ಸಡನ್ನಾಗಿ ವೀಕೆಂಡ್ ಲಾಕ್ ಡೌನ್ ಎಂದರೆ ಹೇಗೆ ಸ್ವಾಮಿ?

ವೀಕೆಂಡ್ ಲಾಕ್ ಡೌನ್ ಎಂದು ರಾಜ್ಯ ಸರಕಾರದ ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಘೋಷಿಸಿ ಅದು ಸುತ್ತೋಲೆಯಾಗಿ ಮಂಗಳೂರು ಜಿಲ್ಲಾಧಿಕಾರಿ ಕಚೇರಿಯನ್ನು ತಲುಪಿದಾಗ ಸೂರ್ಯ ಶುಕ್ರವಾರದ ಡ್ಯೂಟಿ ಮುಗಿಸುವ ಕೊನೆಯ ಶಿಫ್ಟ್ ನಲ್ಲಿದ್ದ. ಶನಿವಾರ ಪರೀಕ್ಷೆ ಬರೆಯಲು ಸಿದ್ಧರಾಗಿರುವ ವಿವಿಧ ಖಾಸಗಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಗಲಿಬಿಲಿಗೆ ಒಳಗಾದರು. ಯಾರಿಗೆ ಕಾಲ್ ಮಾಡಿದರೂ ಸರಿಯಾದ ಉತ್ತರವಿಲ್ಲ. ಅವರ ಅಮೂಲ್ಯ ಸಮಯ ಓದುವಿಕೆಗಿಂತ ಜಾಸ್ತಿ ಪರೀಕ್ಷೆ ಇದೆಯಾ ಇಲ್ಲವಾ ಎನ್ನುವುದರಲ್ಲಿ ಕಳೆದುಹೋಯಿತು. ಅದು ವಿದ್ಯಾರ್ಥಿಗಳ ಸಮಸ್ಯೆಯಾದರೆ ಸೋಮವಾರದಿಂದ ಶ್ರಾವಣ ಆರಂಭ. ಅನೇಕ ಶುಭ ಸಮಾರಂಭಗಳು ಆರಂಭವಾಗುವ ಸಮಯ. ಆವತ್ತೆ ಅನೇಕ ಮದುವೆ ಕಾರ್ಯಕ್ರಮಗಳು ಇವೆ. ಇನ್ನು ಮದುವೆ ಆಗಬೇಕಾದರೆ ಅದಕ್ಕೆ ಕ್ಯಾಟರಿಂಗ್ ಬೇಕು. ನೂರೋ, ಇನ್ನುರೋ ಜನರಿಗೆ ಊಟ, ತಿಂಡಿ ಎಂದು ಬಡಿಸಬೇಕಾದರೂ ಯಾವುದಾದರೂ ಮ್ಯಾಜಿಕ್ ದಂಡದಿಂದ ಮಾಡಲು ಸಾಧ್ಯವಿದೆಯಾ? ಅದಕ್ಕೆ ತರಕಾರಿ ಅದು ಇದು ಬೇಕು. ಇನ್ನು ಅದೆಲ್ಲ ಇಲ್ಲಿಯೇ ಬೆಳೆಯಲ್ಲ. ಅದು ಬೇರೆ ಜಿಲ್ಲೆಗಳಿಂದ ಬರಬೇಕು.
