ರಾಮದೇವ್ ಮಾಡಿದ್ರೆ ಅಪಾಯ ಇವರು ಮಾಡಿದ್ರೆ ಉಪಾಯ!
ಬಾಬಾ ರಾಮದೇವ್ ಮೂಲತ: ಹರ್ಯಾಣದವರು. ನಿಮಗೆ ಗೊತ್ತಿರಬಹುದು. ಅಲ್ಲಿನವರ ಭಾಷೆಯಲ್ಲಿಯೇ ಬೈಗುಳಗಳು ಸೇರಿಹೋಗಿರುತ್ತವೆ. ಹರ್ಯಾಣದವರು ಯಾರನ್ನಾದರೂ ಹೊಗಳಿದರೂ ಪ್ರತಿ ವಾಕ್ಯದಲ್ಲಿಯೂ ಒಂದೆರಡು ಬೈಗುಳ ಇದ್ದೇ ಇರುತ್ತದೆ. ಅವರು ನಗುತ್ತಾ ಬೈದರೆ ಅದು ಹೊಗಳಿಕೆ ಎಂತಲೋ, ಕೋಪದಿಂದ ಬೈದರೆ ಅದು ತೆಗಳಿಕೆ ಎಂತಲೋ ಅಂದುಕೊಳ್ಳಬೇಕಾಗುತ್ತದೆ. ಅವರು ಫೋನಿನಲ್ಲಿ ಮಾತನಾಡುವಾಗ ಮುಖದ ಭಾವನೆ ಗೊತ್ತಾಗದೇ ಹೋಗುವುದರಿಂದ ಅನೇಕ ಬಾರಿ ಅವರು ಬೈದರಾ ಅಥವಾ ಹೊಗಳಿದರಾ ಎಂದು ಹೊರಗಿನವರಿಗೆ ಗೊತ್ತಾಗಲ್ಲ. ಅಂತಹ ರಾಜ್ಯದ ರಾಮದೇವ್ ಈ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಬಗ್ಗೆ ಮಾತನಾಡಿದ್ದೇ ಒಂದು ವಿವಾದಕ್ಕೆ ಕಾರಣವಾಯಿತು. ಈ ಕೊರೊನಾದ ಸಾವುಗಳಿಗೆ ಅಲೋಪತಿ ಔಷಧವೇ ಕಾರಣ ವಿನ: ವೈರಸ್ ಅಲ್ಲ ಎನ್ನುವ ಅರ್ಥದ ಮಾತುಗಳನ್ನು ರಾಮದೇವ್ ಆಡಿದ್ದಾರೆ ಎಂದು ಸುದ್ದಿಯಾಯಿತು. ಅದು ದೊಡ್ಡ ವಿವಾದವೇ ಆಗಿಹೋಯಿತು. ರಾಮದೇವ್ ಕ್ಷಮೆಯಾಚಿಸದಿದ್ದರೆ ಒಂದು ಸಾವಿರ ಕೋಟಿ ರೂಪಾಯಿ ಮಾನನಷ್ಟ ಹಾಕುವ ಬೆದರಿಕೆಯನ್ನು ಕೂಡ ಒಡ್ಡಲಾಯಿತು. ಕೊನೆಗೆ ಬಾಬಾ ತಮ್ಮ ತಪ್ಪನ್ನು ಒಪ್ಪಿಕೊಂಡರು. ಆದರೆ ಸೋಲನ್ನು ಒಪ್ಪಿಕೊಳ್ಳಲು ಅವರು ತಯಾರಿರಲಿಲ್ಲ. ಅದಕ್ಕಾಗಿ ಐಎಂಎ ವಿರುದ್ಧ 25 ಪ್ರಶ್ನೆಗಳನ್ನು ಎಸೆದು ಇದಕ್ಕೆ ಅಲೋಪತಿಯಲ್ಲಿ ಚಿಕಿತ್ಸೆ ಇದೆಯೆ ಎಂದು ಪ್ರಶ್ನಿಸಿದ್ದಾರೆ. ಈಗ ತಲೆಕೆಡಿಸಿಕೊಳ್ಳುವ ಸಂಗತಿ ಐಎಂಎಯವರದ್ದು. ನಿಮಗೆ ಗೊತ್ತಿರುವಂತೆ ಐಎಂಎ ಸರಕಾರದ ಅಂಗಸಂಸ್ಥೆ ಅಲ್ಲ. ಇದು ಬ್ರಿಟಿಷ್ ಕ್ರಿಶ್ಚಿಯನ್ ಮಿಷಿನರಿಗಳು ಭಾರತದ ವೈದ್ಯರ ಮೇಲೆ ಹತೋಟಿ ಇಡಲು ಮಾಡಿರುವ ವ್ಯವಸ್ಥೆ. ಅದು ಯಾವುದೇ ಆಸ್ಪತ್ರೆಯನ್ನು ನಡೆಸುವುದಿಲ್ಲ. ಯಾವುದೇ ಮೆಡಿಕಲ್ ಕಾಲೇಜುಗಳನ್ನು ನಡೆಸುವುದಿಲ್ಲ. ಅದರಲ್ಲಿ ಭಾರತಾದ್ಯಂತ ಕನಿಷ್ಟ ಎರಡು ಲಕ್ಷ ವೈದ್ಯರು ನೊಂದಣಿಯಾಗಿದ್ದಾರೆ. ಈ ಸಂಘಟನೆ ವೈದ್ಯರ ಮೇಲೆ ಹಲ್ಲೆಯಾದಾಗ ಅವರನ್ನು ಡಿಫೆಂಡ್ ಮಾಡುತ್ತದೆ ವಿನ: ಬೇರೆ ಏನೂ ಮಾಡುವುದಿಲ್ಲ. ಆದರೆ ಆಶ್ಚರ್ಯ ಎಂದರೆ ಐಎಂಎ ಕೇವಲ ಸಂಘಟನೆಯಾದರೂ ಕೇಂದ್ರ ಸರಕಾರದ ಆರೋಗ್ಯ ಇಲಾಖೆಯನ್ನೇ ಅಲುಗಾಡಿಸುವಷ್ಟು ಬಲಯುತವಾಗಿದೆ. ಪ್ರತಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಐಎಂಎ ಘಟಕಗಳಿವೆ. ಅವು ತಮ್ಮ ಮೇಲೆ ರಾಜ್ಯ, ಕೇಂದ್ರ ಸರಕಾರದ ಯಾವುದಾದರೂ ಕಾನೂನಿನಿಂದ ತೊಂದರೆ ಆದಾಗ ಪ್ರತಿಭಟಿಸುತ್ತವೆ. ಐಎಂಎ ಎಷ್ಟರಮಟ್ಟಿಗೆ ವ್ಯವಹಾರಿಕ ದೃಷ್ಟಿಕೋನ ಹೊಂದಿದೆ ಎಂದರೆ ಇವರಿಗೆ ನಮ್ಮ ದೇಶದ ಜನರು ಆರೋಗ್ಯಕರವಾಗಿರಬೇಕು ಎನ್ನುವುದಕ್ಕಿಂತ ತಮ್ಮ ಔಷಧ ಕಂಪೆನಿಗಳು ಮಾಡುವ ಕೋಟ್ಯಾಂತರ ರೂಪಾಯಿ ಲಾಭದ ಮೇಲೆ ಕಣ್ಣು. ಯಾಕೆಂದರೆ ಅಲೋಪತಿ ಔಷಧ ಕಂಪೆನಿಗಳು ಚೆನ್ನಾಗಿದಷ್ಟು ಐಎಂಎ ಚೆನ್ನಾಗಿರುತ್ತದೆ. ಕಳೆದ ವರ್ಷ ಬಾಬಾ ರಾಮದೇವ್ ” ಡೆಂಗ್ಯೂ ಜ್ವರಕ್ಕೆ ಪಪ್ಪಾಯಿ ಎಲೆಯ ಜ್ಯೂಸ್ ಮಾಡಿಕೊಂಡು ಕುಡಿಯಿರಿ ಅಥವಾ ಪತಂಜಲಿಯಲ್ಲಿ ನಿರ್ಮಾಣದ ಪ್ರಾಡೆಕ್ಟ್ ಖರೀದಿಸಿ” ಎಂದಿದ್ದರು. ಆದರೆ ಆವತ್ತು ಈ ಬಗ್ಗೆ ಅಲೋಪತಿ ವೈದ್ಯರೇ ತೀವ್ರ ಆಕ್ಷೇಪ ಎತ್ತಿದ್ದರು. ಇದರಿಂದ ಪ್ರಾಣಕ್ಕೆ ಅಪಾಯ ಇದೆ ಎಂದಿದ್ದರು. ಆದರೆ ಈಗ ಈಗ ಸ್ವತ: ಅಲೋಪತಿ ಅವರೇ ಪಪ್ಪಾಯ ಎಲೆಗಳಿಂದ ಮಾಡಿದ 15 ಕ್ಯಾಪ್ಸುಲ್ಗ್ ಗಳನ್ನು 520 ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ರಾಮದೇವ್ ಅವರ ಪಪ್ಪಾಯಿ ಎಲೆಗಳ ಔಷಧ ಕೆಲವೇ ರೂಪಾಯಿಗಳಿಗೆ ಸಿಗುತ್ತಿತ್ತು. ಆದರೆ ಅಲೋಪತಿಗಳ ರೇಟ್ ಪಾಪದವರಿಗೆ ಗೋವಿಂದ. ಆಯುರ್ವೇದದವರು ಮಾಡಿದ್ರೆ ಅಪಾಯ, ಇವರು ಮಾಡಿದ್ರೆ ಉಪಾಯ. ಇದು ಐಎಂಎ ತಂತ್ರ.
