ಟಿಪ್ಪು ಸ್ವಾತಂತ್ರ್ಯಕ್ಕಾಗಿ ಹೋರಾಡಿಲ್ಲ, ಸಾವರ್ಕರ್ ಹೋರಾಡಿದ್ದಕ್ಕೆ ಅನುಮಾನಗಳಿಲ್ಲ!!

ಪುತ್ತೂರಿನ ಕಬಕದಲ್ಲಿ ಮೊನ್ನೆ ಸ್ವಾತಂತ್ರ್ಯ ದಿನದಂದು ಸಣ್ಣ ಮಟ್ಟಿಗಿನ ಘರ್ಷಣೆ ನಡೆದಿದೆ. ಅಲ್ಲಿನ ಭಾರತೀಯ ಜನತಾ ಪಾರ್ಟಿ ನೇತೃತ್ವದ ಸದಸ್ಯರ ಆಡಳಿತ ಇರುವ ಕಬಕ ಗ್ರಾಮ ಪಂಚಾಯತ್ ನಲ್ಲಿ ಸ್ವತಂತ್ರ್ಯ ರಥ ಎನ್ನುವ ಟ್ಯಾಬ್ಲೋ ಮಾಡಿ ಅದನ್ನು ಗ್ರಾಮದ ಎಲ್ಲಾ ಕಡೆ ಓಡಿಸುವ ತಯಾರಿ ನಡೆಸಲಾಗುತ್ತಿತ್ತು. ಟ್ಯಾಬ್ಲೋವನ್ನು ದಾರಿಯಲ್ಲಿಯೇ ತಡೆದು ನಿಲ್ಲಿಸಿದ ಸೋಶಿಯಲ್ ಡೆಮಾಕ್ರೆಟಿಕ್ ಪ್ರಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ಟ್ಯಾಬ್ಲೋದಲ್ಲಿದ್ದ ಒಂದು ಫೋಟೋ ತೆಗೆಸಲು ಒತ್ತಾಯ ಮಾಡಿದರು. ಟ್ಯಾಬ್ಲೋದಲ್ಲಿ ಬೇರೆ ಬೇರೆ ಸ್ವಾತಂತ್ರ್ಯ ಹೋರಾಟಗಾರರ ಮಧ್ಯದಲ್ಲಿ ಸಾವರ್ಕರ್ ಫೋಟೋ ಕೂಡ ಹಾಕಲಾಗಿತ್ತು. ಅದನ್ನು ತೆಗೆಯಬೇಕು ಮತ್ತು ಅಲ್ಲಿ ಟಿಪ್ಪು ಫೋಟೋ ಹಾಕಬೇಕು ಎನ್ನುವುದು ಎಸ್ ಡಿಪಿಐ ಬೆಂಬಲಿಗರ ಒತ್ತಾಯ. ಸಹಜವಾಗಿ ಅದನ್ನು ಕೇಸರಿ ಯುವಕರು ವಿರೋಧಿಸಿದ್ದಾರೆ. ಮಾತಿಗೆ ಮಾತು ಬೆಳೆದಿದೆ. ಪೊಲೀಸರ ಮಧ್ಯ ಪ್ರವೇಶ ಆಗಿದೆ. ಎಸ್ ಡಿಪಿಐ ಯುವಕರನ್ನು ಬಂಧಿಸಲಾಗಿದೆ. ಅಲ್ಲಿಗೆ ಒಂದು ಗಲಾಟೆಯ ಅಧ್ಯಾಯದ ಪುಟ ಮುಗಿದಿದೆ. ನಾನೀಗ ಹೇಳುವುದೇನೆಂದರೆ ಎಸ್ ಡಿಪಿಐ ಈ ಟಿಪ್ಪು ವಿಷಯವನ್ನು ಸರಿಯಾಗಿ ಅಧ್ಯಯನ ಮಾಡದೇ ಕೇವಲ ಮುಸಲ್ಮಾನ ರಾಜ ಎನ್ನುವ ಏಕೈಕ ಕಾರಣಕ್ಕೆ ಟಿಪ್ಪುವನ್ನು ಅನಗತ್ಯವಾಗಿ ವೈಭವೀಕರಿಸುವುದನ್ನು ನಿಲ್ಲಿಸಬೇಕು. ಯಾಕೆಂದರೆ ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಅಲ್ಲವೇ ಅಲ್ಲ ಎನ್ನುವುದನ್ನು ಸ್ವತ: ನ್ಯಾಯಾಲಯವೇ ಹೇಳಿದೆ. ಅಷ್ಟಕ್ಕೂ ಟಿಪ್ಪು ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಎನ್ನುವುದಕ್ಕೆ ಯಾವುದೇ ದಾಖಲೆಗಳು ಇಲ್ಲ ಎನ್ನುವುದು ಸ್ಪಷ್ಟವಾಗಿದೆ. ಟಿಪ್ಪು ಬ್ರಿಟಿಷರ ವಿರುದ್ಧ ಮಾತುಕತೆಗೆ ಕುಳಿತುಕೊಳ್ಳುವಾಗ ಅಲ್ಲಿ ಸ್ವಾತಂತ್ರ್ಯ ಎನ್ನುವ ಶಬ್ದದ ಕಲ್ಪನೆಯೇ ಇರಲಿಲ್ಲ. ಟಿಪ್ಪು ರಾಜನಿಂದ ಚಕ್ರವರ್ತಿಯಾಗಲು ಹವಣಿಸುತ್ತಿದ್ದ. ಅದಕ್ಕೆ ಬ್ರಿಟಿಷರು ಅವಕಾಶ ಕೊಡಲೇ ಇಲ್ಲ. ಹಿಂದೂ ರಾಜರನ್ನು ಮುರಾಮೋಸದಿಂದ ಸೋಲಿಸುವ ಹಾಗೆ ಬ್ರಿಟಿಷರನ್ನು ಸೋಲಿಸಲು ಸಾಧ್ಯವಿಲ್ಲದೇ ಟಿಪ್ಪು ತಾನೇ ಮಾಡಿಕೊಂಡ ಪಾಪದ ಕಾರಣಗಳಿಂದ ಹತನಾಗಿ ಹೋದ ಬಿಟ್ಟರೆ ಆಗ ಟಿಪ್ಪುವನ್ನು ರಕ್ಷಿಸಲು ಅವನೇ ಆಹ್ವಾನ ನೀಡಿ ಭರತಖಂಡಕ್ಕೆ ಕರೆಸಿಕೊಂಡ ಪ್ರೆಂಚರಾಗಲಿ, ಡಚ್ಚರಾಗಲಿ ಮುಂದೆ ಬರಲೇ ಇಲ್ಲ. ಆದ್ದರಿಂದ ಟಿಪ್ಪು ಫೋಟೋ ರಥದಂತಹ ಟ್ಯಾಬ್ಲೋದಲ್ಲಿ ಹಾಕುವುದೇ ಬೇರೆ ಸ್ವಾತಂತ್ರ್ಯ ಯೋಧರಿಗೆ ಮಾಡುವ ಅವಮಾನ.
ಇನ್ನು ಎರಡನೇಯದಾಗಿ ಸಾವರ್ಕರ್ ಫೋಟೋ ತೆಗೆಯಬೇಕೆಂಬ ಹಟ. ಸಾವರ್ಕರ್ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಬಗ್ಗೆ ಕೃತಿಗಳಿವೆ. ಸಾವರ್ಕರ್ ರನ್ನು ಹೇಗೆ ಯಾವುದಾದರೂ ವಿಷಯದಲ್ಲಿ ಸಿಕ್ಕಿಸಿಹಾಕಿ ಜೈಲಿನೊಳಗೆ ಬಂಧಿಸುವುದು ಎಂದು ಬ್ರಿಟಿಷರೇ ಪ್ರತಿ ಬಾರಿ ತಲೆಕೆಡಿಸಿಕೊಳ್ಳುತ್ತಿದ್ದರು. ಸಾವರ್ಕರ್ ಹೊರಗೆ ಇದ್ದಷ್ಟು ಸಮಯ ತಮಗೆ ಡೇಂಜರ್ ಎಂದು ಬ್ರಿಟಿಷರಿಗೆ ಗೊತ್ತಿತ್ತು. ಯಾವುದಾದರೂ ಒಬ್ಬ ವ್ಯಕ್ತಿಗೆ ಎರಡು ಬಾರಿ ಕಠಿಣ ಕಾಲಾಪಾನಿ ಶಿಕ್ಷೆ ಆಗಿದೆ ಎಂದರೆ ಅದು ಸಾವರ್ಕರ್ ಅವರಿಗೆ ಮಾತ್ರ. ಸಾವರ್ಕರ್ ಈ ದೇಶದ ಯುವಶಕ್ತಿಯನ್ನು ಒಗ್ಗೂಡಿಸಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ ಎಂದು ಮಹಾತ್ಮಾ ಗಾಂಧಿಯವರಿಗೂ ಗೊತ್ತಿತ್ತು. ನಮ್ಮ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರಿಗೂ ತಿಳಿದಿತ್ತು. ಆದ್ದರಿಂದ ಒಬ್ಬ ಪ್ರಬಲ ಹಿಂದೂತ್ವವಾದಿ ಎನ್ನುವ ಕಾರಣಕ್ಕೆ ಮಾತ್ರ ಎಸ್ ಡಿಪಿಐ ಸಾವರ್ಕರ್ ಅವರನ್ನು ವಿರೋಧಿಸುತ್ತದೆ ಎನ್ನುವುದಾದರೆ ಅದು ಈ ನೆಲದ ಕಾನೂನಿಗೆ ಗೌರವ ಕೊಡುತ್ತಿಲ್ಲ ಎಂದೇ ಅರ್ಥ.
