ಎಡಿಬಿಯಿಂದ ಮತ್ತೆ ನೀರು ಕುಡಿಸಲು ಕೋಟಿಗಟ್ಟಲೆ ಸಾಲ!!

ಇತಿಹಾಸವನ್ನು ಬಲ್ಲವರು ಮಾತ್ರ ಇತಿಹಾಸ ಸೃಷ್ಟಿಸುತ್ತಾರೆ ಎನ್ನುವ ಮಾತಿದೆ. ಆದರೆ ಇತಿಹಾಸವೇ ಹಾಳು ಇರುವಾಗ ಮತ್ತೆ ಇವರು ಅದೇ ಹಾಳು ಇತಿಹಾಸವನ್ನು ಸೃಷ್ಟಿಸುತ್ತಾರೇನೋ ಎನ್ನುವ ಆತಂಕ ಉಂಟಾಗುತ್ತಿದೆ. ಹಿಂದಿನ ಹಾಳು ಇತಿಹಾಸವೇ ಮರುಕಳುಹಿಸದಿರಲಿ ಎನ್ನುವ ವಾಕ್ಯದೊಂದಿಗೆ ಭವ್ಯ ಇತಿಹಾಸ ಸೃಷ್ಟಿಸುವ ಕಾರ್ಯ ಆಗಲಿ ಎಂದು ನಾನು ಹೇಳುತ್ತಿರುವುದು ಯಾವುದೇ ಸ್ವಾತಂತ್ರ್ಯ ಸಂಗ್ರಾಮದ ಕುರಿತಲ್ಲ, ರಾಜ ಮಹಾರಾಜರ ವಿಷಯದಲ್ಲಿ ಅಲ್ಲ. ನಾನು ಹೇಳುತ್ತಿರುವುದು ಕುಡಿಯುವ ನೀರಿನ ಯೋಜನೆಯ ವಿಷಯದಲ್ಲಿ. ಮೊದಲಿಗೆ ಈಗಿನ ವಿಷಯಕ್ಕೆ ಬರೋಣ, ನಂತರ ನಿಮಗೆ ಇತಿಹಾಸ ಹೇಳುತ್ತೇನೆ. ಎಡಿಬಿ ಅಂದರೆ ಏಶಿಯನ್ ಡೆಪಲಪಮೆಂಟ್ ಬ್ಯಾಂಕ್ ನೆರವಿನಿಂದ ಕ್ವಿಮಿಪ್ ಜಲಸಿರಿ ಎನ್ನುವ ಹೆಸರಿನಲ್ಲಿ ರಾಜ್ಯ ಸರಕಾರ ಕೆಯುಐಡಿಎಫ್ ಸಿ ವತಿಯಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 24*7 ಶುದ್ಧ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಟಾನಕ್ಕೆ ತರಲು ಹೊರಟಿದೆ. ಈ ಯೋಜನೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಮಂಗಳೂರಿನಲ್ಲಿ ಮೊನ್ನೆ ಬಂದಿದ್ದಾಗ ದಕ್ಷಿಣ ಮತ್ತು ಉತ್ತರ ಶಾಸಕರನ್ನು, ಮೇಯರ್ ಅವರನ್ನು ಹಿಂದೆ ನಿಲ್ಲಿಸಿ ಚಾಲನೆ ನೀಡಿದರು.
ಒಳ್ಳೆಯ ಯೋಜನೆ, ಅದರಲ್ಲಿ ಸಂಶಯವಿಲ್ಲ. ಆದರೆ ಈ ಯೋಜನೆಗೆ ಒಂದು ಕರಾಳ ಇತಿಹಾಸ ಇದೆ. ಒಂದು ವೇಳೆ ಅದನ್ನು ಅರಿಯದೇ ಈ ಯೋಜನೆಗಾಗಿ ಬರುವ ಕೋಟ್ಯಾಂತರ ರೂಪಾಯಿ ಹಣದ ಮೇಲೆ ಶಾಸಕರಿಬ್ಬರು ನಿಗಾ ಇಡದೇ ಹೋದರೆ ಇದೇ ನಿಮಗೆ ಮುಂದಿನ ಬಾರಿ ಕುತ್ತಿಗೆಗೆ ಬರಲಿದೆ. ಈಗ ಮಾಜಿ ಆಗಿರುವ ಮಂಗಳೂರು ನಗರ ದಕ್ಷಿಣದ ಶಾಸಕರೊಬ್ಬರು ತಾವು ಕುಂಡ್ಸೆಪ್ಪು ಅಧಿಕಾರಿಯಾಗಿದ್ದಾಗಲೇ ಮಂಗಳೂರಿಗೆ ಎಡಿಬಿ-1 ರಲ್ಲಿ ಕೋಟ್ಯಾಂತರ ರೂಪಾಯಿ ಹಣ ನೀರಿನಂತೆ ಹರಿದು ಬಂದಿತ್ತು ಎನ್ನುವುದನ್ನು ಮರೆತಿದ್ದಾರೆ. ಆ ಹಣದಲ್ಲಿ ಮಂಗಳೂರಿಗೆ 24*7 ಶುದ್ಧ ಕುಡಿಯುವ ನೀರು ಹಾಗೂ ಒಳಚರಂಡಿ ಅಥವಾ ಯುಜಿಡಿ ಕಾಮಗಾರಿಯನ್ನು ನಡೆಸಬೇಕಾಗಿತ್ತು. ಆಗ ಎಡಿಬಿ-1 ರಲ್ಲಿ ಬಂದ ಹಣ ಮೂರು ಡಿಜಿಟ್ ನಷ್ಟು ಕೋಟಿ ರೂಪಾಯಿ ಹಣವಾಗಿತ್ತು. ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ 60 ವಾರ್ಡುಗಳಲ್ಲಿ 24*7 ರಷ್ಟು ಶುದ್ಧ ಕುಡಿಯುವ ನೀರು ಎನ್ನುವ ಆಶಾಗೋಪುರವನ್ನು ಜನರಿಗೆ ತೋರಿಸಲಾಗಿತ್ತು. 60 ವಾರ್ಡು ಬಿಡಿ, ಕನಿಷ್ಟ ಒಂದು ವಾರ್ಡಿನ ಒಂದು ರಸ್ತೆಗೆ 24*7 ನೀರು ಕೊಡಲು ಇವರ ಕೈಗೆ ಆಗಲಿಲ್ಲ. ಯಾವುದಾದರೂ ವಾರ್ಡಿನ ಒಂದು ರಸ್ತೆಗೆ ನಿರಂತರ ಏಳು ಗಂಟೆಯಾದರೂ ನೀರು ಬರುತ್ತೆ ಎಂದಾದರೆ ಅದೇ ದೊಡ್ಡ ಸಾಧನೆ ಎಂಬತ್ತೆ ಆಗಿದೆ. ಇನ್ನು ಒಳಚರಂಡಿ ಕಾಮಗಾರಿ ಬಿಡಿ, ಅದರಲ್ಲಿ ಮಿಸ್ಸಿಂಗ್ ಲಿಂಕ್ ಎನ್ನುವುದೇ ಚಿದಂಬರ ರಹಸ್ಯ ಆಗಿ ಹೋಗಿದೆ. ಜೋರು ಮಳೆ ಬಂದರೆ ಮ್ಯಾನ್ ಹೋಲ್ ಗಳಲ್ಲಿ ಕೃತಕ ಕಾರಂಜಿಗಳು ಆಗಸಕ್ಕೆ ನೆಗೆಯಲು ಕಾಯುತ್ತಿರುತ್ತವೆ. ಹಾಗಾದರೆ ಈಗ ಬರುತ್ತಿರುವ ಹಣದ ಹೊಳೆ ಕೂಡ ಹೀಗೆ ಪೋಲಾಗಿ ಹೋಗುತ್ತದಾ ಎನ್ನುವ ನಿಮ್ಮ ಪ್ರಶ್ನೆಗೆ ನನ್ನ ಉತ್ತರ- ತುಂಬಾ ನಿರೀಕ್ಷೆ ಇಟ್ಟುಕೊಳ್ಳಬೇಡಿ.
ನಾನು ಇಬ್ಬರೂ ಶಾಸಕರುಗಳಿಗೆ ಹೇಳುವುದಿಷ್ಟೇ. ಯಾಕೆಂದರೆ ಕಾಗದಗಳಲ್ಲಿ ಯೋಜನೆಯನ್ನು ಅದ್ಭುತವಾಗಿ ಹೆಣೆಯುವುದರಲ್ಲಿ ನಮ್ಮ ಅಧಿಕಾರಿಗಳಲ್ಲಿ ಕೆಲವರು ಪಿಚ್ ಡಿ ಮಾಡಿದ್ದಾರೆ. ಅವರು ಜಡೆಯನ್ನು ಹೆಣೆದಷ್ಟೇ ನೀಟಾಗಿ ಈ ಯೋಜನೆಯನ್ನು ದಾಖಲೆಗಳಲ್ಲಿ ಬಿಡಿಸಿಡುತ್ತಾರೆ. ನಿಮಗೆ ನೋಡುವಾಗ ಆ ಮ್ಯಾಪ್, ಅಂಕಿಅಂಶ ಮತ್ತು ಕನ್ನಡಕದೊಳಗಿನಿಂದ ಅವರ ಕಣ್ಣಿನ ಹಾವಭಾವ ನೋಡಿಯೇ ನಂಬಿಬಿಟ್ಟಿರುತ್ತಿರಿ. ಪ್ರತಿ ಮನೆಯವರು ನಿಮ್ಮ ಯೋಜನೆಯನ್ನು ಕಂಡು ಖುಷಿಯಾಗಿ ವಿಪಕ್ಷದ ಅಭ್ಯರ್ಥಿಯ ಡೆಪಾಸಿಟ್ ಕೂಡ ಉಳಿಯಲ್ಲ ಎನ್ನುವಷ್ಟು ಧೈರ್ಯ ನಿಮ್ಮಲ್ಲಿ ಮೂಡಿಸಿರುತ್ತಾರೆ. ನೀವು ಖುಷಿಯಲ್ಲಿ ಮೈಮರೆಯುತ್ತೀರಿ. ಈ ಒಂದು ಯೋಜನೆ ಇಟ್ಟುಕೊಂಡೇ ಚುನಾವಣೆಗೆ ಹೋದರೂ ಸಾಕು, ಕನಿಷ್ಟು 20 ಸಾವಿರ ಮತಗಳ ಅಂತರದಿಂದ ಗೆಲ್ಲಬಹುದು ಎಂದು ನಿಮಗೆ ಅನಿಸುತ್ತದೆ. ಆದರೆ ನಿಮಗೆ ಗೊತ್ತಿರುವುದಿಲ್ಲ. ಈ ಹಣಕ್ಕೆ ಒಂದು ದಾರಿ ತೋರಿಸಲು ಕಾದು ಬಕಪಕ್ಷಿಗಳಂತೆ ಕುಳಿತಿರುವ ಒಂದು ವರ್ಗವೇ ಇದೆ. ಅವರು ಆವತ್ತಿಗೂ ಇದ್ದರು, ಇವತ್ತಿಗೂ ಇದ್ದಾರೆ. ಇಲ್ಲದೇ ಹೋದರೆ 2005 ರಲ್ಲಿ ಬಂದ ಎಡಿಬಿ-1 ರ ಯಾಕೆ ಸಂಪೂರ್ಣ ವೈಫಲ್ಯ ಕಂಡಿತ್ತು. ಇನ್ನು ನಮ್ಮ ಮಂಗಳೂರಿನ ನಾಗರಿಕರ ಗ್ರಹಚಾರ ಗೊತ್ತಾ? ಇವತ್ತಿಗೂ ಹಿಂದಿನ ಕೋಟ್ಯಾಂತರ ರೂಪಾಯಿ ಸಾಲ ತೆಗೆದು ಯಾರ್ಯಾರೋ ಮುಕ್ಕಿ ತಿಂದರಲ್ಲ, ಅದರ ಒಂದೇ ಒಂದು ಸಾಲದ ಕಂತನ್ನು ಎಡಿಬಿಗೆ ಪಾವತಿಸಿಲ್ಲ. ಮಂಗಳೂರಿನ ಪ್ರತಿ ನಾಗರಿಕನ ತಲೆಯ ಮೇಲೆ ಸಾಲದ ಕಂತು ಹೆಚ್ಚುತ್ತಾ ಹೋಗುತ್ತಿದೆ. ಈಗ ಇವರು ಮತ್ತೆ ಸಾಲ ತಂದು ನೀರು ಕುಡಿಸಲು ಹೊರಟಿದ್ದಾರೆ.
ಇದರ ನಡುವೆ ಮತ್ತೊಂದು ಸುದ್ದಿಗೋಷ್ಟಿಯನ್ನು ಮಹಾನುಭಾವರೊಬ್ಬರು ಮಾಡಿದ್ದಾರೆ. ಅವರಿಗೆ ಮತ್ತೆ ಶಾಸಕನಾಗುವ ಆಸೆ. ಈ ಯೋಜನೆಯನ್ನು ನಾವು ತಂದಿದ್ದು ಎಂದು ಎದೆ ತಟ್ಟಿ ಹೇಳುತ್ತಿದ್ದಾರೆ. ಇಲ್ಲಿರುವ ವಿಷಯ ಏನೆಂದರೆ ಈ ಎರಡನೇ ಯೋಜನೆ ಕೂಡ ವೈಫಲ್ಯ ಕಂಡರೆ ಆಗ ಇವರು ಯಾರ ಮೇಲೆ ಬೊಟ್ಟು ಮಾಡುತ್ತಾರೆ? ಅಷ್ಟಕ್ಕೂ ಇವರೇ ತಂದ ಮೊದಲ ಯೋಜನೆ ಯಾಕೆ ಹಳ್ಳ ಹಿಡಿಯಿತು? ಆಗ ನೀವೆ ಅಲ್ವಾ ಅಧಿಕಾರಿಯಾಗಿದ್ದವರು. ಯೋಜನೆ ಮಾಜಿ, ಹಾಲಿ ಯಾರೇ ತರಲಿ ತಂದ ಸಾಲದ ಹಣವನ್ನು ಚೆನ್ನಾಗಿ ಅನುಷ್ಟಾನಗೊಳಿಸಿ. ನೀವು ಫಾಲೋ ಅಪ್ ಮಾಡದೇ ಅಧಿಕಾರಿಗಳ ಕೈಯಲ್ಲಿ ಕೊಟ್ಟಿರೋ ಚುನಾವಣೆಯ ಸಂದರ್ಭದಲ್ಲಿ ಅವರೇ ನಿಮ್ಮ ಕೈಯಲ್ಲಿ ಚೊಂಬು ನೀಡುತ್ತಾರೆ!!
Leave A Reply