ಸ್ಮಾರ್ಟ್ ಸಿಟಿಯ ಲೈಟ್ ಕಂಬಗಳ ಬಲ್ಬ್ ಮೊದಲು ಉರಿಯಲಿ!!
ಸ್ಮಾರ್ಟ್ ಸಿಟಿಯ ಮಂಗಳೂರು ಕಚೇರಿಯಲ್ಲಿರುವವರಿಗೆ ತಲೆಯಲ್ಲಿ ಏನು ತುಂಬಿದೆ ಎನ್ನುವುದನ್ನು ಅವರೇ ಹೇಳಬೇಕು. ಇವರು ಮಂಗಳೂರಿನ ರಥಬೀದಿಯನ್ನು ಹೇರಿಟೇಜ್ ರೋಡ್ ಆಗಿ ಮಾಡುವ ರೂಪುರೇಶೆ ಹಾಕಿಕೊಂಡಾಗ ನಿಜಕ್ಕೂ ಖುಷಿಯಾಗಿತ್ತು. ಆದರೆ ಈಗ ಇವರು ಮಾಡಿರುವುದನ್ನು ನೋಡಿದ ನಂತರ ಇವರಿಗೆ ತಲೆಯಲ್ಲಿ ಏನು ತುಂಬಿದೆ ಎಂದು ನಿಮಗೂ ಅನಿಸುತ್ತದೆ. ನಾನು ಇವತ್ತು ಪೋಸ್ಟ್ ಮಾಡಿರುವ ಕೆಲವು ಪೋಟೋಗಳನ್ನು ನೀವು ಸೂಕ್ಷ್ಮವಾಗಿ ಗಮನಿಸುತ್ತೀರಿ ಎಂದು ಅಂದುಕೊಂಡಿದ್ದೇನೆ. ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಎದುರು ಭಾಗದಲ್ಲಿ ಎರಡು ಹೆರಿಟೇಜ್ ಲೈಟ್ ಕಂಬಗಳನ್ನು ಅಳವಡಿಸಲಾಗಿದೆ. ಒಂದು ಲೈಟ್ ಕಂಬವನ್ನು ಯಾಕೆ ಅಳವಡಿಸಲಾಗುತ್ತದೆ ಎಂದು ಚಿಕ್ಕ ಮಕ್ಕಳನ್ನು ನೀವು ಕೇಳಿ ನೋಡಿ. ರಾತ್ರಿ ಬೆಳಕು ನೀಡುವುದಕ್ಕೆ ಎಂದು ಮಕ್ಕಳೇ ತಕ್ಷಣ ಹೇಳುತ್ತಾರೆ. ಆದರೆ ಇಷ್ಟು ಚಿಕ್ಕ ವಿಷಯ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಗೊತ್ತಿಲ್ಲ. ಯಾಕೆಂದರೆ ಬೆಳಿಗ್ಗೆ ಚೆಂದಗೆ ಕಾಣಿಸುವ ಈ ಹೆರಿಟೇಜ್ ಕಂಬಗಳು ರಾತ್ರಿ ತೆಪ್ಪಗೆ ನಿಂತುಕೊಂಡು ತಮ್ಮ ಅಸಹಾಯಕತೆಯನ್ನು ಪ್ರದರ್ಶಿಸುತ್ತವೆ. ಯಾಕೆಂದರೆ ತಲಾ ಐದು ಬಲ್ಬ್ ಗಳನ್ನು ಹೊಂದಿರುವ ಈ ಲೈಟ್ ಕಂಬಗಳ ಯಾವ ಬಲ್ಬ್ ಕೂಡ ಉರಿಯುವುದಿಲ್ಲ. ಇದನ್ನು ಸ್ಮಾರ್ಟ್ ಸಿಟಿಯ ಯಾವ ಅಧಿಕಾರಿಯೂ ಗಮನಿಸಿಲ್ಲ. ಯಾಕೆಂದರೆ ಅವರು ಈ ಕಡೆ ತಲೆ ಹಾಕಿ ಮಲಗುತ್ತಿಲ್ಲ. ಹೋಗಲಿ, ಬಲ್ಬ್ ಅಲ್ವ, ನಾವು ಹಾಕೋಣ ಎಂದು ಮಹಾನಗರ ಪಾಲಿಕೆ ಕೂಡ ಏನೂ ಮಾಡಿಲ್ಲ. ಯಾಕೆಂದರೆ ಇವರಿಬ್ಬರ ನಡುವೆ ಸಮನ್ವಯದ ಕೊರತೆ ಇದೆ. ಅದು ಸ್ಮಾರ್ಟ್ ಸಿಟಿ ಕೆಲಸ ಎಂದು ಪಾಲಿಕೆ ಕುಳಿತಿದ್ದರೆ, ಪಾಲಿಕೆಯವರು ಮಾಡಬೇಕು ಎಂದು ಸ್ಮಾರ್ಟ್ ಸಿಟಿ ಸಂವಹನ ಆಗಲಿ, ಲಿಖಿತವಾಗಿ ಏನೂ ಹೇಳಿಲ್ಲ. ಆದ್ದರಿಂದ ಕಳೆದ ಒಂದು ತಿಂಗಳಿನಿಂದ ರಥಬೀದಿಯ ದೇವಸ್ಥಾನದ ಎದುರು ಕತ್ತಲೇಯೋ ಕತ್ತಲೆ. ಇದು ಸ್ಮಾರ್ಟ್ ಸಿಟಿಯ ಹಣೆಬರಹ.
