ನಿಮ್ಮ ಕರೆಂಟ್ ಬಿಲ್ಲನ್ನು ಸರಿಯಾಗಿ ನೋಡಿದ್ದೀರಾ?
ನೀವು ಎಷ್ಟೋ ವರ್ಷಗಳಿಂದ ವಿದ್ಯುತ್ ಬಿಲ್ ಕಟ್ಟುತ್ತಿದ್ದೀರಿ. ಆದರೆ ಯಾವತ್ತಾದರೂ ಕೂಡ ಬಿಲ್ಲನ್ನು ಸರಿಯಾಗಿ ಮೇಲಿನಿಂದ ಕೆಳಗೆ ನೋಡಿದ್ದೀರಾ? ಅದೇ ಹೊಟೇಲಿಗೆ ಹೋದರೆ ಬಿಲ್ 130 ರೂಪಾಯಿ ಆದರೆ ಅಂಬಂಡೆಗೆ ಎಷ್ಟಾಕಿದ್ದಾರೆ, ಎಕ್ಸಟ್ರಾ ರೊಟ್ಟಿಗೆ ಎಷ್ಟಾಕ್ಕಿದ್ದಾರೆ, Service charge ಹಾಕಿದ್ದಾರಾ, ಜಿ ಎಸ್ ಟಿ ಹಾಕಿದ್ದಾರಾ, total ಲೆಕ್ಕ ತಪ್ಪಿರಬಹುದಾ ಎಂದು ಎರಡ್ಮೂರು ಸಲ ನೋಡುವವರು ನಮ್ಮಲ್ಲಿ ಅನೇಕರಿದ್ದಾರೆ. ಕೆಲವರು ಬಾರಿನಲ್ಲಿ ಟೈಟಾದ ನಂತರವೂ ತಾನು ತುಂಬಾ ಕುಡಿದರೂ ಸರಿಯಾಗಿದ್ದೇನೆ ಎಂದು ತೋರಿಸುವ ಕಾರಣಕ್ಕೆ ಬಿಲ್ಲಿನಲ್ಲಿ ಬರೆದ ಪ್ರತಿ ಅಂಶವನ್ನು ಕೂಡಿಸಿ, ಕಳೆದು ಕೊನೆಗೆ ಹಣ ಕೊಡುತ್ತಾರೆ. ಆದರೆ ಯಾರೂ ಕೂಡ ವಿದ್ಯುತ್ ಬಿಲ್ಲನ್ನು ಮೇಲಿನಿಂದ ಕೆಳಗಿನ ತನಕ ನೋಡಲ್ಲ, ಯಾಕೆಂದರೆ ಅದೊಂದು ನಂಬಿಕೆ.
ಆದರೆ ಆ ನಂಬಿಕೆಯನ್ನು ಎಷ್ಟೋ ಸಮಯದಿಂದ ನಮಗೆ ವಿದ್ಯುತ್ ಕೊಡುತ್ತಿರುವ ರಾಜ್ಯ ವಿದ್ಯುತ್ ನಿಯಂತ್ರಣ ನಿಗಮ ಮತ್ತು ರಾಜ್ಯ ಸರಕಾರಗಳು ಉಲ್ಲಂಘಿಸುತ್ತಲೇ ಬರುತ್ತಿವೆ ಎಂದು ನಿಮಗೆ ಗೊತ್ತಿದೆಯಾ? ಇಲ್ಲ, ಗೊತ್ತಿರಲು ಸಾಧ್ಯವಿಲ್ಲ. ಬೇಕಾದರೆ ಈಗ ನೀವು ಮನೆಯಲ್ಲಿದ್ದರೆ ಕಳೆದ ಬಾರಿ ನೀವು ಕಟ್ಟಿದ ವಿದ್ಯುತ್ ಬಿಲ್ಲನ್ನು ತೆಗೆದು ನೋಡಿ, ಅದರಲ್ಲಿ ಮೇಲೆ ಮೀಟರ್ ಬಾಡಿಗೆ ಎಂದು ಇರುತ್ತದೆ. ಇರಲಿ, ಅದು ತಪ್ಪಲ್ಲ, ಅದರ ನಂತರ ಇಷ್ಟು ಯೂನಿಟ್ ನೀವು ಬಳಸಿದ್ದಕ್ಕೆ ಸ್ಲಾಬ್ ಪ್ರಕಾರ ಇಷ್ಟು ಹಣ ಬೀಳುತ್ತದೆ ಎಂದು ಮೂರು ಹಂತಗಳಲ್ಲಿ ಬರೆದಿರುತ್ತಾರೆ. ಉದಾಹರಣೆಗೆ ಮೂವತ್ತು ಯೂನಿಟ್ ವರೆಗೆ ಇಷ್ಟು ಹಣ, 70 ಹಣದವರೆಗೆ ಇಷ್ಟು ಹಣ, 200 ಯೂನಿಟ್ ಕಳೆದ ಮೇಲೆ ಬಳಸಿದ್ದಕ್ಕೆ ಇಷ್ಟು ಹಣ ಎಂದು ನಮೂದಿಸಲಾಗಿರುತ್ತದೆ. ಅದೆಲ್ಲ ದರ ನಂತರ ಕೆಲವೊಮ್ಮೆ 0.5% ಮತ್ತೆ ಕೆಲವೊಮ್ಮೆ 0.10% ದಂತೆ ಒಂದು ಮೊತ್ತ ಇರುತ್ತದೆ ನಂತರ ಬಡ್ಡಿ,ನಂತರ ಒಟ್ಟು ಮೊತ್ತ ಇರುತ್ತದೆ ಮತ್ತು ನೀವು ಇಲ್ಲಿಯ ತನಕ ಅದೊಂದನ್ನೇ ನೀವು ನೋಡಿದ್ದು, ಟೆನ್ಷನ್ ಮಾಡಿದ್ದು, ಇಷ್ಟು ಬಂದಿದೆಯಾ ಎಂದು ಮಂಡೆಬಿಸಿ ಮಾಡಿದ್ದು ಮತ್ತು ಕೊನೆಗೆ ಕಟ್ಟಿ ಬಂದದ್ದು.
ನಂತರ ನಿಮಗೆ ವಿದ್ಯುತ್ ಬಿಲ್ ಕೈಗೆ ಸಿಗುವುದು ಮುಂದಿನ ಬಾರಿ ಮೀಟರ್ ರೀಡ್ ಮಾಡುವ ವ್ಯಕ್ತಿ ನಿಮ್ಮ ಕೈಯಲ್ಲಿ ಬಿಲ್ ಕೊಟ್ಟು ಹೋದಾಗಲೇ. ಈಗ ನಾನು ಕೇಳುತ್ತಿರುವುದು ನಿಮ್ಮ ಬಿಲ್ಲಿನಲ್ಲಿ ಮತ್ತೊಂದು ಕಾಲಂ ತರಹದ್ದು ಒಂದು ಇರುತ್ತದೆ. ಅದರಲ್ಲಿ ನಿಮ್ಮ ಒಟ್ಟು ಬಿಲ್ಲಿನ ಮೇಲೆ ಇಷ್ಟು ಶೇಕಡಾ ಎಂದು ಎಕ್ಸಟ್ರಾ ಅಮೌಂಟನ್ನು ಹಾಕಿರುತ್ತಾರೆ. ಅದ್ಯಾಕೆ? ಅದು ಯಾವ ಲೆಕ್ಕದಲ್ಲಿ? ನಿಮ್ಮ ಬಿಲ್ಲಿನ ಒಟ್ಟು ಮೊತ್ತದ ಮೇಲೆ ಕೆಲವೊಮ್ಮೆ 0.08% ಎಂದು ಕಾಣಿಸಿತ್ತು ಎಂದು ಅಂದುಕೊಳ್ಳೋಣ, ಅದು ಯಾಕೆ ಎಂದು ನೀವು ಯಾರನ್ನಾದರೂ ಕೇಳಿದ್ದೀರಾ? ಒಂದು ವೇಳೆ ನೀವು ಕೇಳಿದರೂ ಅದು ಯಾರಿಗೂ ಗೊತ್ತಿಲ್ಲ. ಸ್ವತ: ಮೆಸ್ಕಾಂ ಅಧಿಕಾರಿಗಳಿಗೂ ಕೂಡ. ಬಿಲ್ಲಿನಲ್ಲಿ ಆ ಹಣವನ್ನು ಯಾಕೆ ನಮೂದಿಸಲಾಗುತ್ತದೆ ಮತ್ತು ನಾಗರಿಕರು ಅದನ್ನು ಯಾಕೆ ಕಟ್ಟಬೇಕು ಎಂದು ಅವರು ಹೇಳಲಾಗದ ಪರಿಸ್ಥಿತಿಯಲ್ಲಿದ್ದಾರೆ. ಬೇಕಾದರೆ ಈಗಲೇ ಒಮ್ಮೆ ಟ್ರೈ ಮಾಡಿ. ನೀವು ಹಣ ಕಟ್ಟಿದ ಕಡೆಯಲ್ಲಿಯೇ ಕೇಳಿ ನೋಡಿ. ನಾನು ಯಾಕೆ ಈ ಮಾತನ್ನು ಹೇಳುತ್ತಿದ್ದೆನೆಂದರೆ ಯಾವುದೇ ಬಿಲ್ ನೀವು ಕಟ್ಟುವಾಗ ಅದರಲ್ಲಿ ನಮೂದಿಸಲಾಗುವ ಮೊತ್ತದ ಎದುರು ಆ ಹಣ ಹಾಕಿದ ಉದ್ದೇಶವನ್ನು ಬರೆಯಲಾಗಿರುತ್ತದೆ. ಆದರೆ ಈ ಮೊತ್ತಕ್ಕೆ ಮಾತ್ರ ಯಾವುದೇ ಅಪ್ಪ, ಅಮ್ಮ ಇಲ್ಲ. ಹಾಗಂತ ಇದು ಈ ತಿಂಗಳು ಎಷ್ಟು ಶೇಕಡಾ ಇದೆಯೋ, ಅದು ಹಾಗೆ ಫಿಕ್ಸ್ ಆಗಿ ಇರುವುದಿಲ್ಲ. ಈ ಬಾರಿ 0.03% ಇದ್ದರೆ ಮುಂದಿನ ಬಾರಿ 0.08% ಕೂಡ ಆಗಬಹುದು. ಅದರ ನಂತರದ ತಿಂಗಳಲ್ಲಿ 0.05% ಕೂಡ ಆಗಬಹುದು. ನಂತರ ಮತ್ತೊಮ್ಮೆ 0.15% ಕೂಡ ಆಗುವ ಸಾಧ್ಯತೆ ಇದೆ.
