ಬಿಜೆಪಿ ಪಾಲಿಕೆ ಸದಸ್ಯರು ಗ್ಯಾಂಗಿನ ಎಂಜಿಲಿಗೆ ಕೈಒಡ್ಡದಿರಲಿ!

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಆಡಳಿತ ಮಾಡುವ ಪಕ್ಷದ ಹೆಸರು ಮಾತ್ರ ಬದಲಾಗಿದೆ. ಉಳಿದದ್ದೆಲ್ಲವೂ ಹಾಗೆ ಉಳಿದಿದೆ. ಹಿಂದೆ ಕಾಂಗ್ರೆಸ್ ಇತ್ತು. ಈಗ ಭಾರತೀಯ ಜನತಾ ಪಾರ್ಟಿ. ಆಡಳಿತ ಪಕ್ಷದಲ್ಲಿ ಇದ್ದವರು ಈಗ ವಿಪಕ್ಷದಲ್ಲಿ ಇದ್ದಾರೆ. ವಿಪಕ್ಷದಲ್ಲಿ ಇದ್ದವರು ಈಗ ಆಡಳಿತ ಪಕ್ಷದಲ್ಲಿ ಇದ್ದಾರೆ. ಕಾಂಗ್ರೆಸ್ಸಿಗರು ತಿನ್ನುತ್ತಿದ್ದ ರೀತಿ ನೋಡಿ ಜನ ಬೇಸತ್ತು ಬಿಜೆಪಿಗೆ ಅವಕಾಶ ಕೊಟ್ಟಿದ್ದರು. ಆದರೆ ಬಿಜೆಪಿ ನುಂಗುತ್ತಿದೆ, ಯಾವುದೇ ನಾಚಿಕೆ ಇಲ್ಲದೆ ಒಂದು ಮೀಟರ್ ತೋಡಿನಲ್ಲಿ ಕುಳಿತು. ಇನ್ನೇನೂ ಒಂದು ತಿಂಗಳೊಳಗೆ ಮಳೆಗಾಲ ಶುರುವಾಗುತ್ತದೆ.
ಜೂನ್ ನಲ್ಲಿ ನಮ್ಮಲ್ಲಿ ಕೃತಕ ನೆರೆ ಎನ್ನುವುದು ಸಾಮಾನ್ಯ. ಈ ಕೃತಕ ನೆರೆಯ ಫೋಟೋ ಅಥವಾ ವಿಡಿಯೋ ಪತ್ರಿಕೆ, ಟಿವಿಗಳಲ್ಲಿ ಬಂದು ಆಡಳಿತ ಪಕ್ಷದ ಮರ್ಯಾದೆ ಆ ನೀರಿನಲ್ಲಿ ಹರಿದುಹೋಗುತ್ತದೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಇನ್ನಷ್ಟು ಮರ್ಯಾದೆ ತೆಗೆಯಲು ನೆಟ್ಟಿಗರು ತಯಾರಾಗಿರುತ್ತಾರೆ. ಇದೆಲ್ಲ ಗೊತ್ತಿದ್ದೂ ಕಾಂಗ್ರೆಸ್ಸಿನಿಂದ ಭಿನ್ನವಾಗಿದ್ದೇವೆ ಎಂದು ತೋರಿಸಬೇಕಾಗಿರುವ ಬಿಜೆಪಿ ಮಾತ್ರ ಕಾಂಗ್ರೆಸ್ಸಿಗಿಂತ ವೇಗವಾಗಿ ದಾರಿ ತಪ್ಪುವ ಲಕ್ಷಣ ಈ ಬಾರಿಯೂ ಕಂಡುಬರುತ್ತಿದೆ. ಇವರು ಕೂಡ ಭ್ರಷ್ಟರು ಎಂದು ಊರು ಮಾತನಾಡುವ ಮೊದಲು ಇವರು ಎಚ್ಚರವಾಗಲಿ ಎನ್ನುವ ಕಾರಣಕ್ಕೆ ಈ ಜಾಗೃತ ಅಂಕಣವನ್ನು ನಿಮ್ಮ ಮುಂದಿಡುತ್ತೇನೆ. ಬಿಜೆಪಿಗರು ಇದನ್ನು ಓದಲಿ ಅಥವಾ ನೀವು ಅವರಿಗೆ ತಲುಪಿಸಿ ಎಂದು ಮನವಿ. ಮಳೆಗಾಲದ ಎರಡು ತಿಂಗಳಲ್ಲಿ ಒಂದೊಂದು ವಾರ್ಡಿನಲ್ಲಿ ಒಂದೊಂದು ಗ್ಯಾಂಗ್ ಎನ್ನುವ ಹೆಸರಿನ ತಂಡವನ್ನು ನಿಯೋಜನೆ ಮಾಡಲಾಗುತ್ತದೆ. ಅದನ್ನು ಗುತ್ತಿಗೆ ಕೊಡುವ ವ್ಯವಸ್ಥೆ ಇದೆ. ಒಂದು ಗ್ಯಾಂಗಿಗೆ ತಿಂಗಳಿಗೆ ಒಂದು ಲಕ್ಷ 20 ಸಾವಿರ ರೂಪಾಯಿ ತಗಲುತ್ತದೆ. ಹಾಗೆ ಎರಡು ತಿಂಗಳಿಗೆ ಎರಡು ಲಕ್ಷ ನಲ್ವತ್ತು ಸಾವಿರ ತಗಲುತ್ತದೆ. ಹೀಗೆ ಅರವತ್ತು ವಾರ್ಡಿನಲ್ಲಿ ಎಷ್ಟು ಕೋಟಿ ಆಯಿತು ಎಂದು ನೀವೆ ಲೆಕ್ಕ ಹಾಕಿ.
ನೂರು ರೂಪಾಯಿಗೆ ಒಂದು ವಸ್ತು ಖರೀದಿಸಿ ಅದನ್ನು ನಾವು ಬಳಸಿದಾಗ ಅದರಿಂದ ನಮಗೆ ಸಂತೃಪ್ತಿ ಸಿಕ್ಕರೆ ಆಗ ಹಣ ಕೊಟ್ಟಿದ್ದಕ್ಕೆ ಸಾರ್ಥಕ ಎನಿಸುತ್ತದೆ. ಆದರೆ ಗ್ಯಾಂಗಿಗೆ ವ್ಯಯಿಸುವ ಕೋಟಿ ರೂಪಾಯಿಯ ಹತ್ತು ಶೇಕಡಾ ಪ್ರಯೋಜನವಾದರೂ ಆಗುತ್ತಾ ಎನ್ನುವುದು ಈಗ ಇರುವ ಪ್ರಶ್ನೆ. ಅಷ್ಟಕ್ಕೂ ಈ ಗ್ಯಾಂಗಿನವರಿಗೆ ಕೋಟಿ ವ್ಯಯಿಸುವ ಅಗತ್ಯವೇ ಇಲ್ಲದೆ ಪಾಲಿಕೆ ವ್ಯಾಪ್ತಿಯಲ್ಲಿ ಕೃತಕ ನೆರೆ ಬರದಂತೆ ಮಾಡಲು ಸಾಧ್ಯವಿದೆಯಾ? ಇದೆ. ಆಂಟೋಣಿ ವೇಸ್ಟ್ ಮ್ಯಾನೇಜಮೆಂಟಿನವರಿಗೆ ತಿಂಗಳಿಗೆ ಎರಡು ಕಾಲು ಕೋಟಿ ರೂಪಾಯಿಯನ್ನು ಪಾಲಿಕೆ ಕಡೆಯಿಂದ ಸಂದಾಯ ಮಾಡಲಾಗುತ್ತದೆ. ಅಷ್ಟು ಹಣ ನೀಡಬೇಕಾದರೆ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟ್ ನವರು ಪಾಲಿಕೆ ವ್ಯಾಪ್ತಿಯ ಒಂದು ಮೀಟರ್ ಅಗಲದ ಚರಂಡಿಗಳನ್ನು ಸ್ವಚ್ಚ ಮಾಡಲೇಬೇಕು. ಅದರಲ್ಲಿರುವ ಹೂಳು ತೆಗೆಯಲೇಬೇಕು. ಆಗ ಮಳೆಗಾಲದಲ್ಲಿ ಗ್ಯಾಂಗ್ ಪ್ರತಿ ವಾರ್ಡಿಗೆ ಒಂದೊಂದು ಬೇಕಾಗಿಯೇ ಇಲ್ಲ. ಅದಕ್ಕಾಗಿ ಕೋಟ್ಯಾಂತರ ರೂಪಾಯಿ ವ್ಯಯಿಸುವ ಅಗತ್ಯವೇ ಇಲ್ಲ. ಆದರೆ ಆಂಟೋನಿ ವೇಸ್ಟ್ ನವರು ಒಂದು ಮೀಟರ್ ಅಗಲದ ತೋಡುಗಳ ಬಗ್ಗೆ ಕ್ಯಾರೇ ಎನ್ನುವುದಿಲ್ಲ. ಇದರಿಂದ ಏನು ಆಗುತ್ತದೆ ಎಂದರೆ ಗ್ಯಾಂಗ್ ವ್ಯವಸ್ಥೆ ಮಾಡಬೇಕಾಗುತ್ತದೆ. ಅವರಾದರೂ ಸರಿ ಮಾಡುತ್ತಾರಾ? ಅದು ಕೂಡ ಇಲ್ಲ. ಗ್ಯಾಂಗಿನ ಗುತ್ತಿಗೆದಾರರಿಗೆ ಪ್ರತಿ ವಾರ್ಡಿನಲ್ಲಿ ಎರಡು ತಿಂಗಳಿಗೆ ಸಿಗುವ ಎರಡು ಲಕ್ಷ ನಲ್ವತ್ತು ಸಾವಿರ ರೂಪಾಯಿಯಲ್ಲಿ ನಲ್ವತ್ತು ಸಾವಿರ ರೂಪಾಯಿಯನ್ನು ಅವರು ಕಾರ್ಪೋರೇಟರ್ ಅವರಿಗೆ ಟೇಬಲ್ ಕೆಳಗಿನಿಂದ ನೀಡಬೇಕಾಗುತ್ತದೆ. ಇನ್ನು ಒಂದಿಷ್ಟು ಪಾಲು ಇಂಜಿನಿಯರ್ಸ್ ಗಳ ಜೇಬು ಸೇರುತ್ತದೆ. ಕಾರ್ಪೋರೇಟರ್ ಗಳ ಕೈ, ಪರ್ಸ್, ಹ್ಯಾಂಡ್ ಬ್ಯಾಗ್ ಬಿಸಿಯಾಗುವುದರಿಂದ ಅವರು ತಮ್ಮ ವಾರ್ಡಿನ ತೋಡುಗಳು ಸ್ವಚ್ಚವಾಗಿದೆಯಾ, ಇಲ್ವಾ ಎನ್ನುವುದನ್ನು ಕಣ್ಣು ಬಿಟ್ಟು ಕೂಡ ನೋಡುವುದಿಲ್ಲ.
ಈ ಸಲ ಈಗಾಗಲೇ ಗ್ಯಾಂಗ್ ಗುತ್ತಿಗೆದಾರರಿಗೆ ಗುತ್ತಿಗೆ ನೀಡಿ ಆಗಿದೆ. ಆದ್ದರಿಂದ ಅವರನ್ನು ಸರಿಯಾಗಿ ದುಡಿಸಿಕೊಳ್ಳಬೇಕಾಗಿರುವುದು ಪಾಲಿಕೆಯಲ್ಲಿ ಮೇಯರ್ ಹಾಗೂ ಆಯುಕ್ತರು. ಅವರು ನೋಡಿಕೊಳ್ಳಬೇಕು. ಹೇಗೆ ಅಂದರೆ ಪ್ರತಿ ದಿನ ಪ್ರತಿ ವಾರ್ಡುಗಳ ಒಂದು ಮೀಟರ್ ಚರಂಡಿಗಳು ಸ್ವಚ್ಚವಾಗಿದೆಯೋ ಎಂದು ಆಯಾ ವಾರ್ಡುಗಳ ಕಾರ್ಪೋರೇಟರ್ ಗಳು ನಿಂತು ನೋಡಬೇಕು. ಗ್ಯಾಂಗಿನವರು ಕೆಲಸ ಮಾಡದಿದ್ದರೆ ನಿಲ್ಲಿಸಿ ಮಾಡಿಸಬೇಕು. ಅದರ ಫೋಟೋ ತೆಗೆದು ಪಾಲಿಕೆಯಲ್ಲಿ ಒಂದು ಆಪ್ ತರಹ ಮಾಡಿ ಅದಕ್ಕೆ ಹಾಕಬೇಕು. ಕಾಂಗ್ರೆಸ್ಸಿನ ಪಾಲಿಕೆ ಸದಸ್ಯರು ಹೀಗೆ ಮಾಡದಿದ್ದರೆ ಪರವಾಗಿಲ್ಲ. ಅದು ಅವರ ಹಣೆಬರಹ. ಅವರು ಗುತ್ತಿಗೆದಾರರೊಂದಿಗೆ ಬೇಕಾದರೆ ಹೊಂದಾಣಿಕೆ ಮಾಡಿಕೊಳ್ಳಲಿ. ಅದು ಅವರ ವಾರ್ಡುಗಳ ಕರ್ಮ. ಆದರೆ ಬಿಜೆಪಿ ಕಾರ್ಪೋರೇಟರ್ ಗಳು ಮಾತ್ರ ಭ್ರಷ್ಟಾಚಾರ ಮಾಡದೇ ಇದನ್ನು