ಪೊಲೀಸರು ಹೊಡೆದ್ರು ಎಂದ ಪಿಐಎಲ್, ಛೀಮಾರಿ ಹಾಕಿದ ಕೋರ್ಟ್!

ಎರಡು ಸಲ ಹೇಳಿ ನೋಡಿ ಟೀಚರ್, ಕೇಳಿಲ್ಲದಿದ್ರೆ ನಾಲ್ಕು ಬಾರಿಸಿ, ಬುದ್ಧಿ ಬರುತ್ತೆ ಎಂದು ನಾವು ಚಿಕ್ಕವರಿದ್ದಾಗ ಶಾಲೆಯಲ್ಲಿ ಅಮ್ಮಂದಿರು ಗುರುಗಳಿಗೆ ಹೇಳುತ್ತಿದ್ದ ಮಾತು. ಆಗ ಶಾಲೆಗಳಲ್ಲಿ ಟೀಚರ್ ಹೇಳಿದ ಮಾತು ಕೇಳದಿದ್ರೆ ಬೆತ್ತ ಗ್ಯಾರಂಟಿ ಇತ್ತು. ಪೆಟ್ಟು ತಿನ್ನದೆ ಶಾಲೆಯಿಂದ ಮನೆಗೆ ಬಂದ ದಿನವೇ ದೊಡ್ಡ ಸಾಧನೆ. ಆದರೆ ಕಾಲಕ್ರಮೇಣ ಶಾಲೆಗಳಲ್ಲಿ ಹೊಡೆಯುವುದಿಕ್ಕೆ ಅಂಕುಶ ಬಿತ್ತು, ಅಮ್ಮಂದಿರಿಂದ ಅಲ್ಲ, ಸರಕಾರಗಳಿಂದ. ಈಗಿನ ಮಕ್ಕಳಿಗೆ ಇದರಿಂದ ಎಷ್ಟು ಲಾಭವಾಯಿತೋ, ಪೆಟ್ಟಿನ ರುಚಿಯಂತೂ ತಪ್ಪಿ ಹೋಗಿದೆ. ಹಾಗಂತ ಟೀಚರುಗಳಿಗೆ ಮಕ್ಕಳಿಗೆ ಹೊಡೆದರೆ ಖುಷಿಯಾಗುತ್ತಿತ್ತಾ? ಇಲ್ಲ. ಅವರು ತಮ್ಮ ಷೋಕಿಗಾಗಿ ಹೊಡೆಯುತ್ತಿರಲಿಲ್ಲ. ಮಕ್ಕಳಿಗೆ ಹೊಡೆಯುವಾಗ ಟೀಚರ್ ಗಳ ಒಳಮನಸ್ಸು ಎಷ್ಟು ಬೇಸರಪಟ್ಟುಕೊಳ್ಳುತ್ತಿತ್ತೋ. ಹಾಗೆ ಚಿಕ್ಕವರಿದ್ದಾಗ ಹೊಡೆಸಿಕೊಂಡವರು ತುಂಬಾ ಶಿಸ್ತುಬದ್ಧವಾಗಿ ನಂತರ ಬೆಳೆದರೋ, ಇಲ್ವೋ, ತಪ್ಪು ಮಾಡಿದರೆ ಶಿಕ್ಷೆ ಇದ್ದೇ ಇರುತ್ತೆ ಎಂದು ಮನಸ್ಸಿನೊಳಗೆ ಅಚ್ಚೊತ್ತಿಬಿಟ್ಟಿತ್ತು. ಆದರೆ ತಲೆಮಾರು ಬದಲಾಯಿತು. ತಪ್ಪು ಮಾಡಿದರೂ ಹೊಡೆಯಬಾರದು ಎಂದು ಸರಕಾರವೇ ನಿಯಮ ತಂದಿದೆ, ಡೋಂಟ್ ಕೇರ್ ಎನ್ನುವ ಪಾಲಿಸಿ ಮಕ್ಕಳಲ್ಲಿ ಬೆಳೆಯಿತು. ಅಂತವರು ದೊಡ್ಡವರಾದ ಮೇಲೆ ಸರಕಾರದ ನಿಯಮಗಳನ್ನು ಕೂಡ ಗಾಳಿಗೆ ತೂರಿದರು. ಅಂತವರ ಗ್ರಹಚಾರಕ್ಕೆ ಲಾಕ್ ಡೌನ್ ನಲ್ಲಿದ್ದಾಗ ಪೊಲೀಸರ ಕೈಯಿಂದ ಒಂದಿಷ್ಟು ಬುದ್ಧಿವಾದ ಸಿಕ್ಕಿದೆ. ಅವರಲ್ಲಿ ಕೆಲವು ಅತೀ ಬುದ್ಧಿವಂತರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಹಾಕಿದ್ದಾರೆ.