ಕೊರೊನಾದ ಈ ಅವಧಿಯಲ್ಲಿ ಅಲೋಪತಿಗಿಂತ ಆಯುರ್ವೇದದ ಮೇಲೆ ಹೆಚ್ಚು ವಿಶ್ವಾಸ ಇಟ್ಟರೆ ರೋಗ ಆದಷ್ಟು ಬೇಗ ನಿಯಂತ್ರಣಕ್ಕೆ ಬರುವುದಿಲ್ಲವೇ ಎನ್ನುವಂತಹ ಅಭಿಪ್ರಾಯ ನಿಮ್ಮಲ್ಲಿಯೂ ಮೂಡಬಹುದು. ಈಗ ಇಲ್ಲಿರುವ ಪ್ರಶ್ನೆ ಏನೆಂದರೆ ಇದು ಸಾಧ್ಯ ಎಂದು ಗೊತ್ತಿದ್ದರೂ ಈ ಬಗ್ಗೆ ಒಂದೇ ಧ್ವನಿಯಲ್ಲಿ ಕೇಂದ್ರ ಸರಕಾರದ ಎದುರು ನಿಂತು ಐಎಂಎಯನ್ನು ಪಕ್ಕಕ್ಕೆ ಸರಿಸಿ ವಾದ ಮಾಡಿಸುವವರು ಯಾರು? ಈಗ ಬೆಂಗಳೂರಿನಲ್ಲಿ ಡಾ.ಗಿರಿಧರ್ ಕಜೆಯಂತಹ ವೈದ್ಯರು, ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಆನಂದಯ್ಯ ಅವರಂತಹ ವೈದ್ಯರು ಏನೇನೋ ಮಾಡಿ ತಮ್ಮ ವ್ಯಾಪ್ತಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ಪ್ರಯತ್ನಪಡುತ್ತಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಹೀಗೆ ಮಾಡುತ್ತಿರುವ ಮತ್ತು ಮಾಧ್ಯಮಗಳಲ್ಲಿ ವರದಿಯಾಗದೇ ಇರುವ ಅಸಂಖ್ಯಾತ ಆಯುರ್ವೇದಿಕ್ ವೈದ್ಯರು ಇರಬಹುದು. ಆದರೆ ಅವರನ್ನು ದೆಹಲಿಯ ತನಕ ಕರೆದುಕೊಂಡು ಬಂದು ಅವರ ವಾದವನ್ನು ಕೇಳಿಸುವ ವೇದಿಕೆ ಆಯುರ್ವೇದದಲ್ಲಿ ಇಲ್ಲ. ಯಾಕೆಂದರೆ ಆಯುರ್ವೇದದಲ್ಲಿ ಎರಡು ಗುಣಿಸು ಎರಡು ನಾಲ್ಕೇ ಆಗಬೇಕಾಗಿಲ್ಲ. ಒಬ್ಬ ಆಯುರ್ವೇದ ವೈದ್ಯ ತನ್ನ ಬುದ್ಧಿಮತ್ತೆಯನ್ನು, ಅಧ್ಯಯನವನ್ನು ಉಪಯೋಗಿಸಿ ಇಂತಿಂತಹ ಕಾಯಿಲೆಗೆ ಇಂತಿಂತಹ ಔಷಧವನ್ನು ಸಿದ್ಧಪಡಿಸಿ ರೋಗಿಗಳಿಗೆ ನೀಡಿ ಕಾಯಿಲೆಯನ್ನು ಗುಣಪಡಿಸಿದ ಎಂದೇ ಇಟ್ಟುಕೊಳ್ಳಿ. ಅದೇ ಕಾಯಿಲೆಯನ್ನು ಬೇರೆ ರಾಜ್ಯದ ಆಯುರ್ವೇದ ವೈದ್ಯ ಬೇರೆಯದ್ದೇ ಗಿಡಮೂಲಿಕೆಗಳ ಸಂಮಿಶ್ರಣದಲ್ಲಿ ಬೇರೆಯದ್ದೇ ಔಷಧ ತಯಾರಿಸಿ ನೀಡಲೂ ಬಹುದು. ಅದರಿಂದ ಕಾಯಿಲೆ ಬೇಗ ಗುಣವಾಗಲೂಬಹುದು. ಹಾಗಾದರೆ ಯಾವುದು ಫೈನಲ್? ಆದ್ದರಿಂದ ರಾಮದೇವ್ ಹೇಳಿದ್ದು ತಪ್ಪು ಎಂದು ಐಎಂಎ ಹೇಳಿದ್ದು ಅಲೋಪತಿ ವೈದ್ಯರ ಒಗ್ಗಟ್ಟಿನ ಶಕ್ತಿಯಿಂದಲೇ ಹೊರತು ರಾಮದೇವ್ ಹೇಳಿದ್ದರಲ್ಲಿ ಸತ್ಯ ಇದೆಯಾ ಎಂದು ಪ್ರತ್ಯೇಕವಾಗಿ ಅಲೋಪತಿ ವೈದ್ಯರನ್ನು ಕೇಳಿದ್ದರೆ ಗುಟ್ಟಿನಲ್ಲಿ ಹೌದು ಎನ್ನಬಹುದು. ಹಾಗಂತ ಈ ಸಂದರ್ಭದಲ್ಲಿ ವೈದ್ಯರ ಶ್ರಮ ಮತ್ತು ಸೇವೆಯನ್ನು ಮರೆಯುವ ಹಾಗಿಲ್ಲ. ಅಯುರ್ವೇದ ವೈದ್ಯರು ತಮ್ಮ ಕುಟೀರ, ಆಶ್ರಮಗಳಲ್ಲಿ ತಣ್ಣನೆ ಇದ್ದರೆ ಅನೇಕ ಅಲೋಪತಿ ವೈದ್ಯರು ಪಿಪಿಈ ಕಿಟ್ ಧರಿಸಿ, ತಲೆಯಿಂದ ಕಾಲಬೆರಳಿನ ತನಕ ಬೆವರಿನಿಂದ ಒದ್ದೆಯಾಗುತ್ತಿದ್ದಾರೆ. ಊಟ, ತಿಂಡಿ, ನೀರು ಕೊನೆಗೆ ಬಹಿರ್ದೇಶೆಗೂ ಹೋಗಲಾರದೆ ತಮ್ಮ ಪ್ರಾಣವನ್ನು ಕೂಡ ಪಣಕ್ಕೆ ಇಟ್ಟಿದ್ದಾರೆ. ಅವರ ಶ್ರಮವನ್ನು ಕೂಡ ಮರೆಯುವ ಹಾಗೆ ಇಲ್ಲ. ಅಂತಿಮವಾಗಿ ನಾನು ಹೇಳುವುದು ಯಾವ ಔಷಧೀಯ ಪದ್ಧತಿಯನ್ನು ತೆಗೆದುಕೊಳ್ಳಬೇಕೆನ್ನುವುದು ಆಯಾಯಾ ರೋಗಿಗೆ ಬಿಡಬೇಕು. ಆಯುರ್ವೇದ ಕಾಯಿಲೆ ಬರುವ ಮೊದಲೇ ತಡೆಯುವ ಶಾಸ್ತ್ರವನ್ನು ಹೇಳಿಕೊಟ್ಟರೆ ಅಲೋಪತಿ ಬಂದ ನಂತರ ತಡೆಯುವ ರೀತಿಯನ್ನು ಅನುಸರಿಸುತ್ತದೆ. ಆದರೆ ಕೆಲವರಿಗೆ ಆಯುರ್ವೇದ ಇನ್ನು ಕಡಿಮೆ ಬೆಲೆಯಲ್ಲಿ ಆಗುವ ಪರಿಹಾರ ಆದ ಕಾರಣ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗಳ ಮೇಲೆ ನಂಬಿಕೆ ಜಾಸ್ತಿ!,
Leave A Reply