ಸೆಂಟ್ರಲ್ ರೈಲು ನಿಲ್ದಾಣವನ್ನೇ ವಿಶ್ವದರ್ಜೆ ಮಾಡಲು ಸಾಧ್ಯವಿದೆ? ಹೇಗೆ?
Posted On September 1, 2021
ಪಾಪ, ಮಮತಾ ಬ್ಯಾನರ್ಜಿ ಹೇಳಿ ಹೋದ್ರು. ಒಮ್ಮೆ ಒಂದು ಯೋಜನೆ ಬಜೆಟಿನಲ್ಲಿ ಘೋಷಣೆ ಆದ್ರೆ ಅದು ಆಗಿಯೇ ಆಗುತ್ತದೆ. ಆದರೆ ಯಾವಾಗ ಎಂದು ಮಾತ್ರ ಕೇಳ್ಬೆಡಿ. ಇನ್ನು ನಮ್ಮ ರೈಲ್ವೆಗಳ ಬಜೆಟಿನಲ್ಲಿ ಹೆಚ್ಚಿನ ಸಂದರ್ಭ ಕ್ಲಾರಿಟಿ ಇರುವುದಿಲ್ಲ. ಉದಾಹರಣೆಗೆ ಡಿವಿ ರೈಲ್ವೆ ಸಚಿವರಾಗಿದ್ದಾಗ ಮಂಗಳೂರು-ಬೆಂಗಳೂರು ರೈಲು ಓಡಿಸ್ತೇನೆ ಎಂದರು. ಬೆಳಿಗ್ಗೆನಾ, ರಾತ್ರಿನಾ ಎಂದಿರಲಿಲ್ಲ. ಅದರಿಂದ ಒಂದಿಷ್ಟು ವರ್ಷ ಗೊಂದಲ ಹಾಗೆ ಮುಂದುವರೆಯಿತು. ನಂತರ ಹೇಗೊ ಪ್ರಾರಂಭವಾಯಿತು ಬಿಡಿ. ಅದರ ಮೊದಲು ಮಮತಾ ಬ್ಯಾನರ್ಜಿ ಮಂಗಳೂರಿನಲ್ಲಿ ವಿಶ್ವದರ್ಜೆ ರೈಲು ನಿಲ್ದಾಣ ಎಂದರು. ಸೆಂಟ್ರಲ್ ಅಥವಾ ಜಂಕ್ಷನ್ ಯಾವುದು ಎಂದು ಹೇಳಲಿಲ್ಲ. ಅದರಿಂದ ಒಂದಿಷ್ಟು ಗೊಂದಲ ಮುಂದುವರೆಯುತ್ತಿದೆ.
ನನ್ನ ಪ್ರಕಾರ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನೇ ವಿಶ್ವದರ್ಜೆಗೆ ಏರಿಸಬಹುದು. ಜಂಕ್ಷನ್ ರೈಲು ನಿಲ್ದಾಣವನ್ನು ಮಾಡಿದರೆ ಜನರಿಗೆ ಪುನ: ನಗರದಿಂದ ಹೊರಗೆ ಹೋಗಬೇಕಾಗುತ್ತದೆ. ಅದು ಕಿರಿಕಿರಿ. ಅದನ್ನು ಹಿಂದೆ ವಿವರಿಸಿದ್ದೇನೆ. ಬೆಂಗಳೂರಿನಿಂದ ಮಂಗಳೂರಿಗೆ ಇರುವ ಟ್ರೇನ್ ಟಿಕೆಟ್ ಮತ್ತು ಜಂಕ್ಷನ್ ನಿಂದ ನಗರಕ್ಕೆ ಬರಲು ಟ್ಯಾಕ್ಸಿಗೆ ತಗಲುವ ಖರ್ಚಿನ ಬಗ್ಗೆ ಬೇರೆ ಬೇರೆ ಮಾಧ್ಯಮಗಳಲ್ಲಿಯೂ ಚರ್ಚೆಯಾಗಿದೆ. ಅದ್ದರಿಂದ ಎಲ್ಲರ ಪ್ರಕಾರ ಸೆಂಟ್ರಲ್ ಬೆಸ್ಟ್. ಆದರೆ ಕೆಲವರು ಅಲ್ಲಿ ಬೇಕಾದಷ್ಟು ಜಾಗ ಇಲ್ಲ ಎನ್ನುವ ನೆಪವೊಡ್ಡಿ ತಮ್ಮ ವೈಯಕ್ತಿಕ ಕಾರಣಗಳಿಗಾಗಿ ಅಲ್ಲಿ ಬೇಡಾ ಎನ್ನುತ್ತಿದ್ದಾರೆ.
