ಸ್ವಾಮೀಜಿಗಳು ಒಗ್ಗಟ್ಟಾಗಬೇಕಾದ ವಿಷಯ ಬೇರೆ ಇದೆ, ಸಿಎಂ ಉಳಿಸುವದಲ್ಲ!!
ಒಂದು ಮಠದ ಸ್ವಾಮೀಜಿ ಎಂದರೆ ಏನು? ಎನ್ನುವ ಪ್ರಶ್ನೆಗೆ ಈಗಿನ ರಾಜಕೀಯದಲ್ಲಿ ರಾಜ್ಯದ ಮುಖ್ಯಮಂತ್ರಿಯ ಆಪತ್ತಿಗೆ ಧಾವಿಸುವವರು ಎನ್ನುವ ಅರ್ಥ ಬಂದಿದೆ. ಅಷ್ಟಕ್ಕೆ ಸಕಲ ಸಂಗ ಪರಿತ್ಯಾಗಿಗಳಾಗಿರುವ ಸ್ವಾಮೀಜಿಗಳು ಯಕಶ್ಚಿತ್ ಈ ಹಾಳು ರಾಜಕೀಯದ ಕೆಸರಿನಲ್ಲಿ ಕಾಲು ಹಾಕುತ್ತಾರಲ್ಲ ಎನ್ನುವುದೇ ಆಶ್ಚರ್ಯಕರ ವಿಷಯ. ಹಾಗಂತ ಎಲ್ಲಾ ಸ್ವಾಮೀಜಿಗಳು ಹೀಗೆ ಮಾಡುತ್ತಾರೆ ಎಂದಲ್ಲ, ಎಷ್ಟೋ ಮಠಗಳ ಸ್ವಾಮೀಜಿಯವರು ದೇವರು, ಪೂಜೆ, ವೃತ, ಅನುಷ್ಟಾನ, ಹೋಮ, ಹವನ ಮತ್ತು ತಮ್ಮ ಸಮಾಜದ ಏಳಿಗೆಗಾಗಿ ಚಟುವಟಿಕೆಗಳನ್ನು ಮಾಡುವಲ್ಲಿ ನಿರತರಾಗಿರುತ್ತಾರೆ ಬಿಟ್ಟರೆ ಹೀಗೆ ಬೆಂಗಳೂರಿಗೆ ಹೋಗಿ ಸಿಎಂ ಮನೆಯನ್ನು ಹುಡುಕುವ ಕೆಲಸ ಮಾಡುವುದಿಲ್ಲ. ಅಷ್ಟಕ್ಕೂ ಸ್ವಾಮಿಗಳು ಯಡಿಯೂರಪ್ಪನವರ ಮನೆಗೆ ಧಾವಿಸಿದ್ದು, ಗುಂಪುಗುಂಪಾಗಿ ಹೋಗಿದ್ದು, ಅವರ ಸುತ್ತಲೂ ಕುಳಿತು ನೀವು ಸಿಎಂ ಸ್ಥಾನದಿಂದ ಇಳಿಯಬಾರದು, ಅಗತ್ಯ ಬಿದ್ದರೆ ನಾವು ದೆಹಲಿಗೆ ಹೋಗುತ್ತೇವೆ ಎಂದು ಹೇಳಿದ್ದು, ಹೊರಗೆ ಬಂದು ಮಾಧ್ಯಮದವರೊಂದಿಗೆ ಮಾತನಾಡಿದ್ದು, ಯಡ್ಯೂರಪ್ಪನವರನ್ನು ಇಳಿಸಿದರೆ ಮುಂದೆ ಭಾರತೀಯ ಜನತಾ ಪಾರ್ಟಿಗೆ ಕಷ್ಟವಾಗಲಿದೆ ಎಂದು ಹೇಳಿದ್ದು, ಯಡಿಯೂರಪ್ಪ ನಮ್ಮ ಸಮುದಾಯದ ನಾಯಕ, ಅವರು ಸಿಎಂ ಆಗಿ ಮುಂದುವರೆಯಬೇಕು ಎಂದು ಹೇಳುತ್ತಾ ಅಲ್ಲಿಯೇ ಎದುರಿಗೆ ಕವರ್ ಒಂದನ್ನು ಸ್ವೀಕರಿಸಿ ಹೋದದ್ದು ಎಲ್ಲಾ ಹೈಡ್ರಾಮ ನಡೆದು ಹೋಗಿದೆ. ಹಾಗಾದರೆ ಇದು ಏನನ್ನು ಸೂಚಿಸುತ್ತದೆ. ಅಲ್ಲಿ ಮತ್ತೊಂದು ಕಡೆ ಯಡ್ಡಿ ಮಗ ರಾಘವೇಂದ್ರ ಈ ಸ್ವಾಮಿಗಳ ಲಾಬಿಯಿಂದ ನಮ್ಮ ತಂದೆ ಸಿಎಂ ಆದದ್ದಲ್ಲ ಎಂದು ಹೇಳುತ್ತಾರೆ. ಅದೇ ಈ ಸ್ವಾಮಿಗಳು ದೊಡ್ಡ ದೊಡ್ಡ ಗುಂಪು ಕಟ್ಟಿಕೊಂಡು ಸಿಎಂ ಮನೆಗೆ ಬರುತ್ತಾರೆ. ಹಾಗಾದರೆ ಇವರು ಆಯಾ ಜಾತಿಗಳಲ್ಲಿ ಇರುವ ಬಿಜೆಪಿ ಮತದಾರರ ಸ್ವಾಮೀಗಳಾ ಎನ್ನುವ ಪ್ರಶ್ನೆಯನ್ನು ಆಯಾ ಸಮಾಜದ ಭಕ್ತರು ಸ್ವಾಮಿಗಳಿಗೆ ಕೇಳಬೇಕು. ಯಾಕೆಂದರೆ ಒಂದು ಸಮುದಾಯ ಎಂದ ಮೇಲೆ ಅದರಲ್ಲಿ ಬಿಜೆಪಿ ಮತದಾರರು, ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾ ದಳದ ಮತದಾರರು ಮತ್ತು ಇದೆಲ್ಲ ಬಿಟ್ಟು ಬೇರೆ ಪಕ್ಷದ ಅಥವಾ ನ್ಯೂಟ್ರಲ್ ಮತದಾರರು ಕೂಡ ಇರಬಹುದು. ಒಂದು ಸಮುದಾಯದ ಸ್ವಾಮೀಜಿಯವರು ಎಂದ ಕೂಡಲೇ ಅವರು ಆ ಸಮುದಾಯದ ಎಲ್ಲರಿಗೂ ಸ್ವಾಮೀಜಿಗಳು. ಇವರು ಹೀಗೆ ಯಡ್ಡಿಯನ್ನು ಉಳಿಸಲು ಹೋದರೆ ಅವರದ್ದೇ ಸಮುದಾಯದ ಉಳಿದ ಪಕ್ಷಗಳ ಮತದಾರರಿಗೆ ಬೇಸರವಾಗಲ್ವ ಎನ್ನುವ ಪ್ರಶ್ನೆ ಮೂಡುತ್ತದೆ. ಆದರೆ ಇಂತಹ ಪ್ರಶ್ನೆ ಬಂದಾಗ ಅಂತಹ ಮಠದ ಸ್ವಾಮೀಜಿಗಳು ಹೇಳುವ ಉತ್ತರ ಒಂದೇ. ಆಗಲ್ಲ. ಯಾಕೆಂದರೆ ನಮಗೆ ನಮ್ಮ ಸಮುದಾಯದ ವ್ಯಕ್ತಿ ರಾಜ್ಯದ ಉನ್ನತ ಸ್ಥಾನವಾದ ಮುಖ್ಯಮಂತ್ರಿ ಹುದ್ದೆಯಲ್ಲಿರುವುದು ಮುಖ್ಯವೇ ಹೊರತು, ಅವರು ಯಾವ ಪಕ್ಷದವರು ಎನ್ನುವುದು