ಸೂತಕದ ಮನೆಯಲ್ಲಿ ಆಕ್ಸಿಮೀಟರ್, ರೆಮ್ಡಿಸಿವರ್ ಬೆಲೆ ಹಿಡಿಯುವವರಿಲ್ಲವೇ!?
ಸೂತಕದ ಮನೆಯಲ್ಲಿ ಗಳ ಹಿಡಿಯುವುದು ಎನ್ನುವ ಮಾತಿದೆ. ಒಂದು ರೀತಿಯಲ್ಲಿ ಕರ್ನಾಟಕ ಸೂತಕದ ಮನೆಯಾಗಿದೆ. ಇಂತಹ ಸಂದರ್ಭದಲ್ಲಿ ಲಕ್ಷಾಂತರ ಮಂದಿ ಉದ್ಯೋಗವಿಲ್ಲದೆ, ಆದಾಯವಿಲ್ಲದೆ ಒದ್ದಾಡುತ್ತಿದ್ದಾರೆ. ಇದರ ನಡುವೆ ಕೆಲವರು ಸಾವಿನ ಮನೆಗಳಲ್ಲಿ ಹೊಟ್ಟೆ ತುಂಬಾ ಉಣ್ಣಲು ತಯಾರಾಗಿದ್ದಾರೆ. ನಿಮ್ಮ ದೇಹದಲ್ಲಿ ಆಮ್ಲಜನಕ ಕಡಿಮೆಯಾದರೆ ನಿಮಗೆ ಅಪಾಯ ಕಟ್ಟಿಟ್ಟ ಬುತ್ತಿ. ಕೋವಿಡ್ 19 ನಿಂದ ಈ ಬಾರಿ ಸತ್ತವರಲ್ಲಿ ಬಹುತೇಕರು ದೇಹದಲ್ಲಿ ಆಮ್ಲಜನಕದ ಕೊರತೆಯಾಗಿ ಅಸುನೀಗಿದ್ದಾರೆ. ಹಾಗಾದ್ರೆ ದೇಹದಲ್ಲಿ ಆಮ್ಲಜನಿಕ ಎಷ್ಟಿದೆ ಎಂದು ನೋಡುವುದು ಹೇಗೆ ಎಂಬ ಪ್ರಶ್ನೆ ನಮ್ಮಲ್ಲಿ ಉದ್ಭವಿಸಬಹುದು. ಇದೇನು ಬ್ರಹ್ಮವಿದ್ಯೆಯಲ್ಲ. ಇದಕ್ಕಾಗಿ ಎಂಬಿಬಿಎಸ್ ಕಲಿಯಬೇಕಾಗಿಲ್ಲ. 800 ರೂಪಾಯಿ ಕೊಟ್ಟರೆ ಒಂದು ಸಣ್ಣ ಯಂತ್ರ ಸಿಗುತ್ತದೆ. ಅದನ್ನು ಆಕ್ಸಿಮೀಟರ್ ಎಂದು ಕರೆಯುತ್ತಾರೆ. ಅದನ್ನು ಬೆರಳುಗಳಿಗೆ ತೂರಿಸಿದರೆ ಅದೇ ನಿಮ್ಮ ದೇಹದ ಆಮ್ಲಜನಕದ ಮಟ್ಟವನ್ನು ತೋರಿಸುತ್ತದೆ. ಅದರಿಂದ ನೀವು ನಿಮ್ಮ ದೈಹಿಕ ಕ್ಷಮತೆಯನ್ನು ಅಳತೆ ಮಾಡಬಹುದು. ಈ ಯಂತ್ರ ನೀವು ಮುಂದೆ ಏನು ಮಾಡಬೇಕಾಗುತ್ತದೆ ಎನ್ನುವುದರ ಮುನ್ಸೂಚನೆ ಯನ್ನು ನೀಡುತ್ತದೆ. ಇದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೆಲವರು ಇದನ್ನು ಬಳಸಿ ವಿಡಿಯೋ ಮಾಡಿ ಹರಿಯಬಿಟ್ಟಿದ್ದಾರೆ. ಜನರು ಇದೇ ಕೊರೊನಾ ವಿರುದ್ಧ ಗೆಲ್ಲಲು ರಾಮಬಾಣ ಎಂದು ಅಂದುಕೊಂಡಿದ್ದಾರೆ. ಇದನ್ನು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಇದರ ನಿಜವಾದ ಬೆಲೆ 800 ರೂಪಾಯಿಯ ಒಳಗಿತ್ತು. ಯಾವಾಗ ಇದು ಬಿಸಿ ಕೇಕಿನಂತೆ ಮಾರಾಟ ಆಗುತ್ತೆ ಎಂದು ಗೊತ್ತಾಯಿತೋ ಇದರ ಕೃತಕ ಅಭಾವ ಸೃಷ್ಟಿಸಲಾಯಿತು. ಈಗ ಇದರ ಬೆಲೆ ಮೂರರಿಂದ ಐದು ಸಾವಿರ ರೂಪಾಯಿ. ಆದರೂ ಜನ ಖರೀದಿಸುತ್ತಿದ್ದಾರೆ. ಇದರಿಂದ ಏನಾಗಿದೆ ಕೆಲವರಿಗೆ ಇದು ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿದೆ. ಮೊದಲನೇ ಅಲೆ ಬಂದಾಗ ಇದೇ ಪರಿಸ್ಥಿತಿ ಸ್ಯಾನಿಟೈಸರ್ ನದ್ದು ಆಗಿತ್ತು. ಸ್ಯಾನಿಟೈಸರ್ ಬಳಸಿದರೆ ಉತ್ತಮ ಎಂದು ಯಾವಾಗ ವೈದ್ಯರು ಹೇಳಿದರೋ ಅಥವಾ ಮೋದಿ ಕೂಡ ಹೇಳಿದರೋ ಮೆಡಿಕಲ್ ಗಳಲ್ಲಿ ಕೇಳುವವರೇ ಇಲ್ಲದೆ ಧೂಳು ತಿನ್ನುತ್ತಿದ್ದ ಸ್ಯಾನಿಟೈಸರ್ ಗಳು ಹೊರಗೆ ಬಂದವು. ಬಹುತೇಕ ಮೆಡಿಕಲ್ ಗಳು ಧೂಳು ಒರೆಸಿ ಮಾರಿದವು. ಹಳೆಯ ಸ್ಟಾಕ್ ಗಳು ಖಾಲಿಯಾಗಿ ಹೊಸ ಸ್ಟಾಕ್ ಗಳು ಬಂದವು. ಕೆಲವು ಎಷ್ಟು ಕಳಪೆಯಾಗಿದ್ದವು ಎಂದರೆ ಪ್ಲಾಸ್ಟಿಕ್ ಬಾಟಲಿಗಳನ್ನು ಅಮುಕಿದರೆ ನೊರೆ ಬರುತ್ತಿತ್ತೆ ವಿನ: ಸ್ಯಾನಿಟೈಸರ್ ಸುಳಿವೆ ಇರುತ್ತಿರಲಿಲ್ಲ. ಆದರೂ ಜನ ಖರೀದಿಸಿದರು. ಒಂದು ತೆಗೆದುಕೊಂಡರೆ ಇನ್ನೊಂದು ಫ್ರೀ ಎಂದರೂ ಕೊಳ್ಳುವವರಿಲ್ಲದ ಸ್ಯಾನಿಟೈಸರ್ ಕಥೆ ಎಲ್ಲಿಗೆ ಮುಟ್ಟಿತ್ತು ಎಂದರೆ ಅರ್ಧ ಲೀಟರ್ ಗೆ ನೂರೈವತ್ತು ರೂಪಾಯಿಗಿಂತ ಜಾಸ್ತಿ ಹಣ ವಸೂಲಿ ಮಾಡಿದರೆ ಅಂತಹ ಅಂಗಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತೆ ಎಂದು ಸರಕಾರ ಎಚ್ಚರಿಸಿದ ನಂತರ ಅದರ ದರ ಲಿಮಿಟ್ಟಿಗೆ ಬಂದಿತ್ತು. ಈಗ ಬಿಡಿ, ಮತ್ತೆ ಅದರ ಕ್ರೇಜ್ ಕಡಿಮೆಯಾಗಿದೆ. ಸ್ಯಾನಿಟೈಸರ್ ಹವಾ ಉಳಿದಿಲ್ಲ. ಈಗ ರೆಡಿಮೆಸರ್ ದುನಿಯಾ. ರೆಮ್ಡಿಸಿವರ್ ಯಾವುದೇ ಮ್ಯಾಜಿಕ್ ಔಷಧ ಅಲ್ಲ ಎನ್ನುವುದು ತುಂಬಾ ಜನರಿಗೆ ಗೊತ್ತಿಲ್ಲ. ಇದನ್ನು ತೆಗೆದುಕೊಂಡರೆ ಸಾಯುವುದಿಲ್ಲ ಎಂದೇ ಎಲ್ಲರೂ ಅಂದುಕೊಂಡಿದ್ದಾರೆ. ಕೊರೊನಾ ಬಂದ ನೂರರಲ್ಲಿ ಒಂದು ಶೇಕಡಾ ಜನರಿಗೆ ಮಾತ್ರ ಇದರ ಅವಶ್ಯಕತೆ ಬೀಳುವುದು ಎಂದು ಅನೇಕರಿಗೆ ಗೊತ್ತಿಲ್ಲ. ಆದರೂ ಇದಕ್ಕೆ ಈಗ ಶುಭ ಕಾಲ ಬಂದಿದೆ. 