ಕಾಂಗ್ರೆಸ್ಸಿಗರ ಹೊಸ ನಾಟಕದ ಸ್ಕ್ರಿಪ್ಟ್ ಅದ್ಭುತವಾಗಿದೆ. ಜನರಿಗೆ ಖುಷಿಯಾಗುತ್ತಾ!!
ಕೊರೊನಾವನ್ನು ನಿಯಂತ್ರಿಸಲು ರಾಜ್ಯ ಮತ್ತು ಕೇಂದ್ರ ಸರಕಾರ ತಾನು ಏನೆಲ್ಲ ಮಾಡಬಹುದು ಎಂದು ದಿನನಿತ್ಯ ಯೋಜನೆ ಹಾಕಿಕೊಂಡು ವಿವಿಧ ಪ್ರಯೋಗಗಳನ್ನು ಮಾಡುತ್ತಿದ್ದರೆ ಇತ್ತ ರಾಜ್ಯದ ಕಾಂಗ್ರೆಸ್ ಮುಖಂಡರು ಸರಕಾರದ ವಿರುದ್ಧ ಏನು ಆರೋಪ ಮತ್ತು ಷಡ್ಯಂತ್ರ ಮಾಡಬಹುದು ಎಂದು ನಿತ್ಯ ಯೋಚಿಸುತ್ತಿದ್ದಾರೆ. ಮೇಲ್ನೋಟಕ್ಕೆ ನಾವು ಕಾಂಗ್ರೆಸ್ ಕಡೆಯಿಂದ ನೂರು ಕೋಟಿ ರೂಪಾಯಿ ನೀಡುತ್ತೇವೆ ಎಂದು ಇವರು ಹೇಳುತ್ತಿರುವುದೇ ದೊಡ್ಡ ತಂತ್ರ. ಈ ಮೂಲಕ ತಾವು ದಾನಶೂರ ಕರ್ಣರು ಎಂದು ತೋರಿಸಿಕೊಡಲು ಇವರು ಹೊರಟಿದ್ದರು. ಆದರೆ ಇವರು ಕೊಡುವ ನೂರು ಕೋಟಿ ರೂಪಾಯಿಯಲ್ಲಿ “ಕಂಡಿಷನ್ ಅಪ್ಲೈ” ಎನ್ನುವುದು ತುಂಬಾ ಚಿಕ್ಕದಾಗಿ ಕಾಣವುದರಿಂದ ಅದನ್ನು ಯಾರೂ ಗಮನಿಸಿಲ್ಲ. ಇವರು ನೂರು ಕೋಟಿ ಕೊಡಲು ಒಪ್ಪಿರುವುದು ಇವರ ಕಿಸೆಯಿಂದ ಅಲ್ಲ. ಇವರು ಕೊಡಲು ತಯಾರಾಗಿರುವುದು ತಮ್ಮ ಕಾಂಗ್ರೆಸ್ ಶಾಸಕರ, ಸಂಸದರ ಪ್ರದೇಶಾಭಿವೃದ್ಧಿಗೆ ಬರುವ ಹಣ. ಓಕೆ. ಜನರ ತೆರಿಗೆಯ ಹಣ ಸರಕಾರಕ್ಕೆ ಹೋಗಿ ಅದು ಇವರ ಪ್ರದೇಶಾಭಿವೃದ್ಧಿಗೆ ಬಂದದ್ದನ್ನು ಇವರು ಹಂಚಲು ತಯಾರಾಗಿದ್ದಾರೆ. ಇದರಲ್ಲಿ ಇವರು ಬೆನ್ನುತಟ್ಟಿಕೊಳ್ಳಲು ಏನೂ ಇಲ್ಲ. ಆದರೂ ಅದನ್ನೇ ಹೇಳುತ್ತಾ ಮೈಲೇಜ್ ತೆಗೆದುಕೊಳ್ಳುತ್ತಿದ್ದಾರೆ. ಇನ್ನು ಎರಡನೇಯದಾಗಿ ಇವರು ಈ ನೂರು ಕೋಟಿಯನ್ನು ಕೊಡುತ್ತೇವೆ, ಅದರಿಂದ ವ್ಯಾಕ್ಸಿನ್ ಖರೀದಿಸಿ ನಮಗೆ ನೀಡಿ, ನಾವು ಅದನ್ನು ಜನರಿಗೆ ಹಂಚುತ್ತೇವೆ ಎನ್ನುತ್ತಿದ್ದಾರೆ. ಇಲ್ಲಿ ಇವರ ಗೇಮ್ ಪ್ಲ್ಯಾನ್ ಏನೆಂದರೆ ಜನರ ತೆರಿಗೆಯ ಹಣದಿಂದ ವ್ಯಾಕ್ಸಿನ್ ಖರೀದಿಸಿ ಇವರಿಗೆ ಕೊಟ್ಟರೆ ಇವರು ಫ್ಲೆಕ್ಸ್, ಹೋರ್ಡಿಂಗ್ಸ್ ಹಾಕಿ, ಮಾಧ್ಯಮದವರನ್ನು ಕರೆಯಿಸಿ ಅವರ ಎದುರಿಗೆ ವ್ಯಾಕ್ಸಿನ್ ಜನರಿಗೆ ಕೊಟ್ಟು ತಾವೇ ವ್ಯಾಕ್ಸಿನ್ ಗೆ ಹಣ ಕೊಟ್ಟಿದ್ದು ಎಂದು ತೋರಿಸುವ ರೂಪುರೇಶೆ ಹಾಕಿಕೊಂಡಿದ್ದಾರೆ. ಇಲ್ಲಿ ಇವರಿಗೆ ಸರಿಯಾಗಿ ಗೊತ್ತಿರುವ ವಿಷಯವೇನೆಂದರೆ ಇವತ್ತಿನ ದಿನಗಳಲ್ಲಿ ಯಾರು ವ್ಯಾಕ್ಸಿನ್ ಕೊಡುತ್ತಾರೋ ಅವರಿಗೆ ಜನರು ಮನಸೋತು ಜೈ ಎನ್ನುತ್ತಾರೆ, ಜನರ ದೃಷ್ಟಿಯಲ್ಲಿ ನಾವು ಹೀರೋ ಆಗುತ್ತೇವೆ ಎಂದು ಕಾಂಗ್ರೆಸ್ಸಿಗರು ಅಂದುಕೊಂಡಿದ್ದಾರೆ. ನಮ್ಮ ದೇಶದಲ್ಲಿ ಸದ್ಯ ವ್ಯಾಕ್ಸಿನ್ ಕೊರತೆ ಇರುವುದು ನಿಜ. ಹಂತಹಂತವಾಗಿ ವ್ಯಾಕ್ಸಿನ್ ಎಲ್ಲರಿಗೂ ಎರಡೆರಡು ಡೋಸ್ ಕೊಡಲೇಬೇಕು ಎಂದು ಕೇಂದ್ರ ನಿರ್ಧರಿಸಿ ಆಗಿದೆ. 130 ಕೋಟಿ ಜನರಿಗೆ ಎರಡೆರಡು ಡೋಸ್ ನೀಡುವುದು ಎಂದರೆ 260 ಕೋಟಿ ಜನರಿಗೆ ಕೊಟ್ಟ ಹಾಗೆ. ಈಗ ಪ್ರತಿ ರಾಜ್ಯದ ಪ್ರತಿ ಜಿಲ್ಲೆಗೆ ಬರುತ್ತಿರುವ ವ್ಯಾಕ್ಸಿನ್ ಸೀಮಿತವಾಗಿದ್ದು ಎಲ್ಲರಿಗೂ ಸಿಗುವಾಗ ಇನ್ನಷ್ಟು ದಿನವಾಗುತ್ತದೆ. ಇಲ್ಲಿಯ ತನಕ ಕಾಂಗ್ರೆಸ್ಸಿಗರ ಅಪಪ್ರಚಾರ ಮತ್ತು ಮೋದಿ ವ್ಯಾಕ್ಸಿನ್, ನಾವು ತೆಗೆದುಕೊಳ್ಳುವುದಿಲ್ಲ ಎಂದು ಹೇಳುತ್ತಿದ್ದ ಕಾಂಗ್ರೆಸ್ ಮುಖ್ಯಮಂತ್ರಿಗಳು ಮತ್ತು ಉನ್ನತ ಕಾಂಗ್ರೆಸ್ ನಾಯಕರು ವ್ಯಾಕ್ಸಿನ್ ತೆಗೆದುಕೊಂಡು ಆಗಿದೆ. ಈಗ ಜನರಿಗೆ ಅರಿವಾಗಿದೆ. ಈ ಕಾಂಗ್ರೆಸ್ಸಿಗರು ತಾವು ವ್ಯಾಕ್ಸಿನ್ ತೆಗೆದುಕೊಂಡು ಸೇಫ್ ಆಗಿದ್ದಾರೆ. ನಮಗೆ ತೆಗೆದುಕೊಳ್ಳಬೇಡಿ ಎಂದು ದಾರಿ ತಪ್ಪಿಸಿದ್ದಾರೆ. ಆದ್ದರಿಂದ ನಾವು ಇನ್ನು ಕೂಡ ವ್ಯಾಕ್ಸಿನ್ ತೆಗೆದುಕೊಳ್ಳದಿದ್ದರೆ ಉಳಿಗಾಲವಿಲ್ಲ ಎಂದು ಅಂದುಕೊಂಡ ಜನ ಏಕಾಏಕಿ ಧಾವಿಸಿದ ಕಾರಣದಿಂದ ಈ ಸಮಸ್ಯೆ ಉಂಟಾಗಿದೆ. ಈಗ ಜನರ ಭಾವನೆಯನ್ನು ಏನ್ ಕ್ಯಾಶ್ ಮಾಡಿಕೊಳ್ಳಲು ಹೊಂಚು ಹಾಕಿಕೊಂಡಿರುವ ಕಾಂಗ್ರೆಸ್ ನಮಗೆ ವ್ಯಾಕ್ಸಿನ್ ಕೊಡಿ, ನೂರು ಕೋಟಿ ಕೊಡುತ್ತೇವಲ್ಲ ಎನ್ನುತ್ತಿದೆ. ಸರಕಾರ ಈಗ ಲಸಿಕೆಯನ್ನು ಇಷ್ಟಿಷ್ಟು ಎಂದು ಆಯಾ ಜಿಲ್ಲೆಗಳಿಗೆ ವಿತರಿಸುತ್ತಿದೆ.
ಅಲ್ಲಿಂದ ಅದು ತಾಲೂಕು, ಗ್ರಾಮಕ್ಕೆ ಹೋಗಿ ಜನರ ದೇಹ ಪ್ರವೇಶಿಸುತ್ತದೆ. ಅದು ಬಿಟ್ಟು ಕಾಂಗ್ರೆಸ್ಸಿಗರಿಗೆ ಕೊಟ್ಟು ನೀವು ಮೈಲೇಜ್ ತೆಗೆದುಕೊಳ್ಳಿ ಎನ್ನಲು ಅಲ್ಲಿ ಬೇಕಾದಷ್ಟು ಲಸಿಕೆ ಉತ್ಪಾದನೆಯೂ ಆಗುತ್ತಿಲ್ಲ, ಮತ್ತೊಂದೆಡೆ ಈಗ ಸರಕಾರಿ ಆಸ್ಪತ್ರೆಗಳಿಗೆ ಕೇಳಿದಷ್ಟು ಕೊಡಲು ಸಾಧ್ಯವಾಗುತ್ತಿಲ್ಲ. ಹಾಗಿರುವಾಗ ಇವರಿಗೆಲ್ಲಿಂದ ಕೊಡುವುದು. ಇನ್ನು ಆರಂಭದಲ್ಲಿ ವಿವಿಧ ಸಮಾಜ ಸೇವಾಸಂಘಟನೆಗೆ ಕೊಡುತ್ತಿದ್ದ ಹಾಗೆ ಈಗ ಕೊಡಲು ಸಾಧ್ಯವಿಲ್ಲದೆ ಸರಕಾರ ಅದನ್ನು ಕೂಡ ನಿಲ್ಲಿಸಿದೆ. ಖಾಸಗಿ ಆಸ್ಪತ್ರೆಗಳಿಗೂ ಕೊಡಲು ಸಾಧ್ಯವಾಗುತ್ತಿಲ್ಲ. ಇದೆಲ್ಲ ತಿಳಿದಿರುವುದರಿಂದ ನಮಗೆ ಕೊಡಿ, ನಾವು ಹಂಚುತ್ತೇವೆ ಎನ್ನುವ ಹೊಸ ನಾಟಕವನ್ನು ಕಾಂಗ್ರೆಸ್ ನಾಯಕರು ಬರೆದಿದ್ದಾರೆ. ಅದಕ್ಕೆ ತಕ್ಕಂತೆ ವೇಷ ಹಾಕಿ ಕುಣಿಯುತ್ತಿದ್ದಾರೆ. ನಂಬುವವರು ನಂಬಲಿ ಎನ್ನುವ “ದೂರ”ದೃಷ್ಟಿಯ ಪ್ರಯತ್ನ. ಈಗ ನಾನು ಹೇಳುವುದೇನೆಂದರೆ ಕಾಂಗ್ರೆಸ್ಸಿಗರು ಸರಕಾರದ ಹಣವನ್ನೇ ಸರಕಾರಕ್ಕೆ ಕೊಟ್ಟು ಅವರಿಂದಲೇ ವ್ಯಾಕ್ಸಿನ್ ತೆಗೆದುಕೊಂಡು ತಾವು ವ್ಯಾಕ್ಸಿನ್ ಜನರಿಗೆ ಕೊಡುವ ಅಗತ್ಯ ಇಲ್ಲ. ಅದರ ಬದಲು ಕರ್ನಾಟಕದ ತಮ್ಮದೇ ಶಾಸಕರು, ಓರ್ವ ಸಂಸದ ಏನೂ ಕಡಿಮ ತೂಗುವವರಲ್ಲ. ಡಿಕೆಶಿವಕುಮಾರ್ ಒಬ್ಬರೇ ಸಾಕು. ಅವರು ಮತ್ತು ಅವರ ಒರಗೆಯ ಒಂದಿಷ್ಟು ಕಾಂಗ್ರೆಸ್ಸಿಗರೇ ಸಾಕು. ಇನ್ನು ಪ್ರದೇಶಾಭಿವೃದ್ಧಿಯ ಹಣ ಕೊಡುವ ಬದಲು ನಿಮ್ಮ ಒಂದು ವರ್ಷದ ಸಂಬಳ, ಇನ್ನು ನಿಮ್ಮ ಅನೇಕ ಜನ ಶಾಸಕರು, ಸಂಸದರು ಈಗ ಮಾಜಿಗಳಾಗಿದ್ದಾರೆ. ಅವರಿಗೂ ಕನಿಷ್ಟ ಐವತ್ತು ಸಾವಿರದಷ್ಟು ಪಿಂಚಣಿ ಪ್ರತಿ ತಿಂಗಳು ಬಿಟ್ಟಿ ಬರುತ್ತದೆ. ಅದನ್ನು ಕೂಡ ಒಂದು ವರ್ಷ ನೀಡಲಿ. ಅದನ್ನು ಎಲ್ಲೆಲ್ಲಿ ಆಕ್ಸಿಮೀಟರ್, ಬೆಡ್, ಆಕ್ಸಿಜನ್ ಮತ್ತು ತೀರಾ ಬಡವರು ಊಟಕ್ಕೆ ಪರಿತಪಿಸುವಂತೆ ಇದ್ದರೆ ಅವರಿಗೆ ಕೊಡಲಿ. ಯಾಕೆಂದರೆ ಗರೀಬಿ ಹಟಾವೋ ಎಂದು ಆವತ್ತು ಇಂದಿರಾಗಾಂಧಿ ಹೇಳಿದ್ದು ತಮ್ಮದೇ ಪಕ್ಷದ ಸಂಸದರಿಗೆ, ಶಾಸಕರಿಗೆ, ಮಂತ್ರಿಗಳಿಗೆ ಎಂದು ಇವತ್ತು ಸಾಬೀತಾಗಿದೆ. ದೇಶದ ಬಡತನ ಹೋಗದೇ ಇದ್ದರೂ ಇವರ ಪಕ್ಷದ ಜನಪ್ರತಿನಿಧಿಗಳು ಮಾತ್ರ ಇಂದಿರಾಗಾಂಧಿಯವರ ನಿರೀಕ್ಷೆಗಿಂತ ಬೇಗ ಅಗರ್ಭ ಶ್ರೀಮಂತರಾಗಿದ್ದರು!
Leave A Reply