ಅಂತಹ ಒಂದು ಪಿಐಎಲ್ ಅನ್ನು ನೋಡಿದ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಹಾಗೂ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ವಿಭಾಗೀಯ ಪೀಠ ಅದನ್ನು ಹಾಕಿದ ವಕೀಲರಿಗೆ ಛೀಮಾರಿ ಹಾಕಿ ಒಂದು ಸಾವಿರ ರೂಪಾಯಿ ದಂಡ ವಿಧಿಸಿದೆ. ಹೈಕೋರ್ಟ್ ಮಟ್ಟಿಗೆ ಒಂದು ಸಾವಿರ ರೂಪಾಯಿ ದಂಡದ ಮೊತ್ತ ಚಿಕ್ಕದಿರಬಹುದು. ಆದರೆ ಒಬ್ಬ ವಕೀಲರಿಗೆ ಇದಕ್ಕಿಂತ ಅವಮಾನಕರ ವಿಷಯ ಬೇರೆ ಇರುವುದಿಲ್ಲ. ಅಷ್ಟಕ್ಕೂ ಪೊಲೀಸರಿಗೆ ಹೊಡೆಯುವ ಹಕ್ಕಿಲ್ಲ, ಅವರಿಗೆ ವಿಚಾರಣೆ ಮಾಡಿ ಶಿಕ್ಷಿಸಿ ಎನ್ನುವುದು ಪಿಐಎಲ್ ಹಾಕಿದವರ ವಾದವಾಗಿತ್ತು. ಇದರಿಂದ ಯಾಕೆ ನ್ಯಾಯಮೂರ್ತಿಗಳು ವ್ಯಗ್ರಗೊಂಡರೆಂದರೆ ಪೊಲೀಸರು ಯಾರಿಗೂ ಬೇಕಂತಲೇ ಹೊಡೆಯುವುದಿಲ್ಲ. ಎಷ್ಟೋ ಜನರು ಅನಗತ್ಯವಾಗಿ ಸರಕಾರದ ನಿಯಮಗಳನ್ನು ಉಲ್ಲಂಘಿಸಿ ರಸ್ತೆಗೆ ಬಂದಿರುತ್ತಾರೆ. ಬಹುತೇಕ ಕಡೆ ಅವರಿಗೆ ನಿಲ್ಲಿಸಿ “ತಾವು ತಪ್ಪು ಮಾಡಿದ್ದೀರಿ” ಎಂದು ತಿಳಿಹೇಳಿ ಬುದ್ಧಿವಾದ ಹೇಳಿದ್ದು ಇದೆ. ಅನೇಕ ಕಡೆ ಹೂ ನೀಡಿ ಗಾಂಧಿಗಿರಿ ಮೆರೆದ ಪೊಲೀಸರಿದ್ದಾರೆ. ಹಲವು ಕಡೆ ಮಾಸ್ಕ್ ಕೊಟ್ಟು ಇದನ್ನು ಧರಿಸಿ ಸುಮ್ಮನೆ ತಿರುಗಾಡಬೇಡಿ ಎಂದ ಪೊಲೀಸರು ಇದ್ದಾರೆ. ಆದರೆ ಯಾವುದಕ್ಕೂ ಜನ ಬಗ್ಗುವುದಿಲ್ಲ ಎಂದು ತುಂಬಾ ಕಡೆ ಗೊತ್ತಾಗಿದೆ ಮತ್ತು ಸಾಫ್ಟಾಗಿ ಹೇಳಿದರೆ ಅದು ಪೊಲೀಸರ ವಿಕ್ನೆಸ್ ಎಂದು ಅಂದುಕೊಂಡ ಹಲವರು ಮತ್ತೆ ಮತ್ತೆ ನಿಯಮ ಉಲ್ಲಂಘಿಸಿದಾಗ ಒಂದೆರಡು ಹೆಚ್ಚೆಂದರೆ ಬೆರಳೆಣಿಕೆಯ ಕಡೆ ಪೊಲೀಸರು ಲಾಠಿ ಬೀಸಿರಬಹುದು.