ಈ ಲಾಕ್ ಡೌನ್ ಅಂತ ಸಡನ್ನಾಗಿ ಘೋಷಣೆಯಾದರೆ ಬರಬೇಕಾದ ತರಕಾರಿ ಬರದೇ ಹೋದರೆ, ಕ್ಯಾಟರಿಂಗ್ ನವರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಇದನ್ನೆಲ್ಲ ನೋಡದೇ ವಿಕೇಂಡ್ ಲಾಕ್ ಡೌನ್ ಎಂದರೆ ಏನು ಕಥೆ? ಇನ್ನು ಹೆಚ್ಚಿನ ಕಡೆ ಕೂಲಿಕಾರ್ಮಿಕರಿಗೆ ಶನಿವಾರ ಅಂದರೆ ಕೂಲಿ ಸಿಗುವ ದಿನ. ಅವರು ಆವತ್ತು ಕೂಲಿ ತೆಗೆದುಕೊಂಡೆ ವಾರದ ದಿನಸಿ, ತರಕಾರಿ, ಮೀನು-ಮಾಂಸ ತೆಗೆದುಕೊಂಡು ಹೋಗಬೇಕು. ಈಗ ಅವರನ್ನು ಹೊರಗೆ ಬರಬೇಡಿ, ಲಾಕ್ ಡೌನ್ ಇದೆ ಎಂದು ಹೇಳಿದರೆ ಅವರಿಗೆ ಕೂಲಿ ಕೊಡುವುದು ಯಾರು? ವಾರದ ಜಿನಸಿ ಅವರು ತೆಗೆದುಕೊಂಡು ಹೋಗುವುದು ಎಲ್ಲಿಂದ? ಇದೆಲ್ಲವನ್ನು ನೋಡಬೇಕಾದದ್ದು ಸರಕಾರ ಅಲ್ಲವೇ? ಎಲ್ಲರ ಜೀವನ ಪರಿಸ್ಥಿತಿಯೂ ಒಂದೇ ರೀತಿ ಇರಲ್ಲ. ಅನುಕೂಲಸ್ಥರಿಗೆ ಸರಕಾರ ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ತನಕ ಹೊರಗೆ ಬಂದು ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಿ ಎಂದು ಹೇಳಿರಬಹುದು. ಆದರೆ ಉದ್ಯೋಗಕ್ಕೆ ಹೋಗುವವರಿಗೆ ನಾಳೆ ಬಸ್ ಇಲ್ಲ, ಆಟೋ ಇಲ್ಲ ಎಂದು ಗೊತ್ತಾಗುವಾಗ ರಾತ್ರಿಯಾಗಿರುತ್ತದೆ. ಅವರು ತಮ್ಮದಿನಚರಿಯನ್ನು ಹೇಗೆ ಪ್ಲ್ಯಾನ್ ಮಾಡಿಕೊಳ್ಳುವುದು.
ಇನ್ನು ಇಲ್ಲಿ ಅಂದರೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಮೂರು ಅಂಕೆ ಬಿಟ್ಟು ಕೊರೊನಾ ಸೋಂಕಿತರ ಸಂಖ್ಯೆ ಕೆಳಗೆ ಇಳಿಯುತ್ತಿಲ್ಲ. ಅದಕ್ಕೆ ಪರೋಕ್ಷವಾಗಿ ಪಕ್ಷದ ಕಾಸರಗೋಡು ಜಿಲ್ಲೆ ಕೂಡ ಕಾರಣವಾಗಿದೆ.
ಕೇರಳ ರಾಜ್ಯದಲ್ಲಿ ಸರಾಸರಿ ನಿತ್ಯ 20 ಸಾವಿರ ಕೊರೊನಾ ಸೊಂಕಿತರ ಪಟ್ಟಿ ಬೆಳೆಯುತ್ತಿದ್ದರೂ ಅಲ್ಲಿ ಅವರು ಏನೂ ಟೆನ್ಷನ್ ಇಲ್ಲದೆ ವಿಕೇಂಡ್ ಲಾಕ್ ಡೌನ್ ಎರಡು ದಿನಗಳಿಂದ ಒಂದು ದಿನಕ್ಕೆ ಇಳಿಸಿದ್ದಾರೆ. ಅಲ್ಲಿ ಆದಿತ್ಯವಾರ ಮಾತ್ರ ಲಾಕ್ ಡೌನ್. ಇನ್ನು ಅಲ್ಲಿನ ಶಾಸಕರೊಬ್ಬರು ಅಸೆಂಬ್ಲಿಯಲ್ಲಿ ಮಾತನಾಡುತ್ತಾ ಕೇರಳ-ಕರ್ನಾಟಕದ ಗಡಿಯಲ್ಲಿ ಸೂಕ್ತ ತಪಾಸಣೆ ನಡೆಸಿ ಬಿಡುತ್ತಿರುವುದರ ಬಗ್ಗೆ ಆಕ್ಷೇಪ ಎತ್ತಿದ್ದಾರೆ. 