ಪದಾರ್ಥ ಮೈಮೇಲೆ ಬೀಳಿಸಿ ಅಧ್ವಾನ ಮಾಡುವುದೇ ಬಿಜೆಪಿ ಸ್ಟೈಲ್!!

ನನ್ನ ಆಪ್ತ ತಪ್ಪು ಮಾಡಿದರೆ ಮೊದಲು ನನ್ನ ಬಳಿ ಮಾತನಾಡಬಹುದಿತ್ತು ಎಂದು ಶ್ರೀರಾಮುಲು ಹೇಳಿದ್ದು ಸ್ವತ: ತಮ್ಮದೇ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ವಿಜಯೇಂದ್ರ ಬಗ್ಗೆ. ಒಬ್ಬ ವ್ಯಕ್ತಿ ಯಾರದ್ದೋ ಹೆಸರೇಳಿಕೊಂಡು ಭ್ರಷ್ಟಾಚಾರ ಮಾಡುತ್ತಾ ಇದ್ದರೆ ಆತ ಯಾರ ಹೆಸರು ಹೇಳಿಕೊಂಡು ಗೋಲ್ ಮಾಲ್ ಮಾಡುತ್ತಿದ್ದಾನೋ ಆ ವ್ಯಕ್ತಿಗೆ ಈ ವಿಷಯ ಗೊತ್ತಾದಾಗ ಆ ಪ್ರಭಾವಿ ವ್ಯಕ್ತಿ ಏನು ಮಾಡುತ್ತಾರೆ. ಗೋಲ್ ಮಾಲ್ ಮಾಡುವ ವ್ಯಕ್ತಿಯ ಹಿನ್ನಲೆಯನ್ನು ಪರಿಶೀಲನೆ ಮಾಡುತ್ತಾರೆ. ಆ ಮನುಷ್ಯ ಬೇರೆ ಯಾವುದೋ ಪ್ರಭಾವಿಗಳ ಕೈಕೆಳಗೆ ಕೆಲಸ ಅಥವಾ ಆಪ್ತವರ್ಗದಲ್ಲಿ ಸೇರಿದವನ್ನಾಗಿದ್ದಲ್ಲಿ ಅವರಿಗೆ ಕರೆ ಮಾಡಿ ನಿಮ್ಮ ಕಡೆ ಹುಡುಗ ನಮ್ಮ ಹೆಸರನ್ನು ಬಳಸಿ ಹಣ ಮಾಡುತ್ತಿದ್ದಾನೆ ಎಂದು ಮಾಹಿತಿ ಕೊಡುತ್ತಾರೆ. ಹೀಗೆ ಮಾಹಿತಿ ಕೊಟ್ಟ ನಂತರವೂ ಏನೂ ಆಗದಿದ್ದರೆ ನಂತರ ಪೊಲೀಸ್ ಠಾಣೆ, ನ್ಯಾಯಾಲಯ ಇದ್ದೇ ಇರುತ್ತದೆ. ಆದರೆ ಇದೆಲ್ಲವೂ ನಡೆಯದೇ ನೇರ ರಾಜ್ಯದ ಪ್ರಭಾವಿ ಸಚಿವರಾಗಿರುವ ಶ್ರೀರಾಮುಲು ಅವರ ಆಪ್ತವರ್ಗದಲ್ಲಿ ಬರುವ ರಾಜು ಯಾನೆ ರಾಜಣ್ಣ ಮೇಲೆ ಸಿಎಂ ಪುತ್ರ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದರ ನಂತರವೇ ಶ್ರೀರಾಮುಲು ಹೇಳಿದ್ದು- “ನನ್ನ ಬಳಿ ಒಂದು ಮಾತು ಹೇಳಬಹುದಿತ್ತು” ರಾಜಣ್ಣ ತಮ್ಮ ಆಪ್ತ ಸಹಾಯಕ ಅಲ್ಲದಿದ್ದರೂ ಆಪ್ತರು ಎಂದು ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ. ಮೇಲ್ನೋಟಕ್ಕೆ ಇದರಲ್ಲಿ ಸಾಮಾನ್ಯ ಜನರಿಗೆ ಅಂತಹ ವಿಶೇಷತೆ ಕಾಣದೇ ಇರಬಹುದು. ಆದರೆ ರಾಜಕೀಯವನ್ನು ಹತ್ತಿರದಿಂದ ನೋಡುವವರಿಗೆ ಭಾರತೀಯ ಜನತಾ ಪಾರ್ಟಿಯ ಒಳಗೆ ಹಲಸಿನ ಹುಣ್ಣು ಕೊಳೆತು ಹೋಗಿರುವ ವಾಸನೆ ದಟ್ಟವಾಗಿ ಬಡಿಯುತ್ತಿದೆ. ಇದು ಇನ್ನಷ್ಟು ಗಬ್ಬು ನಾರುತ್ತಾ ಚುನಾವಣೆ ಹತ್ತಿರ ಬರುವಾಗ ರಾಜ್ಯವೀಡಿ ಜನರು ಮೂಗು ಮುಚ್ಚುವ ಪರಿಸ್ಥಿತಿ ನಿರ್ಮಾಣ ಮಾಡಲಿದೆ. ರಾಜಣ್ಣ ತಾವು ಶ್ರೀರಾಮುಲು ಹೆಸರಾಗಲಿ, ಬೇರೆ ಯಾರದ್ದಾಗಲಿ ಹೆಸರು ಬಳಸಿ ಕಮೀಷನ್ ಅಥವಾ ಬೇರೆ ಯಾವುದೇ ಹಣ ವಸೂಲಿ ಮಾಡಿಲ್ಲ ಎಂದು ಹೇಳಿ ಈಗ ಪೊಲೀಸರ ತನಿಖೆ ಮುಗಿದು ಹೊರಗೆ ಬಂದಿದ್ದಾರೆ. ಆದರೆ ಈ ಮೂಲಕ ವಿಜ್ಜು ರಾಜ್ಯ ರಾಜಕೀಯದ ಪ್ರಭಾವಿ ಸಚಿವರುಗಳಿಗೆ ಏನೋ ಸಂದೇಶ ಕೊಡಲು ಹೊರಟಿರುವುದು ಮಾತ್ರ ಸ್ಪಷ್ಟ. ಯಾವುದೇ ಪಕ್ಷ ಅಧಿಕಾರದಲ್ಲಿ ಇರಲಿ, ಕಾಮಗಾರಿಗಳಲ್ಲಿ ಕಮೀಷನ್, ಭ್ರಷ್ಟಾಚಾರ ಇಲ್ಲದೇ ಐದು ವರ್ಷ ಆಳ್ವಿಕೆ ಮಾಡಿತು ಎಂದು ಕುರುಡ ಕೂಡ ಹೇಳಲು ಸಾಧ್ಯವಿಲ್ಲ.