ಮುಖ್ಯವಲ್ಲ ಎನ್ನುವ ಮಾತನ್ನು ಹೇಳುತ್ತಾರೆ. ಹಾಗಾದರೆ ಇಲ್ಲಿ ಯಾವುದೇ ಸ್ವಾಮೀಜಿಯವರು ನೋಡುವುದು ಮುಖ್ಯಮಂತ್ರಿ ಸ್ಥಾನವನ್ನು ಹೊರತು ವ್ಯಕ್ತಿಯನ್ನಲ್ಲ ಎಂದು ಸ್ಪಷ್ಟವಾಗುತ್ತದೆ. ನಾಳೆ ಇದೇ ಸ್ಥಾನದಲ್ಲಿ ಬೇರೆ ಪಕ್ಷದ ಲಿಂಗಾಯಿತ ಅಥವಾ ಒಕ್ಕಲಿಗ ವ್ಯಕ್ತಿ ಮುಖ್ಯಮಂತ್ರಿಯಾಗಿ ಕುಳಿತಿದ್ದರೂ ಇದೇ ಸ್ವಾಮೀಜಿಗಳು ಬೆಂಗಳೂರಿಗೆ ಹೋಗುತ್ತಾರೆ. ಹೀಗೆ ಸುತ್ತಲೂ ಕುಳಿತುಕೊಳ್ಳುತ್ತಾರೆ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕೇಂದ್ರದ ಮುಖಂಡರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಾರೆ. ಇವರು ಯಾಕೆ ಹೀಗೆ ಮಾಡುತ್ತಾರೆ ಎಂದು ನಿಮಗೆ ಅನಿಸುತ್ತದೆ? ಸಂಶಯವೇ ಬೇಡಾ, ಮುಖ್ಯಮಂತ್ರಿಯಾದವ ಇವರ ಮಠಕ್ಕೆ ಆಗಾಗ ಇಂತಿಷ್ಟು ಕೋಟಿ ರೂಪಾಯಿಗಳನ್ನು ಯಾವುದ್ಯಾವುದೋ ನೆಪ ಹೇಳಿ ಕೊಟ್ಟಿರುತ್ತಾರೆ. ಆ ಋಣ ಈ ಸ್ವಾಮಿಗಳ ಮೇಲಿರುತ್ತದೆ. ಅರಿಷಡ್ವರ್ಗಗಳನ್ನು ಮೆಟ್ಟಿ ನಿಂತು ಸ್ವಾಮೀಜಿಯಾದವರು ಯಕಶ್ಚಿತ್ ಯಾವುದೋ ಭ್ರಷ್ಟರ ಹಣಕ್ಕೆ ಕಾಯುವುದು ಇದೆಯಲ್ಲ, ಅದಕ್ಕಿಂತ ನಾಚಿಕೆ ವಿಷಯ ಬೇರೆ ಇದೆಯಾ? ಭಕ್ತರಿಂದ ಪಾದಪೂಜೆ ಮಾಡಿಸಿಕೊಂಡು ಒಂತರ ದೇವರ ಪ್ರತಿರೂಪವೇ ಆಗಿದ್ದಾರೆ ಎಂದು ಬೆಂಬಲಿಗರಿಂದ ಹೊಗಳಿಸಿಕೊಂಡ ಸ್ವಾಮೀಜಿಗಳು ರಾಜಕಾರಣದ ಸುತ್ತ ತಿರುಗುವುದೇ ತಪ್ಪು. ಹಾಗಾದರೆ ಇವರು ಯಾವುದಕ್ಕೆ ಆಡಳಿತ ಪಕ್ಷದವರ ಮೇಲೆ ಒತ್ತಡ ಹಾಕಬೇಕು.?