ಮಹಾತ್ಮಾ ಗಾಂಧಿ ಹಾಗೂ ನೆಹರೂ ಅಪ್ಪಟ ಜಾತ್ಯಾತೀತ ವ್ಯಕ್ತಿಗಳು ಎನ್ನುವುದಕ್ಕಿಂತ ಮುಸ್ಲಿಮರ ಮೇಲೆ ಲೆಕ್ಕಕ್ಕಿಂತ ಹೆಚ್ಚು ಪ್ರೀತಿ ಇಟ್ಟಿದ್ದರು ಎನ್ನುವುದು ಗೋಡ್ಸೆಯಂತವರಿಗೆ ತಡೆಯಲು ಆಗುತ್ತಿರಲಿಲ್ಲ. ಗೋಡ್ಸೆ ಹಾಗೂ ಅವರ ಬಳಗ ಸಾವರ್ಕರ್ ಅವರನ್ನು ಮಾನಸಿಕವಾಗಿ ಗುರು ಎಂದೇ ನಂಬಿತ್ತು. ಗೋಡ್ಸೆ ಗಾಂಧಿಯನ್ನು ಹತ್ಯೆ(!) ಮಾಡಿರುವ ಮೊದಲು ಸಾವರ್ಕರ್ ಅವರನ್ನು ಭೇಟಿ ಮಾಡಿ ಅವರ ಜೊತೆ ಈ ಕುರಿತು ಮಾತುಕತೆ ಆಡಿದ್ದರು ಎಂದು ಹೇಳಲಾಗುತ್ತಿತ್ತು. ಗಾಂಧಿ ಸಾಯುವುದು ಸಾವರ್ಕರ್ ಅವರಿಗೆ ತಿಳಿದಿತ್ತು ಎಂದು ಅವರನ್ನು ಕೂಡ ಗಾಂಧಿ ಹತ್ಯೆಯ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲಾಗಿತ್ತು. ನಂತರ ಸೂಕ್ತ ಸಾಕ್ಷಾಧಾರಗಳು ಇಲ್ಲ ಎನ್ನುವುದಕ್ಕಿಂತ ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ಭಾಗಿಯಾದ್ದಾರೆ ಎನ್ನಲು ದೂರದೂರಕ್ಕೆ ಯಾವುದೇ ಅನುಮಾನಗಳು ಕೂಡ ಇರಲಿಲ್ಲ. ಒಬ್ಬ ಪ್ರಬಲ ಹಿಂದೂತ್ವದ ಧ್ವನಿಯಾಗಿ ಸಾವರ್ಕರ್ ಯಾವತ್ತೂ ನೆನಪಿನಲ್ಲಿ ಉಳಿಯುತ್ತಾರೆ. ಅದರೊಂದಿಗೆ ಬ್ರಿಟಿಷರು ಕೂಡ ಅವರ ಇಚ್ಚಾಶಕ್ತಿ ಮತ್ತು ಛಲದ ಎದುರು ಜಯ ಸಾಧಿಸುವ ಹಟ ಬಿಟ್ಟಿದ್ದರು. ಆದರೆ ಟಿಪ್ಪು ಮತಾಂಧನಾಗಿದ್ದ, ತನ್ನ ಮತಕ್ಕೆ ಪರಿವರ್ತನೆಯಾಗದವರನ್ನು ಹಿಂಸಿಸಿ ಕೊಲ್ಲುತ್ತಿದ್ದ ಎಂದು ಉಲ್ಲೇಖವಿದೆ. ಇದನ್ನೆಲ್ಲ ಪರಿಗಣಿಸಿ ಎಸ್ ಡಿಪಿಐ ನಿಜಕ್ಕೂ ತಾನು ಮುಸ್ಲಿಮರ ಪಕ್ಷ ಅಲ್ಲ, ತಾನು ಎಲ್ಲರ ಪಕ್ಷ ಎಂದು ಹೇಳಿಸಿಕೊಳ್ಳಲು ಬಯಸುವುದಾದರೆ ಇಂತಹ ಕ್ಷುಲಕ ರಾಜಕೀಯ ಬಿಡಬೇಕು. ಯಾಕೆಂದರೆ ಇದರಿಂದ ತಾಲೂಕು, ಜಿಲ್ಲಾ ಪಂಚಾಯತ್ ನಲ್ಲಿ ಎರಡೂ ಪಕ್ಷಗಳಿಗೂ ಲಾಭ ಆಗಲಿಕ್ಕಿಲ್ಲ. ಯಾಕೆಂದರೆ ಪ್ರತಿ ಬಾರಿ ಒಂದೇ ರೀತಿಯ ಸ್ಟ್ರಾಟೆಜಿ ನಡೆಯುವುದಿಲ್ಲ!!
Leave A Reply