ನೀವೆ ಗುರುತಿಸುವುದು, ನೀವೆ ರೇಡ್ ಮಾಡುದಾದರೆ ಮೋದಿಯವರ ವೆಂಡರ್ ಸ್ಟ್ರೀಟ್ ಯಾಕೆ?
ಒಂದು ಕಡೆ ಬೀದಿಬದಿ ವ್ಯಾಪಾರಿಗಳನ್ನು ಟೈಗರ್ ಕಾರ್ಯಾಚರಣೆ ಮೂಲಕ ಮಂಗಳೂರು ಮಹಾನಗರ ಪಾಲಿಕೆ ಎಬ್ಬಿಸುತ್ತಿದೆ. ಇನ್ನೊಂದು ಕಡೆ ಪ್ರಧಾನಿ ಮೋದಿಯವರು ಬೀದಿಬದಿ ವ್ಯಾಪಾರಿಗಳನ್ನು ಕೈ ಹಿಡಿದು ಮೇಲೆ ಎತ್ತಲು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಇದರ ಮಧ್ಯೆ ಪಾಲಿಕೆಯ ಕಾಂಗ್ರೆಸ್ ತಮಾಷೆ ನೋಡುತ್ತಿದೆ. ವಿಷಯ ಏನೆಂದರೆ ಯಾವುದೇ ನಗರದ ಸೌಂದರೀಕರಣಕ್ಕೆ ಬೀದಿಬದಿ ವ್ಯಾಪಾರ ಒಂದು ರೀತಿಯಲ್ಲಿ ಕಪ್ಪುಚುಕ್ಕೆ ಇದ್ದಂತೆ. ಹಾಗಂತ ಅವರು ಕೂಡ ಮನುಷ್ಯರು. ನಮ್ಮ ಹಾಗೆ ಅವರಿಗೂ ಕುಟುಂಬಗಳಿವೆ. ಅವರು ಕೂಡ ಮನೆ, ಮಕ್ಕಳನ್ನು ಸಾಕಬೇಕು. ಆದ್ದರಿಂದ ಒಂದು ನಗರದಲ್ಲಿ ಬೀದಿಬದಿ ವ್ಯಾಪಾರಿಗಳೇ ಇರಬಾರದು ಎಂದು ಹೇಳುವುದು ಅಮಾನವೀಯ ನಡೆ ಆಗುತ್ತದೆ.
ಅದಕ್ಕಾಗಿ ಅವರಿಗೂ ಸೂಕ್ತ ವ್ಯವಸ್ಥೆ ಆಗುವಂತೆ, ನಗರದ ಸೌಂದರ್ಯಕ್ಕೂ ದಕ್ಕೆ ಆಗದಂತೆ ಮೋದಿ ನೇತೃತ್ವದ ಕೇಂದ್ರ ಸರಕಾರ ವೆಂಡರ್ ಸ್ಟ್ರೀಟ್ ಎಂದು ವ್ಯವಸ್ಥೆ ಮಾಡಿದೆ. ಅದರ ಉದ್ದೇಶ ಏನೆಂದರೆ ಬೀದಿಬದಿ ವ್ಯಾಪಾರಿಗಳು ಒಂದು ನಿರ್ದೀಷ್ಟ ಕಡೆ ಒಂದೇ ಏರಿಯಾದಲ್ಲಿ ವ್ಯಾಪಾರ ವಹಿವಾಟು ಮಾಡಬೇಕು. ಯಾವುದೇ ಕಾರಣಕ್ಕೂ ಆಸ್ಪತ್ರೆ, ಮುಖ್ಯ ಮಾರ್ಕೆಟಿನ ಆಸುಪಾಸಿನಲ್ಲಿ ವ್ಯಾಪಾರ ಮಾಡಬಾರದು ಎನ್ನುವ ನಿಯಮ ಇದೆ. ಕೊರೊನಾ ಅವಧಿಯಲ್ಲಿ ಅವರಿಗೆ ಕಷ್ಟವಾಗಬಾರದು ಎನ್ನುವ ಕಾರಣಕ್ಕೆ ಪ್ರತಿಯೊಬ್ಬ ಬೀದಿಬದಿ ವ್ಯಾಪಾರಿಗೂ ಹತ್ತು ಸಾವಿರ ರೂಪಾಯಿ ಸಾಲದ ವ್ಯವಸ್ಥೆ ಕೂಡ ಕೇಂದ್ರ ಸರಕಾರದಿಂದ ಮಾಡಲಾಗಿದೆ. ಈ ಹಿಂದೆಯೇ ಮಂಗಳೂರಿನಲ್ಲಿ ಬೀದಿಬದಿ ವ್ಯಾಪಾರಿಗಳಿಗಾಗಿಯೇ ಸ್ಥಳ ನಿಗದಿ ಮಾಡಲಾಗಿದೆ. 