ತಪ್ಪದೆ ಅನುಸರಿಸಲಿ. ಒಂದು ವೇಳೆ ಬಿಜೆಪಿ ಮನಪಾ ಸದಸ್ಯರು ಒಂದಿಷ್ಟು ಆಲಸ್ಯತನ ಮಾಡಿದರೆ ಅವರ ವಾರ್ಡಿನ ಬಿಜೆಪಿ ಸಮಿತಿ ಎಂದು ಇರುತ್ತದೆ. ಅವರು ತಮ್ಮ ಕಾರ್ಪೋರೇಟರನ್ನು ಪ್ರಶ್ನಿಸಲಿ. ಯಾಕೆ ತಮ್ಮ ವಾರ್ಡಿನ ಒಂದು ಮೀಟರ್ ಅಗಲದ ಚರಂಡಿ ಕ್ಲೀನ್ ಆಗಿಲ್ಲ ಎಂದು ಕೇಳಲಿ. ಇನ್ನು ಆಂಟೋನಿ ವೇಸ್ಟ್ ನವರ ಕರ್ತವ್ಯಲೋಪದಿಂದ ಈ ಗ್ಯಾಂಗುಗಳಿಗೆ ಪಾಲಿಕೆಯಿಂದ ಜನರ ತೆರಿಗೆಯ ಕೋಟ್ಯಾಂತರ ರೂಪಾಯಿ ಸಂದಾಯ ಮಾಡಬೇಕಿರುವುದರಿಂದ ತಿಂಗಳ ಹಣವನ್ನು ಆಂಟೋನಿ ವೇಸ್ಟಿಗೆ ಕೊಡುವಾಗ ಕಟ್ ಮಾಡಿಕೊಡಲಿ. ಕೇಳಿದ್ರೆ ನೀವು ಸರಿಯಾಗಿ ಕೆಲಸ ಮಾಡದೇ ಇದ್ದ ಕಾರಣ ಈ ಹೆಚ್ಚುವರಿ ಹೊರೆ ಪಾಲಿಕೆಯ ಮೇಲೆ ಬಿದ್ದಿದೆ. ಆದ್ದರಿಂದ ನಾವು ನಿಮ್ಮ ತಪ್ಪನ್ನು ನಿಮ್ಮಿಂದಲೇ ವಸೂಲಿ ಮಾಡುತ್ತೇವೆ ಎಂದು ಹೇಳಲಿ. ಇನ್ನು ಆಂಟೋನಿ ವೇಸ್ಟ್ ನವರು ಎಂತಹ ಕಿಲಾಡಿಗಳು ಎಂದರೆ ಇವರಿಗೆ ಒಂದು ಮೀಟರ್ ಅಗಲದ ಚರಂಡಿಯ ಹೂಳನ್ನು ಎತ್ತಲು ಆಗಲ್ಲ. ಅದೇ ಚರಂಡಿಯಿಂದ ತೆಗೆದು ರಸ್ತೆ ಮೇಲೆ ಹಾಕಿದ ಹೂಳಿನ ರಾಶಿಯನ್ನು ತಮ್ಮ ಲಾರಿಗೆ ತುಂಬಿಸಿ ಹೋಗುತ್ತಾರೆ. ಅದು ಸಹಾಯ ಎಂದು ಭಾವಿಸಬೇಡಿ. ಆಂಟೋನಿ ವೇಸ್ಟಿಗೆ ಹಣ ಸಿಗುವುದು ಅದು ತಂದು ಹಾಕಿದ ತ್ಯಾಜ್ಯವನ್ನು ತೂಕ ಮಾಡುವುದರಿಂದ. ಹೆಚ್ಚು ತ್ಯಾಜ್ಯ ಹೆಚ್ಚು ಆದಾಯ. ಅದಕ್ಕೆ ಈ ಹೂಳನ್ನು ತೆಗೆದುಕೊಂಡು ಹೋಗಿ ತೂಕ ಹಾಕುವುದು. ಆಂಟೋನಿ ಉಂಡು ಹೋದ, ಕೊಂಡು ಹೋದ!
Leave A Reply