2500 ರೂಪಾಯಿಗೂ ಕೇಳುವವರಿಲ್ಲದ ಇದರ ಬೆಲೆ ಮೂಲ ಬೆಲೆಗಿಂತ ಐದು ಪಟ್ಟು ಹೆಚ್ಚಾಗಿದೆ. ಅದರ ಉತ್ಪಾದಕರಿಗೆ, ಮಾರಾಟಗಾರರಿಗೆ ಈಗ ಸುಗ್ಗಿಯ ಕಾಲ. ಇನ್ನು ಬೆಂಗಳೂರಿನಲ್ಲಿ ಅಂಬ್ಯುಲೆನ್ಸ್ ನಲ್ಲಿ ಶವವನ್ನು ಸ್ಮಶಾನಕ್ಕೆ ಸಾಗಿಸಲು ಹೊಸ ಎಂಬ್ಯುಲೆನ್ಸಿನ ಅರ್ಧ ರೇಟ್ ಡಿಮ್ಯಾಂಡ್ ಮಾಡುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತದೆ. ಐದು ಕಿಲೋ ಮೀಟರ್ ವ್ಯಾಪ್ತಿಗೆ 40 ಸಾವಿರ ಕೇಳಿದರೆ ಮಧ್ಯಮ ವರ್ಗದವರು ಏನು ತಾನೆ ಮಾಡಲು ಸಾಧ್ಯ. ಹೀಗೆ ಇಂತಹ ಸಂಕಷ್ಟ ಕಾಲದಲ್ಲಿ ನೀವು ಒಂದಿಷ್ಟು ಸಮಾಧಾನಕರ ಪರಿಸ್ಥಿತಿಯಲ್ಲಿ ಇದ್ದಿರಿ ಎಂದರೆ ಅದು ದೇವರ ಆರ್ಶೀವಾದ. ಹೀಗಿರುವಾಗ ಎದುರಿನವರ ಅಸಹಾಯಕತೆಯನ್ನು ನೀವು ನಿಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಿರಿ ಎಂದರೆ ಅದು ನಿಮ್ಮ ಕೆಡುಗಾಲದ ಮೊದಲ ಬಾಗಿಲು ನೀವೆ ತೆರೆದಿದ್ದೀರಿ ಎಂದೇ ಅರ್ಥ. ಭಗವಂತ ಕೊರೊನಾ ಕಾಯಿಲೆಯಿಂದ ಮೇಲೆ ಕರೆಸಿಕೊಂಡವರೆಲ್ಲ ಕೆಟ್ಟವರಾಗಿದ್ದರು ಎಂದು ಅಂದುಕೊಳ್ಳಬೇಡಿ. ಇಲ್ಲಿ ಆರೋಗ್ಯವಾಗಿ ಉಳಿದಿರುವ ಎಲ್ಲರೂ ಒಳ್ಳೆಯವರು ಎಂದಲ್ಲ. ನಮ್ಮ ಭಾಗ್ಯದಲ್ಲಿ ಒಳ್ಳೆಯದು ಮಾಡಲು ಇನ್ನೊಂದು ಅವಕಾಶ ಭಗವಂತ ಕೊಟ್ಟಿದ್ದಾನೆ ಎಂದು ನಾವು ಭಾವಿಸಬೇಕು. ನಿಮಗೆ ಇನ್ನೊಬ್ಬರಿಗೆ ಒಳ್ಳೆಯದು ಮಾಡಲು ಆದರೆ ಖಂಡಿತ ಮಾಡಿ. ನಿಮ್ಮ ಪುಣ್ಯದ ಜೋಳಿಗೆಯಲ್ಲಿ ಒಂದಿಷ್ಟು ಪುಣ್ಯ ಬಂದುಬೀಳಬಹುದು. ಅದು ಮಾಡಲು ಮನಸ್ಸಿಲ್ಲ ಎಂದರೆ ಕೆಟ್ಟದ್ದನ್ನು ಮಾಡಲು ಹೋಗಬೇಡಿ. ನೀವು ಇವತ್ತು ಬೇರೆಯವರ ಸೂತಕದ ಮನೆಯಲ್ಲಿ ಅವರ ಗಳ ಹಿಡಿದು ನೆತ್ತರು ಬರಿಸಬಹುದು. ಆದರೆ ನಿಮಗೂ ಒಂದು ಜೀವನವಿದೆ ಎಂದು ಮರೆಯಬೇಡಿ. ಯಾಕೆಂದರೆ ಮಾಡಿದ ಪಾಪ ಗೋಡೆಗೆ ಬಡಿದು ಅಷ್ಟೇ ವೇಗವಾಗಿ ಹಿಂತಿರುಗಿ ಬರುತ್ತದೆ, ನೆನಪಿರಲಿ!!
Leave A Reply