸಲು ಕೂಡ ಹೋಗುವುದಿಲ್ಲ. ಹಾಗಿರುವಾಗ ಬಿಜೆಪಿಯವರು ಅಧಿಕಾರಕ್ಕೆ ಬಂದರು ಎಂದ ಕೂಡಲೇ ಇವರೆಲ್ಲ ಏಕಾಏಕಿ ವರ್ಗಾವಣೆಗೆ ಒಪ್ಪುತ್ತಾರಾ? ಬಹುತೇಕ ಸಿಬ್ಬಂದಿಗಳು ಕಾಂಗ್ರೆಸ್ ಅಧಿಕಾರದಲ್ಲಿರುವಾಗ ಎಲ್ಲಿ ಪ್ರತಿಷ್ಟಾಪಿಸಲ್ಪಟ್ಟಿದ್ದರೋ ಅಲ್ಲಿಯೇ ಮುಂದುವರೆದಿದ್ದಾರೆ. ಇದೆಲ್ಲ ಸರಿ ಮಾಡಲು ದಿವಾಕರ್ ಪಾಂಡೇಶ್ವರ್ ವರ್ಗಾವಣೆಗೆ ಸೂಚಿಸಿದರೂ ಹಿರಿಯ ಕಾರ್ಪೋರೇಟರ್ ಗಳ, ಮಾಜಿ ಮೇಯರ್ ಗಳ ಕೈ ಕಾಲು, ಅದು ಇದು ಹಿಡಿದು ಹೆಚ್ಚಿನವರು ಹಿಂದಿನ ಸ್ಥಾನದಲ್ಲಿ ಉಳಿದುಬಿಟ್ಟಿದ್ದಾರೆ. ವಿಷಯ ಹೀಗಿರುವಾಗ ಪಾಲಿಕೆಯಲ್ಲಿ ಬಿಜೆಪಿಯದ್ದು ಎಷ್ಟು ನಡೆಯುತ್ತೆ ಎನ್ನುವುದು ನಿಮಗೆ ಅರ್ಥವಾಗಿರಬಹುದು. ನಾನು ಕಳೆದ ಜಾಗೃತ ಅಂಕಣದಲ್ಲಿ ಕೂಡ ಉದಾಹರಣೆಯೊಂದಿಗೆ ಈ ಪರಿಸ್ಥಿತಿಯನ್ನು ವಿವರಿಸಿದ್ದೇನೆ.
ಇನ್ನು ಪಾಲಿಕೆಯೆಂಬ ಹುಚ್ಚು ಮುಂಡೆ ಮದುವೆಯಲ್ಲಿ ಉಂಡವನೇ ಜಾಣ ಎನ್ನುವಂತೆ ಕಾಂಗ್ರೆಸ್ಸಿದ್ದಾಗ ನಿರಂತರವಾಗಿ ನಡೆದು ಬರುತ್ತಿದ್ದ ಮತ್ತೊಂದು ಭ್ರಷ್ಟಾಚಾರ ಈಗ ಬಿಜೆಪಿ ಬಂದ ಮೇಲೆಯೂ ಹೇಗೆ ಮುಂದುವರೆಯುತ್ತಿದೆ ಎನ್ನುವುದನ್ನು ಇವತ್ತು ವಿವರಿಸುತ್ತೇನೆ. ಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುವವರಿಗೆ ತಮ್ಮ ವಾರ್ಡಿನಲ್ಲಿರುವ ರಾಜಕಾಲುವೆಯ ಪರಿಚಯ ಇದ್ದೇ ಇರುತ್ತದೆ. ಪ್ರತಿ ಮಳೆಗಾಲ ಬರುವ ಮೊದಲು ಅದರಲ್ಲಿರುವ ಹೂಳನ್ನು ತೆಗೆಯುವ ಪ್ರಕ್ರಿಯೆ ನಡೆಯುತ್ತದೆ. ಅದಕ್ಕಾಗಿ ಗುತ್ತಿಗೆಯನ್ನು ನೀಡಲಾಗುತ್ತದೆ. ಈ ಬಾರಿಯೂ ನೀಡಲಾಗಿದೆ. ಈ ಬಾರಿ ಒಟ್ಟು ಮೂರು ವಲಯಗಳನ್ನಾಗಿ ವಿಂಗಡಿಸಿ ಇಪ್ಪತ್ತು