ಆದರೆ ತೀರಾ ಈ ರೀತಿ ಬಿಜೆಪಿ ಸರಕಾರ ತಾನು ತಿಂದು ಪದಾರ್ಥವನ್ನು ಮೈಮೇಲೆ ಚೆಲ್ಲಿ ಅಧ್ವಾನ ಮಾಡಿಕೊಳ್ಳುತ್ತಿರುವುದು ಪಕ್ಷದ ಮಟ್ಟಿಗೆ ಒಳ್ಳೆಯ ಬೆಳವಣಿಗೆ ಅಲ್ಲ. ಇದನ್ನು ಗುಂಪುಗಾರಿಕೆ ಎಂದು ಹೇಳಲು ಆಗುವುದಿಲ್ಲ. ಇದು ಸಾಮೂಹಿಕ ಊಟಕ್ಕೆ ಕುಳಿತಾಗ ಅದರಲ್ಲಿ ಒಬ್ಬ ಪಕ್ಕದವನಿಗೆ ಜಾಸ್ತಿ ಬಡಿಸಿದ್ದನ್ನು ರಂಪಾಟ ಮಾಡಿದಂತೆ ತೋರುತ್ತದೆ. ರಾಜ್ಯ ರಾಜಕಾರಣದಲ್ಲಿ ಎಲ್ಲವೂ ವಿಜ್ಜು ಈಶಾರೆಯಲ್ಲಿಯೇ ನಡೆಯುತ್ತಿರುವುದು ಸಚಿವರುಗಳಿಗೆ ನುಂಗಲು ಆಗದ ಉಗುಳಲು ಆಗದ ಲಾಡುವಿನಂತೆ ಆಗಿದೆ. ನುಂಗಿದರೆ ಡಯಾಬೀಟಿಸ್ ಜಾಸ್ತಿ ಆಗುತ್ತದೆ. ಉಗುಳಿದರೆ ನಾಲಿಗೆಯೇ ಕಟ್ ಆಗುವ ಹೆದರಿಕೆ. ಆದ್ದರಿಂದ ಬಾಯಲ್ಲಿಯೇ ಇಟ್ಟು ಲಾಡು ತಾನಾಗಿ ಕರಗಲಿ ಎಂದು ಎಲ್ಲರೂ ಕಾಯುವಂತಾಗಿದೆ. ಯಾಕೆಂದರೆ ಲಾಡು ಕೊಡಿಸಲು ಯಡ್ಡಿ ಸಾಕಷ್ಟು ತನು, ಮನ, ಧನವನ್ನು ವ್ಯಯಿಸಿ ಏಕಾಂಗಿಯಾಗಿ ಹೋರಾಡಿದ್ದಾರೆ. ಅವರ ಜೊತೆ ತನು, ಮನದಿಂದ ಹೋರಾಡಿದವರಿಗೆ ಸೋತರೂ ಸಚಿವಗಿರಿ ಸಿಕ್ಕಿದೆ. ಹಾಗಂತ ಹಾಗೆ ಸಚಿವಗಿರಿ ಪಡೆದುಕೊಂಡವರಿಗೆ ಸಿಂಹಾಸನದಲ್ಲಿ ಕುಳ್ಳಿರಿಸಿ ಎದುರಿಗೆ ಮೃಷ್ಟಾನ್ನ ಭೋಜನ ಇಟ್ಟು ಕೈ ಕಾಲು ಕಟ್ಟಿ ಹಾಕಿದಂತೆ ಮಾಡಲಾಗಿದೆ. ಆದ್ದರಿಂದ ಕೆಲವರು ಅತ್ತ ಊಟವೂ ಮಾಡಲಾಗದೇ, ಇತ್ತ ಹಸಿವೆಯನ್ನು ಕೂಡ ತಡೆಯಲಾಗದೇ ಒದ್ದಾಡುತ್ತಿದ್ದಾರೆ. ಕೆಲವರು ಸುಮ್ಮನೆ ಕುಳಿತು ಏನೂ ಮಾತನಾಡಲು ಹೋಗದೇ ಕೇವಲ ಪರಿಮಳವನ್ನು ಮಾತ್ರ ಆಸ್ವಾದಿಸಿ ತೃಪ್ತರಾಗುತ್ತಿದ್ದಾರೆ.