729 ಮಂದಿಯನ್ನು ಬೀದಿಬದಿ ವ್ಯಾಪಾರಿಗಳೆಂದು ಗುರುತಿಸಲಾಗಿದೆ. ಇದೆಲ್ಲಾ ನಾಲ್ಕು ವರ್ಷಗಳ ಹಿಂದೆ ಪಾಲಿಕೆಯಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗಲೇ ಮಾಡಲಾಗಿದೆ. ಆದರೆ ಅದನ್ನು ದಡ ಸೇರಿಸುವ ಕೆಲಸ ಕಾಂಗ್ರೆಸ್ಸಿನ ಯಾವ ಮೇಯರ್ ಕೂಡ ಮಾಡಲೇ ಇಲ್ಲ. ಮೊದಲನೇಯದಾಗಿ ರಾಜಕೀಯ ಕಾರಣ ಮತ್ತು ಎರಡನೇಯದಾಗಿ ಸಾಮಾಜಿಕ ಕಾರಣ. ರಾಜಕೀಯ ಕಾರಣ ಏನೆಂದರೆ ಎಲ್ಲಿಯಾದರೂ ಬೀದಿಬದಿ ವ್ಯಾಪಾರಿಗಳಿಗೆ ಸಮರ್ಪಕ ವ್ಯವಸ್ಥೆ ಮಾಡಿದರೆ ಕ್ರೆಡಿಟ್ ಮೋದಿಯವರಿಗೆ ಹೋಗುತ್ತೆ ಎನ್ನುವ ಭಯ ಇತ್ತು. ಸಾಮಾಜಿಕ ಕಾರಣ ಏನೆಂದರೆ ಎಲ್ಲಿ ಜಾಗ ನಿಗದಿ ಮಾಡಿದರೂ ಬೀದಿಬದಿ ವ್ಯಾಪಾರಿಗಳು ಹೋಗಲು ಕೇಳುವುದಿಲ್ಲ. ಈ ವ್ಯಾಪಾರಿಗಳು ಕೂರುವುದು ಒಂದೋ ಲೇಡಿಗೋಶನ್ ಆಸ್ಪತ್ರೆಯ ಬಳಿ, ಇಲ್ಲ ಹಂಪನಕಟ್ಟೆ ಜಂಕ್ಷನ್ ಹತ್ತಿರ ಅಥವಾ ಸ್ಟೇಟ್ ಬ್ಯಾಂಕ್ ತಪ್ಪಿದರೆ ಕಂಕನಾಡಿ. ಇದನ್ನು ಬಿಟ್ಟು ಬೇರೆಡೆ ಅರಮನೆ ಕಟ್ಟಿಸಿ ಕೊಡುತ್ತೇನೆ ಎಂದರೂ ಇವರುಗಳು ಅಲ್ಲಿ ಹೋಗುವುದಿಲ್ಲ. ಹೀಗಿರುವಾಗ ಸಮಸ್ಯೆ ಪರಿಹಾರವಾಗುವುದು ಹೇಗೆ?
ಈ ನಡುವೆ 729 ಮಂದಿ ಬೀದಿಬದಿ ವ್ಯಾಪಾರಿಗಳ ಪೈಕಿ ಇಪ್ಪತ್ತೈದು ಶೇಕಡಾ ಮಂದಿಗೆ ಮಾತ್ರ ಗುರುತಿನ ಚೀಟಿ ನೀಡಲಾಗಿದೆ. ಸೆಂಟ್ರಲ್ ಮಾರುಕಟ್ಟೆ ಓಡೆದು ಹಾಕಿದ ನಂತರ ಅಲ್ಲಿಯೇ ಸುತ್ತಮುತ್ತಲೂ ದೊಡ್ಡ ದೊಡ್ಡ ಕೊಡೆಗಳನ್ನು ಹಾಕಿ ಇವರುಗಳು ವ್ಯಾಪಾರ ಮಾಡುತ್ತಿದ್ದಾರೆ. ರಥಬೀದಿಯಲ್ಲಿಯೂ ಇವರು ಕುಳಿತುಕೊಂಡುಬಿಡುತ್ತಾರೆ. ಈಗ ಅಚಾನಕ್ ಆಗಿ ಟೈಗರ್ ಆಪರೇಶನ್ ಎಂದು ದಾಳಿ ಮಾಡಿದರೆ ಈ ವ್ಯಾಪಾರಿಗಳು ಎಲ್ಲಿಗೆ ಹೋಗುವುದು? ಇವರಿಗೆ ಭಾರತೀಯ ಜನತಾ ಪಾರ್ಟಿ ಆಡಳಿತ ಇರುವ ಪಾಲಿಕೆಯಿಂದ ಏನಾದರೂ ಶಾಶ್ವತ ಪರಿಹಾರ ಮಾಡದೇ ಏಕಾಏಕಿ ದಾಳಿ ಮಾಡಿದರೆ ಅಂತವರ ಗತಿ ಏನು? ಕೇಂದ್ರ ಸರಕಾರದ ಕಾನೂನು ಇರುವಾಗ ಬೀದಿಬದಿ ವ್ಯಾಪಾರಿಗಳನ್ನು ಅತಂತ್ರ ಮಾಡುವುದು ಸರಿಯಾ? ಇನ್ನು ಮೊನ್ನೆ ರಥಬೀದಿಯಲ್ಲಿ ಪಾಲಿಕೆಯ ರೇಡ್ ಆಗುತ್ತೆ ಎಂದು ಅಲ್ಲಿನ ವ್ಯಾಪಾರಿಗಳಿಗೆ ಮೊದಲೇ ಗೊತ್ತಾಗಿದೆ. ಶನಿವಾರ ರೇಡ್ ಆಗುವ ಹಿಂದಿನ ದಿನವೇ ವ್ಯಾಪಾರಿಗಳು ಎಲ್ಲಾ ಬಂದೋಬಸ್ತ್ ಮಾಡಿಕೊಂಡಿದ್ದಾರೆ. ರೇಡ್ ಗೆ ಬಂದಿದವರಿಗೆ ಆಶ್ಚರ್ಯವಾಗಿದೆ.
ಹಾಗಾದರೆ ಇಲ್ಲಿ ರೇಡ್ ಆಗುವ ಮಾಹಿತಿಗಳು ಇವರಿಗೆ ಮೊದಲೇ ತಲುಪಿಸಿದವರು ಯಾರು? ಪಾಲಿಕೆಯಲ್ಲಿ ಒಳಗಿರುವ ಕಿವಿಗಳು ಹೇಗೆ ವಿಷಯ ಲೀಕ್ ಮಾಡುತ್ತವೆ. ರೇಡ್ ಆಗುವುದು ಮೊದಲೇ ಗೊತ್ತಾದರೆ ಅಂತವರು ಗಾಡಿ ಅಡಗಿಸಿಕೊಟ್ಟುತ್ತಾರೆ. ರೇಡ್ ಗೆ ಬಂದವರು ಖಾಲಿ ಕೈಯಲ್ಲಿ ಹೋದ ತಕ್ಷಣ ತಮ್ಮ ಗಾಡಿಯನ್ನು ಹೊರಗೆ ತೆಗೆಯುತ್ತಾರೆ. ಈಗ ಪಾಲಿಕೆಯ ವ್ಯಾಪ್ತಿಯಲ್ಲಿ ಇಬ್ಬರು ಯುವ ಶಾಸಕರಿದ್ದಾರೆ. ಅದು ಕೂಡ ಮೋದಿಯವರ ಪಕ್ಷದಿಂದಲೇ ಬಂದವರು. ಇವರು ತಲೆ ಮತ್ತು ಹೃದಯ ಎರಡನ್ನು ಏಕಕಾಲಕ್ಕೆ ಬಳಸಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಬೀದಿಬದಿ ವ್ಯಾಪಾರಿಗಳನ್ನು ಕರೆಸಿ ಪ್ರೀತಿಯಿಂದ ಒಪ್ಪಿಸಬೇಕು. ಅವರು ಎಲ್ಲಿ ವ್ಯಾಪಾರಕ್ಕೆ ಕುಳಿತುಕೊಳ್ಳಲು ವೆಂಡರ್ ಸ್ಟ್ರೀಟ್ ತಯಾರಾಗಿದೆಯೋ ಅಲ್ಲಿ ಮೂಲಭೂತ ವ್ಯವಸ್ಥೆ ಮಾಡಿಕೊಡಬೇಕು. ಗ್ರಾಹಕರು ಅಲ್ಲಿ ಹೋಗುವಂತೆ ಪ್ರಚಾರ ಮಾಡಿದರೂ ಪರವಾಗಿಲ್ಲ. ಇನ್ನು ಎಲ್ಲಾ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಕೊಟ್ಟು ಮುಗಿಸಬೇಕು. ಅಷ್ಟಕ್ಕೂ ಜನಸಾಮಾನ್ಯರೇ ಮಾಡುವಂತಹ, ಜನಸಾಮಾನ್ಯರೇ ಖರೀದಿ ಮಾಡುವಂತಹ, ಜನಸಾಮಾನ್ಯರದ್ದೇ ವ್ಯಾಪಾರವನ್ನು ಜನಸಾಮಾನ್ಯರದ್ದೇ ಸರಕಾರ ಎಂದು ಹೇಳಿಕೊಳ್ಳುವ ಪಕ್ಷದವರು ದಮನಿಸುವ ಕೆಲಸ ಮಾಡಬಾರದು. ಶ್ರೀಮಂತರು ಮಾಲ್ ಗಳಿಗೆ ಹೋಗುತ್ತಾರೆ. ಉದ್ಯಮಿಗಳು ಮಾಲ್ ಗಳಲ್ಲಿ ಅಂಗಡಿ ತೆರೆಯುತ್ತಾರೆ. ಏನೂ ಇಲ್ಲದವರು ಇಲ್ಲಿಯೇ ಮಾರುತ್ತಾರೆ, ಇಲ್ಲದವರು ಇಲ್ಲಿಯೇ ಖರೀದಿಸುತ್ತಾರೆ. ಆದರೆ ಪಾಲಿಕೆಯಲ್ಲಿ ಅತೀ ಬುದ್ಧಿವಂತರೆನಿಸಿಕೊಂಡವರು ಮಾತ್ರ ರೇಡ್ ಮಾಡುತ್ತಾರೆ.!!
Leave A Reply