ಯಾರ ಸ್ವಾರ್ಥಕ್ಕೆ ಉರ್ವಾ ಮಾರುಕಟ್ಟೆಯ ಹೆಸರಿನಲ್ಲಿ ನಮ್ಮ ಹಣ ಪೋಲಾಗುತ್ತಿದೆ!

ಕಾಂಗ್ರೆಸ್ ಪಕ್ಷ ಕಳೆದ ಬಾರಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರದಲ್ಲಿದ್ದಾಗ ಇಟ್ಟಂತಹ ತಪ್ಪು ಹೆಜ್ಜೆಗಳು ಅಳಿಸಿಹೋಗಬೇಕಾದರೆ ಇವತ್ತು ಸಂಜೆ 4 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ನಡೆಸಲಿರುವ ಸಭೆಯಲ್ಲಿ ಸೂಕ್ತ ನಿರ್ಣಯ ಆಗಬೇಕು. ಇಲ್ಲದೆ ಹೋದರೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಯು.ಟಿ.ಖಾದರ್ ಆವತ್ತು ಉದ್ಘಾಟನೆ ಮಾಡಿ ಕ್ಯಾಮೆರಾಗಳಿಗೆ ಫೋಸ್ ಕೊಟ್ಟು ಹೋದ ನಾಟಕಕ್ಕೆ ಅಂಕದ ಪರದೆ ಬೀಳಬೇಕಾದರೆ ಜಿಲ್ಲಾಧಿಕಾರಿಯವರು ಖಡಕ್ ನಿರ್ಧಾರ ತೆಗೆದುಕೊಳ್ಳಲೇಬೇಕು. ಅಷ್ಟಕ್ಕೂ ನಾನು ಹೇಳುತ್ತಿರುವ ವಿವಾದ ಯಾವುದು? ನೋಡೋಣ ಬನ್ನಿ. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಎನ್ನುವ ಸರಕಾರದ ಅಂಗಸಂಸ್ಥೆಗೆ ಐದು ವರ್ಷಗಳ ಹಿಂದೆ ಅಂದರೆ 22/6/2016 ರಂದು ನಮ್ಮ ಪಾಲಿಕೆ ಮಾಡಿದ ನಿರ್ಧಾರದಂತೆ ಉರ್ವಾ ಮಾರುಕಟ್ಟೆ, ಉರ್ವಾಸ್ಟೋರ್ ಮಾರುಕಟ್ಟೆ ಮತ್ತು ಹಂಪನಕಟ್ಟೆಯ ಹಳೆ ಬಸ್ ನಿಲ್ದಾಣದ ಜಾಗವನ್ನು ನೀಡುವುದು ಎಂದು ಆಯಿತು. ಅಲ್ಲಿ ಮೂಡಾ ಮಾರುಕಟ್ಟೆ ಸಂಕೀರ್ಣವನ್ನು ಕಟ್ಟುವುದು, ಹಳೆ ಬಸ್ ನಿಲ್ದಾಣದ ಜಾಗದಲ್ಲಿ ಪಾರ್ಕಿಂಗ್ ಮತ್ತು ಕಮರ್ಶಿಯಲ್ ದೃಷ್ಟಿಯಿಂದ ಏನು ಮಾಡಬಹುದೋ ಅದನ್ನು ಮಾಡಬಹುದು. ಆ ಜಾಗದಲ್ಲಿ ಮೂಡಾ ತನ್ನದೇ ಅನುದಾನದ ಮೂಲಕ ಕಟ್ಟಡಗಳನ್ನು ಕಟ್ಟಬೇಕು. ಗರಿಷ್ಟ 30 ವರ್ಷಗಳ ನಂತರ ಅದನ್ನು ನಿರ್ವಹಿಸಬೇಕು. ಆ ಸಮಯದಲ್ಲಿ ಬರುವ ಆದಾಯ, ಖರ್ಚನ್ನು ನೋಡಿಕೊಳ್ಳಬೇಕು. 30 ವರ್ಷಗಳ ನಂತರ ಲೀಸ್ ಮುಗಿದ ಕೂಡಲೇ ಅದನ್ನು ಪಾಲಿಕೆಗೆ ಹೇಗೆ ಇದೆಯೋ ಹಾಗೆ ಹಸ್ತಾಂತರಿಸಬೇಕು ಎನ್ನುವ ತೀರ್ಮಾನವಾಗಿತ್ತು. ಆಯಿತು, ಪಾಲಿಕೆಯವರು ಕೊಟ್ಟರು, ಮೂಡಾದವರು ತೆಗೆದುಕೊಂಡರು. ಉರ್ವಾ ಮಾರುಕಟ್ಟೆಯನ್ನು ಮೂಡಾದವರು ಕಟ್ಟಿಯೂ ಬಿಟ್ಟರು. ಅದಕ್ಕೆ ಮೂಡಾಕ್ಕೆ ತಗಲಿದ ಖರ್ಚು 14 ಕೋಟಿ 39 ಲಕ್ಷ ರೂಪಾಯಿಗಳು. ಅದರ ನಂತರ ಬಂದ ವಿಚಿತ್ರ ತಿರುವೇ ಇವತ್ತಿನ ಎಲ್ಲ ರಂಪಾಟಕ್ಕೆ ಕಾರಣ.
