ನಟನೆಯೇ ಮಾಡುವುದಾದರೆ ಪಿಐಎಲ್ ಯಾಕಿತ್ತು ಜೂಹಿ!
Posted On June 5, 2021
ಸಾರ್ವಜನಿಕ ಹಿತಾಸಕ್ತಿ ದಾವೆ ಎನ್ನುವ ಶಬ್ದಗಳಲ್ಲಿ ನಿಜಕ್ಕೂ ತುಂಬಾ ತಾಕತ್ತಿದೆ ಮತ್ತು ಅದಕ್ಕೆ ಅಷ್ಟೇ ಮೌಲ್ಯವಿದೆ. ಸರಕಾರಗಳು, ಪ್ರಭಾವಿಗಳು, ಸಿರಿವಂತರು ಮಾಡುವ ಅನ್ಯಾಯದ ವಿರುದ್ಧ ಜನರ ಪರವಾಗಿ ನ್ಯಾಯ ಕೊಡಿಸಿ ಎಂದು ನ್ಯಾಯಾಲಯದ ಮೆಟ್ಟಿಲು ಏರುವಂತಹ ಪ್ರಯತ್ನವೇ ಪಬ್ಲಿಕ್ ಇನ್ಟ್ರೇಸ್ಟ್ ಲಿಟಿಗೇಶನ್. ಆದರೆ ಈಗ ಅದರಲ್ಲಿ ಪಬ್ಲಿಕ್ ಇದ್ದಕಡೆ ಪಬ್ಲಿಸಿಟಿ ಆಗಿದೆ ಎನ್ನುವುದೇ ನಿಜಕ್ಕೂ ಬೇಸರದ ಸಂಗತಿ. ಇತ್ತೀಚೆಗೆ ಪಿಐಎಲ್ ಹೆಸರಿನಲ್ಲಿ ದಾವೆ ಹೂಡುವ ಪ್ರಕ್ರಿಯೆ ಜಾಸ್ತಿಯಾಗುತ್ತಿದ್ದಂತೆ ನ್ಯಾಯಾಧೀಶರು ಕೂಡ ವಾದಿಗಳ ಬಯಕೆ ಮತ್ತು ಮನಸ್ಸು ಸ್ವಚ್ಚವಾಗಿದೆಯೇ ಎಂದು ನೋಡುತ್ತಿದ್ದಾರೆ. ಯಾಕೆಂದರೆ ಪಿಐಎಲ್ ಬೇರೆ ದಾವೆಗಳಂತೆ ಅಲ್ಲ. ಈ ದಾವೆಯನ್ನು ಯಾವತ್ತೂ ನ್ಯಾಯಾಲಯಗಳು ಮೊದಲ ಆದ್ಯತೆಯನ್ನಾಗಿ ತೆಗೆದುಕೊಳ್ಳುತ್ತಾರೆ ಮತ್ತು ಅದನ್ನು ಇಂತಿಷ್ಟೇ ಸಮಯದೊಳಗೆ ಇತ್ಯರ್ಥ ಮಾಡಿ ಮುಗಿಸುತ್ತಾರೆ. ಆ ಒಂದು ಅವಕಾಶ ಪಿಐಎಲ್ ನಲ್ಲಿದೆ. ಸರಕಾರಗಳನ್ನು ಉರುಳಿಸಲು ಅಥವಾ ಉಳಿಸಲು ಪಿಐಎಲ್ ಬಳಕೆಯಾಗಿದೆ. ಹಿಂದಿನ ಕಾಲದಲ್ಲಿ ಪಿಐಎಲ್ ಹಾಕಿದರೆ ಅಲ್ಲಿ ನಿಜವಾಗಿಯೂ ಸಾರ್ವಜನಿಕರ ಹಿತಾಸಕ್ತಿ ಅಡಗಿ ಇರುತ್ತಿತ್ತು. ಒಬ್ಬ ವ್ಯಕ್ತಿ ಪಿಐಎಲ್ ಹಾಕುವುದೆಂದರೆ ಅದು ಚಿಕ್ಕ ವಿಷಯ ಅಲ್ಲವೇ ಅಲ್ಲ. ಅದಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಇರುತ್ತದೆ. ಇನ್ನು ಹೈಕೋರ್ಟ್ ಅಥವಾ ಸುಪ್ರೀಂಕೋರ್ಟಿನಲ್ಲಿ ಮಾತ್ರ ಪಿಐಎಲ್ ಹಾಕಲು ಸಾಧ್ಯ ಇರುವುದರಿಂದ ಜಿಲ್ಲಾ ಕೇಂದ್ರಗಳಿಂದ ರಾಜಧಾನಿಗೆ ಹೋಗಿ ಬರುವ ತಂಗುವ ಖರ್ಚು, ವಕೀಲರ ಮಣಗಾತ್ರದ ಫೀಸ್ ಎಲ್ಲಾ ಸೇರಿ ಪಿಐಎಲ್ ಹಾಕುವುದು ನಮ್ಮ ಕೈಯಲ್ಲಿ ಸಾಧ್ಯವೇ ಇಲ್ಲ ಎಂದು ನೈಜ ಸಾಮಾಜಿಕ ಹೋರಾಟಗಾರರು ಅನೇಕ ಸಂದರ್ಭಗಳಲ್ಲಿ ಆ ಬಗ್ಗೆ ಯೋಚಿಸುವುದೇ ಇಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಕೇಂದ್ರ ಅಥವಾ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಆಡಳಿತ ಪಕ್ಷವನ್ನು ಹಣಿಯಲು ಅಥವಾ ಅದಕ್ಕೆ ಮುಜುಗರ ಉಂಟು ಮಾಡಲು ಇದು ವಿರೋಧಿಗಳಿಂದ ಬಳಕೆಯಾಗುತ್ತದೆ. ಕೆಲವು ದಿನಗಳ ಹಿಂದೆ ರೋಹಿಂಗ್ಯಾ ವಲಸಿಗರನ್ನು ಈ ದೇಶದಿಂದ ಹೊರಗೆ ಕಳುಹಿಸಬಾರದು ಎಂದು ಒಬ್ಬ ಪಿಐಎಲ್ ಹಾಕಿದ್ದರು. ಅದರಲ್ಲಿ ಸಾರ್ವಜನಿಕ ಹಿತಾಸಕ್ತಿಗಿಂತ ರಾಜಕೀಯ ಉದ್ದೇಶ ಅಡಗಿದೆ ಎಂದು ಗಮನಿಸಿದ ನ್ಯಾಯಾಲಯ ವಾದಿಗೆ ಒಂದು ಲಕ್ಷ ರೂಪಾಯಿ ದಂಡ ಹಾಕಿತ್ತು. ಈಗ ಹೊಸದಾಗಿ ನಟಿ ಜೂಹಿ ಚಾವ್ಲಾ ಸರದಿ. 5ಜಿ ವಿರುದ್ಧ ಆಕೆ ಪಿಐಎಲ್ ಹಾಕಿದ್ದರು. ಮಾನ್ಯ ನ್ಯಾಯಾಲಯ ಅದನ್ನು ವಜಾಗೊಳಿಸಿದ್ದು ಮಾತ್ರವಲ್ಲದೆ ನಟಿ ಜೂಹಿ ಚಾವ್ಲಾ ಅವರಿಗೆ 20 ಲಕ್ಷ ರೂಪಾಯಿ ದಂಡ ಕೂಡ ಹಾಕಲಾಗಿದೆ.
ನ್ಯಾಯಾಲಯ ಎಂದರೆ ಅದು ಸಿನೆಮಾ ಸೆಟ್ ಅಲ್ಲ. ನ್ಯಾಯಾಧೀಶರು ಎಂದರೆ ಸಿನೆಮಾ ನಿರ್ದೇಶಕರು ಅಲ್ಲ. ಇನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿ ಎಂದು ಲಿಂಕ್ ಕಳುಹಿಸಿದರೆ ಅದು ಆಕ್ಟಿಂಗ್ ಮಾಡಲು ಕರೆದ ಆಮಂತ್ರಣ ಪತ್ರ ಅಲ್ಲ. ಆದರೆ ಜೂಹಿ ಚಾವ್ಲಾಗೆ ಇಷ್ಟು ವಯಸ್ಸಾದರೂ ಇನ್ನು ಹುಡುಗಾಟಿಕೆ ಹೋಗಿಲ್ಲ ಎಂದು ಮೊನ್ನೆ ಪ್ರಪಂಚಕ್ಕೆ ಗೊತ್ತಾಗಿದೆ. ಅವರು ರವಿಚಂದ್ರನ್ ಅವರ ಪ್ರೇಮಲೋಕ ಸಿನೆಮಾವೋ ಅಥವಾ ಅಕ್ಷಯ್ ಕುಮಾರ್ ಅವರ ಮಿಸ್ಟರ್ ಅಂಡ್ ಮಿಸೆಸ್ ಕಿಲಾಡಿ ಸಿನೆಮಾ ಅಂದುಕೊಂಡರೋ ಒಟ್ಟಿನಲ್ಲಿ ತಮಗೆ ಹಾಗೂ ನ್ಯಾಯಾಧೀಶರಿಗೆ ಸೀಮಿತವಾಗಿದ್ದ ವಿಡಿಯೋ ಲಿಂಕ್ ಅನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಾಕಿದ್ದಾರೆ. ಆ ಬಳಿಕ ಅದರಲ್ಲಿ ಹಲವರು ಪ್ರತ್ಯಕ್ಷರಾಗಿ ಜೂಹಿಯೊಂದಿಗೆ ಸಂಭಾಷಿಸುತ್ತಾ, ಹಾಡುತ್ತಾ ನ್ಯಾಯಾಧೀಶರ ಅಮೂಲ್ಯ ಸಮಯವನ್ನು ಹಾಳು ಮಾಡುತ್ತಾ ತಾವು ಮಜಾ ಉಡಾಯಿಸಿದ್ದಾರೆ. ಅದರ ನಂತರವೇ 20 ಲಕ್ಷದ ದಂಡದ ನೋಟಿಸು ಜೂಹಿ ಬಂಗ್ಲೆಗೆ ಬಂದಿರುವುದು. ಜೂಹಿ ಚಾವ್ಲಾ ಅವರಂತವರಿಗೆ 20 ಲಕ್ಷ ರೂಪಾಯಿ ದೊಡ್ಡದಲ್ಲದೇ ಇರಬಹುದು. ಅವರನ್ನು ಬಳಸಿ ಯಾರೋ ಹಿಂದಿನಿಂದ ಏನೋ ದೊಡ್ಡ ಯೋಜನೆಗೆ ಕೈ ಹಾಕಿರುವುದರಿಂದ ಅಂತವರು ಇದನ್ನು ಕಟ್ಟಲೂಬಹುದು. ಯಾಕೆಂದರೆ ದೂರವಾಣಿ ತರಂಗಾಂತರ ಎನ್ನುವುದು ದೊಡ್ಡ ಸಾಗರ. ಅಲ್ಲಿ ಕೋಟಿ, ಮಿಲಿಯನ್ ಗಳಿಗೆ ಲೆಕ್ಕವಿಲ್ಲ. ಹಾಗಿರುವಾಗ 20 ಲಕ್ಷ ಯಾವ ಲೆಕ್ಕ. ಕೆಲವೊಮ್ಮೆ ಬಾವಿಯ ಆಳ ನೋಡಲು ಶ್ರೀಮಂತ ಕಂಪೆನಿಗಳು ಇಂತಹ ಆಟ ಆಡುತ್ತಾರೆ. ಅವರೇ ಹೀಗೆ ವಿಡಿಯೋ ಲಿಂಕ್ ಪಬ್ಲಿಕ್ ಮಾಡಿ ಎಂಜಾಯ್ ಮಾಡಿ, ನಮ್ಮ ಕೆಲಸ ಆಗಿದೆ ಎಂದು ಹೇಳಿರಬಹುದು. ಅದು ಬಿಟ್ಟು ಪಿಐಎಲ್ ಹಾಕಿರುವ ಜೂಹಿಗೆ ಕನಿಷ್ಟ ಅವಳ ವಕೀಲರಾದರೂ ಆ ಲಿಂಕ್ ಬಗ್ಗೆ ಎಚ್ಚರಿಕೆ ನೀಡುತ್ತಿದ್ದರು. ಆದರೆ ಅವರ್ಯಾರು ಈ ಕುರಿತು ಎಚ್ಚರಿಸದೇ ಇದ್ದದ್ದು ಆಶ್ಚರ್ಯ ಎನಿಸುತ್ತದೆ. ಇನ್ನು ಜೂಹಿ ಅಂತಹ ಸೆಲೆಬ್ರಿಟಿಗೆ ಇದು ಕೂಡ ಯಾವುದೋ ಅಸೈನ್ ಮೆಂಟ್ ಇರಬಹುದು. ಇನ್ನು ಜೂಹಿ ಚಾವ್ಲಾ ಅವರನ್ನು ಮಾಧ್ಯಮಗಳು ಪರಿಸರ ಹೋರಾಟಗಾರ್ತಿ ಎಂದು ಸಂಭೋದಿಸುತ್ತಿವೆ. ಜೂಹಿ ಯಾವ ಪರಿಸರ ಉಳಿಸಲು ಹೋರಾಟ ಮಾಡಿದ್ದರು ಎಂದು ಯಾರಿಗೂ ಗೊತ್ತಿಲ್ಲ. ಅವರೊಬ್ಬರು ಉತ್ತಮ ನಟಿ ಎಂದು ಎಲ್ಲರಿಗೂ ಗೊತ್ತಿದೆ. ಆದರೆ ಅರೆಬೆಂದ ಜ್ಞಾನ ಹಿಡಿದುಕೊಂಡು ಯಾರದ್ದೋ ಕುಮ್ಮಕ್ಕಿನಿಂದ ಪಿಐಎಲ್ ಹಾಕುತ್ತಾರೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಯಾಕೆಂದರೆ 5ಜಿಯಿಂದ ಕೊರೊನಾ ಬರುತ್ತದೆ ಎಂದು ಸುಳ್ಳುಸುದ್ದಿ ಹಬ್ಬಿಸಲಾಗುತ್ತಿದೆ. ಇದಕ್ಕೆ ಯಾವ ವೈಜ್ಞಾನಿಕ ತಳಹದಿ ಕೂಡ ಇಲ್ಲ. ಅದು ಜೂಹಿಗೆ ಗೊತ್ತಿಲ್ಲ!!
- Advertisement -
Leave A Reply