72 ಗಂಟೆಯ ಒಳಗಿನ ನೆಗೆಟಿವ್ ರಿಪೋರ್ಟ್ ಇಲ್ಲದೆ ಇದ್ದರೆ ಮಂಗಳೂರಿನೊಳಗೆ ಕಾಲಿಡಬೇಡಿ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ನೀಡಿರುವ ಹೇಳಿಕೆ ಅಲ್ಲಿನ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದೆ. ಇದನ್ನು ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಹೌದು, ರಾಷ್ಟ್ರದ ನಿಯಮಗಳನ್ನು ಉಲ್ಲಂಘಿಸಿ ಗಡಿ ಬಂದ್ ಮಾಡುವುದು ತಪ್ಪು ಎಂದು ಇದಕ್ಕೆ ಬೇರೆಯದ್ದೇ ಅರ್ಥ ನೀಡಿದ್ದಾರೆ. ಅವರಿಗೆ ಅನುಕೂಲವಾಗಲಿ ಎಂದು ನಾವು ನಮ್ಮ ಸುರಕ್ಷತೆಯನ್ನು ಪಣಕ್ಕೆ ಒಡ್ಡಲು ಆಗುತ್ತಾ? ಇಷ್ಟು ದಿನ ಲೂಸ್ ಬಿಟ್ಟ ಕಾರಣ ಅಲ್ಲಿನವರ ಕರ್ಮ ನಾವು ಹೊರಬೇಕಾಗಿದೆ. ಕೊರೊನಾ ಸೊಂಕು ತಗಲುವುದು ಒಬ್ಬ ಮನುಷ್ಯನ ತೀವ್ರ ನಿರ್ಲಕ್ಷ್ಯದಿಂದ. ಸರಿಯಾದ ಮಾಸ್ಕ್ ಹಾಕದೇ, ಸಾಮಾಜಿಕ ಅಂತರ ಕಾಪಾಡದೆ, ಸ್ಯಾನಿಟೈಸ್ ಮಾಡದೇ, ಗುಂಪಿನಲ್ಲಿ ಬೇಕಾಬಿಟ್ಟಿ ತಿರುಗಿ ಮಾಡಿದರೆ ಕೊರೊನಾ ಬಾರದಿರುವವರಿಗೂ ಬರುತ್ತೆ. ಇದು ನಮಗೆ ಗೊತ್ತಿರಬೇಕು. ಕೇರಳದಲ್ಲಿ ಇದರ ಉಲ್ಲಂಘನೆ ಆಗುತ್ತಿರುವವರಿಂದ ಅಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ತೀವ್ರವಾಗಿ ಏರುತ್ತಿದೆ. ಇಲ್ಲಿ ನಮ್ಮಲ್ಲಿ ಡಬ್ಬಲ್ ಡಿಜಿಟ್ ನಿಂದ ತ್ರಿಬಲ್ ಹೋಗಲು ನಮ್ಮ ನಿರ್ಲಕ್ಷ್ಯವೂ ಇದೆ. ಹೀಗೆ ಬಿಟ್ಟರೆ ಇದು ನಾಲ್ಕು ಅಂಕಿಯನ್ನು ಮುಟ್ಟಲು ಹದಿನೈದು ದಿನಗಳು ಸಾಕು. ಒಟ್ಟಿನಲ್ಲಿ ನಾವು ಕೊರೊನಾದೊಂದಿಗೆ ಜೀವಿಸಬೇಕು ಎನ್ನುವ ಕಾರಣಕ್ಕೆ ಆರ್ಭಟಿಸುತ್ತಿರುವ ಕಣ್ಣಿಗೆ ಕಾಣದ ಕ್ರಿಮಿಯೊಂದಿಗೆ ಚಕ್ಕಂದ ಆಡಲು ಆಗುವುದಿಲ್ಲ. ಅಗಸ್ಟ್ ಅಂತ್ಯಕ್ಕೆ ಕೊರೊನಾ ಮೂರನೇ ಅಲೆ ಬರುತ್ತೆ ಎಂದು ಹೇಳಲಾಗುತ್ತಿರುವುದರ ನಡುವೆ ಶಾಲಾ-ಕಾಲೇಜುಗಳು ಶುರು ಎಂದು ಕೂಡ ಘೋಷಣೆ ಆಗುತ್ತಿರುವಂತೆ ಕಾಣುತ್ತಿದೆ. ಇದು ಆರಂಭಿಕ ಹೆಜ್ಜೆ ಮಾತ್ರ. ನಾವು ವಿಕೇಂಡ್ ಲಾಕ್ ಡೌನ್ ನಿಂದ ನಿಧಾನವಾಗಿ ವಾರವೀಡಿ ಲಾಕ್ ಡೌನ್ ಕಡೆಗೆ ಹೋಗಲು ತುಂಬಾ ಸಮಯ ಬೇಕಾಗಿಲ್ಲ. ಪರಿಸ್ಥಿತಿ ನಮ್ಮ ಕೈಯಲ್ಲಿ ಇದೆ. ಉಳಿದದ್ದು ನಮಗೆ ಬಿಟ್ಟಿದ್ದು!
Leave A Reply