28/4/2019 ರಂದು ಇದೇ ಕಾಂಗ್ರೆಸ್ ಆಡಳಿತದಲ್ಲಿದ್ದ ಪಾಲಿಕೆ ಏನು ಮಾಡಿತು ಎಂದರೆ ನಾವು ಲೀಸ್ ಅನ್ನು ಕ್ಯಾನ್ಸಲ್ ಮಾಡುತ್ತೇವೆ ಎಂದು ಮೂಡಾಕ್ಕೆ ಪತ್ರ ಬರೆಯಿತು. ಸರಿ, ಬೇಕಾದರೆ ಹಿಂದಕ್ಕೆ ಪಡೆದುಕೊಳ್ಳಿ, ಆದರೆ ನಾವು ನೀವು ಕೊಟ್ಟ ಉರ್ವಾ ಮಾರುಕಟ್ಟೆಯ ಜಾಗದಲ್ಲಿ ಹೊಸ ಕಟ್ಟಡ ಕಟ್ಟಿದ್ದೇವೆ. ಅದಕ್ಕೆ 14 ಕೋಟಿ 39 ಲಕ್ಷ ರೂಪಾಯಿ ವೆಚ್ಚವಾಗಿದೆ. ಆ ಹಣವನ್ನು ನಮಗೆ ಕೊಡಿ, ನಿಮಗೆ ಕಟ್ಟಡ ಕೊಡಲು ನಂತರ ಯಾವ ಅಭ್ಯಂತರವೂ ಇಲ್ಲ ಎಂದು ಮೂಡಾದ ಕಡೆಯಿಂದ ಸಂದೇಶ ಹೋಯಿತು. ತೆಗೆದುಕೊಳ್ಳಿ ಎಂದ ತಕ್ಷಣ ಖಾಲಿ ಜಾಗ ತೆಗೆದುಕೊಂಡು ಕೊಡಿ ಎಂದ ತಕ್ಷಣ ಕೋಟ್ಯಾಂತರ ವೆಚ್ಚದ ಕಟ್ಟಡವನ್ನು ಹಾಗೆ ಸುಮ್ಮನೆ ಕೊಡಲು ಆಗುತ್ತದೆಯಾ? ಮೂಡಾ ತನ್ನ ನಿಧಿಯಿಂದ 10 ಕೋಟಿ 59 ಲಕ್ಷ ಮತ್ತು 3 ಕೋಟಿ 80 ಲಕ್ಷವನ್ನು ಬ್ಯಾಂಕಿನಿಂದ ಸಾಲ ಪಡೆದುಕೊಂಡಿತ್ತು. ಆದರೆ ಲೀಸ್ ಕ್ಯಾನ್ಸಲ್ ಮಾಡಿದ್ದೇವೆ ಎಂದ ಪಾಲಿಕೆ ಬಳಿಯಲ್ಲಿ ಈ ಕಟ್ಟಡವನ್ನು ಹಣ ಕೊಟ್ಟು ಖರೀದಿಸಲು ಬಿಡಿಗಾಸು ಕೂಡ ಇರಲಿಲ್ಲ. ಆಗ ಇದ್ದದ್ದು ಚೌಚೌ ಸರಕಾರ. ಕುಮಾರಸ್ವಾಮಿ ಸಿಎಂ. ಇಲ್ಲಿ ಉಸ್ತುವಾರಿ ಸಚಿವರಾಗಿದ್ದವರು ಯು.ಟಿ.ಖಾದರ್. ಖಾದರ್ ಉದ್ಘಾಟನೆಯನ್ನು ಏನೋ ಮಾಡಿಬಿಟ್ಟರು. ಆದರೆ ತಮ್ಮದೇ ಸರಕಾರ ಮೇಲೆ ರಾಜ್ಯದಲ್ಲಿ, ಕೆಳಗೆ ಪಾಲಿಕೆಯಲ್ಲಿ ಇದ್ದರೂ ಈ ಸಮಸ್ಯೆಗೆ ಪರಿಹಾರವನ್ನು ತೋರಿಸಲೇ ಇಲ್ಲ. ಅದರ ಪರಿಣಾಮವಾಗಿ ಉರ್ವಾ ಮಾರುಕಟ್ಟೆಯ ನೂತನ ಕಟ್ಟಡ ತ್ರಿಶಂಕು ಸ್ಥಿತಿಗೆ ಬಂದು ತಲುಪಿತು. ಇವರು ಕೊಡಿ ಎನ್ನುತ್ತಾರೆ, ಅವರು ಹಣ ಕೊಟ್ಟು ತೆಗೆದುಕೊಳ್ಳಿ ಎನ್ನುತ್ತಾರೆ. ಇವರ ಬಳಿ ಹಣ ಇಲ್ಲ.