ವಾರ್ಡುಗಳನ್ನು ತಲಾ ಒಬ್ಬರಿಗೆ ಹಂಚಿಕೊಡಲಾಗಿದೆ. ಇದರಲ್ಲಿ ಒಬ್ಬ ಗುತ್ತಿಗೆದಾರನಿಗೆ 37 ರಾಜಕಾಲುವೆಗಳು ಬಂದಿವೆ. ಅವರು ಈಗ ಕೆಲಸ ಶುರು ಮಾಡಿದರೂ ಅದು ಮುಗಿಯುವಾಗ ಮಳೆಗಾಲ ಅರ್ಧ ಕಳೆದಿರುತ್ತದೆ. ಈಗಾಗಲೇ ಮಳೆ ವಾರಕ್ಕೆರಡು ಬಾರಿ ಬಂದು ಹೋಗುತ್ತಿದೆ. ಈ ಗುತ್ತಿಗೆದಾರ ಮಳೆಗಾಲ ಶುರುವಾಗುವ ಮೊದಲು ಇನ್ನು ಹೆಚ್ಚೆಂದರೆ ಹತ್ತು-ಹನ್ನೆರಡು ರಾಜಕಾಲುವೆಗಳ ಹೂಳು ತೆಗೆಯಬಹುದು. ಆದರೆ ನಂತರ ಮಳೆ ಬರುತ್ತದೆ ಮತ್ತು ಹೂಳು ಅಲ್ಲಿಯೇ ಹುದುಗಿಹೋಗುತ್ತದೆ. ಆದರೆ ಬಿಲ್ ಮಾತ್ರ ಗುತ್ತಿಗೆದಾರರ ಕಿಸೆಯಿಂದ ಹೊರಗೆ ಬರುತ್ತದೆ. ಪಾಲಿಕೆಗೆ ನೀಡಲಾಗುತ್ತದೆ. ಅಲ್ಲಿಂದ ಹಣ ಬರುತ್ತದೆ. ಯಾರಿಗೆ ಎಷ್ಟು ಹೋಗಬೇಕೋ ಅಷ್ಟು ಹೋಗುತ್ತದೆ. ಹೂಳಿನ ಹಣದಲ್ಲಿ ಕೆಲವರು ಮನೆಗೆ ಅಕ್ಕಿ, ಮೀನು, ಮಾಂಸ ತೆಗೆದುಕೊಂಡು ಹೋಗುತ್ತಾರೆ. ಈ ಭ್ರಷ್ಟ ಹಣ ತಿಂದರೆ ಒಳ್ಳೆಯದಾಗುತ್ತದಾ ಎಂದು ಅವರು ಯಾರೂ ಯೋಚಿಸುವುದಿಲ್ಲ. ಅದು ಬಿಡಿ, ಈಗ ಪಾಲಿಕೆಯಲ್ಲಿ ಇರುವ ಬಿಜೆಪಿಯ 44 ಸದಸ್ಯರಲ್ಲಿ ಹೆಚ್ಚಿನವರು ಮೊದಲ ಬಾರಿಗೆ ಅಧಿಕಾರ ಸ್ವೀಕರಿಸಿದವರು. ಇವರಲ್ಲಿ ಎಷ್ಟು ಮಂದಿ ತಮ್ಮ ವಾರ್ಡುಗಳ ರಾಜಕಾಲುವೆಯಲ್ಲಿ ಗುತ್ತಿಗೆದಾರರು ಹೂಳು ಸರಿಯಾಗಿ ತೆಗೆದಿದ್ದಾರಾ, ತೆಗೆದಿದ್ದರೆ ಎಷ್ಟು ತೆಗೆದಿದ್ದಾರೆ, ಆಳದಲ್ಲಿ ತೆಗೆದಿದ್ದಾರಾ ಎಂದು ನಿಂತು ನೋಡಿದ್ದಾರೆ. ನಿಂತು ನೋಡುವ ಕರ್ಮಕ್ಕಿಂತ ಗುತ್ತಿಗೆದಾರರು ಕಿಸೆಗೆ ಅಥವಾ ಪರ್ಸಿಗೆ ಹಾಕುವ ಅಮೌಂಟು ಚೆನ್ನಾಗಿರುತ್ತಲ್ಲ. ಅಷ್ಟಕ್ಕೂ ಈ ಬಗ್ಗೆ ಧ್ವನಿ ಎತ್ತಿದರೆ ಏನು ಪ್ರಯೋಜನ ಎಂದು ಅಂದುಕೊಂಡಿರುವ ಮನಪಾ ಸದಸ್ಯರು ಹೂಳು ತೆಗೆಯುವ ಕಡೆ ಮುಖ ಮಾಡಿ ಕೂಡ ಮಲಗುವುದಿಲ್ಲ. ಆ ಗುತ್ತಿಗೆದಾರ ಏನು ಮಾಡುತ್ತಾನೆ? ಜೆಸಿಬಿ ಇಳಿಸಿದ ಕಡೆ ಮೂರ್ನಾಕು ಆಂಗಲ್ ನಿಂದ ಫೋಟೋ ತೆಗೆಯುತ್ತಾನೆ, ಮೇಲೆ ಎತ್ತಿ ಹಾಕಿದ ಹೂಳಿನ ಫೋಟೋ ಬೇರೆ ಬೇರೆ ಆಯಾಮಗಳಲ್ಲಿ ನಿಂತು ತೆಗೆಯುತ್ತಾನೆ. ಅದನ್ನು ಇಟ್ಟು ಬಿಲ್ಲಿನೊಂದಿಗೆ ಬಾಣ ಬಿಡುತ್ತಾನೆ. ಹಣ ಬಂದ ನಂತರ ಅವನಿಗೆ ಗೊತ್ತು. ತನ್ನ ಬಿಸ್ಕಿಟ್ ಎಲ್ಲಿ ಬಿಸಾಡಬೇಕು ಎನ್ನುವುದು.
ಕಾಂಗ್ರೆಸ್ ಬಂದಾಗ ದಶಕಗಳ ತನಕ ಹೀಗೆ ನಡೆಯುತ್ತಿತ್ತು. ನಮ್ಮ ರಾಜಕಾಲುವೆಗಳು ಇವರಿಗೆ ಬಂಗಾರ ಹೂಳು ತೆಗೆಯುವ ಕೆರೆಗಳಾಗಿದ್ದವು. ಆದರೆ ಬಿಜೆಪಿ ಹೀಗೆ ಅಲ್ಲವಲ್ಲ ಎಂದು ಜನ ಅಂದುಕೊಂಡು ಮತ ನೀಡಿದ್ದರು. ಅಷ್ಟಕ್ಕೂ ಈ ರಾಜಕಾಲುವೆಗಳ ಹೂಳು ತೆಗೆಯಲು ಗುತ್ತಿಗೆದಾರರಿಗೆ ಸಿಗುವ ಮೊತ್ತ ಚಿಕ್ಕದ್ದೇನಲ್ಲ. ಬೇಕಾದರೆ ಅದಕ್ಕೆ ಬಗ್ಗೆನೆ ನಾಳೆ ಒಂದು ಅಂಕಣ ಬರೆಯಬಲ್ಲೆ. ನಿಮಗೆ ಒಂದು ಚಿಕ್ಕ ಉದಾಹರಣೆ ಕೊಡುತ್ತೇನೆ. ಬೈಲಾರೆ ರಾಜಕಾಲುವೆಯ ಹೂಳೆತ್ತುವ ಕಾಮಗಾರಿಯ ಮೊತ್ತ ಎಷ್ಟು ಗೊತ್ತಾ? ಹನ್ನೆರಡು ಲಕ್ಷದ 98 ಸಾವಿರ ರೂಪಾಯಿ. 15 ನೇ ಕುಂಜತ್ತಬೈಲ್ ದಕ್ಷಿಣ ವಾರ್ಡಿನಲ್ಲಿ ಮಲ್ಲಿ ಲೇಔಟ್ ರಸ್ತೆಯಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನ ಎದುರುಗಡೆ ಇರುವ ಬೃಹತ್ ಚರಂಡಿಯ ಹೂಳೆತ್ತುವ ಕಾಮಗಾರಿಯ ಮೊತ್ತ 9 ಲಕ್ಷ ರೂಪಾಯಿಗಳು. ಈ ಮೊತ್ತ ಹೀಗೆ ಬೆಳೆಯುತ್ತಾ ಹೋಗುತ್ತದೆ. ಈಗ ಹೇಳಿ ಡಾಕ್ಟರ್, ಇಂಜಿನಿಯರ್ ಕಲಿಯುವುದಕ್ಕಿಂತ ಹೂಳು ತೆಗೆಯುವುದೇ ಹೆಚ್ಚು ಲಾಭ ಅಲ್ವಾ!
Leave A Reply