ತನ್ನ ಹಾಗೂ ಶೋಭಾ ಆಸ್ತಿ ತುಲನೆಯಾಗಲಿ-ರಮಾನಾಥ ರೈ
ಕಲ್ಲಡ್ಕದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ್ರ್ಯ ಮುಖಂಡ ಡಾ|ಪ್ರಭಾಕರ್ ಭಟ್ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಎರಡು ಶಾಲೆಗಳಿಗೆ ಕೊಲ್ಲೂರು ಮುಕಾಂಬಿಕಾ ದೇವಸ್ಥಾನದಿಂದ ಮಧ್ಯಾಹ್ನ ಬಿಸಿಯೂಟಕ್ಕೆ ಬರುತ್ತಿದ್ದ ಅನುದಾನವನ್ನು ರಾಜ್ಯ ಸರಕಾರ ಸ್ಥಗಿತಗೊಳಿಸಿದ ನಂತರ ಕರಾವಳಿಯಲ್ಲಿ ಈ ವಿಷಯದ ಪರವಾಗಿ ವಾದ-ಪ್ರತಿವಾದಗಳು ಕೇಳಿಬರುತ್ತಿವೆ.
ಈ ಬಗ್ಗೆ ಭಾರತೀಯ ಜನತಾ ಪಾರ್ಟಿಯ ಕಡೆಯಿಂದ ದೊಡ್ಡ ಸಣ್ಣ ಎಲ್ಲಾ ನಾಯಕರು ಹೇಳಿಕೆ ಕೊಡುತ್ತಿದ್ದಾರೆ. ಬಿಜೆಪಿ ನಾಯಕರು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈಯವರನ್ನು ಟೀಕಿಸಿ ಹೇಳಿಕೆ ನೀಡುತ್ತಿದ್ದರೆ, ಅತ್ತ ಕಾಂಗ್ರೆಸ್ ಕಡೆಯಿಂದ ರಾಜ್ಯ ಸರಕಾರದ ನಡೆಯನ್ನು ಸಮರ್ಥಿಸುವ ಹೇಳಿಕೆಯನ್ನು ವಿರಳವಾಗಿ ಕೇಳಿಬರುತ್ತಿವೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಈ ಕ್ರಮವನ್ನು ಸಾಕ್ಷ್ಯಾಧಾರಗಳೊಂದಿಗೆ ಸಮರ್ಥಿಸಬೇಕಿದ್ದ ಕಾಂಗ್ರೆಸ್ ನಾಯಕರು ಮೌನಕ್ಕೆ ಶರಣಾಗಿದ್ದಾರೆ. ನಾವು ಇದನ್ನು ಪ್ರತಿಪಾದಿಸಿ ಹೇಳಿಕೆ ಕೊಟ್ಟರೆ ಹಿಂದೂಗಳ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಹೆದರಿರುವ ಕಾಂಗ್ರೆಸ್ ಮುಖಂಡರು ಮಾಧ್ಯಮಗಳಿಂದ ನುಣುಚಿಕೊಳ್ಳುತ್ತಿದ್ದಾರೆ. ಇದೇ ಕಾಲಕ್ಕೆ ರಾಜ್ಯ ಸರಕಾರದ ವಿರುದ್ಧ ಪ್ರಬಲ ಅಸ್ತ್ರ ಸಿಕ್ಕಂತೆ ವರ್ತಿಸಿರುವ ಬಿಜೆಪಿ ನಾಯಕರು ಈ ವಿಷಯವನ್ನು ಜೀವಂತವಾಗಿಡಲು ಶ್ರಮಿಸುತ್ತಿದ್ದಾರೆ. ಇದರ ಒಂದು ಅಂಗವಾಗಿ ಉಡುಪಿ ಸಂಸದೆ ಶೋಭಾ ಕರಂದ್ಲಾಜೆಯವರು ಮಂಗಳೂರಿನ ಮಣ್ಣಗುಡ್ಡೆಯಲ್ಲಿ ಮನೆಮನೆ ಭೇಟಿಕೊಟ್ಟು ಭಿಕ್ಷಾಟನೆ ಮಾಡಿ ಅಕ್ಕಿಯನ್ನು ಸಂಗ್ರಹಿಸಿದ್ದಾರೆ. ಅವರೊಂದಿಗೆ ಉಡುಪಿ ಜಿಲ್ಲಾ ಬಿಜೆಪಿ ಮುಖಂಡರು, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಮುಖಂಡರು ಕೂಡ ಇದ್ದರು.