ಆದರೆ ಹೊಸ ಕಟ್ಟಡ ಕಟ್ಟಿಯಾಗಿರುವುದರಿಂದ ವಿದ್ಯುತ್ ಮೀಟರ್ ಅಳವಡಿಸಿರುವುದರಿಂದ ಅದು ನಿಲ್ಲುತ್ತಾ? 17/10/2019 ರ ತನಕ ಹೊಸ ಬಿಲ್ಡಿಂಗಿಗೆ ಅಳವಡಿಸಿರುವ ವಿದ್ಯುತ್ತಿನ ಬಿಲ್ ಮೆಸ್ಕಾಂಗೆ ಎಷ್ಟು ಬಾಕಿ ಇದೆ, ಗೊತ್ತಾ? 2 ಲಕ್ಷದ 12 ಸಾವಿರದ 425 ರೂಪಾಯಿಗಳು. ಇನ್ನು ಒಂದು ರೂಪಾಯಿ ಆದಾಯ ಇಲ್ಲದೇ ಇದ್ದರೂ ಮೂಡಾ ಪ್ರತಿ ತಿಂಗಳು ಮೆಸ್ಕಾಂಗೆ ಕಟ್ಟಬೇಕಾಗಿರುವ ಬಿಲ್ ಎಷ್ಟು ಗೊತ್ತಾ 45 ಸಾವಿರ. ಇದು ಯಾರ ಅಪ್ಪನ ಹಣ? ನಮ್ಮ ತೆರಿಗೆಯ ಹಣದಲ್ಲಿ ಇವರು ಯಾವುದೇ ಬೇಸರ ಇಲ್ಲದೆ ಕಟ್ಟುತ್ತಾ ಇರಬಹುದು. ಆದರೆ ಅದು ತಪ್ಪು ಯಾರದ್ದು? ಯಾರದ್ದೋ ಸ್ವಾರ್ತಕ್ಕೆ ನಮ್ಮ ತೆರಿಗೆಯ ಹಣ ಪೋಲಾಗುತ್ತಿದೆ. ಇನ್ನು ಉರ್ವಾ ಮಾರುಕಟ್ಟೆಯ ಒಳಗೆ ಏನು ನಡೆಯಬಾರದೋ ಅದೆಲ್ಲವೂ ನಡೆಯುತ್ತಿದೆ. ಕುಡುಕರಿಗೆ ಫ್ರೀಯಾಗಿ ಕುಳಿತು ಕುಡಿಯಲು ವರಾಂಡದ ವ್ಯವಸ್ಥೆ, ವೇಶ್ಯಾವಾಟಿಕೆ ಮಾಡುವವರಿಗೆ ಕೋಣೆಗಳು, ಇಸ್ಪೀಟ್ ಆಡುವವರಿಗೆ ಹಾಲ್ ಎಲ್ಲವೂ ಇದೆ. ಅನೈತಿಕ ಕೊಂಪೆಯಾಗಿ ಹೋಗಿರುವ ಉರ್ವಾ ಮಾರುಕಟ್ಟೆಯಿಂದ ಇಲ್ಲಿಯ ತನಕ ಲಕ್ಷಾಂತರ ರೂಪಾಯಿ ಕೇವಲ ವಿದ್ಯುತ್ ಬಿಲ್ ಕಟ್ಟಲ್ಪಟ್ಟಿದೆ.
ಈಗ ಮೂಡಾದ ಚೇರ್ ಮೆನ್ ಸುದ್ದಿಗೋಷ್ಟಿ ಮಾಡಿ 13 ಮಳಿಗೆಗಳ ಒಪ್ಪಂದ ಪತ್ರ ಆಗಿದೆ. ಬಾಕಿಯಿರುವ ಟೆಂಡರ್ ಕರೆದಿದ್ದೇವೆ ಎಂದು ಹೇಳಿದ್ದಾರೆ. ಇದೆಲ್ಲ ಆಗಲು ಕಾರಣ ನಮ್ಮ ಜನಪ್ರತಿನಿಧಿಗಳ ಬಾಲಗೋಂಚಿಗಳ ಸ್ವಾರ್ಥ. ಮಾರುಕಟ್ಟೆಯ ಹಿಡಿತ ತಮ್ಮ ಕೈಯಲ್ಲಿಯೇ ಇರಬೇಕು ಎನ್ನುವ ದುರಾಸೆ. ಮೂಡಾ ಮಾರುಕಟ್ಟೆಯನ್ನು ನಿರ್ವಹಿಸಿದರೆ ತಮ್ಮ ಬೇಳೆ ಅಲ್ಲಿ ಬೇಯಲ್ಲ ಎಂದೇ ಕೆಲವರು ಆಡಿದ ಆಟದಿಂದ ಈಗ ಸಮಸ್ಯೆ ಆಗಿರುವುದು. ಅಂತವರು ಯಾವ ಪಕ್ಷದಲ್ಲಿ ಇದ್ದರೂ ಕೊಳಲು ಊದುತ್ತಾ ಇರಬೇಕೆ ವಿನ: ಒಳ್ಳೆಯದಾಗಲ್ಲ, ಬಿಡಿ!
Leave A Reply