ಅಮಿತ್ ಶಾ ಜೋರು ಮಾಡಿದ್ದಾರೆ, ಪ್ರತಿಭಟನೆ ಮಾಡಲೇಬೇಕಂತೆ!
ಕಾಂಗ್ರೆಸ್ ನಡೆಸಿರುವ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ಮಾಡಿ ಎಂದು ಭಾರತೀಯ ಜನತಾ ಪಾರ್ಟಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಹೇಳಿದ ನಂತರ ಬಿಜೆಪಿಯ ರಾಜ್ಯ ನಾಯಕರು ಪ್ರತಿಭಟನೆಗೆ ಮುಹೂರ್ತ ಹುಡುಕುತ್ತಿದ್ದಾರೆ. ಮುಂದಿನ ವಾರದಿಂದ ಪ್ರತಿಭಟನೆ ಮಾಡುತ್ತೇವೆ ಎಂದು ಸುದ್ದಿಗೋಷ್ಟಿ ಮಾಡಿ ಹೇಳಿದ್ದಾರೆ. ಇದು ರಾಜ್ಯದಲ್ಲಿ ಬಿಜೆಪಿ ಯಾವ ಮಟ್ಟಕ್ಕೆ ಇಳಿದಿದೆ ಎಂದು ಗ್ಯಾರಂಟಿಯಾಗುತ್ತಿದೆ. ಒಂದು ರಾಜ್ಯದಲ್ಲಿರುವ ರಾಷ್ಟ್ರೀಯ ಪಕ್ಷವೊಂದರ ನಾಯಕರು ಭ್ರಷ್ಟಾಚಾರವನ್ನು ಸಾಮಾನ್ಯ ಎಂದು ಒಪ್ಪಿಕೊಂಡಿರುವುದು ಆ ರಾಜ್ಯದ ಜನರ ಮಟ್ಟಿಗೆ ಯಾವತ್ತೂ ಒಳ್ಳೆಯ ಸುದ್ದಿಯಲ್ಲ.
ನೀವು ಈಗ ಪ್ರತಿಭಟಿಸಿದರೆ ಗೊತ್ತಿದೆಯಲ್ಲ, ಮುಂದಿನ ಬಾರಿ ನಾವು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬಂದಾಗ ಎಸಿಬಿಯನ್ನೋ, ಲೋಕಾಯುಕ್ತವನ್ನೋ ಬಳಸಿ ನಿಮ್ಮ ಮುಖವಾಡ ಕಳಚಿ ಬಿಡುತ್ತೇವೆ ಎಂದು ಡಿಕೆಶಿವಕುಮಾರ್ ಹೆದರಿಸಿರಬಹುದು ಎಂದು ಅನಿಸುವ ಮಟ್ಟಿಗೆ ಬಿಜೆಪಿ ನಾಯಕರು ಮೌನಕ್ಕೆ ಶರಣಾಗಿದ್ದರು. ಅದರೊಂದಿಗೆ ನಾವೆನಾದರೂ ಪ್ರತಿಭಟಿಸಿದರೆ ಭ್ರಷ್ಟಾಚಾರದ ವಿಚಾರದಲ್ಲಿ ಜೈಲಿಗೆ ಹೋಗಿ ಬಂದವರು ಯಾವ ನೈತಿಕತೆಯ ಮೇಲೆ ಪ್ರತಿಭಟಿಸುತ್ತಾರೆ ಎಂದು ಜನರಿಗೆ ಮರೆತು ಹೋದ ಬಿಜೆಪಿಯ ಹಳೆ ಇತಿಹಾಸವನ್ನು ಜನರಿಗೆ ಮತ್ತೆ ಕಾಂಗ್ರೆಸ್ ನೆನಪಿಸಬಹುದು ಎಂದು ಹೆದರಿ ಬಿಜೆಪಿ ಮುಖಂಡರು ನಿದ್ರೆ ಮಾಡುವರಂತೆ ನಟಿಸಿದ್ದರು. ಅಷ್ಟೇ ಅಲ್ಲ, ಇವತ್ತು ಡಿಕೆಶಿಯವರ ಕೋಟ್ಯಾಂತರ ರೂಪಾಯಿ ಅಕ್ರಮದ ವಿರುದ್ಧ ಪ್ರತಿಭಟಿಸಲು ನಾವೇನೂ ಸತ್ಯ ಹರಿಶ್ಚಂದ್ರರ ಮೊಮ್ಮಕ್ಕಳ ಎಂದು ಒಳಗೊಳಗೆ ಹಿಂಜರಿದುಕೊಂಡೆ ಎಲ್ಲರೂ ಕಣ್ಣಿಗೆ ಬಟ್ಟೆ ಕಟ್ಟಿ ಕುಳಿತುಕೊಂಡಿದ್ದರು.ಆದರೆ ಕೊನೆಗೂ ಬಿಜೆಪಿ ನಾಯಕರಿಗೆ ಚಾಟಿ ಏಟಿನ ರುಚಿಯನ್ನು ಅಮಿತಾ ಶಾ ನೀಡಿ ಹೋಗಿದ್ದಾರೆ. ಇನ್ನು ಕಾಟಾಚಾರಕ್ಕೆ ಪ್ರತಿಭಟಿಸದೇ ಹೋದರೆ ನಮ್ಮ ಬಾಲ ಎತ್ತಿ ಅಮಿತ್ ಶಾ ಎಲ್ಲಿಯಾದರೂ ದೂರ ಬಿಸಾಡಿಬಿಟ್ಟರೆ ಮುಂದಿನ ಬಾರಿ ಅಧಿಕಾರಕ್ಕೆ ಬರುವುದು ಬಿಡಿ, ನಾವು ಟಿಕೆಟ್ ಪಡೆದುಕೊಳ್ಳುವುದಕ್ಕೂ ಕೈ ಇರದ ಪರಿಸ್ಥಿತಿಯನ್ನು ಅಮಿತ್ ಶಾ ಮಾಡಲಿದ್ದಾರೆ ಎಂದು ಬಿಜೆಪಿ ನಾಯಕರಿಗೆ ಅರಿವಿಗೆ ಬಂದಿರುವುದರಿಂದ ಅವರು ಕಾಟಾಚಾರಕ್ಕೆ ಪ್ರತಿಭಟನೆಗೆ ಇಳಿಯುವ ದೊಡ್ಡ ಮನಸ್ಸು ಮಾಡಲಿದ್ದಾರೆ.