ಈ ಬಗ್ಗೆ ಹಿಂದೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ವಿ ಪೊನ್ನುರಾಜ್ ಅವರಿಗೂ ಗೊಂದಲವಿತ್ತು. ಒಂದು ಸಲ ನಾನು ಅವರನ್ನು ಭೇಟಿಯಾಗಿದ್ದಾಗ ಅವರಿಗೆ ಅಲ್ಲಿರುವ ಜಾಗದ ಬಗ್ಗೆ ವಿಸ್ತ್ರತವಾಗಿ ವಿವರಿಸಿದ್ದೆ. ಅವರಿಗೂ ಹೌದೆಂದು ಅನಿಸಿತ್ತು. ಆದರೆ ಜನಪರ ಜಿಲ್ಲಾಧಿಕಾರಿಯನ್ನು ಬೇಗ ವರ್ಗಾಯಿಸಿದರು. ಅದರ ನಂತರ ಸದರ್ನ ರೈಲ್ವೆಯವರು ಅಲ್ಲಿ ಬಂದು ಸರ್ವೆ ಮಾಡಿ ಹೋಗಿದ್ದಾರೆ. ಅವರಿಗೂ ಸೆಂಟ್ರಲ್ ನಲ್ಲಿಯೇ ಮಾಡಬಹುದು ಇಲ್ಲಿರುವ ಕಲವು ಕಚೇರಿಗಳನ್ನು ಸ್ಥಳಾಂತರಿಸಿದರೆ ವರದಿ ನೀಡಿದರು ಎಂದು ವಿಷಯ ಏನೆಂದರೆ ಯಾವುದೇ ರೈಲು ನಿಲ್ದಾಣ ವಿಶ್ವದರ್ಜೆಯಾಗಬೇಕಾದರೆ ಅಲ್ಲಿ ಕನಿಷ್ಟ ಎಂಟು ಫ್ಲಾಟ್ ಫಾರಂಗಳಿರಲೇಬೇಕು. ಎ ಟು ಝಡ್ ಸೌಲಭ್ಯ ಇರಬೇಕು ಎಂದಿದೆ. ಈಗ ಸೆಂಟ್ರಲ್ ನಲ್ಲಿ 4 ಫ್ಲಾಟ್ ಫಾರಂಗಳಿವೆ. ಅಲ್ಲಿ ಎಂಟನ್ನು ನಿರ್ಮಾಣ ಮಾಡಲು ಒಂದಿಷ್ಟು ಪ್ರಯತ್ನಪಟ್ಟರೆ ಖಂಡಿತ ಸಾಧ್ಯವಿದೆ. ಸೆಂಟ್ರಲ್ ನಲ್ಲಿ ಪೊಲೀಸ್ ಲೈನ್ ಹಿಂದೆ ಮತ್ತು ಅಲ್ಲಿರುವ ಸರಕಾರಿ ಕಾಲೇಜಿನ ಹಿಂದಿನಿಂದ ಸೈಡ್ ನಲ್ಲಿರುವ ಪೂರ್ತಿ ಜಾಗ ರೈಲ್ವೆಯವರದ್ದು. ಈಗ ಅಲ್ಲಿ ಹಳೆ ಆಫೀಸುಗಳಿವೆ. ಅದರಲ್ಲಿ ಸಹಕಾರಿ ಸಂಘದ ಕಚೇರಿಗಳು, ಕಾರ್ಮಿಕ ಕಚೇರಿ ಎಲ್ಲಾ ಇದೆ. ಅವುಗಳನ್ನು ಅಲ್ಲಿಂದ ತೆಗೆದು ಆ ಸೈಡಿನಿಂದ ನಾಲ್ಕು ಫ್ಲಾಟ್ ಫಾರಂ ಮಾಡಬಹುದು. ಇನ್ನು ಫ್ಲಾಟ್ ಫಾರಂ ನಂತರ ಇರುವ ಜಾಗದಲ್ಲಿ ಮುಖ್ಯದ್ವಾರ ಕಟ್ಟಿ ಅಲ್ಲಿ ಕಟ್ಟಡ ನಿರ್ಮಿಸಿ ಟಿಕೆಟ್ ಕೌಂಟರ್ ಮಾಡಬಹುದು. ಈಗ ಇರುವ ದ್ವಾರ, ಟಿಕೆಟ್ ಕೌಂಟರ್ ಗಳನ್ನು ಹೊಂದಿದ ಕಟ್ಟಡವನ್ನು ಪುರಾತತ್ವ ಇಲಾಖೆ ಕೋರಿದ್ದರೆ ಹಾಗೆ ಉಳಿಸಬಹುದು.
