ಯಾವುದಕ್ಕೆ ಬೀದಿಗೆ ಬರಬೇಕು ಎಂದು ಗೊತ್ತಿಲ್ಲದವರು ಯಡ್ಡಿ ಉಳಿಸಲು ಧ್ವನಿ ಎತ್ತಿದ್ದರು!!
ರಾಮನನ್ನು ಒಂದು ಕಾಲದಲ್ಲಿ ಟೀಕಿಸುತ್ತಿದ್ದವರು ಈಗ ರಾಮನನ್ನು ಕೊಂಡಾಡುತ್ತಿದ್ದಾರೆ. ರಾಮ ಮಂದಿರ ಯಾಕೆ ಎಂದು ಪ್ರಶ್ನೆ ಮಾಡಿದವರು ಈಗ ಅಯೋಧ್ಯೆಯ ರಾಮ ಮಂದಿರದ ಸ್ಥಳದಿಂದಲೇ ತಮ್ಮ ಚುನಾವಣಾ ಪ್ರಚಾರವನ್ನು ಆರಂಭಿಸುತ್ತಿದ್ದಾರೆ. ಇನ್ನೊಂದೆಡೆ ಒಂದು ಕಾಲದಲ್ಲಿ ರಾಮನನ್ನೇ ಎದುರು ಇಟ್ಟುಕೊಂಡು ಚುನಾವಣೆಗೆ ಹೋದವರು, ಹಿಂದೂತ್ವದ ಗುತ್ತಿಗೆ ಪಡೆದುಕೊಂಡ ಮಹನೀಯರು ಈಗ ದೇವಾಲಯ ಒಡೆಯಲು ಶುರು ಮಾಡಿದ್ದಾರೆ. ಕಾಲ ಹೇಗೆ ಬದಲಾಗುತ್ತೆ ಎನ್ನುವುದೇ ಈಗ ಆಶ್ಚರ್ಯಕರ ವಿಷಯ. ಮೊದಲನೇಯದಾಗಿ ಆಮ್ ಆದ್ಮಿಯ ವಿಷಯವನ್ನೇ ತೆಗೆದುಕೊಳ್ಳೋಣ.
ಅವರಲ್ಲಿ ನಂಬರ್ 2 ನಾಯಕರೊಬ್ಬರಿದ್ದಾರೆ. ಮನೀಶ್ ಸಿಸೋಡಿಯಾ ಎಂದು ಹೆಸರು ಇದ್ದಂಗೆ ಕಾಣಿಸುತ್ತದೆ. ಈ ಪುಣ್ಯಾತ್ಮ ಹಿಂದೆ ರಾಮ ಮಂದಿರ ವಿಷಯ ಬಂದಾಗ ಭಾರತೀಯ ಜನತಾ ಪಾರ್ಟಿಯವರು ದೇವಸ್ಥಾನವನ್ನು ಕಟ್ಟುವುದಕ್ಕಿಂತ ಶಾಲೆಗಳನ್ನು ಕಟ್ಟಬೇಕು ಎಂದು ವಾದಿಸುತ್ತಿದ್ದ. ತನ್ನ ಟ್ವಿಟರ್ ನಲ್ಲಿ ಕೂಡ ಇದೇ ಅರ್ಥದ ಮಾತುಗಳನ್ನು ಬರೆಯುತ್ತಿದ್ದ. ಈಗ ಮುಂದಿನ ವರ್ಷ ಉತ್ತರ ಪ್ರದೇಶ ಚುನಾವಣೆ ಇದೆಯಲ್ಲ, ಅಲ್ಲಿ ಪ್ರಚಾರ ಆರಂಭಿಸಲು ಸಿದ್ಧತೆ ನಡೆಸಿರುವ ಆಪ್ ಅಲ್ಲಿ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಪ್ರಚಾರವನ್ನು ಆರಂಭಿಸಿದೆ. ಇದನ್ನು ಕೂಡ ಈ ಮಹಾನುಭಾವ ಸಿಸೋಡಿಯಾ ಟ್ವಿಟರ್ ನಲ್ಲಿ ಬರೆದುಕೊಂಡಿದ್ದು, ತಮ್ಮ ಪಕ್ಷದ ಗೆಲುವಿಗೆ ರಾಮದೇವರ ಅನುಗ್ರಹ ಕೋರಿದ್ದಾರೆ. ಒಂದು ಕಾಲದಲ್ಲಿ ಇದೇ ಆಪ್ ಪಕ್ಷದ ಅರವಿಂದ ಕೇಜ್ರಿವಾಲ್ ಹಾಗೂ ಮನೀಶ್ ಸಿಸೋಡಿಯಾ ತಲೆಗೆ ಮುಸ್ಲಿಮರು ಧರಿಸುವ ಟೋಪಿ ಧರಿಸಿ ಥೇಟ್ ಪಕ್ಕದ ಮನೆಯ ಮುಸಲ್ಮಾನನಿಗೆ ಹುಟ್ಟಿದವರಂತೆ ವರ್ತಿಸುತ್ತಿದ್ದರು. ದೆಹಲಿಯಲ್ಲಿ ಇವರು ಗಲ್ಲಿಗೊಂದರಂತೆ ವೇಷ ಬದಲಾಯಿಸಿ ಮತ ಕೇಳುವುದರಲ್ಲಿ ನಿಸ್ಸೀಮರು. ಮಸೀದಿಗೆ ಕಾಲಿಟ್ಟರೆ ತಕ್ಷಣ ಟೋಪಿ. ಅದು ಕೂಡ ಮುಸ್ಲಿಮರು ಒತ್ತಾಯ ಮಾಡಬೇಕಿಲ್ಲ.