ನಂತರ ಸ್ಥಳೀಯ ಮುಖಂಡರ ನಿವಾಸದಲ್ಲಿ ಸುದ್ದಿಗೋಷ್ಟಿ ಮಾಡಿದ ಶೋಭಾ ಕರಂದ್ಲಾಜೆ, ರಾಜ್ಯ ಸರಕಾರ, ರಮಾನಾಥ ರೈ, ಸಿದ್ಧರಾಮಯ್ಯನವರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೋಭಾ ಅವರ ಮುಷ್ಟಿ ಅಕ್ಕಿ- ಭವತೀ ಭಿಕ್ಷಾಂ ದೇಹಿ ಅಭಿಯಾನಕ್ಕೆ ವ್ಯಾಪಕ ಪ್ರಚಾರ ಸಿಕ್ಕಿದ ನಂತರ ಮಧ್ಯಮದವರು ಈ ವಿಷಯವನ್ನು ರಮಾನಾಥ ರೈ ಅವರ ಗಮನಕ್ಕೆ ತಂದು ಪ್ರತಿಕ್ರಿಯೆ ಕೇಳಿದಾಗ ಕೆಂಡಾಮಂಡಲರಾದ ರೈಗಳು ” ಇಲ್ಲಿ ಭಿಕ್ಷಾಟನೆಯ ನಾಟಕ ಮಾಡುವುದು ಬಿಟ್ಟು ಮಡಿಕೇರಿಯಲ್ಲಿ ಶೋಭಾ ಕರಂದ್ಲಾಜೆ ಮಾಡಿಟ್ಟಿರುವ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಆಸ್ತಿಯಲ್ಲಿ ಒಂದಿಷ್ಟನ್ನು ದಾನ ಮಾಡಿದರೂ ಆ ಶಾಲೆಯ ಮಕ್ಕಳಿಗೆ ಎಷ್ಟೋ ವರ್ಷಗಳ ವರೆಗೆ ಊಟ ಆರಾಮವಾಗಿ ಸಿಗುತ್ತಿತ್ತು ಎಂದು ಹೇಳಿದ್ದಾರೆ. ತಾನು ಮಾಡಿರುವ ಆಸ್ತಿ, ತನ್ನ ತಂದೆಯಿಂದ ಬಂದ ಆಸ್ತಿ ಮತ್ತು ಶೋಭಾ ಕರಂದ್ಲಾಜೆಯವರು ಮಾಡಿರುವ ಆಸ್ತಿ ಮತ್ತು ಶೋಭಾ ತಂದೆಯವರಲ್ಲಿ ಇದ್ದ ಆಸ್ತಿ ಎಲ್ಲಾ ತುಲನೆಯಾಗಲಿ ಎಂದ ರೈಗಳು ತಾವು ರಾಜಕೀಯಕ್ಕೆ ಬಂದ ಬಳಿಕ ಹಣವನ್ನು ಕಳೆದುಕೊಂಡಿದ್ದೇನೆ, ಆದರೆ ಏನೂ ಇಲ್ಲದೆ ರಾಜಕೀಯಕ್ಕೆ ಬಂದ ಶೋಭಾ ಎಷ್ಟು ಕೋಟಿ ಬೆಲೆ ಬಾಳುವ ಆಸ್ತಿ ಮಾಡಿದ್ದಾರೆ ಎಂದು ತನಿಖೆಯಾಗಲಿ ಎಂದಿದ್ದಾರೆ. ಆ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.
Leave A Reply