ನಮ್ಮ ರಾಜ್ಯದಲ್ಲಿ ಗೋಹತ್ಯಾ ನಿಷೇಧ ಜಾರಿಯಲ್ಲಿದ್ದರೂ ಇನ್ನು ಕೂಡ ಅಕ್ರಮ ಕಸಾಯಿಖಾನೆಗಳು ಚಾಲ್ತಿಯಲ್ಲಿವೆ. ಅದರ ವಿರುದ್ಧ ಸ್ವಾಮಿಗಳು ಒಟ್ಟಾಗಬಹುದು. ಇನ್ನೊಂದೆಡೆ ಲವ್ ಜಿಹಾದ್, ಮತಾಂತರದಂತಹ ಅನಿಷ್ಟಗಳು ನಮ್ಮ ರಾಜ್ಯದಲ್ಲಿ ನಡೆಯುತ್ತಲೇ ಇವೆ. ಅದರ ವಿರುದ್ಧ ಸ್ವಾಮಿಗಳು ಒಟ್ಟಾಗಬಹುದು. ಶಿಕ್ಷಣ, ಉದ್ಯೋಗ, ವೈದ್ಯಕೀಯ ವಿಷಯದಲ್ಲಿ ಒಟ್ಟಾಗಬಹುದು. ದೇಶದ, ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಒಟ್ಟಾದರೆ ಅದು ನಿಜಕ್ಕೂ ಸಂತೋಷದ ವಿಷಯ. ಆದರೆ ಒಬ್ಬ ಮುಖ್ಯಮಂತ್ರಿಯನ್ನು ಅಧಿಕಾರದಲ್ಲಿ ಉಳಿಸಲು ಒಟ್ಟಾಗುವುದಿದೆಯಲ್ಲ, ಇಂತವರನ್ನು ಗೋಮಾತೆಯಾದರೂ ಕ್ಷಮಿಸುತ್ತಾಳಾ, ನೋಡಬೇಕು. ಒಂದು ಪಕ್ಷ ಒಬ್ಬ ವ್ಯಕ್ತಿಯಿಂದ ಬೆಳೆಯುವುದಲ್ಲ, ಯಡ್ಡಿ ಪಕ್ಷದ ಬೆಳವಣಿಗೆಯಲ್ಲಿ ಪಾತ್ರ ವಹಿಸಿರಬಹುದು. ಅದರಿಂದ ಅವರಿಗೂ ಲಾಭವಾಗಿದೆ. ಅವರು ಕೂಡ ಬೆಳೆದಿದ್ದಾರೆ. ಈಗ ಅವರಿಗೂ ವಯಸ್ಸಾಗಿದೆ. ಪಕ್ಷಕ್ಕೂ ಹೊಸ ಚಿಂತನೆಯ, ಹೊಸ ವೇಗದ, ಹೊಸ ಹುರುಪಿನ ಮುಖ್ಯಮಂತ್ರಿ ಬೇಕಾಗಿದೆ. ಅದಕ್ಕೆ ಚೆಂದ ರೀತಿಯಲ್ಲಿ ಅವಕಾಶ ಮಾಡಿಕೊಡಬೇಕಾಗಿರುವುದು ಯಡ್ಡಿ. ಅವರು ಇಡುವ ಒಂದೊಂದು ಹೆಜ್ಜೆಯನ್ನು ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಒಮ್ಮೆ ಜನರಿಗೆ ಇಂದೆಂತಹ ಅಸಹ್ಯ ಎಂದು ಅನಿಸಿತೋ ಕೇಂದ್ರದಲ್ಲಿ ಪರ್ಯಾಯ ಇಲ್ಲ ಎನ್ನುವ ಕಾರಣಕ್ಕೆ ಬಿಜೆಪಿಗೆ ಮತ ಕೊಟ್ಟ ಹಾಗೆ ಇಲ್ಲಿ ಪರಿಸ್ಥಿತಿ ಹಾಗಿಲ್ಲ. ಇಲ್ಲಿ ಮತದಾರನಿಗೆ ಆಯ್ಕೆಗಳಿವೆ. ಇದು ಬಿಜೆಪಿ ಮನಸ್ಸಿನಲ್ಲಿರಲಿ. ಅಷ್ಟೇ!!
Leave A Reply