ಕುದ್ರೋಳಿ ಕಸಾಯಿಖಾನೆಯಲ್ಲಿ ಗೋವುಗಳ ಮಾರಣಹೋಮ!
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಬಕ್ರೀದ್ ಹೆಸರಿನಲ್ಲಿ ಕುದ್ರೋಳಿಯ ನಿಷೇಧಿತ ಕಸಾಯಿಖಾನೆಯಲ್ಲಿ ಕಾನೂನು ಬಾಹಿರವಾಗಿ ಗೋವುಗಳ ಮಾರಣ ಹೋಮ ನಡೆದಿದೆ. ನಿಷೇಧಿತ ಕಸಾಯಿಖಾನೆಯ ಬಳಿ ಅನಧಿಕೃತವಾಗಿ ಅನೇಕ ಗೋವುಗಳನ್ನು ಕೂಡಿ ಹಾಕಿರುವ ಕುರಿತು ಸ್ಥಳೀಯರು ನೀಡಿದ ಮಾಹಿತಿಯನ್ವಯ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು, ಅನಿಮಲ್ ವೆಲ್ಫೇರ್ ಬೋರ್ಡ್ ಹಾಗೂ ಪೋಲಿಸ್ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಅಮಾನವೀಯವಾಗಿ ಕೂಡಿ ಹಾಕಲಾದ ಕೆಲವು ಗೋವುಗಳನ್ನು ರಕ್ಷಿಸಲಾಗಿದೆ. ಆದರೆ ಅಷ್ಟರಲ್ಲಾಗಲೇ ಅನೇಕ ಗೋವುಗಳ ಮಾರಣಹೋಮ ನಡೆಸಲಾಗಿದೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಾಗಿದ್ದರೂ ನಿಷೇಧಿತ ಕಸಾಯಿಖಾನೆಯಲ್ಲಿ ರಾಜಾರೋಷವಾಗಿ ಗೋವುಗಳ ಮಾರಣಹೋಮ ನಡೆಯುತ್ತಿದೆ.
ಬಕ್ರೀದ್ ಹಬ್ಬದ ಹೆಸರಿನಲ್ಲಿ ರಾಜ್ಯ ಸರಕಾರ ಜಾರಿಗೊಳಿಸಿರುವ ಕಾನೂನು ಉಲ್ಲಂಘಿಸಿ ಗೋವುಗಳ ಮಾರಣಹೋಮ ನಡೆಸಿದ ಅಪರಾಧಿಗಳು ಸ್ಥಳದಿಂದ ಪರಾರಿಯಾಗಿದ್ದು ಪೋಲಿಸರು ಪ್ರಕರಣ ದಾಖಲಿಸಿದ್ದಾರೆ. ರಾಜ್ಯದಲ್ಲಿ ಜಾನುವಾರು ಹತ್ಯೆ ನಿಷೇಧ ಕಾಯ್ದೆ ಮತ್ತು ಸಂರಕ್ಷಣಾ ಅಧಿನಿಯಮ 2020 ಜಾರಿಯಲ್ಲಿದ್ದರೂ ಕೂಡ ಮಂಗಳೂರು ಮಹಾನಗರ ಪಾಲಿಕೆಯು ಮುಚ್ಚಿರುವ ಕಸಾಯಿಖಾನೆಯ ಸಮೀಪದಲ್ಲೇ ಗೋವುಗಳ ಮಾರಣಹೋಮ ನಡೆದಿರುವುದು ದಕ್ಷಿಣ ಕನ್ನಡ ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ ಮತ್ತು ಪೋಲಿಸ್ ಇಲಾಖೆಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ.
Leave A Reply