ಅಲ್ಲಿಯೇ ರಥಬೀದಿಯ ಇನ್ನೊಂದು ವಿಷಯಕ್ಕೆ ಬರೋಣ. ಈ ಫೋಟೋ ಕೂಡ ನಾನು ಇವತ್ತು ಇಲ್ಲಿ ಪೋಸ್ಟ್ ಮಾಡಿದ್ದೇನೆ. ಆಟೋ ಸ್ಟ್ಯಾಂಡ್ ಅಥವಾ ಆಟೋ ನಿಲ್ದಾಣ ಎಂದು ಬೋರ್ಡ್ ಹಾಕಿದ್ದಾರೆ. ಆ ಬೋರ್ಡ್ ಕೆಳಗೆ ಯಾವುದೇ ರಿಕ್ಷಾ ಇಲ್ಲಿಯವರೆಗೂ ನಿಂತಿಲ್ಲ. ರಿಕ್ಷಾಗಳು ಇವತ್ತಿಗೂ ಪಾರ್ಕ್ ಮಾಡಲಾಗುತ್ತಿರುವುದು ಸ್ಕೂಲ್ ಬುಕ್ ಕಂಪೆನಿಯ ಎದುರಿಗೆ. ಅಲ್ಲಿಂದ ಒಂದಿಷ್ಟು ಅಂತರದಲ್ಲಿ ಬೋರ್ಡ್ ಹಾಕಿರುವ ಕಡೆ ನಿಲ್ಲಿ ಎಂದು ರಿಕ್ಷಾ ಚಾಲಕರಿಗೆ ಯಾರೂ ಹೇಳಿಲ್ಲ. ಯಾಕೆಂದರೆ ಯಾರಿಗೂ ಇದು ಬಿದ್ದೇ ಹೋಗಿಲ್ಲ. ಈ ಬಗ್ಗೆ ಪೊಲೀಸ್ ಇಲಾಖೆಗೆ ಕೇಳಿದರೆ ಅವರು ನಮಗೆ ಸ್ಮಾರ್ಟ್ ಸಿಟಿ ಮಂಡಳಿಯಿಂದ ಇಲ್ಲಿಯ ತನಕ ಯಾವುದೇ ಲಿಖಿತ ಮನವಿ ಅಥವಾ ಮಾಹಿತಿ ಬಂದೇ ಇಲ್ಲ ಎನ್ನುತ್ತಾರೆ. ಇಲ್ಲಿ ವಾಸ್ತವಾಗಿ ಏನು ಪ್ರಕ್ರಿಯೆ ಆಗಬೇಕು ಎಂದರೆ ಸ್ಮಾರ್ಟ್ ಸಿಟಿ ಮಂಡಳಿಯಿಂದ ಪಾಲಿಕೆಗೆ ಅಧಿಕೃತವಾಗಿ ಪತ್ರ ಹೋಗಿ ಪಾಲಿಕೆಯಿಂದ ಅದು ಟ್ರಾಫಿಕ್ ಪೊಲೀಸ್ ವಿಭಾಗಕ್ಕೆ ಸಂದೇಶ ಹೋಗಿ ಅಲ್ಲಿಂದ ಮಾಹಿತಿ ಸಂಬಂಧಪಟ್ಟ ಪೊಲೀಸ್ ಇನ್ಸಪೆಕ್ಟರ್ ಅವರಿಗೆ ಸಿಕ್ಕಿ ಅವರು ಆಟೋ ಪಾರ್ಕ್ ಬದಲಾಯಿಸಲು ಮುಂದಾಗಬೇಕು. ಅದು ಬಿಟ್ಟು ಸ್ಮಾರ್ಟ್ ಸಿಟಿಯವರು ತಮಗೆ ಬೇಕಾದ ಕಡೆ ಬೇಕಾದ ಬೋರ್ಡ್ ಹಾಕಿ ಹೋದರೆ ಆಗುತ್ತಾ? ಸ್ಮಾರ್ಟ್ ಸಿಟಿಯವರು ಪಾಲಿಕೆಗೆ ಹೇಳಿಲ್ಲ. ಪೊಲೀಸರಿಗೆ ಇದು ಗೊತ್ತಿಲ್ಲ. ಆದ್ದರಿಂದ ಬೋರ್ಡ್ ಎಲ್ಲಿಯೋ, ಆಟೋಗಳು ಎಲ್ಲಿಯೋ ನಿಂತಿದೆ. ಮಾತನಾಡಿದರೆ ಇದು ಸ್ಮಾರ್ಟ್ ಸಿಟಿ ಎನ್ನುತ್ತಾರೆ.