ಈ ಬಗ್ಗೆ ನಾನು ಕೆಲವರೊಂದಿಗೆ ಕೇಳಿದೆ. ಅನೇಕರಿಗೆ ಗೊತ್ತಿಲ್ಲ. ಆದರೆ ಕೊನೆಗೊಬ್ಬ ಗೆಳೆಯ ಹೀಗೆ ಹೇಳಿದ್ದಾನೆ ” ಗ್ರಾಹಕರಿಗೆ ವಿದ್ಯುತ್ ಪೂರೈಕೆ ಮಾಡುವಾಗ ಸಂಬಂಧಿಸಿದ ಖರ್ಚು ಅದು” ನಿಮ್ಮ ಮನೆ, ಮಳಿಗೆ ಅಥವಾ ಸಂಸ್ಥೆಗಳಿಗೆ ಇಂತಿಷ್ಟು ವಿದ್ಯುತ್ ಸರಬರಾಜು ಮಾಡಿದಾಗ ನಿಗಮಕ್ಕೆ ತಗುಲಿದ ಖರ್ಚನ್ನು ಅವರು ಶೇಕಡಾವಾರು ರೂಪದಲ್ಲಿ ನಮ್ಮ ಮೇಲೆ ಹೇರುತ್ತಿದ್ದಾರೆ. ಹಾಗಾದರೆ ನಾವು ಸ್ಲಾಬ್ ಪ್ರಕಾರ ಕಟ್ಟುತ್ತಿರುವ ಹಣ ಏನು ಲೆಕ್ಕಕ್ಕೆ ಇಲ್ಲವಾ? ಅದರಲ್ಲಿ ಏನೂ ಲಾಭ ಹಾಕದೆ ನಿಗಮ ಕೆಲಸ ಮಾಡುತ್ತಿದೆಯಾ? ಹೀಗೆ ಹಲವು ಪ್ರಶ್ನೆಗಳು ಉದ್ಭವಿಸುತ್ತದೆ. ಅದಕ್ಕೆ ಉತ್ತರ ಕೊಡಬೇಕಾದ ಅಧಿಕಾರಿಗಳು ಸುಮ್ಮನಿದ್ದಾರೆ. ಇಂಧನ ಸಚಿವರು ರಾಜ್ಯದಲ್ಲಿ ಈ ಮೂಲಕ ಬರುವ ಕೋಟಿಗಟ್ಟಲೆ ಹಣವನ್ನು ಮಾತ್ರ ತಮ್ಮ ಮತ ಬ್ಯಾಂಕ್ ಸೆಳೆಯಲು ಬಳಸುತ್ತಿದ್ದಾರೆ. ಇವರ ತೆವಲಿಗೆ ಜನ ಸಾಮಾನ್ಯನೊಬ್ಬ ಹೀಗೆ ಪ್ರತಿ ತಿಂಗಳು ಯಾರಿಗೂ ಗೊತ್ತೆ ಇಲ್ಲದ ಕಾರಣವೊಂದಕ್ಕಾಗಿ ಹಣ ಕಟ್ಟುತ್ತಿದ್ದಾನೆ!(ಮೆಸ್ಕಾಂ ಬಿಲ್ ನಲ್ಲಿ ಮಾರ್ಕ್ ಮಾಡಿರುವುದನ್ನು ಗಮನಿಸಿ)
Leave A Reply