ಅಷ್ಟಕ್ಕೂ ವಿಶ್ವದರ್ಜೆ ಮಾಡಲೇಬೇಕಾದರೆ ವಿದೇಶಗಳಲ್ಲಿ ಇರುವಂತೆ ಒಂದು ಫ್ಲಾಟ್ ಫಾರಂನ ಮೇಲೆ ಮತ್ತೊಂದು ಫ್ಲಾಟ್ ಫಾರಂ ಇರುವಂತೆ ನಿರ್ಮಾಣ ಮಾಡಬೇಕು. ಅದು ನಮ್ಮ ಮಂಗಳೂರಿನಲ್ಲಿ ಸದ್ಯದ ಮಟ್ಟಿಗೆ ಸಾಧ್ಯವಿಲ್ಲ ಎನ್ನುವುದು ಬೇರೆ ವಿಷಯ. ಆದರೂ ವಿಶ್ವದರ್ಜೆ, ವಿಶ್ವದರ್ಜೆ ಎಂದು ಎಲ್ಲರೂ ಹೇಳುವ ಕಾರಣ ಹಾಗೆ ಹೇಳುತ್ತಿದ್ದೇನೆ. ವಿಷಯ ಏನೆಂದರೆ ಮಂಗಳೂರು ನಮ್ಮದು, ಅಲ್ಲಿ ವಿಶ್ವದರ್ಜೆ ರೈಲ್ವೆ ನಿಲ್ದಾಣವಾದರೆ ನಮಗೆ ಹೆಮ್ಮೆ ಎಂದು ಅಂದುಕೊಂಡು ಎಲ್ಲರೂ ಕೆಲಸ ಮಾಡಿದರೆ ಏನಾದರೂ ಸಾಧ್ಯವಿದೆ. ಅದು ಬಿಟ್ಟು ರೈಲು ಅವರದ್ದು, ಜಾಗ ನಾವು ಕೊಡಬೇಕಾ ಎಂದುಕೊಂಡರೆ ಯಾವುದೇ ಕೆಲಸ ಕಷ್ಟ. ಅದರ ಬದಲು ರಾಜ್ಯ ಸರಕಾರದ ಜಾಗದ ನಿರೀಕ್ಷೆ ಬಿಟ್ಟು ರೈಲ್ವೆಯವರು ತಮ್ಮ ಜಾಗವನ್ನು ಸರಿಯಾಗಿ ಬಳಸಿಕೊಂಡರೆ ಸೆಂಟ್ರಲ್ ರೈಲು ನಿಲ್ದಾಣವೇ ವಿಶ್ವದರ್ಜೆಯನ್ನಾಗಿ ಮಾಡಬಹುದು. ಆದರೆ ಕೆಲವೊಮ್ಮೆ ಈ ರೈಲ್ವೆ ಅಧಿಕಾರಿಗಳು “ಇಂಗ್ಲೀಷ್” ನಲ್ಲಿ ಮಾತನಾಡುತ್ತಾರೆ. ತಮ್ಮ ಕಂಕನಾಡಿ ಪ್ರೀತಿ ವಿಪರೀತ ತೋರಿಸುತ್ತಾರೆ. ಅಲ್ಲಿಯೇ ಮಾಡುವ ಸುಳಿವು ಕೊಡುತ್ತಾರೆ. ಅಂತಹ ಸಲಹೆಯನ್ನು ಪಡೆದುಕೊಂಡು ನಮ್ಮ ಊರಿನ ಜನಪ್ರತಿನಿಧಿಗಳು ರೈಲ್ವೆ ಅಧಿಕಾರಿಗಳ ತಾಳಕ್ಕೆ ಕುಣಿದರೆ ಆಗ ನಾವು ಕೂಡ ನಮಗೆ ಗೊತ್ತಿರುವ ಬೇರೆ ಭಾಷೆಯಲ್ಲಿ ಮಾತನಾಡಬೇಕಾಗುತ್ತದೆ. ದಯಮಾಡಿ ಕಾಂಗ್ರೆಸ್,ಬಿಜೆಪಿ ಎಂದು ನಮ್ಮ ಜನರಿಗೆ ಸಿಗಲಿರುವ ಸೌಲಭ್ಯ ಗಳು ಸಿಗದ ಹಾಗೆ ಮಾಡಬೇಡಿ ಈಗಾಗಲೇ ಹಲವು ವರ್ಷಗಳೇ ಕಳೆದುಹೋಯಿತ್ತು ವಿಶ್ವದರ್ಜೆ, ವಿಶ್ವದರ್ಜೆ ಎಂದು.
- Advertisement -
Trending Now
ಕೃಷಿ ಮಾಡ್ಬೇಕು, ಪೆರೋಲ್ ಕೊಡಿ ವಿನಂತಿಗೆ ಹೈಕೋರ್ಟ್ ಅಸ್ತು!
December 2, 2024
Leave A Reply