ಅಷ್ಟಕ್ಕೂ ಪೊಲೀಸರು ಯಾರದ್ದೋ ಮನೆಗೆ ನುಗ್ಗಿ ಹೊಡೆದಿಲ್ಲ. ಇನ್ನು ನಮಗೆ ಮನೆಯ ಒಳಗೆ ಇರಿ ಎಂದು ಸರಕಾರ ಹೇಳಿರುವುದು ಪೊಲೀಸರ ಯೋಗಕ್ಷೇಮ ಚೆನ್ನಾಗಿರಲಿ ಎನ್ನುವುದಕ್ಕೆ ಅಲ್ಲ. ಪೊಲೀಸರು ಇಂತಹ ಲಾಕ್ಡೌನ್ ಅವಧಿಯಲ್ಲಿ ಸಮಯಕ್ಕೆ ಸರಿಯಾಗಿ ಊಟ, ತಿಂಡಿ, ಕಾಫಿ ಸಿಗದೆ ಡ್ಯೂಟಿ ಮಾಡುತ್ತಾರೆ. ಅವರಿಗೆ ಕುಡಿಯಲು ನೀರು ಕೂಡ ಸಿಗುವುದಿಲ್ಲ. ಅಷ್ಟಿದ್ದೂ ಸೇವೆ ಸಲ್ಲಿಸುತ್ತಿದ್ದ ಅನೇಕ ಪೊಲೀಸ್ ಸಿಬ್ಬಂದಿಗಳು ಕೊರೊನಾದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಅನೇಕರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆದರೂ ತಮಗೆ ಕೊಟ್ಟ ಡ್ಯೂಟಿಯನ್ನು ನಿರ್ಲಕ್ಷ್ಯ ಮಾಡದೇ ಕೆಲಸ ಮಾಡುತ್ತಿದ್ದಾರೆ. ಈ ಜನರಿಗೆ ಎಷ್ಟು ಅಂತ ಬುದ್ಧಿ ಹೇಳುವುದು. ನಮಗೆ ಮನೆಯೊಳಗೆ ಮಲಗಿ ಎಂದಿರುವ ಸರಕಾರ ನಮ್ಮ ರಕ್ಷಣೆಗೆ ಬೀದಿಯಲ್ಲಿ ಮಳೆ, ಗಾಳಿ, ಬಿಸಿಲಿಗೆ ಇರಿ ಎಂದು ಪೊಲೀಸರನ್ನು ಬಿಟ್ಟಿದೆ. ದೂರದಿಂದ ನೋಡುವಾಗ ಯೂನಿಫಾರಂ ಧರಿಸಿ ನೀಟಾಗಿ ಕಾಣುವ ಪೊಲೀಸರ ಶ್ರಮದ ಹಿಂದೆ ಅಪಾರವಾದ ವೇದನೆ ಇದೆ. ಅದನ್ನು ನಾವು ನೋಡುವುದಿಲ್ಲ. ಇನ್ನು ಕರ್ನಾಟಕದ ಪೊಲೀಸರು ಶಿಸ್ತುಬದ್ಧ ಅಧಿಕಾರಿಗಳು. ಅವರು ಒಂದೆರಡು ಕಡೆ ಚೌಕಟ್ಟನ್ನು ಅನಿವಾರ್ಯವಾಗಿ ಮೀರಿದ್ದಾರೆ ಎಂದ ಕೂಡಲೇ ಎಲ್ಲ ಪೊಲೀಸರು ಹಾಗೆ ಎನ್ನುವಂತಿಲ್ಲ. ಇನ್ನು ವೈಯಕ್ತಿಕ ಹಲ್ಲೆ ಮಾಡಿದ್ದಾರೆ ಎಂದರೆ ಪ್ರತ್ಯೇಕ ದೂರು ದಾಖಲಿಸಬಹುದು ಎಂದು ಕೋರ್ಟ್ ಹೇಳಿದೆ. ಇಲ್ಲಿ ಪೊಲೀಸರು ಅಪ್ಪಿತಪ್ಪಿ ಯಾರ ಮೇಲಾದರೂ ಲಾಠಿ ಬೀಸಿದ್ದರೆ ಅವರ ಮುಖ ಕೂಡ ಒಂದು ವಾರದ ನಂತರ ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ ಪೊಲೀಸರು ತಮ್ಮ ಕರ್ತವ್ಯ ಪಾಲನೆಯಲ್ಲಿ ಹೀಗೆ ಮಾಡಲೇಬೇಕು. ಪೊಲೀಸರ ಹೆದರಿಕೆ ಇಲ್ಲದೆ ಜನ ಬೇಕಾಬಿಟ್ಟಿ ಸುತ್ತುತ್ತಾ ಇದ್ದರೆ ನಾಳೆ ಇದೇ ಪೊಲೀಸರಿಗೆ ಜನರೇ ಬೈಯುತ್ತಾರೆ. ಪೊಲೀಸರ ಹೆದರಿಕೆ ಇಲ್ಲ ಎನ್ನುತ್ತಾರೆ. ಮಂಗಳೂರಿನಲ್ಲಿ ನಿನ್ನೆ ಪ್ರಸಿದ್ಧ ವೈದ್ಯರೊಬ್ಬರು ಸೂಪರ್ ಮಾರ್ಕೆಟ್ಟಿನಲ್ಲಿ ಮಾಸ್ಕ್ ಧರಿಸದೇ ಬಂದು ಸಿಬ್ಬಂದಿಯವರು ಮಾಸ್ಕ್ ಧರಿಸಿ ಎಂದದ್ದಕ್ಕೆ ಉಢಾಪೆಯಿಂದ ವರ್ತಿಸಿದ್ದಾರೆ. ಅಷ್ಟಕ್ಕೂ ಅಂಗಡಿಯವರು ಕೇಳಿದ್ದೇನು? ಸರ್, ದಯವಿಟ್ಟು ಮಾಸ್ಕ್ ಧರಿಸಿ. ಕೊರೊನಾದಿಂದ ನಮ್ಮ ಅಂಗಡಿಯ ಸಿಬ್ಬಂದಿಯೊಬ್ಬರು ಪ್ರಾಣ ಕಳೆದುಕೊಳ್ಳಬೇಕಾಗಿದೆ. ಇದು ನಮಗೂ ನಿಮಗೂ ಮತ್ತು ಗ್ರಾಹಕರಿಗೆ ಎಲ್ಲರಿಗೂ ರಿಸ್ಕ್ ಎಂದಿದ್ದಾರೆ. ಆದರೆ ಆ ವೈದ್ಯರು ಕೇಳಲೇ ಇಲ್ಲ. ಸರಕಾರದ ವಿರುದ್ಧ ದ್ವೇಷವನ್ನು ಕಕ್ಕಿದ್ದಾರೆ. ಇಂತವರಿಗೆ ಏನು ಹೇಳುವುದು? ಅದೇ ವೈದ್ಯರನ್ನು ಪೊಲೀಸರು ಠಾಣೆಗೆ ಕರೆಸಿಕೊಂಡಾಗ ಮಾಸ್ಕ್ ಧರಿಸಿ ಹೋಗಿದ್ದಾರೆ. ಅಂದರೆ ಪೊಲೀಸರ ಭಯ ಉಂಟು, ಸೂಪರ್ ಮಾರ್ಕೆಟಿನವರ ಭಯ ಇಲ್ಲ. ಇದು ನಮ್ಮ ಕಲಿತವರ ಅತೀ ಬುದ್ಧಿವಂತಿಕೆ!!
Leave A Reply