ಈ ಹಂತದಲ್ಲಿಯೇ ರಾಜ್ಯದಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೆ ವೇದಿಕೆ ಸಜ್ಜುಗೊಳಿಸಲು ಚುನಾವಣಾ ಆಯೋಗ ಸಿದ್ಧವಾಗಿದೆ. ಮೀಸಲಾತಿಯನ್ನು ಸಿಎಂ ಮಾಜಿ ಮುಖ್ಯಮಂತ್ರಿಯೊಬ್ಬರ ಜೊತೆ ಕುಳಿತು ಅವರಿಗೆ ಅನುಕೂಲವಾಗುವಂತೆ ಪುನರ್ ರಚಿಸಿದ್ದಾರೆ ಎನ್ನುವ ಆರೋಪ ಯೋಗಿಶ್ವರ್ ಅವರದ್ದು. ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ನಮಗೆ ಇಂತದ್ದನ್ನು ನೋಡಿ ಅಭ್ಯಾಸವಾಗಿರುವುದರಿಂದ ಇಂತಹುದು ಪತ್ರಿಕೆಯಲ್ಲಿ ಬಂದಾಗ ನಾವು ಹೆಡ್ಡಿಂಗ್ ಮಾತ್ರ ನೋಡಿ ಮುಂದಕ್ಕೆ ಹೋಗುತ್ತೇವೆ. ಆದರೆ ನಿಜಕ್ಕೂ ಇದು ಗುರುತರವಾದ ಆರೋಪ. ಒಂದು ರಾಜ್ಯದ ಸಿಎಂ ಬೇರೆ ಪಕ್ಷದ ಮಾಜಿ ಸಿಎಂಗೆ ಅನುಕೂಲವಾಗುವಂತೆ ಮೀಸಲಾತಿ ರಚಿಸುವುದೆಂದರೆ ಅದು ಉಂಡ ಮನೆಗೆ ದ್ರೋಹ ಮಾಡಿದಂತೆ. ಈ ಆರೋಪವನ್ನು ಮಾಡುವ ಮೊದಲು ಸಚಿವರು ನೂರು ಬಾರಿ ಯೋಚಿಸಬೇಕು. ಇದನ್ನು ಕೂಡ ಗುಂಪುಗಾರಿಕೆ ಎನ್ನಲ್ಲ. ಇದು ಮನೆಯ ಮಕ್ಕಳು ತಮ್ಮ ತಂದೆ ಕತ್ತಲಾಗುತ್ತಿದ್ದಂತೆ ಪಕ್ಕದ ಮನೆ ಗೋಡೆ ಹಾರುತ್ತಾರೆ ಎಂದು ಹೇಳಿದಂತೆ ಅಸಹ್ಯ. ರಾಜ್ಯದ ಜನರು ಇವರಿಗೆ ಅಧಿಕಾರ ಕೊಟ್ಟು ನೋಡೋಣ, ರಾಮರಾಜ್ಯ ತರಬಹುದು ಎಂದು ನಿರೀಕ್ಷೆಯಿಂದ ಎರಡನೇ ಬಾರಿ ಬಿಜೆಪಿಗೆ ಅಧಿಕಾರ ಕೊಟ್ಟಿದ್ದಾರೆ. ಮೊದಲ ಬಾರಿ ಕೊಟ್ಟಾಗ ಐದು ವರ್ಷದಲ್ಲಿ ಮೂರು ಮುಖ್ಯಮಂತ್ರಿಗಳು ಅಧಿಕಾರದಲ್ಲಿ ಕುಳಿತುಕೊಂಡಿದ್ದರು ಎನ್ನುವುದಕ್ಕಿಂತ ದಿನ ದೂಡಿದರು ಎನ್ನುವುದೇ ಸೂಕ್ತ. ಈಗ ಮತ್ತೆ ಅಧಿಕಾರ ಅತ್ತು ಕರೆದು ಸಿಕ್ಕಿದೆ. ಹೀಗಿರುವಾಗ ಇದನ್ನು ಜೋಪಾನವಾಗಿ ಇಟ್ಟು ಜನರಿಗೆ ಉತ್ತಮ ಆಡಳಿತ ನೀಡಿ ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಪಂಚಾಯತ್ ಚುನಾವಣೆಯಂತೆ 75 ಸ್ಥಾನಗಳಲ್ಲಿ 67 ಪಡೆದು ಶಹಬ್ಬಾಶ್ ಅನಿಸಿಕೊಳ್ಳುವುದು ಬಿಟ್ಟು ಹೀಗೆ ರಸ್ತೆಬದಿಯಲ್ಲಿ ಬಿದ್ದ ಕೆಸರಿನಲ್ಲಿ ಹೊರಳಾಡುತ್ತಾ ಇದ್ದರೆ ಜನ ನಿಮ್ಮನ್ನು ಬದಿಗೆ ಸರಿಸಿಯಾರು ಎನ್ನುವುದು ಮರೆಯದಿರಿ!
Leave A Reply