ಪ್ರತಿಭಟನೆಯಲ್ಲಿ ಮುಂದಿರುವ ಮುಖಗಳಾದರೂ ಯಾವುದು? ಯಡಿಯೂರಪ್ಪ, ಈಶ್ವರಪ್ಪ, ಶೋಭಾ, ಅಶೋಕ, ಸಿಟಿ ರವಿ. ಇವರು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ ಭಯಂಕರ ಭಾಷಣ ಮಾಡಿದರೆ ಜನ “ಅಯ್ಯೋ, ಪಾಪ, ಕಾಂಗ್ರೆಸ್ಸಿನವರು ಎಂತಹ ಭ್ರಷ್ಟರು” ಎಂದು ಅಂದುಕೊಂಡು ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತಾರಾ? ಮಾಜಿ ಉಪಮುಖ್ಯಮಂತ್ರಿ ಅಶೋಕ್ ಅವರು ಡಿಕೆಶಿವರೊಂದಿಗೆ ಚೆನ್ನಾಗಿದ್ದಾರೆ ಎಂದು ಹೇಳಿದ್ದು ಸ್ವತ: ಸಂಘ ಪರಿವಾರ ಮುಖಂಡರು. ಇದೇ ಯಡಿಯೂರಪ್ಪನವರು ಕೆಜೆಪಿಯಲ್ಲಿದ್ದಾಗ ಬಿಜೆಪಿ ಭ್ರಷ್ಟಾಚಾರವನ್ನು ಹೊದ್ದು ಮಲಗಿರುವ ಪಕ್ಷ ಎಂದವರು. ಆದ್ದರಿಂದ ಐಟಿ ದಾಳಿ ಮಾಡಿ ಡಿಕೆಶಿಗೆ ಶಾಕ್ ಕೊಟ್ಟ ಕೇಂದ್ರ ಬಿಜೆಪಿ ಅತ್ತ ಅಹ್ಮದ್ ಪಟೇಲ್ ಅವರನ್ನು ಸೋಲಿಸುವುದಕ್ಕೂ ಆಗಲಿಲ್ಲ. ಇತ್ತ ರಾಜ್ಯ ಬಿಜೆಪಿ ಎನ್ ಕ್ಯಾಶ್ ಕೂಡ ಮಾಡಲೂ ಹೋಗಿಲ್ಲ ಎಂದು ಗೊತ್ತಾದಾಗ ಅಮಿತ್ ಶಾ ಖಡಕ್ಕಾಗಿದ್ದಾರೆ ಎನ್ನುತ್ತಾರೆ ರಾಜಕೀಯ ಪಂಡಿತರು. ಯುವ ಘಟಕ ಇರುವುದು ಕೇವಲ ಫೇಸ್ ಬುಕ್ ನಲ್ಲಿ ಫೋಟೋ ಹಾಕಿ ಮೆರೆಯಲು ಅಲ್ಲ ಎಂದು ಶಾ ಗರಂ ಆಗಿದ್ದಾರೆ. ಬೀದಿಗೆ ಇಳಿದು ಹೋರಾಡುವ ಅಗತ್ಯ ಇರುವಾಗ ಬರಿ ಟಿವಿಗೆ ಹೇಳಿಕೆ ಕೊಡುತ್ತಾ ಸುಮ್ಮನಿರುವುದು ಎಂದರೆ ಏನು ಎಂದು ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಪ್ರತಾಪ್ ಸಿಂಹ ಅವರನ್ನು ಜೋರು ಮಾಡಿದ್ದಾರೆ.
ಇದೆಲ್ಲದರ ನಡುವೆ ಸಿದ್ಧರಾಮಯ್ಯನವರು ಇಂದಿರಾ ಕ್ಯಾಂಟಿನ್ ಗೆ ಚಾಲನೆ ಕೊಟ್ಟಿದ್ದಾರೆ. ಬಿಜೆಪಿ ಡಿಕೆಶಿ ವಿರುದ್ಧ ಹೋರಾಡಿ ಬರುವಾಗ ಇಂದಿರಾ ಕ್ಯಾಂಟಿನ್ ನಲ್ಲಿ ಉಪಹಾರ ಸೇವಿಸಿ ಬಂದರೆ ಪ್ರತಿಭಟನೆಯೂ ಆಗುತ್ತದೆ. ಕಡಿಮೆ ದರದಲ್ಲಿ ಊಟ, ತಿಂಡಿಯೂ ಮುಗಿಯಲಿದೆ. ಬಹುಶ: ಪ್ರತಿಭಟನೆಯ ಖರ್ಚು ಕಡಿಮೆ ಆಗಲು ಇಂದಿರಾ ಕ್ಯಾಂಟೀನ್ ಪ್ರಾರಂಭವಾಗಲಿ ಎಂದು ಬಿಜೆಪಿಯವರು ಕಾಯುತ್ತಿದ್ದಾರಾ? ಹೇಗೆ
Leave A Reply