ಇವರೇ ಅಂಗಡಿಗಳಲ್ಲಿ ಮೊದಲೇ ಖರೀದಿಸಿ ಇವತ್ತು ಮುಸಲ್ಮಾನರು ಹೆಚ್ಚಿರುವ ಕಡೆ ಪ್ರಚಾರ ಎಂದಾದರೆ ತಮ್ಮ ಕಾರಿನಲ್ಲಿ ನಾಲ್ಕೈದು ಟೋಪಿ ಇಟ್ಟುಕೊಂಡಿರುತ್ತಾರೆ. ಮಸೀದಿ ಬಳಿ ಹೋಗುವಾಗಲೇ ಹಾಕಿಕೊಳ್ಳುತ್ತಾರೆ. ಇಂತಹ ಕೇಜ್ರಿವಾಲ್ ಹಾಗೂ ಸಿಸೋಡಿಯಾ ಜೋಡಿ ಇನ್ನು ಉತ್ತರ ಪ್ರದೇಶಕ್ಕೆ ಕಾಲಿಡಲಿದೆ. ಅಲ್ಲಿ ಪಕ್ಕಾ ರಾಮನ ಭಕ್ತರಾಗಲಿದ್ದಾರೆ. ಸಿಸೋಡಿಯಾ ಈಗಾಗಲೇ ಮೊದಲ ಹಂತದ ಫ್ಯಾನ್ಸಿಡ್ರೆಸ್ ತರಹ ಧರಿಸಿ ಫೋಟೋ ತೆಗೆದು ಹಾಕಿ ಆಗಿದೆ. ಇನ್ನು ಇವರ ಟ್ಯಾಬ್ಲೋ ಉತ್ತರ ಪ್ರದೇಶದಲ್ಲಿ ಸಂಚರಿಸಿ ಅಲ್ಲಿ ಕಪಟ ರಾಮಭಕ್ತಿಯನ್ನು ತೋರಿಸಿ ಒಂದಿಷ್ಟು ಕಡೆ ಭಾರತೀಯ ಜನತಾ ಪಾರ್ಟಿಗೆ ಕಿರಿಕಿರಿ ಉಂಟು ಮಾಡಲಿದೆ. ಅದು ನಂತರ ಗುಜರಾತ್ ಚುನಾವಣೆಯಲ್ಲಿಯೂ ಮುಂದುವರೆಯಲಿದೆ. ಇಂತಹ ನಾಟಕಗಳನ್ನು ಆಪ್ ಮಾತ್ರವಲ್ಲ, ಯುಪಿಯಲ್ಲಿ ಬಹುಜನ ಸಮಾಜ ಪಾರ್ಟಿ ಹಾಗೂ ಸಮಾಜವಾದಿ ಪಾರ್ಟಿ ಇಬ್ಬರೂ ಶುರು ಮಾಡಿದ್ದಾರೆ. ಅಲ್ಲಿ ಬ್ರಾಹ್ಮಣ ಸಭಾದ ಜೊತೆ ಮಾಯಾವಿ ಮಾಯಾವತಿ ಹಾಗೂ ಅಖೀಲೇಶ್ ಸಿಂಗ್ ಮಾತುಕತೆ ನಡೆಸುತ್ತಾ ಭರಪೂರ ಭರವಸೆಗಳನ್ನು ನೀಡುತ್ತಿದ್ದಾರೆ. ಅದರ ಅರ್ಥ ಬ್ರಾಹ್ಮಣರು ಹಾಗೂ ದೇವರು ಎಲ್ಲರಿಗೂ ಬೇಕು. ಆದರೆ ವಿಪಕ್ಷಗಳಿಗೆ ಚುನಾವಣೆ ಇದ್ದಾಗ ಮಾತ್ರ ಬೇಕು. ಒಟ್ಟಿನಲ್ಲಿ ರಾಮ ಮಂದಿರ ಈಗ ಬೇಕೋ ಎಂದು ಮಾಯಾವತಿ, ಅಖಿಲೇಶ್ ಸಿಂಗ್ ಮತ್ತು ಸಿಸೋಡಿಯಾ ಬಳಿ ಕೇಳಿ ನೋಡಿ. ಅಪ್ಪಿ ಕೂಡ ಬೇಡಾ ಎನ್ನಲ್ಲ.
ಅಲ್ಲಿ ವಿಷಯ ಹೀಗೆ ಇದ್ದರೆ ಇತ್ತ ನಮ್ಮ ಮಠಾಧೀಶರು ಇದ್ದಾರಲ್ಲ, ಅವರಿಗೆ ಯಾವ ವಿಷಯಕ್ಕೆ ಬೀದಿಗೆ ಬರಬೇಕು ಮತ್ತು ಯಾವುದಕ್ಕೆ ತಲೆ ಹಾಕಬಾರದು ಎಂದು ಗೊತ್ತಿಲ್ಲದಿರುವುದೇ ಸೋಜಿಗ. ಸರಿಯಾಗಿ ನೋಡಿ, ನಮಗೆ ದೇವರನ್ನು ಬಿಟ್ಟರೆ ನಂತರ ಹೆಚ್ಚು ಭಕ್ತಿ ಇರುವುದು ಯಾರ ಮೇಲೆ ಎಂದರೆ ಅದು ಮಠಾಧೀಶರ ಮೇಲೆ ಅಲ್ವಾ. ಹೀಗಿರುವಾಗ ನಮ್ಮಲ್ಲಿ ದೇವಸ್ಥಾನಗಳನ್ನು ಒಡೆಯಲಾಗುತ್ತದೆ ಎಂದರೆ ಈ ಮಠಾಧೀಶರು ಕನಿಷ್ಟ ಒಂದು ಹೇಳಿಕೆಯನ್ನು ಕೂಡ ಕೊಡುವುದಿಲ್ಲ ಎಂದರೆ ಏನರ್ಥ. ಯಡಿಯೂರಪ್ಪನವರನ್ನು ಇಳಿಸಲಾಗುತ್ತದೆ ಎಂದ ಕೂಡಲೇ ಕೆಲವು ಮಠಾಧೀಶರು ಕೂಡ ಗೋಳೋ ಎಂದು ಅತ್ತಿದ್ದೇ ಅತ್ತಿದ್ದು. ಈಗ ದೇವಸ್ಥಾನವನ್ನು ಕೆಡವಲಾಗುತ್ತದೆ ಎಂದರೆ ಯಾರ ಧ್ವನಿ ಕೂಡ ಹೊರಗೆ ಬರುತ್ತಿಲ್ಲ. ಯಾಕೆ, ಹೀಗೆ? ಯಡ್ಡಿ ಮನೆಗೆ ಬಂದರೆ ಕವರ್ ಸಿಗುತ್ತದೆ ಎನ್ನುವ ಕಾರಣವೋ, ಅವರು ಮಠಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎನ್ನುವ ಕಾರಣವೋ, ಈ ದೇವಳದ ವಿಷಯದಲ್ಲಿ ಹೊರಗೆ ಬಂದರೆ ಯಾರೂ ಒಂದು ಗ್ಲಾಸ್ ನೀರು ಕೊಡುವುದಿಲ್ಲ, ಕವರ್ ಎಲ್ಲಿಂದ ಬರಬೇಕು ಎನ್ನುವ ನಿರಾಸೆಯೋ. ಸ್ವಾಮಿಗಳು ನಿಜವಾಗಿಯೂ ಗುಂಪು ಗುಂಪಾಗಿ ತಮ್ಮ ಧ್ವನಿ ಎತ್ತರಿಸಬೇಕಾಗಿರುವುದು ತಮ್ಮ ಜಾತಿಯವರಿಗೆ ಮೀಸಲಾತಿ ಕೊಡಿ ಎನ್ನುವುದಕ್ಕೋ ಅಥವಾ ತಮ್ಮ ಜಾತಿಯ ವ್ಯಕ್ತಿ ಮುಖ್ಯಮಂತ್ರಿ ಹುದ್ದೆಯಿಂದ ಇಳಿಯಬಾರದು ಎನ್ನುವ ಕಾರಣಕ್ಕೆ ಅಲ್ಲ. ಅದರ ಬದಲಿಗೆ ರಾಜ್ಯದಲ್ಲಿ ದೇವಾಲಯಗಳಿಗೆ, ಧರ್ಮಕ್ಕೆ ಹಾನಿಯಾದಾಗ ಅದರ ವಿರುದ್ಧ ಧ್ವನಿ ಎತ್ತಲು ನೀವು ಬೇಕಾಗಿರುವುದು. ಯಾವುದೇ ಮಠಾಧೀಶರಿಗೆ ಎಲ್ಲಿಯಾದರೂ ತಂಗಬೇಕಾದರೆ ಬೇಕಾಗಿರುವುದು ದೇವಸ್ಥಾನ, ಮಠ, ಮಂದಿರಗಳು ವಿನ: ಹೋಟೇಲುಗಳಲ್ಲ. ಹಾಗಿರುವಾಗ ಪ್ರತಿಭಟನೆ ಮಾಡಬೇಕಾಗಿರುವುದು ಯಾವ ವಿಷಯಕ್ಕೆ ಎಂದು ಗೊತ್ತಿಲ್ಲದವರು ಯಾವ ಉದ್ದೇಶಕ್ಕೆ ಸ್ವಾಮಿಯಾಗಿರುವುದು?
Leave A Reply