ಸೆಂಟ್ರಲ್ ಮಾರುಕಟ್ಟೆ ಲೇಟ್ ಆದಷ್ಟು ಕಾಂಗ್ರೆಸ್ಸಿಗೆ ಲಾಭ!
Posted On June 2, 2021
ಸೆಂಟ್ರಲ್ ಮಾರುಕಟ್ಟೆ ವಿವಾದ ಮತ್ತೆ ಸುದ್ದಿಯಲ್ಲಿದೆ. ಅದಕ್ಕೆ ಕಾರಣ ಮಾರುಕಟ್ಟೆಯನ್ನು ನೆಲಸಮಗೊಳಿಸಿರುವುದು. ಈಗಾಗಲೇ 75% ಮಾರುಕಟ್ಟೆಯನ್ನು ಬೀಳಿಸಿಯಾಗಿದೆ. ಇನ್ನೊಂದು 25% ಉಳಿದಿದೆ. ಈ ನಡುವೆ ಕೆಲವರು ಮತ್ತೆ ಕೋರ್ಟಿಗೆ ಹೋಗಿದ್ದಾರೆ. ಸಾಮಾನ್ಯವಾಗಿ ವಿವಾದಾತ್ಮಕ ವಿಷಯಗಳಲ್ಲಿ ಯಾರಾದರೂ ತಡೆಯಾಜ್ಞೆ ಕೋರಿ ಅರ್ಜಿ ಹಾಕಿದರೆ ನ್ಯಾಯಾಲಯ ಅದನ್ನು ಮನ್ನಿಸುತ್ತದೆ ಮತ್ತು ತಡೆಯಾಜ್ಞೆ ನೀಡುತ್ತದೆ. ಈ ಬಾರಿಯೂ ಹಾಗೆ ಆಗಿದೆ. ಈ ಮೂಲಕ ಮಂಗಳೂರಿಗೆ ಎಷ್ಟು ಬೇಗ ಸುಸಜ್ಜಿತ ಸೆಂಟ್ರಲ್ ಮಾರುಕಟ್ಟೆ ಅಗತ್ಯ ಇತ್ತೋ ಅದು ಮತ್ತಷ್ಟು ನಿಧಾನವಾಗುತ್ತಿದೆ. ಈಗ ಕಾಂಗ್ರೆಸ್ಸಿಗರ ವಾದ ಆಡಳಿತ ಪಕ್ಷ ಭಾರತೀಯ ಜನತಾ ಪಾರ್ಟಿಯವರು ಸುಮಾರು 30 ಜನರಿಗೆ ಯಾವುದೇ ನೋಟಿಸು ನೀಡದೇ ಏಕಾಏಕಿ ಕಟ್ಟಡ ಹೊಡೆದು ಹಾಕಲು ಮುಂದಾಗಿದ್ದಾರೆ ಎಂದು ಹೇಳುತ್ತಿದ್ದಾರೆ. ಈಗ ಆ 30 ಮಂದಿ ಕೋರ್ಟಿಗೆ ಹೋಗಬೇಕಾದರೆ ಅದರ ಹಿಂದೆ ಇರುವುದೇ ಈ ಕಾಂಗ್ರೆಸ್ಸಿಗರ ಕುಮ್ಮಕ್ಕು. ಮಂಗಳೂರು ಸೆಂಟ್ರಲ್ ಮಾರುಕಟ್ಟೆಯನ್ನು ನೋಡಿದರೆ ಅದರ ಪರಿಸ್ಥಿತಿ ಗೊತ್ತಾಗುತ್ತದೆ. ಒಂದು ಮಗುವನ್ನು ಅಲ್ಲಿ ಕರೆದುಕೊಂಡು ಹೋದರೂ ಅದು ಒಳಗೆ ಕಾಲಿಡುವಾಗ ಛೀ ಎನ್ನುತ್ತದೆ. ನಮ್ಮ ನೆಂಟರು ಹೊರ ಊರಿನಿಂದ ನಮ್ಮ ಮಂಗಳೂರಿಗೆ ಬಂದರೆ ಮಂಗಳೂರಿನ ನಮ್ಮ ಮಾರ್ಕೆಟ್ ಎಂದು ಅವರನ್ನು ಕರೆದುಕೊಂಡು ಹೋಗಲು ಮಂಗಳೂರಿಗರಿಗೆ ನಾಚಿಕೆಯಾಗುತ್ತದೆ. ಜರ್ಜರಿತವಾಗಿರುವ ಹಳೆ ಸೆಂಟ್ರಲ್ ಮಾರುಕಟ್ಟೆ ಕಟ್ಟಡ ಯಾವ ಸಂದರ್ಭದಲ್ಲಿಯೂ ಧರಾಶಾಹಿಯಾಗಬಹುದು ಎಂದು ತಜ್ಞರು ನೀಡಿರುವ ವಾಯಿದೆ ಯಾವತ್ತೋ ಮುಗಿದುಹೋಗಿದೆ. ಮಳೆಗಾಲದಲ್ಲಿ ಬೆಳಗ್ಗಿನ ಹೊತ್ತಿನಲ್ಲಿ ಜೋರು ಮಳೆ, ಗಾಳಿ ಬಂದು ಕಟ್ಟಡದ ಯಾವುದಾದರೂ ಭಾಗ ಕುಸಿದು ಸಾವು-ನೋವು ಸಂಭವಿಸಿದರೆ ನಂತರ ಕೇಳುವುದೇ ಬೇಡಾ. ಬಹುಶ: ಹಾಗೆ ಅವಘಡ ಸಂಭವಿಸಲಿ ಎಂದೇ ಕಾಂಗ್ರೆಸ್ಸಿಗರು ಕಾಯುತ್ತಿದ್ದರೇನೋ ಎಂದು ಅನಿಸುತ್ತದೆ. ಒಂದು ವೇಳೆ ಹಾಗೇನಾದರೂ ಸಂಭವಿಸಿದರೆ ನಂತರ ನರಳುವುದು ಜನಸಾಮಾನ್ಯ ಮಾತ್ರ. ಆಗ ಯಾರೂ ಇಲ್ಲ. ಇನ್ನು ಈಗಾಗಲೇ ಆ 30 ವರ್ತಕರಿಗೆ ಆದಷ್ಟು ಶೀಘ್ರದಲ್ಲಿ ತಮ್ಮ ಸಾಮಾನು-ಸರಂಜಾಮನ್ನು ತೆಗೆದುಕೊಂಡು ಹೋಗಲು ಪಾಲಿಕೆ ಕಡೆಯಿಂದ ಹೇಳಲಾಗಿತ್ತು. ಕೆಲವರು ಅದನ್ನು ಕಿವಿಗೆ ಹಾಕಿಕೊಳ್ಳಲೇ ಇಲ್ಲ. ಇನ್ನು ಕೆಲವರು ನಾವು ಮಾತನಾಡಲ್ಲ, ನಮ್ಮ ವಕೀಲರು ಮಾತನಾಡುತ್ತಾರೆ ಎಂದು ಹೇಳಿದ್ದರು.
ಒಟ್ಟಿನಲ್ಲಿ ಅವರನ್ನು ಸಾವಕಾಶವಾಗಿ ಮಾತನಾಡಿಸಿ ಕಾಂಗ್ರೆಸ್ಸಿಗರಿಗೆ ವಿವಾದಕ್ಕೆ ಅವಕಾಶ ಇಲ್ಲದಂತೆ ಮಾಡಲು ಎಲ್ಲ ಪ್ರಯತ್ನ ಮಾಡಲಾಗಿತ್ತು. ಆದರೆ ಸುಸಜ್ಜಿತ ಮಾರುಕಟ್ಟೆ ಆದರೆ ನಂತರ ನಮಗೆ ಮುಂದಿನ ಬಾರಿ ತಟ್ಟೆಯೇ ಗತಿ ಎಂದು ಅಂದುಕೊಂಡ ಕಾಂಗ್ರೆಸ್ಸಿಗರು ಇದರಲ್ಲಿ ರಾಜಕೀಯ ಮಾಡಲು ಮುಂದಾಗಿಬಿಟ್ಟರು. ಅವರಿಗೆ ಈ ಕಟ್ಟಡ ಹಳೆಯದ್ದಾಗಿದೆ ಎಂದು ಗೊತ್ತಿದೆ. ಇದನ್ನು ಕೆಡವಬೇಡಿ ಎಂದು ಹೇಳಲು ಬಾಯಿ ಬರುವುದಿಲ್ಲ. ಯಾಕೆಂದರೆ ಈ ಕಟ್ಟಡ ಆದಷ್ಟು ಬೇಗ ಕೆಡವಿ ಅಲ್ಲೊಂದು ಹೊಸ ಕಟ್ಟಡ ಆಗಬೇಕು ಎನ್ನುವುದು ಮಂಗಳೂರಿನ ಜನರ ದಶಕದ ಕನಸು. ಇನ್ನು ತಾತ್ಕಾಲಿಕ ಮಾರುಕಟ್ಟೆಗೆ ವ್ಯವಸ್ಥೆ ಮಾಡಿದ್ದಾಗಲೂ ಅಲ್ಲಿ ಫುಟ್ ಬಾಲ್ ಆಡಲು ತೊಂದರೆಯಾಗುತ್ತದೆ. ಫುಟ್ ಬಾಲ್ ಗ್ರೌಂಡಿನಲ್ಲಿ ಬೇಡಾ ಎಂದು ಆ ಅಸೋಸಿಯೇಶನ್ ನವರಿಗೆ ಹೇಳಿಸಿ ಅಲ್ಲಿ ಕೂಡ ಸ್ಟೇ ತಂದರು. ಇನ್ನು ವಿಷಯ ಎಂದರೆ ಈಗ ಕೋರ್ಟಿಗೆ ಹೋಗಿ ಸ್ಟೇ ತಂದವರಲ್ಲಿ ಹೆಚ್ಚಿನವರಿಗೆ ಅಲ್ಲಿ ಹಕ್ಕೇ ಇಲ್ಲ. ಇನ್ನು ಈ ಕಟ್ಟಡ ಆದಷ್ಟು ಬೇಗ ಕೆಡವಲಾಗುತ್ತದೆ ಎಂದು ಗೊತ್ತಿರುವ ಕೆಲವು ವ್ಯಾಪಾರಿಗಳು ಆಸುಪಾಸಿನಲ್ಲಿ ಬೇರೆ ಕಡೆ ಅಂಗಡಿಗಳನ್ನು ನೋಡಿ ಶಿಫ್ಟ್ ಆಗಿದ್ದಾರೆ. ಇನ್ನು ಮಾರುಕಟ್ಟೆಯ ಒಳಗಿನ ಭಾಗ ಧ್ವಂಸ ಮಾಡುವಾಗ ಹೊರಗಿನ ಕಟ್ಟಡವನ್ನು ಮುಟ್ಟಿರಲಿಲ್ಲ. ಆಗ ಎರಡ್ಮೂರು ದಿನ ಸಮಯ ಇತ್ತು. ಲಾಕ್ ಡೌನ್, ಮಳೆ ಅದು ಇದು ಎಂದು ನೆಪ ಹೇಳಲು ಅವರೇನೂ ಚಿಕ್ಕಮಕ್ಕಳಲ್ಲ. ಬೆಳಿಗ್ಗೆ 6 ರಿಂದ 9 ತನಕ ಅಂಗಡಿಯ ಒಳಗೆ ಇರುವ ವಸ್ತುಗಳನ್ನು ತೆಗೆದು ಲಾರಿಗೆ ತುಂಬಿಸಿ ಹೋಗಲು ಅಸಾಧ್ಯವೂ ಅಲ್ಲ. ಈಗ ನ್ಯಾಯಾಲಯ ಸ್ಟೇ ಕೊಟ್ಟಿರಬಹುದು. ಆದರೆ ಶಾಶ್ವತ ಅಲ್ಲ. ಕಾಂಗ್ರೆಸ್ ಪಾಲಿಕೆಯಲ್ಲಿ ಆಡಳಿತದಲ್ಲಿ ಇದ್ದಾಗ ಮಾರ್ಕೆಟಿನಿಂದ ಪಾಲಿಕೆಗೆ ಬರುವ ಆದಾಯಕ್ಕಿಂತ ಖರ್ಚೆ ಜಾಸ್ತಿ ಇತ್ತು. ಎಷ್ಟೋ ಮಂದಿ ಒಳಬಾಡಿಗೆಯ ರೂಪದಲ್ಲಿ ಬೇರೆಯವರಿಗೆ ನೀಡಿ ಸಾವಿರಾರು ರೂಪಾಯಿ ಸಂಪಾದಿಸುತ್ತಿದ್ದರು. ಇನ್ನು 12 ವರ್ಷದ ನಂತರ ಅಂಗಡಿಗಳನ್ನು ರೀ ಎಲಂ ಮಾಡಬೇಕು ಎನ್ನುವ ಕಾನೂನನ್ನು ಕಾಂಗ್ರೆಸ್ಸಿಗರು ಗಾಳಿಗೆ ತೂರಿದ್ದರು. ಇನ್ನು ಕೆಎಂಸಿ ಆಕ್ಟ್ 1976 ಪ್ರಕಾರ ಲಾಕ್ ಡೌನ್ ಅವಧಿಯಲ್ಲಿ ಜಿಲ್ಲಾಧಿಕಾರಿಗಳು ಕಟ್ಟಡ ಒಡೆಯಲು ಅವರಿಗೆ ವಿವೇಚನಾತ್ಮಕ ಅವಕಾಶವಿದೆ. ಇನ್ನು ಕಟ್ಟಡ ಓಡೆಯುವುದೇ ಆದರೆ ಟ್ರೇಡ್ ಲೈಸೆನ್ಸ್ ನವೀಕರಣ ಮಾಡಿದ್ದು ಯಾಕೆ ಎನ್ನುವ ಕಾಂಗ್ರೆಸ್ಸಿಗರ ಪ್ರಶ್ನೆಯೇ ಅವರಿಗೆ ಮಾಹಿತಿಯ ಕೊರತೆಯನ್ನು ಸೂಚಿಸುತ್ತದೆ. ಟ್ರೇಡ್ ಲೈಸೆನ್ಸ್ ಮಾರ್ಚ್ 31 ಕ್ಕೆ ಮುಗಿದಿದೆ. ಕಟ್ಟಡ ಓಡೆದದ್ದು ಮೇ ಕೊನೆಯ ವಾರದಲ್ಲಿ. ಇಷ್ಟಿದ್ದು ಕಾಂಗ್ರೆಸ್ಸಿಗರು ವಾದಕ್ಕೆ ಇಳಿಯುತ್ತಾರೆ!!
- Advertisement -
Leave A Reply