ಇನ್ನು ಅರ್ಧ ಕಿಲೋ ಮೀಟರ್ ದೂರ ಹೋಗೋಣ. ಮಂಜೇಶ್ವರ ಗೋವಿಂದ ಪೈ ವೃತ್ತದಿಂದ ಡೊಂಗರಕೇರಿ ದೇವಸ್ಥಾನದ ತನಕ ಕಾಂಕ್ರೀಟ್ ಹಾಕುವ ಕೆಲಸ ಕಳೆದ ಏಳು ತಿಂಗಳುಗಳಿಂದ ನಡೆಯುತ್ತಿದೆ. ಫುಟ್ ಪಾತ್, ಒಳಚರಂಡಿ ಕಾರ್ಯ ಇನ್ನೂ ಮುಗಿದಿಲ್ಲ. ಯಾವತ್ತು ಮುಗಿಯುತ್ತೆ ಎಂದು ಯಾವ ಜ್ಯೋತಿಷಿಗೂ ಹೇಳಲು ಆಗಲಿಕ್ಕಿಲ್ಲ. ಈಗಾಗಲೇ ಶಾಲೆಗಳು ಪುನರಾರಂಭವಾಗಿರುವುದರಿಂದ ಆ ರಸ್ತೆಯಲ್ಲಿರುವ ಶಾಲೆಗಳಿಗೆ ಹೋಗುವ ಮಕ್ಕಳು ನಿತ್ಯ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಫುಟ್ ಪಾತ್ ಮತ್ತು ರಸ್ತೆಯ ಮೇಲೆ ರಸ್ತೆ ಅಗೆದ ಮಣ್ಣಿನ ರಾಶಿ ಹಾಕಿರುವುದರಿಂದ ನಡೆದುಕೊಂಡು ಹೋಗುವುದು ಕೂಡ ದುಸ್ತರವಾಗಿದೆ. ಇನ್ನೇನೂ ಶಾರದೋತ್ಸವ ಶುರುವಾಗಲು ಕ್ಷಣಗಣನೆ ಆರಂಭವಾಗಿದೆ. ಆ ರಸ್ತೆಯಲ್ಲಿ ನಾಲ್ಕು ಕಡೆ ಶಾರದಾ ಮಾತೆಯನ್ನು ಇಡಲಾಗುತ್ತದೆ. ಈ ಕಾಮಗಾರಿಗಳು ಇಷ್ಟು ಆಮೆಗತಿಯಲ್ಲಿ ನಡೆಯುತ್ತಿರುವುದರಿಂದ ಶಾರದೋತ್ಸವ ಸಮಿತಿಗಳಿಗೂ ಕಿರಿಕಿರಿ. ಈ ಬಗ್ಗೆ ಸಾರ್ವಜನಿಕರು ಮಾತನಾಡುವುದಿಲ್ಲ ಎಂದು ಅಧಿಕಾರಿಗಳಿಗೆ ಗೊತ್ತಿದೆ. ಕನಿಷ್ಟ ಕಾರ್ಪೋರೇಟರ್ ಗಳಾದರೂ ತಮ್ಮ ವಾರ್ಡಿನಲ್ಲಿ ಆಗುತ್ತಿರುವ ಇಂತಹ ತೊಂದರೆಗಳನ್ನು ಪಾಲಿಕೆ ಕಮೀಷನರ್ ಬಳಿ ತರಬಾರದೇ? ಇಚ್ಚಾಶಕ್ತಿಯ ಕೊರತೆ, ಸಂವಹನದ ಕೊರತೆ ಮತ್ತು ಅಗತ್ಯ ಇರುವ ವಿಷಯ ಬಿಟ್ಟು ಬೇರೆಲ್ಲ ವಿಷಯಗಳಿಗೆ ಸಮಯ ಕೊಡುವ ನಮ್ಮ ಜನಪ್ರತಿನಿಧಿಗಳ ಅವಸ್ಥೆಯಿಂದ ಹೀಗೆ ಆಗುತ್ತಿದೆ. ಚುನಾವಣೆಗೆ ಒಂದೂವರೆ ವರ್ಷ ಇರಬಹುದು. ಆದರೆ ಜನ ಇಂತಹ ಸಂಗತಿ ಐದು ವರ್ಷವಾದರೂ ಮರೆಯಲ್ಲ!
Leave A Reply